ADVERTISEMENT

ಸಂಗತ: ಪೂರ್ವಜರ ಮತಿ ಮರುಕಳಿಸಲಿ

ಡಾ.ಬಿ.ಸಿ.ಪ್ರಭಾಕರ್
Published 5 ಜೂನ್ 2022, 19:31 IST
Last Updated 5 ಜೂನ್ 2022, 19:31 IST
   

ಗ್ರಾಮೀಣ ಪ್ರದೇಶದಿಂದ ಬಂದವರಿಗೆಲ್ಲ ನೆನಪಿರುತ್ತದೆ... ಹಳ್ಳಿಗಳಲ್ಲಿ ಬೆಳಗ್ಗೆ ದೇವರ ಪೂಜೆಯ ನಂತರ ಅಕ್ಕಿ ಅಥವಾ ಜೋಳದ ನುಚ್ಚನ್ನು ಇರುವೆಗೂಡುಗಳಿಗೆ ಹಾಕಿ, ಸೂರ್ಯನಿಗೊಮ್ಮೆ ನಮಸ್ಕರಿಸಿ ನಂತರ ತಾವು ಆಹಾರ ಸೇವಿಸುತ್ತಿದ್ದುದು. ಅದು ತಲೆತಲಾಂತರದಿಂದ ಬಂದ ಜೀವನಕ್ರಮ. ಅದರ ಹಿಂದೆ ಇರುವ ಉದಾತ್ತ ಯೋಚನೆಯನ್ನೇ ನೋಡಿ, ಜಗತ್ತಿನ ಎಲ್ಲ ಜೀವಿಗಳ ಸೌಖ್ಯ ತನಗೆ ಮುಖ್ಯ ಎಂಬ ಭಾವ ಅಲ್ಲಿ ಕಾಣುತ್ತದೆ. ಅದನ್ನು ನಮ್ಮ ಪೂರ್ವಿಕರು ಪರಿಸರ ಕಾಳಜಿಯೆಂದೋ ಜೀವಸಂಕುಲದ ರಕ್ಷಣೆಯೆಂದೋ ಅಥವಾ ಅದರಿಂದ ತನಗೆ ಅನುಕೂಲವೆಂದೋ ಎಂದೂ ಮಾಡಲಿಲ್ಲ. ಅದೊಂದು ಅಂತರ್ಗತವಾದ ಸರ್ವಹಿತದ ಭಾವ.

ಊರಿನ ಸುತ್ತಮುತ್ತ ಹಿಂದೆ ಇದ್ದ ದೇವರ ಕಾಡುಗಳಾಗಲೀ ಗೋಮಾಳಗಳಾಗಲೀ ಅಶ್ವತ್ಥಕಟ್ಟೆಯಾಗಲೀ ಕೆರೆಗಳನ್ನು ‘ಗಂಗಮ್ಮ’ ಎಂದು ಪೂಜಿಸುವು ದಾಗಲೀ ಎಲ್ಲವೂ ಅವರ ಬದುಕಿನ ಅಂಗಗಳಾಗಿದ್ದವು. ಕೆರೆ ಅಥವಾ ಬಾವಿಯ ನೀರನ್ನುಪೂರ್ವಜರು ಎಂದೂ ಅಶುದ್ಧವೆಂದು ಭಾವಿಸಿದುದಾಗಲೀ ಗಾಳಿ ಕಲುಷಿತವೆಂದಾಗಲೀ ಕೊರಗಲಿಲ್ಲ. ಏಕೆಂದರೆ ಅವು ಅಷ್ಟೊಂದು ಚೇತೋಹಾರಿಯಾಗಿದ್ದವು. ಸರಳ ಬದುಕಿಗೆ ಹೆಚ್ಚೇನೂ ಬೇಡದ ಅಂದಿನ ಜನರ ಬದುಕು ಸುಸ್ಥಿರವಾಗಿತ್ತು. ಪರಿಸರ ಬಸವಳಿಯದೆ ಸರಳ ಬದುಕಿಗೆ ನೆಮ್ಮದಿ ನೀಡುತ್ತಿತ್ತು.

ಕಾಲ ಸರಿದಂತೆ ಚಿತ್ರಣ ಬದಲಾಗಿ ಹೋಯಿತು. ಜನಸಂಖ್ಯೆ ಶರವೇಗದಲ್ಲಿ ದ್ವಿಗುಣಿಸಿ ಭೂಮಿಯ ಸಂಪನ್ಮೂಲಗಳ ಮೇಲೆ ಇನ್ನಿಲ್ಲದ ಒತ್ತಡ ಬಿತ್ತು. ನಾಗರಿಕತೆಯ ವಿಕಾಸವು ಜನರ ಐಹಿಕ ಆಸೆಗಳಿಗೆ ರೆಕ್ಕೆ ಪುಕ್ಕ ಅಂಟಿಸಿ ಆಕಾಶದೆತ್ತರ ಬೆಳೆಯುವಂತೆ ಮಾಡಿತು. ಮಾನವನ ಅಪರಿಮಿತ ಭೋಗದ ಆಸೆಗೆ ಪರಿಸರ ಹಾನಿಗೊಂಡು ಗಾಳಿ, ನೀರು, ಮಣ್ಣು, ಜೀವಸಂಕುಲ ಎಲ್ಲವೂ ಬಸವಳಿದವು. ಆ ಕಾರಣದಿಂದಲೇ ಇಂದು ‘ಪರಿಸರ ರಕ್ಷಣೆ’ ಎಂಬ ಕೂಗು ಎಲ್ಲೆಡೆ ಕೇಳಿ
ಬರುತ್ತಿರುವುದು.

