
ಸಂಗತ: ಮನರೇಗಾ– ಗ್ರಾಮೀಣರಿಗಿನ್ನು ಗಾಂಧಿಯಲ್ಲ, ದೇವರೇ ದಿಕ್ಕು!
ಗ್ರಾಮಭಾರತದ ಜೀವನಾಡಿಯಂತಿದ್ದ ಯೋಜನೆ ಹೆಸರು, ಸ್ವರೂಪ ಬದಲಾಗಿದೆ. ಇದು, ರಾಜಕೀಯ ನಿರ್ಧಾರವಷ್ಟೇ ಅಲ್ಲ; ಮೌಲ್ಯಗಳ ಪಲ್ಲಟವೂ ಹೌದು.
ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸುವ ರೂಪಾಯಿ ನೋಟುಗಳಿಗೆ ಆಪ್ತತೆ ಮತ್ತು ಅನನ್ಯ ಸ್ವರೂಪ ದೊರಕಿದ್ದು 1996ರ ನಂತರ. ಅದಕ್ಕೆ ಕಾರಣ, ನೋಟುಗಳಲ್ಲಿ ಕಾಣಿಸಿಕೊಂಡ ಮಹಾತ್ಮ ಗಾಂಧಿ ಚಿತ್ರ. ರೂಪಾಯಿ ನೋಟು ಕೂಡ ಜನಸಾಮಾನ್ಯರ ಪಾಲಿಗೆ ರಾಷ್ಟ್ರೀಯತೆಯನ್ನು ಬಿಂಬಿಸುವ ಸಂಕೇತವಾಯಿತು. ಕಾಣಿಸಿಕೊಂಡಲ್ಲೆಲ್ಲ ಏಕತೆ–ಸಮಾನತೆ ಮೂಡಿಸಿ, ರಾಷ್ಟ್ರೀಯಪ್ರಜ್ಞೆಯನ್ನು ವಿಕಾಸಗೊಳಿಸಿದ ಯುಗಪುರುಷ ಮಹಾತ್ಮ ಗಾಂಧೀಜಿ. ಅವರ ಹೆಸರು ಈಗ ವಿವಾದದ ಕೇಂದ್ರ ಆಗಿರುವುದು ಬದಲಾದ ಯುಗಧರ್ಮವನ್ನು ಸೂಚಿಸುತ್ತಿದೆಯೆ ಅಥವಾ ಮೌಲ್ಯಗಳ ಪಲ್ಲಟದ ಸಂಕೇತವೆ?
‘ನನ್ನ ಜೀವನವೇ ನನ್ನ ಸಂದೇಶ’ ಎನ್ನುವ ಮಾತನ್ನು ಗಾಂಧೀಜಿ ಹೊರತು ಮತ್ತೊಬ್ಬ ದಾರ್ಶನಿಕ ಜಗತ್ತಿನಲ್ಲಿ ಎಲ್ಲೂ ಹೇಳಿರಲಾರರು. ಈ ವಾಕ್ಯ ಅವರ ಸತ್ಯಾನ್ವೇಷಣೆಯ ಬದುಕಿನ ಪಾರದರ್ಶಕತೆಗೆ ಕನ್ನಡಿಯಂತಿದೆ. ಆಲ್ಬರ್ಟ್ ಐನ್‌ಸ್ಟೈನ್ ‘ರಕ್ತ ಮಾಂಸ ತುಂಬಿದ ಇಂತಹ ಮನುಷ್ಯ ಈ ಲೋಕದಲ್ಲಿ ನಡೆದಾಡಿದ್ದ ಎಂದರೆ ಮುಂಬರುವ ಜನಾಂಗಗಳು ಅಚ್ಚರಿಪಡುತ್ತವೆ’ ಎಂದು ಗಾಂಧಿಯ ಮಹೋನ್ನತ ಬದುಕನ್ನು ಕುರಿತು ಹೇಳಿದ್ದರು. ವಿಪರ್ಯಾಸವೆಂದರೆ, ಅಚ್ಚರಿಪಡುವ ಶಕ್ತಿಯನ್ನೂ ಕಳೆದುಕೊಂಡಿರುವ ನಾವು ತಿರಸ್ಕಾರದ ಮನೋಭಾವ ಬೆಳೆಸಿಕೊಳ್ಳುತ್ತಿದ್ದೇವೆ.
