ADVERTISEMENT

ಸಂಗತ: ಕಾರ್ಮಿಕರ ಕಾಯಲಿ ಕಾಯಕ

ಅಸಂಘಟಿತ ಕಾರ್ಮಿಕರ ಹಿತ ಕಾಯಲು ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 19:30 IST
Last Updated 23 ಮೇ 2025, 19:30 IST
.
.   

ಕಾರ್ಮಿಕ ವಲಯದಲ್ಲಿ ಪದೇಪದೇ ದುರಂತಗಳು ಘಟಿಸುತ್ತವೆ. ಲಾರಿಯಿಂದ ಕಬ್ಬಿಣದ ಪೈಪುಗಳನ್ನು ಇಳಿಸುವಾಗ ಆಯತಪ್ಪಿ ಬಿದ್ದ ಪೈಪುಗಳ ಕೆಳಗೆ ಸಿಲುಕಿ ಕಾರ್ಮಿಕರ ದುರ್ಮರಣ, ಕಲ್ಲುಕ್ವಾರಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕಾರ್ಮಿಕ ಬಲಿ, ಬಾಯ್ಲರ್‌ ಸಿಡಿದು ಹೋಟೆಲ್‌ ಕೆಲಸಗಾರ ಸಾವು... ಹೀಗೆ ಯಾರದೋ ತಪ್ಪಿಗೆ ಕೆಲಸಗಾರರು ಬಲಿಪಶುಗಳಾಗುತ್ತಲೇ ಹೋಗುತ್ತಾರೆ.

ಅಂತಹದ್ದೊಂದು ಪ್ರಕರಣ ಸಂಭವಿಸಿದ ಕೂಡಲೇ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಸಂಗತಿ ಸುದ್ದಿಯಾಗುತ್ತದೆ. ಸಂಬಂಧಪಟ್ಟ ಮಾಲೀಕನ ಬಂಧನವೂ ಆಗುತ್ತದೆ. ಒಂದಷ್ಟು ದಿನ ಈ ವಿಷಯದ ಬಗ್ಗೆ  ಚರ್ಚೆಗಳು ನಡೆಯುತ್ತವೆ. ಇಷ್ಟೆಲ್ಲ ಆದ ಮೇಲಾದರೂ ಜೀವ ಕಳೆದುಕೊಂಡವನನ್ನು ನಂಬಿದ ಕುಟುಂಬಕ್ಕೆ ಅನ್ನದ ದಾರಿ ದೊರಕಿತೇ? ಒಂದು ದುರಂತ ಘಟಿಸಿದ ಮೇಲಾದರೂ ಇಂತಹ ದುಡಿಮೆಯಲ್ಲಿ ತೊಡಗಿಕೊಂಡವರ ಸಂರಕ್ಷಣೆಗಾಗಿಯೇ ಇರುವ ಕಾನೂನಿನ ಬಿಗಿ ಹೆಚ್ಚಾಯಿತೇ ಎಂದು ನೋಡಿದರೆ, ಸಾವಿಗೆ ಕಾರಣವಾದ ಇನ್ನೊಂದು ದುರಂತ ಈ ಪ್ರಶ್ನೆಗೆ ನಕಾರಾತ್ಮಕ ಉತ್ತರ ನೀಡುತ್ತದೆ.

ಜೀವರಕ್ಷಣೆಯ ಅಭಯವೇ ಇಲ್ಲದೆ, ಪ್ರಾಣವನ್ನು ಪಣಕ್ಕಿಟ್ಟು ಸಾರ್ವಜನಿಕ ವಲಯದ ಕೆಲಸಗಳಲ್ಲಿ ತೊಡಗಿರುವ ಬಡ ಕಾರ್ಮಿಕರ ಸಂಖ್ಯೆ ಎಷ್ಟೆಂಬುದು ನಿಖರವಾಗಿ ನಮಗೆ ತಿಳಿಯದು. ಆದರೆ ಅವರ ದುಡಿಮೆಯ ಆಳ– ಅಗಲದ ಬಗ್ಗೆ ಯೋಚಿಸಿದಾಗ, ನಾವು ಅವರಿಗೆ ಕೈಯೆತ್ತಿ ಒಂದು ಸೆಲ್ಯೂಟ್‌ ಹೇಳಲೇಬೇಕು ಎನಿಸುತ್ತದೆ. ರಾಜ್ಯದಲ್ಲಿ ಜೀವಕ್ಕೆ ಕುತ್ತು ತರುವ ಹಲವು ಕಾಮಗಾರಿಗಳಲ್ಲಿ ದುಡಿದು ದುರಂತ ಸಾವಿಗೆ ಗುರಿಯಾಗುವವರಲ್ಲಿ ಉತ್ತರ ಕರ್ನಾಟಕದವರಿದ್ದಾರೆ, ಜಾರ್ಖಂಡ್‌, ಬಿಹಾರದಿಂದ ಬಂದವರಿದ್ದಾರೆ. 