ADVERTISEMENT

ಪರಿಸರ ಸಮತೋಲನಕ್ಕೆ ಏನೆಲ್ಲಾ ಕ್ರಮ ಕೈ ಗೊಳ್ಳಬಹುದೆಂಬ ವೈಜ್ಞಾನಿಕ ಅರಿವು ಮತ್ತು ಮಾರ್ಗಗಳು ಇದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರುವುದೇ ಇಂದು ದೊಡ್ಡ ಸಾಹಸವಾಗಿದೆ. ಶಾಲಾ ಪುಸ್ತಕದಿಂದ ಹಿಡಿದು ಉನ್ನತ ಶಿಕ್ಷಣದ ಪಠ್ಯಕ್ರಮದವರೆಗೆ ಪರಿಸರ ವಿಜ್ಞಾನ ಮತ್ತು ಪರಿಸರ ರಕ್ಷಣೆಯ ಬಗ್ಗೆ ಹೇರಳವಾಗಿ ಮಾಹಿತಿ ಕೊಡುತ್ತಿದ್ದರೂ ಲೆಕ್ಕವಿಲ್ಲದಷ್ಟು ಸಂವಾದ, ಸೆಮಿನಾರ್‌ಗಳು ಆಗುತ್ತಿದ್ದರೂ ಅವನ್ನು ನಿಜವಾಗಿಯೂ ಕಾರ‍್ಯರೂಪಕ್ಕೆ ತರುವ ದಿಸೆಯಲ್ಲಿ ಆಗುತ್ತಿರುವ ಪ್ರಗತಿ ಅತ್ಯಲ್ಪ.

ನಮ್ಮ ಲೆಕ್ಕವಿಲ್ಲದಷ್ಟು ಅನವಶ್ಯಕ ಉಪಯೋಗ ಗಳಲ್ಲಿ ಕಡಿತವಾಗದೇ ಪರಿಸರ ಮಾಲಿನ್ಯ ಕಡಿಮೆ ಆಗದೆಂಬ ಸಂವೇದನೆಯನ್ನು ನಾವಿಂದು ಬೆಳೆಸಿಕೊಳ್ಳ ಬೇಕಾಗಿದೆ. ಇದಕ್ಕೆ ಸರ್ಕಾರಗಳು ಕ್ರಮಬದ್ಧ ಯೋಜನೆ ಗಳನ್ನು ರೂಪಿಸಿ ಕಾರ‍್ಯರೂಪಕ್ಕೆ ತರುವ ಇಚ್ಛಾಶಕ್ತಿ
ಯನ್ನು ತೋರಬೇಕಾಗಿದೆ. ಎಲ್ಲಕ್ಕೂ ಸರ್ಕಾರಗಳನ್ನಷ್ಟೇ ದೂರಿದರೆ ಪ್ರಯೋಜನವಾಗದು. ಒಂದು ಸಣ್ಣ ಉದಾಹರಣೆಯನ್ನು ತೆಗೆದುಕೊಳ್ಳೋಣ. ಇತ್ತೀಚೆಗೆ ಸುರಿದ ಮಳೆಯಿಂದ ಬೆಂಗಳೂರಿನ ಕೆಲವು ಪ್ರದೇಶಗಳು ಜಲಾವೃತವಾಗಿ ಜನ ಸಂಕಷ್ಟಕ್ಕೆ ಒಳಗಾದರು. ಹಾಗಾಗುವುದಕ್ಕೆ ಎರಡು ಕಾರಣಗಳು ಸುಸ್ಪಷ್ಟ. ನೀರು ಸರಾಗವಾಗಿ ಹರಿಯಲು ಇದ್ದ ಮಾರ್ಗಗಳು ಕಿರಿದಾಗಿ ಅಥವಾ ಇನ್ನಿಲ್ಲದಂತಾಗಿ (ಜನರ ದುರಾಸೆಯಿಂದ) ಮತ್ತು ಹರಿದ ನೀರು ಶೇಖರವಾಗಲು ಇದ್ದ ಕೆರೆಗಳ ಜಾಗಗಳನ್ನು ಸೈಟು, ಮನೆಗಳು ಆಕ್ರಮಿಸಿಕೊಂಡಿದ್ದು ನೀರಾದರೂ ಎಲ್ಲಿಗೆ ಹೋಗಬೇಕು?!

