ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಬಾಲಪ್ರೇಮಿಗಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ದಿಗಿಲಾಯಿತು. ಪ್ರೀತಿ ಎಂಬುದರ ಅರ್ಥವೇ ಗೊತ್ತಿಲ್ಲದ, ಆಕರ್ಷಣೆಯನ್ನೇ ಜೀವನ್ಮರಣ ನಿರ್ಧರಿಸುವ ಮಾನದಂಡ ಎಂದುಕೊಳ್ಳುತ್ತಾರೆ ಇಂತಹ ಅದೆಷ್ಟೋ ಪುಟ್ಟ ಹುಡುಗ– ಹುಡುಗಿಯರು. ಪ್ರೀತಿಯ ಹೆಸರಿನಲ್ಲಿ ಅವರು ತೆಗೆದುಕೊಳ್ಳುವ ದೊಡ್ಡ ದೊಡ್ಡ ನಿರ್ಧಾರಗಳು ಎಳೆಯ ಮನಸ್ಸುಗಳು ಸಾಗುತ್ತಿರುವ ದಾರಿಯ ಕುರಿತು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿವೆ.
ಒಂದೂವರೆ ದಶಕದ ಹಿಂದೆ ನಮ್ಮ ಕೈಗೆ ಸ್ಮಾರ್ಟ್‌ಫೋನ್‌ಗಳು ಬಂದ ಮೇಲೆ ಜಗತ್ತು ಬೇರೆಯದ್ದೇ ದಾರಿ ಯಲ್ಲಿ ಸಾಗುತ್ತಿದೆ. ಸ್ಮಾರ್ಟ್‌ಫೋನ್‌ನಿಂದ ಹುಟ್ಟಿಕೊಂಡ ಸಾಮಾಜಿಕ ಜಾಲತಾಣಗಳು ಸಮಾಜವನ್ನು ನಾವು ಊಹಿಸದಿರುವಂತಹ ಅಪಾಯದತ್ತ ನೂಕುತ್ತಿವೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ಅವನತಿಯತ್ತ ದಾಪುಗಾಲು ಇಡು ತ್ತಿರುವವರಲ್ಲಿ ಎಲ್ಲ ವಯೋಮಾನದವರು ಇದ್ದರೂ ಹದಿಹರೆಯದ ಮಕ್ಕಳು ಬಹುಬೇಗ ಈ ಇಳಿಜಾರಿನಲ್ಲಿ ಜಾರುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಒಂದಕ್ಷರ ಮಾತನಾಡದೆ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹಗಲಿರುಳೂ ಚಾಟ್ ಮಾಡುವ ಮೂಲಕ ತಮ್ಮದೇ ಆದ ವರ್ಚುವಲ್ ಲೋಕವೊಂದನ್ನು ಕಟ್ಟಿಕೊಂಡು, ಆ ಲೋಕದಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ.
ಓದುವಂತೆ ಒತ್ತಾಯಿಸುವ ತಂದೆ, ತಾಯಿ, ಶಿಕ್ಷಕರು ತಮ್ಮ ಬದುಕಿನ ಖಳನಾಯಕರಂತೆ ಭಾಸವಾಗುತ್ತ, ಯಾರ ಅಡೆತಡೆಯೂ ಇಲ್ಲದೆ ಚಾಟ್ ಮಾಡುವುದರಲ್ಲೇ ತಮ್ಮೆಲ್ಲ ಸಮಸ್ಯೆಗಳಿಂದ ದೂರ ಓಡಲು ಪ್ರಯತ್ನಿಸುವ ಹದಿಹರೆಯದ ಮಕ್ಕಳು ಬಹಳ ಸೂಕ್ಷ್ಮ ಸನ್ನಿವೇಶದಲ್ಲಿ ಇದ್ದಾರೆ.