ADVERTISEMENT

ಇವರೆಲ್ಲ ಮಾಡುವ ದುಡಿಮೆ ಸಣ್ಣದೇನಲ್ಲ. ಉರಿಯುವ ಸೂರ್ಯ ನೆತ್ತಿಯ ಮೇಲಿರುವಾಗಲೂ ಹೆದ್ದಾರಿಯ ಕಾಮಗಾರಿಯಲ್ಲಿ ತನ್ಮಯರಾಗುವವರಲ್ಲಿ ಬಹುತೇಕರು ಜಾರ್ಖಂಡ್‌ ಮೂಲದ ಕಾರ್ಮಿಕರು. ಒಂದುವೇಳೆ ಅವರು ಗೈರುಹಾಜರಾದರೆ ಅಂದಿನ ಕಾಮಗಾರಿಯೇ ಸ್ಥಗಿತವಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ, ಲಾರಿಯಲ್ಲಿದ್ದ ಜಲ್ಲಿಮಿಶ್ರಿತ ಬಿಸಿ ಡಾಂಬರು ಮೈಮೇಲೆ ಬಿದ್ದು ಲಾರಿ ಚಾಲಕರೊಬ್ಬರು ದಾರುಣ ಅಂತ್ಯ ಕಂಡರು. ಸೇತುವೆಗಳು, ರೈಲು ಹಳಿಗಳು, ಗಗನಚುಂಬಿ ಕಟ್ಟಡಗಳು, ದೂರವಾಣಿ ಗೋಪುರಗಳು... ಎಲ್ಲವುಗಳ ನಿರ್ಮಾಣದ ಮೂಲಕ ನಮಗೆ ಸೌಲಭ್ಯಗಳನ್ನು ಒದಗಿಸುವವರು ಈ ಕೆಲಸಗಾರರು. ಆದರೆ ಈ ಬಹು ದೊಡ್ಡ ಸಮೂಹದ ಪರಿಚಯ ಎಂದಿಗೂ ನಮಗೆ ಆಗದು. ‘ಉತ್ತಮ ಕೆಲಸಗಾರ’ ಎಂಬ ಪ್ರಶಸ್ತಿಯೇನೂ ಅವರನ್ನು ಅರಸಿಕೊಂಡು ಹೋಗುವುದಿಲ್ಲ.

ಅನೇಕರು ಹೇಳುವ ಪ್ರಕಾರ, ನೆರೆ ರಾಜ್ಯಗಳ ಕಾರ್ಮಿಕರು ತಮ್ಮ ಊರಿನಲ್ಲಿ ಕೆಲಸ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಕರ್ನಾಟಕಕ್ಕೆ ಬರುತ್ತಾರೆ. ಗುತ್ತಿಗೆದಾರರ ಕೈ ಕೆಳಗೆ ಬೆವರು ಹರಿಸುತ್ತಾರೆ. ರಕ್ಷಣಾತ್ಮಕ ವ್ಯವಸ್ಥೆಗಳಿಲ್ಲದ ಪರಿಣಾಮವಾಗಿ ಸಾವನ್ನಪ್ಪುವ ಕೆಲಸಗಾರನಿಗೆ ಹುತಾತ್ಮನ ಗೌರವವೇನೂ ಸಿಗುವುದಿಲ್ಲ. ಅವನನ್ನೇ ನಂಬಿದ ಕುಟುಂಬಕ್ಕೆ ಯೋಗ್ಯ ಪರಿಹಾರ ಕೊಡಿಸಲು ಕಾನೂನಿನ ಅಸ್ತ್ರ ಹಿಡಿದು ಹೋಗುವವರೂ ಇರುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ, ನ್ಯಾಯವಾಗಿ ಅವರಿಗೆ ಸಿಗುವ ಸಂಬಳವೆಷ್ಟು, ಗುತ್ತಿಗೆದಾರನ ಜೊತೆಗೆ ಕರಾರು ಮಾಡಿಕೊಂಡಿದ್ದಾರೆಯೇ ಎಂದು ವಿಚಾರಿಸುವ ಅಧಿಕಾರಿ ವರ್ಗವಿಲ್ಲ. ಹೀಗಾಗಿ, ಆಕಸ್ಮಿಕವಾಗಿ ಸಂಭವಿಸುವ ಎಷ್ಟೋ ದುರಂತಗಳು ಒಂದು ದಿನದ ಸುದ್ದಿಯಾಗಿ ಮಾಸಿಹೋಗುತ್ತವೆ.