ಎರಡನೆಯದು, ನೀರು ಹರಿಯುವ ಕಾಲುವೆಗಳ ತುಂಬೆಲ್ಲಾ ಜನರೇ ಎಸೆದ ಕಸ ತುಂಬಿಕೊಂಡು ಹರಿವಿಗೆ ಅಡೆತಡೆ ಉಂಟಾಗಿರುವುದು. ಇಲ್ಲಿ ಆಡಳಿತ ನಡೆಸುವ ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳ ಅದಕ್ಷತೆ ಮತ್ತು ಪ್ರಾಮಾಣಿಕತೆಯ ಕೊರತೆಯು ಪರಿಸರ ಕಾಳಜಿಗೆ ತಿಲಾಂಜಲಿ ಇಟ್ಟರೆ, ಜನಸಾಮಾನ್ಯರ ಬೇಜವಾಬ್ದಾರಿಯೂ ಅಷ್ಟೇ ಕಾರಣವಾಗಿದೆ.

ನಮಗೆ ಪರಿಸರದ ಸಮಷ್ಟಿಪ್ರಜ್ಞೆ ಇರಬೇಕು. ಮಕ್ಕಳು ತಿಂಗಳಿಗೆ ಒಮ್ಮೆಯಾದರೂ ಪರಿಸರದ ಜೊತೆ ‘ಸಂವಾದ’ ನಡೆಸುವಂತಹ ವಾತಾವರಣ ಸೃಷ್ಟಿ ಮಾಡಬೇಕು, ಕೆರೆ ಕಟ್ಟೆ, ಸುತ್ತಲಿನ ಹಸಿರು, ಬೆಟ್ಟಗುಡ್ಡ, ಹಾರುವ ಹಕ್ಕಿ, ಬೀಸುವ ಗಾಳಿ, ಅಲ್ಲಿನ ಜೀವಸಂಕುಲ ಅವುಗಳೆಲ್ಲದರ ಜೊತೆ ನಮ್ಮ ಬದುಕು ಮತ್ತು ಅವುಗಳ ವಿನಾ ನಮ್ಮ ಬದುಕು ಬರಡು ಎಂಬ ಪರಿಸರಭಾವ ಬೆಳೆಸಬೇಕು. ಈ ಕಲಿಕೆ ಶಾಲಾ ಮಕ್ಕಳಿಗಷ್ಟೇ ಅಲ್ಲದೆ, ಕಾಲೇಜು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೂ ಅಷ್ಟೇ ಮುಖ್ಯ.

ಪರಿಸರ ಕಾಳಜಿಯು ಜನರಿಗೆ ಪ್ರಕೃತಿಯಲ್ಲಿ ಪ್ರೀತಿ ಹುಟ್ಟುವಂತೆ ಮಾಡಬಲ್ಲದು. ಸಣ್ಣ ದೇಶಗಳಾದ ಸಿಂಗಪುರ, ಮಲೇಷ್ಯಾ, ಥಾಯ್ಲೆಂಡ್‌ ಮತ್ತು ಅನೇಕ ಐರೋಪ್ಯ ದೇಶಗಳು ಪರಿಸರಕ್ಕೆ ಹಾನಿ ಮಾಡುವ ಬೃಹತ್ ಯೋಜನೆಗಳಿಗೆ ಕೈಹಾಕುವುದೇ ಇಲ್ಲ. ಅದರಿಂದ ಅಗಾಧ ಪ್ರಯೋಜನಗಳೂ ಉಂಟು. ಅಲ್ಲಿಗೆ ನಿಸರ್ಗ ಸಂಪತ್ತನ್ನು ನೋಡಲು ಬರುವ ಪ್ರವಾಸಿಗರಿಂದಲೇ ಅವರಿಗೆ ಹೇರಳ ಆರ್ಥಿಕ ಸಂಪನ್ಮೂಲ ದೊರೆಯುತ್ತಿದೆ. ಪರಿಸರ ಸಂವೇದನೆ ಅಷ್ಟೊಂದು ಬಲವಾಗಿದೆ ಅಲ್ಲಿ. ನಮ್ಮ ದೇಶದಲ್ಲಿ ಪರಿಸರ ಕಾಳಜಿಯ ಸಂವೇದನೆ ಹಿಂದೆಂದಿಗಿಂತಲೂ ಇಂದು ತೀವ್ರವಾಗಿ ಚಳವಳಿಯ ರೂಪದಲ್ಲಿ ವ್ಯಕ್ತವಾಗಬೇಕಾಗಿದೆ. ಅದು ನಮ್ಮ ಸುಸ್ಥಿರ ಬದುಕಿಗೆ ಅತ್ಯಂತ ಅಗತ್ಯ ಕೂಡ.

ಲೇಖಕ: ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.