ADVERTISEMENT

ಸಂಗತ: ದೇಶದಲ್ಲಿ ಉದ್ಯೋಗವಿದೆ... ಆದರೆ, ಯುವಜನರಲ್ಲಿ ಶ್ರದ್ಧೆ ಇಲ್ಲ!

ಬದ್ಧತೆ, ಪರಿಶ್ರಮದ ಕೊರತೆ ಎಲ್ಲ ಕ್ಷೇತ್ರಗಳನ್ನೂ ಕಾಡುತ್ತಿದೆ

ಪ್ರಜಾವಾಣಿ ವಿಶೇಷ
Published 18 ಫೆಬ್ರುವರಿ 2024, 19:40 IST
Last Updated 18 ಫೆಬ್ರುವರಿ 2024, 19:40 IST
   

‘ಇಲ್ಲಿ ಹಸಿವಿನಿಂದ ಸಾಯುವುದಕ್ಕಿಂತ ಅಲ್ಲಿ ಸಾಯುವುದು ಉತ್ತಮ’ ಎಂಬ ಶೀರ್ಷಿಕೆಯಡಿ, ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಯುದ್ಧಪೀಡಿತ ಇಸ್ರೇಲ್‌ಗೆ ತೆರಳುತ್ತಿರುವ ಭಾರತೀಯ ಕಾರ್ಮಿಕರಿಗೆ ಸಂಬಂಧಿಸಿದ ಲೇಖನವೊಂದು ಪ್ರಕಟವಾಗಿದೆ (ಪ್ರ.ವಾ., ಫೆ. 5). ನೋಟು ರದ್ದತಿ, ಕೋವಿಡ್‌ ಸಮಯದಲ್ಲಿ ಆದ ಉದ್ಯೋಗ ನಷ್ಟವು ನಮ್ಮನ್ನು ಹೈರಾಣಾಗಿಸಿದೆ ಎಂದು ಈ ಕಾರ್ಮಿಕರಲ್ಲಿ ಕೆಲವರು ಹೇಳಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಉದ್ಯೋಗವಿಲ್ಲ ಎನ್ನುವ ಭ್ರಾಂತಿಯನ್ನು ಹುಟ್ಟುಹಾಕಿದ್ದು ಯಾರು ಎಂಬ ಜಿಜ್ಞಾಸೆ ಕಾಡುತ್ತದೆ.

ನಿಜ, ನಮ್ಮ ದೇಶದಲ್ಲಿ ಸರ್ಕಾರಿ ಉದ್ಯೋಗಕ್ಕೆ ಖಂಡಿತ ಬರ ಇದೆ. ಹಾಗೆಂದು ಎಲ್ಲರಿಗೂ ಸರ್ಕಾರಿ ಉದ್ಯೋಗವೇ ಬೇಕೆಂದರೆ ಹೇಗೆ? ಹೊರಗುತ್ತಿಗೆ ಆಧಾರದ ಮೇಲಾದರೂ ಪರವಾಗಿಲ್ಲ, ಸರ್ಕಾರಿ ಕಚೇರಿಯಲ್ಲಿ ಅತಿ ಕಡಿಮೆ ಸಂಬಳಕ್ಕೆ ದುಡಿಯಲು ನಮ್ಮ ಯುವಜನ ಸಿದ್ಧರಿದ್ದಾರೆ. ಏಕೆಂದರೆ, ಇಲ್ಲಿ ದಕ್ಷತೆ, ಬದ್ಧತೆ, ಸಮಯ-ಶ್ರಮ ಆಧಾರಿತ ಕೆಲಸಗಳಿಲ್ಲ. ಇಂದಲ್ಲದಿದ್ದರೂ ನಾಳೆಗೆ ಸಂಬಳ ನಿಶ್ಚಿತವಾಗಿ ಖಾತೆಗೆ ಜಮೆಯಾಗುತ್ತದೆ ಎಂಬ ಭದ್ರತೆಯ ತರ್ಕ.

