ADVERTISEMENT

ಸಂಗತ | ಸಂಬಂಧಗಳು ಮನುಷ್ಯತ್ವ ಮರೆತಾಗ…

ಈ ಬಗೆಯ ಕ್ರೌರ್ಯಕ್ಕೆ ಕಾರಣ ಹಲವು; ಔಷಧಿಯನ್ನು ಬೇರುಗಳಿಗೇ ಕೊಡಬೇಕಿದೆ

ದೀಪಾ ಹಿರೇಗುತ್ತಿ
Published 4 ಏಪ್ರಿಲ್ 2025, 23:17 IST
Last Updated 4 ಏಪ್ರಿಲ್ 2025, 23:17 IST
   

ಮಹಿಳೆಯೊಬ್ಬಳು ಗಂಡನನ್ನು ಕೊಂದು ಡ್ರಮ್‌ನಲ್ಲಿ ತುಂಬಿದ್ದ ಸುದ್ದಿ ಹಳೆಯದಾಗುತ್ತಿದ್ದಂತೆಯೇ ಪುರುಷನೊಬ್ಬ ಹೆಂಡತಿಯನ್ನು ಸಾಯಿಸಿ ಸೂಟ್ಕೇಸಿನಲ್ಲಿ ತುಂಬಿದ ಸುದ್ದಿ ಹೊರಬಿದ್ದಿದೆ. ಇಂತಹ ಹೀನಾತಿಹೀನ ಕೃತ್ಯಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕೇಳಿಬರುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

1995ರಲ್ಲಿ ದೆಹಲಿಯ ನೈನಾ ಸಾಹ್ನಿ ಎಂಬ 29ರ ಹರಯದ ನತದೃಷ್ಟ ಹೆಣ್ಣುಮಗಳು ತನ್ನ ಗಂಡ ಸುಶೀಲ್‌ ಶರ್ಮಾನಿಂದ ಕೊಲೆಯಾಗಿ ತಂದೂರ್ ಒಲೆಯಲ್ಲಿ ಸುಡಲ್ಪಟ್ಟಿದ್ದಳು. ಆ ಪ್ರಕರಣವು ದೇಶದಾದ್ಯಂತ ಆತಂಕದ ಅಲೆಗಳನ್ನು ಎಬ್ಬಿಸಿತ್ತು. ಅದಾದ ಬಳಿಕ ಅಂತಹ ಕೃತ್ಯಗಳು ಅಲ್ಲೊಂದು ಇಲ್ಲೊಂದು ವರದಿ ಆಗಿದ್ದವು. ಆದರೆ ಅಂತಹ ಕೃತ್ಯಗಳು ಇತ್ತೀಚೆಗೆ ಪದೇ ಪದೇ ವರದಿಯಾಗುತ್ತಿರುವುದನ್ನು ಓದಿದಾಗ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಭಯವಾಗುತ್ತದೆ. ಮನುಷ್ಯತ್ವ ಎಂಬ ಶಬ್ದಕ್ಕೇ ಸವಾಲು ಹಾಕುವಂತಹ, ಪ್ರತಿಯೊಂದು ಹೆಜ್ಜೆಯನ್ನೂ ಜಾಗರೂಕತೆಯಿಂದ ಯೋಜಿಸಿ ಕಾರ್ಯರೂಪಕ್ಕೆ ತರುವ ಈ ತಣ್ಣನೆಯ ಕ್ರೌರ್ಯವು ಮನಸ್ಸಿನಲ್ಲಿ ಹುಟ್ಟುವ ಆ ಕ್ಷಣವಾದರೂ ಯಾವುದು?

