ADVERTISEMENT

ಸಂಗತ: ಒಳಮೀಸಲಾತಿ– ‘ಮನ್ಸ’ರಾದವರು ಪರಿಗಣಿಸಬೇಕಲ್ಲವೇ?

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಲ್ಲದ ಅಥವಾ ಬಿಟ್ಟುಹೋಗಿರಬಹುದಾದ ಸಮುದಾಯಗಳ ಅಳಲು ಯಾರಿಗೂ ಕೇಳದಂತಾಗಿದೆ

ಡಾ.ಸಿ.ಎಸ್.ದ್ವಾರಕಾನಾಥ್
Published 5 ಮೇ 2025, 19:24 IST
Last Updated 5 ಮೇ 2025, 19:24 IST
<div class="paragraphs"><p>ಸಂಗತ: ‘ಮನ್ಸ’ರಾದವರು ಪರಿಗಣಿಸಬೇಕಲ್ಲವೇ?</p></div>

ಸಂಗತ: ‘ಮನ್ಸ’ರಾದವರು ಪರಿಗಣಿಸಬೇಕಲ್ಲವೇ?

   

ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಏಕಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಮುಂದಾಗಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ವಿವರ ಪಡೆಯಲು ಸನ್ನದ್ಧವಾಗಿದೆ. ಸಮೀಕ್ಷೆಗೆ ಬಂದಾಗ ಆಯಾ ಜಾತಿಗಳ ಹೆಸರುಗಳನ್ನು ಸ್ಪಷ್ಟವಾಗಿ ಬರೆಸುವಂತೆ, ಈ ಪಟ್ಟಿಯಲ್ಲಿರುವ ಬಹುಸಂಖ್ಯಾತ, ಜಾಗೃತ ಮತ್ತು ಸಂಘಟಿತ ಜಾತಿಗಳ ‘ವಿದ್ಯಾವಂತರು’ ತಮ್ಮ ತಮ್ಮ ಜಾತಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇಲ್ಲದಿದ್ದರೆ ಸೌಲಭ್ಯ ಸಿಗುವುದಿಲ್ಲ ಎಂದು ಎಚ್ಚರಿಸುತ್ತಿದ್ದಾರೆ.

ಆಯೋಗವು ಪರಿಶಿಷ್ಟ ಜಾತಿಯ ಪ್ರಸಕ್ತ ಅಧಿ ಸೂಚಿತ ಪಟ್ಟಿಯನ್ನೇ ಪರಿಗಣಿಸಿದರೆ, ಮಾದಿಗ, ಹೊಲೆಯ, ಲಂಬಾಣಿ, ಬೋವಿ ಮತ್ತು ಕೊರಮರಂತಹ (ಕೊರಚ) ಜನಸಂಖ್ಯಾ ಬಾಹುಳ್ಯವಿರುವ ಸಮುದಾಯಗಳಿಗೆ ಅನುಕೂಲವಾಗುತ್ತದೆ. ಆದರೆ ಈ ಸಮುದಾಯಗಳೊಂದಿಗೆ ಯಾವ ರೀತಿಯಿಂದಲೂ ಕುಲಶಾಸ್ತ್ರೀಯವಾಗಿ ಸೇರದ, ಸ್ವತಂತ್ರ ಅಸ್ತಿತ್ವವುಳ್ಳ ಸಣ್ಣ ಸಮುದಾಯಗಳನ್ನು ಈ ದೊಡ್ಡ ಸಮುದಾಯಗಳ ಅಡಿಯಲ್ಲಿ ಪರಿಗಣಿಸಿದರೆ ಅವುಗಳ ‘ಅಸ್ಮಿತೆ’ ಕಳೆದು ಹೋಗುತ್ತದೆ. ಉದಾಹರಣೆಗೆ, ಅಧಿಸೂಚಿತ ಪಟ್ಟಿಯ ಕ್ರಮಸಂಖ್ಯೆ 22ರಲ್ಲಿ ‘ಭಾಂಬಿ’ ಎಂಬ ಸಮುದಾಯದ ಕೆಳಗೆ ಬಾಂಭಿ, ಅಸಾದರು, ಅಸೋಡಿ, ಚಮಾಡಿಯ, ಚಮ್ಮಾರ್, ಚಂಭರ್, ಚಮ್ಗಾರ್, ಹರೈಲಯ್ಯ, ಹರಳಿ, ಕಲ್ಪ, ಮಾಚಿಗೋರ್, ಮೋಚಿಗಾರ್, ಮಾದರ್- ಮಾದಿಗ್, ಮೋಚಿ, ಮುಚ್ಚಿ, ತೆಲುಗುಮೋಚಿ, ಕಮಾಟಿ, ರಾನಿಗಾರ್ ರೋಹಿದಾಸ್, ರೋಹಿತ್, ಸಮಗಾರ್ ಮುಂತಾಗಿ 23 ಜಾತಿಗಳಿವೆ. ಈ ಎಲ್ಲರನ್ನೂ ಒಟ್ಟಾಗಿಸಿ ‘ಭಾಂಬಿ’ ಜಾತಿಯಡಿ ಕ್ರಮಸಂಖ್ಯೆ 22ರ ಒಳಗೆ ಸೇರಿಸಿಬಿಟ್ಟರೆ, ಪ್ರತ್ಯೇಕ ಅಸ್ತಿತ್ವ ಹೊಂದಿರುವ ಕೆಲವು ಜಾತಿಗಳು ತಮ್ಮ ಅಸ್ಮಿತೆ ಕಳೆದುಕೊಳ್ಳುತ್ತವೆ. ಇದೇ ರೀತಿ ಪಟ್ಟಿಯ ಕ್ರಮಸಂಖ್ಯೆ 21ರ ಅಡಿಯಲ್ಲಿ ‘ಭಂಗಿ’ ಜಾತಿಯೊಂದಿಗೆ ಹತ್ತು ಜಾತಿಗಳನ್ನು ಸೇರಿಸಲಾ ಗಿದೆ. ಆಶ್ಚರ್ಯವೆಂದರೆ ‘ಹಲಾಲ್‌ಕೋರ್’ ಎಂಬ ಮುಸ್ಲಿಂ ಸಮುದಾಯವೂ ಇದರೊಂದಿಗೆ ಸೇರಿದೆ!