ಒಮ್ಮೆ, ನಾಡಿನ ಪ್ರಮುಖ ಪತ್ರಿಕೆಯೊಂದರ ಮುಖ್ಯಸ್ಥರೊಂದಿಗೆ ಮಾತನಾಡುತ್ತಿರುವಾಗ, ಪತ್ರಿಕೆ
ಗಳಲ್ಲಿ ನುಸುಳುವ ತಪ್ಪು ಕಾಗುಣಿತ, ವ್ಯಾಕರಣಬದ್ಧವಲ್ಲದ ಶೈಲಿಯ ವರದಿಗಾರಿಕೆಯ ಕುರಿತು ಕೇಳಿದೆ. ಅವರು ‘ನಮ್ಮಲ್ಲಿ ವರದಿಗಾರರು, ಉಪ ಸಂಪಾದಕರಂತಹ ಹುದ್ದೆಗಳಿಗೆ ಬಹಳಷ್ಟು ಯುವಕ-ಯುವತಿಯರು ಅರ್ಜಿ ಸಲ್ಲಿಸುತ್ತಾರೆ. ಅವರಿಗೆ ಕನ್ನಡ ಅಥವಾ ಇಂಗ್ಲಿಷ್‍ನಲ್ಲಿ ಶುದ್ಧವಾಗಿ ಒಂದು ವಾಕ್ಯ ಬರೆದು ತೋರಿಸಲು ಸಹ ಸಾಧ್ಯವಾಗುತ್ತಿಲ್ಲ. ಕಾರಣ ಹುಡುಕುತ್ತಾ ಹೋದರೆ, ಮೂಲಭೂತವಾಗಿ ಶ್ರದ್ಧೆ, ಬದ್ಧತೆಯ ಕೊರತೆ. ಏನನ್ನಾದರೂ ಸಾಧಿಸಬೇಕೆಂಬ ಆಸಕ್ತಿ ಇಲ್ಲ, ಓದುವ ಬಯಕೆ ಇಲ್ಲ. ನಮಗೂ ಸರಿಯಾದವರನ್ನು ಹುಡುಕಿ ಹುಡುಕಿ ಸಾಕಾಗಿಹೋಗಿದೆ’ ಎಂದರು. ಇದು ಮಾಧ್ಯಮ ಕ್ಷೇತ್ರದ ಸಮಸ್ಯೆ ಮಾತ್ರವಲ್ಲ.

ADVERTISEMENT

ಬೆಂಗಳೂರಿನಲ್ಲಿ ಜನಪ್ರಿಯ ಹೋಟೆಲೊಂದಕ್ಕೆ ಕೆಲವು ತಿಂಗಳುಗಳ ಹಿಂದೆ ಹೋಗಿದ್ದಾಗ, ಅಲ್ಲಿ ಸರದಿಯ ಮೇಲೆ ಊಟ-ಉಪಾಹಾರ ಸೇವಿಸುವಂತಹ ಪರಿಸ್ಥಿತಿ ಇತ್ತು. ಮೇಲಿನ ಮಹಡಿಯಲ್ಲಿ ಬಹಳಷ್ಟು ಸ್ಥಳಾವಕಾಶ ಇದ್ದರೂ ಅದನ್ನು ಬಳಸುತ್ತಿಲ್ಲ. ಕೋವಿಡ್ ನಂತರ ಕಾರ್ಮಿಕರ ಕೊರತೆಯಿಂದಾಗಿ ಮುಚ್ಚಿ
ಬಿಟ್ಟಿದ್ದೇವೆ ಎಂದು ಅದರ ಮಾಲೀಕರು ಹೇಳಿದರು. ಬಹಳಷ್ಟು ಹೋಟೆಲ್‍ಗಳಲ್ಲಿ ಕಾರ್ಮಿಕರ ಕೊರತೆ ಜ್ವಲಂತ ಸಮಸ್ಯೆಯಾಗಿದೆ. ತತ್ಪರಿಣಾಮವಾಗಿ, ಇಂದು ನಮ್ಮ ರಾಜ್ಯದ ಬಹುತೇಕ ರೆಸ್ಟೊರೆಂಟ್‍ಗಳಲ್ಲಿ ಅನ್ಯ ರಾಜ್ಯಗಳ ಕಾರ್ಮಿಕರು, ವಿಶೇಷವಾಗಿ ‘ಬಿಮಾರು’ ರಾಜ್ಯಗಳವರೇ ತುಂಬಿಕೊಂಡಿದ್ದಾರೆ.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಯಾಳುಗಳ ಕೊರತೆಯಿಂದ ಸಣ್ಣಪುಟ್ಟ ರೈತರು ಜಮೀನುಗಳನ್ನೇ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೂಗು ಒಂದೆಡೆಯಾದರೆ, ಉಳುವ, ಬಿತ್ತುವ, ಗೊಬ್ಬರ ಹಾಕುವ ಕೆಲಸಗಳಿಗೆ ಆಳುಗಳು ಸಿಗದೇ ರೈತವರ್ಗ ಹೈರಾಣಾಗಿದೆ. ಹಾಗಾಗಿ, ನಗರ ಪ್ರದೇಶಗಳ ಸನಿಹದ ಭೂಮಿಯನ್ನು ರೈತರು ಮಾರಾಟ ಮಾಡಿ ನಿರುಮ್ಮಳರಾಗುತ್ತಿದ್ದಾರೆ.

ಕೃಷಿ ಎನ್ನುವುದು ಬರೀ ಅವಿದ್ಯಾವಂತರ ಕೆಲಸ ಎನ್ನುವ ಕಲ್ಪನೆ ಇಂದು ವ್ಯಾಪಕವಾಗಿದೆ.
ವಿಪರ್ಯಾಸವೆಂದರೆ, ಸಿರಿವಂತರು ಕೃಷಿಯನ್ನು ಒಂದು ಹವ್ಯಾಸವನ್ನಾಗಿ, ಉದ್ಯಮವನ್ನಾಗಿ ಮಾರ್ಪಡಿಸಿ
ಕೊಂಡಿದ್ದಾರೆ.