ಆರು, ಏಳನೇ ತರಗತಿಯ ಮಕ್ಕಳನ್ನು ಕೇಳಿದರೆ, ಇನ್‌ಸ್ಟಾಗ್ರಾಂ ಖಾತೆ ಇಲ್ಲದಿದ್ದರೆ ತರಗತಿಯ ಮಕ್ಕಳು ತಮ್ಮನ್ನು ದೂರವಿಡುತ್ತಾರೆ ಎಂದು, ಪಾಲಕರಿಗೆ ಗೊತ್ತಿಲ್ಲದೇ ಖಾತೆ ತೆರೆದದ್ದಕ್ಕೆ ಕಾರಣ ನೀಡುತ್ತಾರೆ. ಹುಡುಗರು ಹುಡುಗಿಯರೊಂದಿಗೆ ಹುಡುಗಿಯರು ಹುಡುಗರೊಂದಿಗೆ ಚಾಟ್ ಮಾಡ ದಿದ್ದರೂ ಆಗಲೂ ಇದೇ ಪರಿಸ್ಥಿತಿಯನ್ನು ಎದುರಿಸ ಬೇಕಾಗುತ್ತದೆ. ‘ನನಗೂ ಒಬ್ಬ ಗೆಳೆಯ ಬೇಕು’ ಎನ್ನುವ ಆಸೆಗಿಂತ, ಗೆಳೆಯ ಅಥವಾ ಗೆಳತಿ ಇಲ್ಲದಿದ್ದರೆ ತನ್ನ ಸ್ನೇಹಿತರ ಮುಂದೆ ಬೆಲೆ ಕಳೆದುಕೊಳ್ಳುವ ಭಯ ಈ ಮಕ್ಕಳನ್ನು ಕಾಡುತ್ತದೆ. ಐದು, ಆರನೇ ತರಗತಿಯಿಂದ ಹಿಡಿದು ಪಿಯುಸಿಯವರೆಗೂ ಹೀಗೆ ಬಹಿಷ್ಕೃತಗೊಳ್ಳುವ ಭಯವಿದೆ ಎಂದರೆ ಅಚ್ಚರಿಪಡುವ ಅವಶ್ಯಕತೆಯಿಲ್ಲ.
ಕೆಲವು ವರ್ಷಗಳ ಹಿಂದೆ ಮೊಬೈಲ್ ಫೋನ್ ಇಲ್ಲದಿದ್ದ ಮಕ್ಕಳು ಆ ಕಾರಣಕ್ಕಾಗಿ ಈ ಬಗೆಯ ಒತ್ತಡ ಅನುಭವಿಸುತ್ತಿದ್ದರು. ಈಗ ಮೊಬೈಲೂ ಇರಬೇಕು, ಅದರಲ್ಲಿ ಸಾಮಾಜಿಕ ಜಾಲತಾಣದ ಖಾತೆಯೂ ಇರಲೇಬೇಕು! ಅಷ್ಟೇ ಅಲ್ಲ, ಜತೆಗೊಬ್ಬ ಸಂಗಾತಿಯೂ ಬೇಕು! ಪಾಲಕರು ಮತ್ತು ಶಿಕ್ಷಕರಿಗಿಂತ ಸಹಪಾಠಿಗಳ ಪ್ರಭಾವ ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಇರುತ್ತದೆ ಎಂಬುದಕ್ಕೆ ಇಂತಹ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಇದನ್ನು ಫೋಮೊ (FOMO) ಎಂದು ಕರೆಯುತ್ತಾರೆ. ಅಂದರೆ ಫಿಯರ್ ಆಫ್ ಮಿಸ್ಸಿಂಗ್ ಔಟ್. ಗುಂಪಿನಿಂದ ಹೊರಗುಳಿಯುವ ಭಯ. ತನ್ನ ಇತರ ಸ್ನೇಹಿತರಂತೆ ತಾವು ಇಲ್ಲದಿದ್ದರೆ ಲೆಕ್ಕಕ್ಕೆ ಬಾರದವರಂತೆ ಆಗಿಬಿಡುವ ಭಯ ಈ ಎಳೆಯ ಮನಸ್ಸುಗಳಲ್ಲಿ ಆಳವಾಗಿ ಬೇರೂರಿರುತ್ತದೆ. ಇಂತಹ ಅನಿವಾರ್ಯವನ್ನು ಮಕ್ಕಳಿಗೆ ತಂದಿಟ್ಟವರು ಯಾರು? ಊಟ ಮಾಡಿಸಲು, ತಿಂಡಿ ತಿನ್ನಿಸಲು ಮಕ್ಕಳಿಗೆ ಹುಟ್ಟಿದಾಗಿನಿಂದ ಮೊಬೈಲ್ ಫೋನ್ ಕೊಡುವ, ‘ನೋಡ್ರೀ ನನಗೇನೂ ಗೊತ್ತಿಲ್ಲ, ನಮ್ಮ ಮಕ್ಕಳಿಗೆ ಎಲ್ಲಾ ಗೊತ್ತು’ ಎಂದು ಕೊಚ್ಚಿಕೊಳ್ಳುವ ನಾವೇ ಅಲ್ಲವೆ?