ADVERTISEMENT

‘ಭಂಗಿ’ ಎಂಬುದು ಮಲ ಬಳಿಯುವ ಜಾಡಮಾಲಿ ಜಾತಿ. ಇದರ ಅಡಿ ಇರುವ ಎಲ್ಲ ಜಾತಿಗಳವರೂ ಇದೇ ಕುಲವೃತ್ತಿ ಮಾಡುತ್ತಿರುವವರಾದರೂ ಈ ಎಲ್ಲ ಜಾತಿಗಳಿಗೂ ಪ್ರತ್ಯೇಕ ಅಸ್ತಿತ್ವವಿದೆ ಎಂಬುದು ಗಮನಾರ್ಹ. ಈ ರೀತಿ ಪರಿಗಣಿಸುವುದಾದರೆ, ಪರಿಶಿಷ್ಟ ಜಾತಿ ಪಟ್ಟಿಯನ್ನು ವಿಸ್ತರಿಸಿ 181 ಜಾತಿಗಳಿಗೆ ಆಯೋಗ ಅವಕಾಶ ನೀಡಬೇಕಾಗುತ್ತದೆ.

ಇನ್ನು ಸಮೀಕ್ಷೆಗಾಗಿಯೇ ಹೊರತಂದಿರುವ ಪರಿಶಿಷ್ಟ ಜಾತಿ ಪಟ್ಟಿಯ ಕೈಪಿಡಿಯಲ್ಲಿ ಬಿಟ್ಟುಹೋಗಿರಬಹುದಾದ ಸಮುದಾಯಗಳ ಅಳಲು ಯಾರಿಗೂ ಕೇಳಿಸುತ್ತಿಲ್ಲ. ಉದಾಹರಣೆಗೆ, ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬಿಟ್ಟುಹೋಗಿರುವ ತುಳುನಾಡಿನ ‘ಮನ್ಸ’ ಜಾತಿಯ ಆತಂಕ ನಿಜಕ್ಕೂ ಮಾನವೀಯತೆಯಿಂದ ಆಲಿಸಬೇಕಾದುದು! ಸುಮಾರು ಐದು ಲಕ್ಷ ಜನಸಂಖ್ಯೆ ಇರುವ ಈ ಪ್ರಮುಖ ಅಸ್ಪೃಶ್ಯ ಜಾತಿಯನ್ನೇ ಪರಿಗಣಿಸದಿರುವುದು ಅಕ್ಷಮ್ಯ. ಜಾತಿ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಆದಿ ಕರ್ನಾಟಕ, ಆದಿ ದ್ರಾವಿಡ, ಹಸಲರು ಮುಂತಾಗಿ ಇಷ್ಟೂ ಕಾಲ ಜಾತಿ ಪ್ರಮಾಣಪತ್ರ ಪಡೆದು ಅಷ್ಟಿಷ್ಟು ಸವಲತ್ತು ಪಡೆಯುತ್ತಿದ್ದ ‘ಮನ್ಸ’ರು ತಮ್ಮ ಅಸ್ಮಿತೆಗಾಗಿ ಮೂರು ದಶಕಗಳಿಂದ ಹೋರಾಡುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೇಲ್ವರ್ಗಗಳು ‘ಮನ್ಸ’ರನ್ನು ತೀರಾ ಕೀಳಾಗಿ ಕಾಣುವುದರಿಂದ ಕೆಲವು ಪ್ರದೇಶಗಳಲ್ಲಿ ತಮ್ಮ ಜಾತಿಯ ಗುರುತನ್ನು ಮರೆಮಾಚುವುದೂ ಈ ಜಾತಿಗೆ ಪ್ರತ್ಯೇಕ ಅಸ್ಮಿತೆ ಸಿಗದಿರುವುದಕ್ಕೆ ಕಾರಣವಾಗಿದೆ.