ನನ್ನ ಸ್ನೇಹಿತ ಒಂದು ಮನೆ ಕಟ್ಟಿಸುತ್ತಿದ್ದ. ಕಾಮಗಾರಿ ಬಹಳ ವಿಳಂಬವಾಗಿ ನಡೆಯುತ್ತಿತ್ತು. ಕಾರಣ ಕೇಳಿದರೆ, ಮೇಸ್ತ್ರಿಯ ಉತ್ತರ ‘ಏನ್ ಮಾಡೋದು ಸಾರ್, ಅಡ್ವಾನ್ಸ್ ಇಸ್ಕೊತಾರೆ, ಫೋನ್ ಆಫ್ ಮಾಡ್ಕೊಂಡು ಊರು ಬಿಡ್ತಾರೆ. ಎಷ್ಟು ಅಂತ ತರೋದು, ಎಷ್ಟು ಅಂತ ಅಡ್ವಾನ್ಸ್‌ ಕೊಡೋದು, ಸಾಕಾಗಿಹೋಗಿದೆ’. ‘ಆಯುಷ್ಮಾನ್ ಭಾರತ್’ ಕಾರ್ಯಕ್ರಮದಡಿ ಆರೋಗ್ಯ ಕೇಂದ್ರಗಳಲ್ಲಿ ಯೋಗ ತರಬೇತಿದಾರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಹತ್ತು ಹುದ್ದೆಗಳಿಗೆ ಅರ್ಜಿ ಕರೆದರೆ, ಬರೀ ಇಬ್ಬರು ಅಥವಾ ಮೂವರು ಅರ್ಜಿ ಹಾಕುತ್ತಾರೆ.

ಒಮ್ಮೆ ಲಾರಿ ಮಾಲೀಕರೊಬ್ಬರೊಂದಿಗೆ ಮಾತನಾಡುತ್ತಿರುವಾಗ, ‘ವ್ಯವಹಾರ ಹೇಗೆ ನಡೆದಿದೆ?’ ಎಂದು ಕೇಳಿದೆ. ‘ಅಯ್ಯೋ ಬಿಡಿ ಸಾರ್, ಕ್ಲೀನರ್ ಕೆಲಸಕ್ಕೆ ಬರ್ತೀಯಾ ಅಂದ್ರೆ, ಮೊದಲು ಲಾರಿ ಟೈರ್ ನೋಡ್ತಾರೆ. ಹೊಸ ಟೈರ್ ಇದ್ರೆ ಮಾತ್ರ ಬರ್ತಾರೆ, ಹಳೆ ಟೈರ್ ಇದ್ರೆ ಪದೇ ಪದೇ ಪಂಕ್ಚರ್ ಆಗುತ್ತೆ, ಟೈರ್ ಚೇಂಜ್ ಮಾಡಬೇಕಾಗುತ್ತೆ ಅಂತ, ‘ನಾಳೆ ಹೇಳ್ತೀನಿ’ ಎಂದು ಹೇಳಿ ಮತ್ತೆ ಬರೋದೇ ಇಲ್ಲ. ಹಾಗಾಗಿ, ಲಾರಿಗಳ ಸಂಖ್ಯೆ ಕಡಿಮೆ ಮಾಡ್ಕೊಳ್ತಾ ಇದೀನಿ’ ಅಂದರು.

ಉದ್ಯೋಗದ ಕೊರತೆಗಿಂತ ಹೆಚ್ಚಾಗಿ ಶ್ರದ್ಧೆ, ಬದ್ಧತೆ, ಪರಿಶ್ರಮದ ಕೊರತೆಯೇ ಎಲ್ಲೆಡೆ ಇದೆ. ಅಡ್ಡಮಾರ್ಗದಲ್ಲಿ, ಅತ್ಯಲ್ಪ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಬೇಕೆಂಬ ಆಲೋಚನೆ ಉಳ್ಳವರೇ ಅಧಿಕ. ಕಲಿಯುವ ಕುತೂಹಲ, ದಕ್ಷತೆಯಿಂದ ದುಡಿಯುವ ಆಸಕ್ತಿ, ಏನಾದರೂ ಸಾಧಿಸಬೇಕೆಂಬ ಛಲ ಇದ್ದರೆ, ಇಂಥ ಕ್ಷೇತ್ರದಲ್ಲಿ ಮಾತ್ರ ನಾನು ಕೆಲಸ ಮಾಡುವುದು ಎಂಬ ನಿಲುವಿನಿಂದ ಹೊರಬಂದರೆ, ಹೊರದೇಶಕ್ಕೆ ಹೋಗಬೇಕಾದ ಅನಿವಾರ್ಯ ಸ್ಥಿತಿ ಇಲ್ಲದೆ ನಮ್ಮ ದೇಶದಲ್ಲಿಯೇ ನೆಮ್ಮದಿಯಾಗಿ ಬದುಕು ಸಾಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.