ಒಂದು ಬೃಹತ್‌ ಕಟ್ಟಡದ ವಾಸ್ತು ವಿನ್ಯಾಸ ಮಾಡಿದ ತಂತ್ರಜ್ಞನ ಜಾಣ್ಮೆಯು ಪ್ರಶಸ್ತಿಗೆ ಮಾನ್ಯವಾಗುತ್ತದೆಯೇ ವಿನಾ ಗೋಡೆಯನ್ನು ಚಾಕಚಕ್ಯತೆಯಿಂದ ಕಟ್ಟಿದ ಕಾರ್ಮಿಕನ ನೈಪುಣ್ಯವಲ್ಲ. ಆ ಕಾರ್ಮಿಕ ಯಾರು, ಅಂತಹವರ ಸಂಖ್ಯೆ ಎಷ್ಟು ಎಂಬುದು ಬೆಳಕಿಗೇ ಬರುವುದಿಲ್ಲ. ವೇತನ ಕೊಟ್ಟಲ್ಲಿಗೆ ಕೆಲಸಗಾರನಿಗೂ ಕಾಮಗಾರಿಗೂ ಇರುವ ಸಂಬಂಧದ ಬಾಗಿಲು ಶಾಶ್ವತವಾಗಿ ಮುಚ್ಚಿ ಹೋಗುತ್ತದೆ.

ಅಸಂಘಟಿತ ಕಾರ್ಮಿಕರ ಹಿತ ಕಾಯಲು ನಮ್ಮಲ್ಲಿ ಬಹಳಷ್ಟು ಕಾನೂನುಗಳು ಜಾರಿಯಲ್ಲಿವೆ. ಆದರೆ ಅನೇಕ ಕಾರ್ಮಿಕರಿಗೆ ಅದರ ಅರಿವು ಇರುವುದಿಲ್ಲ. ಕೆಲಸ ಮಾಡುವಾಗ ಸಾವು ಸಂಭವಿಸಿದರೆ, ಅಂಗಾಂಗಕ್ಕೆ ಹಾನಿಯಾದರೆ ಪರಿಹಾರ ಸಿಗುತ್ತದೆ ಎಂಬುದೂ ಅವರಿಗೆ ತಿಳಿದಿರುವುದಿಲ್ಲ. ಕಾಮಗಾರಿ ಆರಂಭವಾಗುವ ಮೊದಲು ಕಾರ್ಮಿಕ ಇಲಾಖೆಯಿಂದ ಗುತ್ತಿಗೆದಾರರು ಪರವಾನಗಿ ಪಡೆದಿದ್ದಾರೆಯೇ, ಕೆಲಸಗಾರರು ನಿಯಮದ ಪ್ರಕಾರ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆಯೇ ಎಂಬುದನ್ನು ತಿಳಿಯುವ ತಮ್ಮ ಜವಾಬ್ದಾರಿಯನ್ನು ಅಧಿಕಾರಿಗಳು ಸರಿಯಾಗಿ ನಿಭಾಯಿಸಿದರೆ ಎಷ್ಟೋ ಸಂಭವನೀಯ ದುರಂತಗಳನ್ನು ತಡೆಯಬಹುದು.

ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳದೆ ಕೆಲಸ ಆರಂಭಿಸಲೇಬಾರದು ಎಂದು ಅಧಿಕಾರಿಗಳು ತಾಕೀತು ಮಾಡದಿರುವುದೇ ಅಮಾಯಕರ ಜೀವಹಾನಿಗೆ ಕಾರಣ ಆಗಬಾರದು. ಆಗ ದುರಂತದಲ್ಲಿ ಅಧಿಕಾರಿಗಳೂ ಭಾಗಿಯಾದಂತೆ ಆಗುತ್ತದೆ.

ಸಮೂಹದ ಸೇವೆಗಾಗಿ ಶ್ರಮಿಸುವ ಅನಾಮಿಕ ಕಾರ್ಮಿಕನ ಬೆವರಿನ ಶ್ರಮವನ್ನು ಗೌರವಿಸುವ, ಅವನು ಸಾವಿಗೀಡಾದಾಗ ಪರಿತಪಿಸುವ ಹೃದಯವಂತಿಕೆ ನಮ್ಮದಾಗಬೇಕಾಗಿದೆ. ಕಾರ್ಮಿಕ ದಿನಾಚರಣೆಯನ್ನು ಒಳಗೊಂಡಿರುವ ಈ ಮಾಸ, ಅಂತಹದ್ದೊಂದು ಎಚ್ಚರವನ್ನು ನಮ್ಮಲ್ಲಿ ಮೂಡಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.