‘ಮನ್ಸ’ ಜಾತಿಯನ್ನು ಅನೇಕ ಮಾನವಶಾಸ್ತ್ರೀಯ ಸಂಶೋಧಕರು ಗುರುತಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ‌ ದಿವಂಗತ ಡೀಕಯ್ಯನವರ ‘ತುಳುನಾಡಿನ ಮನ್ಸರು: ಒಂದು ಜನಾಂಗಿಕ ಅಧ್ಯಯನ’ ಎಂಬ ಪುಸ್ತಕದಲ್ಲಿ ಮನ್ಸರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಐತಿಹಾಸಿಕ ವಿವರಗಳಿವೆ. ವಾಮನ ನಂದಾವರ ಅವರ ‘ಕರ್ನಾಟಕ ಬುಡಕಟ್ಟುಗಳು’, ಪ್ರೊ. ಲಕ್ಕಪ್ಪಗೌಡ ಅವರು ಸಂಪಾದಿಸಿರುವ ‘ಕರ್ನಾಟಕ ಬುಡಕಟ್ಟುಗಳು: ಸಂಪುಟ ಒಂದು’, ಕೆ.ಎಸ್.ಸಿಂಗ್ ಅವರ ‘ಪ್ಯೂಪಿಲ್ಸ್ ಆಫ್ ಇಂಡಿಯಾ ಪ್ರಾಜೆಕ್ಟ್- 1998’, ‘ಆರ್‌.ಜಿ.ಕಾಕಡೆ ಅವರ ‘ಡಿಪ್ರೆಸ್ಡ್ ಕ್ಲಾಸಸ್ ಆಫ್ ಸೌತ್ ಕೆನರ’, ಎಲ್.ಜಿ.ಹಾವನೂರು ವರದಿ, ನ್ಯಾಯಮೂರ್ತಿ ಸದಾಶಿವ ವರದಿಯಲ್ಲೂ ‘ಮನ್ಸ’ ಸಮುದಾಯದ ಬಗ್ಗೆ ಮಾಹಿತಿಗಳಿವೆ.

ಮನ್ಸ ಜಾತಿಯ ಕೆಲವರು ಅನೇಕ ವರ್ಷಗಳಿಂದಲೂ ಬಂದಬಂದ ಮುಖ್ಯಮಂತ್ರಿಗಳಿಗೆ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ನೀಡಿ ತಮ್ಮ ಜಾತಿಯ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ವಿನಂತಿಸಿದ್ದಾರೆ. ಒಮ್ಮೆ ಯಾವುದಾದರೂ ವಿಶ್ವ ವಿದ್ಯಾಲಯದಿಂದ ಕುಲಶಾಸ್ತ್ರೀಯ ಅಧ್ಯಯನವಾದರೆ ಇವರನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಲು ಅನುಕೂಲ ಆಗುತ್ತದೆ. ಒಳಮೀಸಲಾತಿ ನೀಡುವಾಗ ತಮ್ಮ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಒಳಮೀಸಲಾತಿ ಏಕಸದಸ್ಯ ಆಯೋಗಕ್ಕೂ ಈಚೆಗೆ ಮನವಿ ನೀಡಿ ಬೇಡಿಕೊಂಡಿದ್ದಾರೆ. ಈ ನತದೃಷ್ಟ ಸಮುದಾಯದ ಮಾತನ್ನು ಕೇಳಿಸಿಕೊಳ್ಳಲು ಯಾರಿಗೂ ವ್ಯವಧಾನ ಇಲ್ಲದಿರುವುದು ದುರದೃಷ್ಟಕರ.

ಹೀಗೆ ಹಳೆಯ ಪಟ್ಟಿ ಹಿಡಿದು ಜಾತಿ ಸಮೀಕ್ಷೆಗೆ ಹೊರಟಿರುವುದು ನಾಳೆ ಸಮಸ್ಯೆಗಳನ್ನು ತಂದೊಡ್ಡು ತ್ತದೆ. ಮನ್ಸದಂತಹ ಅನೇಕ ಜಾತಿಗಳು ಪಟ್ಟಿಯಿಂದ ಹೊರಗುಳಿದಿವೆ. ಇವಕ್ಕೆ ಧ್ವನಿಯಿಲ್ಲ, ಹೊರಬಂದು ಮಾತನಾಡಲಾರವು. ತಮ್ಮ ಕಣ್ಣ ಮುಂದೆಯೇ ನಡೆಯುವ ಅನುಕೂಲಸ್ಥ ಮತ್ತು ಸಂಘಟಿತ ಜಾತಿಗಳ ಅಟ್ಟಹಾಸವನ್ನು ನೋಡಿ ಅಸಹಾಯಕತೆಯಿಂದ ಯಾತನೆಪಡುತ್ತಲೇ ಮರೆಯಾಗಿಬಿಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.