ಮನಸ್ಸು, ಕನಸು, ದೇಹ ಎಲ್ಲವನ್ನೂ ಹಂಚಿಕೊಂಡ ಜೀವವನ್ನು ಹೀಗೆ ಬರ್ಬರವಾಗಿ ಮುಗಿಸಿಹಾಕುವುದು ಮನುಷ್ಯ ಎಷ್ಟು ಕ್ರೂರವಾಗಬಲ್ಲ ಎನ್ನುವುದಕ್ಕೆ ಉದಾಹರಣೆ. ಇದಕ್ಕೆ ಬಹಳಷ್ಟು ಸಂದರ್ಭಗಳಲ್ಲಿ
ವಿವಾಹೇತರ ಸಂಬಂಧ, ಅದಕ್ಕೆ ಸಂಬಂಧಿಸಿದ ಶಂಕೆಗಳೇ ಕಾರಣ ಆಗಿರುತ್ತವೆ. ಜತೆಗೆ ಅಹಂ, ಅಸೂಯೆ, ಹಣಕಾಸಿನ ಲಾಭ, ತಮ್ಮ ತಪ್ಪು ಸಮಾಜಕ್ಕೆ ತಿಳಿಯುವ ಭಯ ಇವೆಲ್ಲವೂ ಜತೆಯಾಗುತ್ತವೆ. ಸ್ನೇಹದ ಹೆಸರಿನಲ್ಲೂ ನಂಬಿದವರ ಕತ್ತು ಕುಯ್ಯುವ ನೀಚತನ ಕೂಡ ಇದೆ.

ADVERTISEMENT

ನಿಜ, ಮನುಷ್ಯ ಸಂಬಂಧಗಳು ಬಹಳ ನಾಜೂಕಾಗಿರುತ್ತವೆ. ಅದರಲ್ಲೂ ರಕ್ತಸಂಬಂಧವಲ್ಲದ ಗಂಡ– ಹೆಂಡತಿ ಅಥವಾ ಪ್ರೇಮಿಗಳ ಸಂಬಂಧವು ಹಗ್ಗದ ಮೇಲಿನ ನಡಿಗೆಯೇ. ಪ್ರೇಮವೆಂದರೆ ಧಾರಾವಾಹಿ, ಸಿನಿಮಾ, ಸಾಮಾಜಿಕ ಜಾಲತಾಣಗಳಲ್ಲಿ ತೋರಿಸುವ ಡೇಟಿಂಗ್‌, ಉಡುಗೊರೆ, ರಮ್ಯವಾದ ವಿವಾಹದ ಆಚರಣೆ ಮಾತ್ರವಲ್ಲ; ಅದೊಂದು ಬದ್ಧತೆ. ದಿನದಿನವೂ ನಿಭಾಯಿಸಬೇಕಾದ ಜವಾಬ್ದಾರಿ. ನಿಜವಾದ ಪ್ರೇಮ ಧಗಧಗನೆ ಉರಿವ ಒಣಸೌದೆಯಲ್ಲ, ಅದು ನಿಧಾನವಾಗಿ ಹೊತ್ತಿಕೊಂಡು ಉರಿಯುವ ಕಲ್ಲಿದ್ದಲು. ಆದರೆ ದುರ್ದೈವವಶಾತ್‌ ಸಣ್ಣ ಪುಟ್ಟ ಆಕರ್ಷಣೆಗಳನ್ನೇ ಪ್ರೇಮ ಎಂದುಕೊಳ್ಳುವ ಅಪಕ್ವ ಮನಃಸ್ಥಿತಿ ಇವೆಲ್ಲ ಸಮಸ್ಯೆಗಳಿಗೆ ಕಾರಣ.

ಮನುಷ್ಯರು ಎಂದಮೇಲೆ ಆಕರ್ಷಣೆ ಸಹಜವಾದದ್ದು. ಬದುಕಿನ ಯಾವ ಹಂತದಲ್ಲಾದರೂ ಎದುರಾಗಬಹುದಾದ ಇಂತಹ ತಾತ್ಕಾಲಿಕ ವ್ಯಾಮೋಹವನ್ನು ಬದಿಗೆ ಸರಿಸಿ ಮುನ್ನಡೆಯುವುದು ಜಾಣತನ. ಆದರೆ ಅಂತಹ ಪ್ರೌಢಿಮೆ ಎಲ್ಲರಿಗೂ ಇರುವುದಿಲ್ಲ. ರಾತ್ರಿ ಕಂಡ ಬಾವಿಗೆ ಹಗಲಿಗೆ ಬೀಳುವಂತೆ ಹಾದಿ ತಪ್ಪುವ ಮೂರ್ಖತನ ಬರುಬರುತ್ತ ಈ ಮಟ್ಟಕ್ಕೆ ಬಂದು ಮುಟ್ಟುವುದು ಮಾತ್ರ ಊಹೆಗೂ ಮೀರಿದ್ದು!