ಇತಿಹಾಸದಲ್ಲಿ ರಾರಾಜಿಸುವ ಗುರುತುಗಳ ಬಣ್ಣ ಬದಲಿಸಿದರೂ ಮಹಾಸಾಧನೆಯ ಹೆಗ್ಗುರುತಾಗುತ್ತದೆ ಎಂದು ಭಾರತ ಸರ್ಕಾರ ಭಾವಿಸಿದಂತಿದೆ. ಹಾಗಾಗಿ, ಬಣ್ಣ ಬದಲಿಸುವ ಸಾಧನೆಯನ್ನು ಮಾಡುತ್ತಿದೆ. ‘ಯೋಜನಾ ಆಯೋಗ’ವನ್ನು ‘ನೀತಿ ಆಯೋಗ’ ಎಂದು ಸೃಷ್ಟಿಸಿತು. ‘ಕೇಂದ್ರೀಯ ವಿದ್ಯಾಲಯ’ವನ್ನು ‘ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ’ ಎಂದುಫಲಕ ಬದಲಿಸಿದ್ದೂ ಆಯಿತು. ‘ಭಾರತೀಯ ದಂಡ ಸಂಹಿತೆ’ (ಐಪಿಸಿ)ಯನ್ನು ‘ಭಾರತೀಯ ನ್ಯಾಯ ಸಂಹಿತಾ’ (ಬಿಎನ್‌ಎಸ್) ಎಂದು ಮರುನಾಮಕರಣ ಮಾಡಿದ್ದಾಯಿತು.
ದೆಹಲಿಯ ರಾಜಪಥವನ್ನು ‘ಕರ್ತವ್ಯ ಪಥ’ ಎಂದು ಬದಲಿಸಿದ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಚೇರಿಗೆ ‘ಸೇವಾ ತೀರ್ಥ’ ಎಂಬ ಹೆಗ್ಗುರುತನ್ನು ಮೂಡಿಸಿತು. ಕೇಂದ್ರ ಸಚಿವಾಲಯಕ್ಕೆ ‘ಕರ್ತವ್ಯ ಭವನ’ ಎಂಬ ನಾಮಬಲವನ್ನೂ ದಯಪಾಲಿಸಿತು. ರಾಜ್ಯಪಾಲರ ಕಾರ್ಯಾಲಯಗಳ ‘ರಾಜಭವನ’ಕ್ಕೆ ‘ಲೋಕಭವನ’ ಎಂದು ಹೆಸರು ಬದಲಿಸುವ ಪ್ರಯತ್ನವೂ ನಡೆದಿದೆ. ‘ರಾಜಭವನ’ ಎಂಬ ಹೆಸರು ವಸಾಹತುಶಾಹಿ ಪ್ರತೀಕ ಎಂದು ಕೇಂದ್ರ ಹೇಳಿದೆ. ತರ್ಕಬದ್ಧವಾಗಿ ಯೋಚಿಸಿದರೆ, ರಾಜ್ಯಪಾಲರಂತಹ ನೆಪಮಾತ್ರದ ಹುದ್ದೆಗಳೇ ಅಗತ್ಯವಿಲ್ಲ. ರಾಜಕೀಯ ಕಾರಣಗಳಿಗಾಗಿ ರೂಪುಗೊಳ್ಳುತ್ತಿರುವ ರಾಜ್ಯಪಾಲ ಹುದ್ದೆಗಳು, ಕೆಲವು ರಾಜ್ಯಗಳಲ್ಲಿ ಸೃಷ್ಟಿಸುತ್ತಿರುವ ಬಿಕ್ಕಟ್ಟುಗಳನ್ನು ಗಮನಿಸಿದರೆ, ಆಲಂಕಾರಿಕ ಹುದ್ದೆ ರಾಜ್ಯಗಳಿಗೆ ಹೇಗೆ ಭಾರವಾಗಬಲ್ಲದು ಎನ್ನುವುದು ಸ್ಪಷ್ಟವಾಗುತ್ತದೆ.
ಗಾಂಧೀಜಿ ಜನ್ಮಶತಾಬ್ದಿಯ ನೆನಪಿಗಾಗಿ 1969ರಲ್ಲಿ ‘ರಾಷ್ಟ್ರೀಯ ಸೇವಾ ಯೋಜನೆ’ ಸ್ಥಾಪಿಸಲಾಯಿತು. ಅವರ ತತ್ತ್ವ ಆದರ್ಶಗಳ ಬುನಾದಿಯ ಮೇಲೆ ನಮ್ಮ ಶಿಕ್ಷಣ ವ್ಯವಸ್ಥೆ ‘ಎನ್‌ಎಸ್‌ಎಸ್’ ಯೋಜನೆಯನ್ನು ಅನುಷ್ಠಾನಗೊಳಿಸಿತು. ‘ಎನ್‌ಎಸ್‌ಎಸ್’ ಗೀತೆ– ‘ಗ್ರಾಮಗಳ ಉದ್ಧಾರ ನಮ್ಮ ಉದ್ದೇಶ, ಗ್ರಾಮಗಳ ಬೆಳೆಯೇ ಬೆಳೆಯುವುದು ದೇಶ’ ಎಂದು ಹೇಳುತ್ತದೆ. ಒಟ್ಟಾರೆ ‘ಎನ್‌ಎಸ್‌ಎಸ್’ ಗಾಂಧಿ ಭಾವ ಬಿಂಬವನ್ನೇ ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ಪ್ರತಿಫಲಿಸುತ್ತದೆ.