2019ರಲ್ಲಿ ದೆಹಲಿಯ ಪ್ರತಿಷ್ಠಿತ ಶಾಲೆಗಳ ಹನ್ನೊಂದು, ಹನ್ನೆರಡನೇ ತರಗತಿಯ ಹುಡುಗರು ಬಾಯ್ಸ್ ಲಾಕರ್ ರೂಮ್ ಎನ್ನುವ ಇನ್‌ಸ್ಟಾಗ್ರಾಂ ಗುಂಪೊಂದನ್ನು ಮಾಡಿಕೊಂಡು, ಅದರಲ್ಲಿ ಹೆಣ್ಣು ಮಕ್ಕಳ ಅರೆನಗ್ನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು, ತೀರಾ ಅಸಹ್ಯ ಎನಿಸುವಂತಹ ಚಾಟ್‌ಗಳನ್ನು ಮಾಡುತ್ತಿದ್ದರು. ಅವರ ಮಾತುಕತೆಯ ಸ್ಕ್ರೀನ್‌ಶಾಟ್ ಗಳು ಹೇಗೋ ಹೊರಬಿದ್ದಾಗ ಜನ ಗಾಬರಿಯಾಗಿ ಬೀದಿಗಿಳಿದರು. ಒಬ್ಬ ಹುಡುಗನ ಆತ್ಮಹತ್ಯೆಗೂ ಕಾರಣವಾದ ಈ ಪ್ರಕರಣವು ಚಿಕ್ಕಮಕ್ಕಳ ಮನಸ್ಸಿನಲ್ಲಿ ಇರುವ ನೀಚತನವನ್ನು ಅನಾವರಣಗೊಳಿಸಿತ್ತು.
ತಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ಕೊರಗುವ ಹದಿಹರೆಯದವರ ಮನಃಸ್ಥಿತಿ ಸಾಮಾಜಿಕ ಜಾಲತಾಣಗಳಿಂದ ಇನ್ನಷ್ಟು ಹೆಚ್ಚಾಗಿದೆ. ದಿಢೀರ್ ಶ್ರೀಮಂತರಾಗುವ ಬಯಕೆಯಿಂದ ಆನ್‌ಲೈನ್ ಆಟ ಮತ್ತು ಜೂಜಿನಲ್ಲಿ ತೊಡಗುವ ಮಕ್ಕಳ ಸಂಖ್ಯೆಯೇನೂ ಕಡಿಮೆಯಿಲ್ಲ. ಇನ್ನು ಲೈಂಗಿಕ ಆಕರ್ಷಣೆಯಿಂದ ಹದಿಹರೆಯದ ಗರ್ಭಧಾರಣೆಯೂ ಮುಂಚಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದೆ.
ಮಕ್ಕಳ ಅಭಿಪ್ರಾಯವನ್ನು ಗೌರವಿಸುತ್ತಲೇ ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳನ್ನು ತಿಳಿಹೇಳುವ ಕೆಲಸ ಶಾಲಾ ಮಟ್ಟದಲ್ಲೇ ಸಾಮೂಹಿಕವಾಗಿ ನಡೆಯಬೇಕು. ತಮ್ಮ ಮಕ್ಕಳು ಬಹಳ ಮುಗ್ಧರು ಎಂಬ ಭ್ರಮೆಯಿಂದ ಎಲ್ಲ ಪಾಲಕರೂ ಹೊರಬರಬೇಕು. ಹಾಗೆಂದು ಬೈದು, ಹೊಡೆದು ಬುದ್ಧಿ ಕಲಿಸುವ ಕಾಲ ಹಿಂದೆಯೇ ಮುಗಿಯಿತು. ಆಕರ್ಷಣೆಯಂತಹ ಸಂಗತಿಗಳು ಸಹಜವೆಂದು ತಿಳಿಹೇಳಿ, ಹೊರ ಬರುವ ಮಾರ್ಗಗಳನ್ನು ನಾಜೂಕಾಗಿ ಮಕ್ಕಳಿಗೆ ತಿಳಿಯ ಪಡಿಸಬೇಕು. ಪಾಲಕರು, ಶಿಕ್ಷಕರು ಮತ್ತು ಸಮಾಜದ ಮೇಲೆ ಹಿಂದಿಗಿಂತಲೂ ಗುರುತರವಾದ ಹೊಣೆ ಇಂದಿದೆ. ಎಚ್ಚೆತ್ತುಕೊಳ್ಳದಿದ್ದರೆ ಸಂಭವಿಸಬಹುದಾದ ಪರಿಣಾಮ ಊಹೆಗೂ ಮೀರಿದ್ದಾಗಿರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.