ಕೇಂದ್ರ ಸಚಿವ ಸಂಪುಟ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಗೆ ‘ಪೂಜ್ಯ ಬಾಪು ಗ್ರಾಮೀಣ ಉದ್ಯೋಗ ಯೋಜನೆ’ ಎಂದು ಮರುನಾಮಕರಣ ಮಾಡಲು ಉದ್ದೇಶಿಸಿತ್ತು. ಆದರೆ, ಈಗ ‘ದಿ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್’ ಹೆಸರನ್ನು ಯೋಜನೆ ಪಡೆದಿದೆ. ‘ಮನರೇಗಾ’ ಎಂಬ ಸರಳ ಆಕರ್ಷಕ ಹೆಸರು ‘ವಿಬಿ– ಜಿ ರಾಮ್ ಜಿ’ ಎಂದಾಗಿದೆ.
ಯುಪಿಎ ಸರ್ಕಾರ 2005ರಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಿತು. ಆಗ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ ಆಗಿತ್ತು. 2009ರ ಅಕ್ಟೋಬರ್ 2ರಂದು ಆ ಯೋಜನೆಗೆ ‘ಮಹಾತ್ಮ ಗಾಂಧಿ’ ಸೇರಿಸಿ ‘ಮನರೇಗಾ’ ಎಂದು ವಿಸ್ತರಿಸಲಾಯಿತು. ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಾರಿಗೊಂಡ ಯೋಜನೆ, ಕನಿಷ್ಠ 100 ದಿನಗಳ ಉದ್ಯೋಗಾವಕಾಶ ಕಲ್ಪಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಕಾಯ್ದೆಯಷ್ಟೇ ಮಹತ್ವವನ್ನು ಇದು ಪಡೆದಿತ್ತು. ಕ್ರಮೇಣ ಉದ್ದೇಶಿತ ದಿನಗಳ ಉದ್ಯೋಗ ಖಾತರಿ ದುಡಿಯುವ ಕೈಗಳಿಗೆ ಸಿಗಲಿಲ್ಲ.
ಬಡತನ ನಿರ್ಮೂಲನೆ ಮತ್ತು ಸಮಾನ ವೇತನವನ್ನು ಉತ್ತೇಜಿಸುವ ದೃಷ್ಟಿಯಲ್ಲಿ ರೂಪಿಸಿರುವ ಉದ್ಯೋಗ ಖಾತರಿ ಯೋಜನೆಗೆ ಗಾಂಧಿ ಮಹಾತ್ಮನ ಹೆಸರು ಅರ್ಥಪೂರ್ಣವಾಗಿತ್ತು. ಈಗ ಯೋಜನೆಯ ಸ್ವರೂಪದ ಜೊತೆಗೆ ಹೆಸರನ್ನೂ ಸರ್ಕಾರ ಬದಲಿಸಿದೆ. ಈ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಬಲವಾದ ಹೊಡೆತ ಬೀಳಲಿದೆ. ಜೊತೆಗೆ, ಹೆಸರು ಬದಲಾವಣೆ ನೈಜ ಸಮಸ್ಯೆಯನ್ನು ಮರೆಮಾಚುವ ಪ್ರಯತ್ನದಂತಿದೆ.
ನಗರ ಪ್ರದೇಶಗಳ ಅಭಿವೃದ್ಧಿಯನ್ನೇ ದೇಶದ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿರುವ ಸಂದರ್ಭದಲ್ಲಿ, ಗ್ರಾಮೀಣ ಭಾಗದ ಜೀವನಾಡಿಯಂತಿದ್ದ ಯೋಜನೆಯ ಹೆಸರು ಮತ್ತು ಸ್ವರೂಪದಲ್ಲಿನ ಬದಲಾವಣೆ ಮಾರ್ಮಿಕವಾಗಿದೆ. ಗಾಂಧೀಜಿ ಜಾಗದಲ್ಲಿ ಈಗ ರಾಮ್‌ಜಿ ಬಂದಿದ್ದಾರೆ. ಅಂದರೆ, ಗ್ರಾಮೀಣ ಜನರಿಗೆ ‘ದೇವರೇ ದಿಕ್ಕು’ ಎನ್ನುವುದನ್ನು ಸರ್ಕಾರ ಸಾಂಕೇತಿಕವಾಗಿ ಹೇಳುತ್ತಿದೆಯೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.