ವಿವಾಹದಲ್ಲಿ ಹೊಂದಾಣಿಕೆಯೇ ಆಗದಿದ್ದರೆ ಸೌಹಾರ್ದದಿಂದ ಬೇರೆಯಾಗುವ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವ ಅವಕಾಶ ಇದ್ದರೂ ಹೀಗೇಕಾಗುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಬಹುದು. ದುರದೃಷ್ಟವಶಾತ್‌ ನಮ್ಮ ದೇಶದಲ್ಲಿ ವಿಚ್ಛೇದನ, ಮಹಿಳೆಯರ ಮರುವಿವಾಹದಂತಹ
ವಿಷಯಗಳು ನಡತೆಯ ಪರಿಣಾಮ ಎಂಬಂತೆ ಪರಿಗಣಿತವಾಗುತ್ತವೆ. ಅವು ಸಹಜ ಎಂಬ ಮನಃಸ್ಥಿತಿ ಬಹಳ ದೂರವಿದೆ. ಇನ್ನು ಸೇಡು ತೀರಿಸಿಕೊಳ್ಳಲು ಕಾನೂನನ್ನು ಕೈಗೆತ್ತಿಕೊಳ್ಳುವುದೇ ಹೀರೊಯಿಸಂ ಎಂದು ಸಿನಿಮಾಗಳು ಸಾರಿ ಸಾರಿ ಹೇಳಿವೆ, ಸಮಾಜ ಅದನ್ನು ನಂಬಿಬಿಟ್ಟಿದೆ. ಜಗತ್ತಿನ ಕಣ್ಣಿನಲ್ಲಿ ಆದರ್ಶ ಸಂಸಾರದ ಮುಖವಾಡ ಹಾಕಿಕೊಂಡಿರುವವರಿಗೆ ಅದು ಕಳಚಿ ಬೀಳುವುದು ಇಷ್ಟವಾಗುವುದಿಲ್ಲ. ಹೀಗಾಗಿ ಕೊಲೆ ಮಾಡಿ ಶವದ ಸುಳಿವೇ ಸಿಗದಂತೆ ಮಾಡಿದರೆ ಎಲ್ಲ ರೀತಿಯಲ್ಲಿಯೂ ಸುರಕ್ಷಿತ ಎಂದು ಯೋಚಿಸಿ ಈ ರೀತಿಯ ಹೀನ ಕೃತ್ಯ ಎಸಗುತ್ತಾರೆ. ಅವರಿಗೆ ಗೊತ್ತಿಲ್ಲದ ವಿಷಯವೇನೆಂದರೆ ಕಾನೂನಿನ ಕೈಗಳು ಬಹಳ ಉದ್ದವಿರುತ್ತವೆ ಎಂಬುದು. ಮಾಧ್ಯಮದಲ್ಲಿ ಬರುವ ಈ ರೀತಿಯ ಅಪರಾಧಗಳನ್ನು ನೋಡಿ ಸ್ಫೂರ್ತಿ ಪಡೆಯುವವರು, ಇಂತಹ ಪ್ರಕರಣಗಳನ್ನು ಪೊಲೀಸರು ತಕ್ಷಣ ಭೇದಿಸಬಲ್ಲರು ಎಂಬುದರ ಕುರಿತು ಜಾಣಮರೆವು ತೋರುತ್ತಾರೆ!

ಒಂದು ಕಾಲದಲ್ಲಿ ನಮ್ಮ ತುಟಿಯಂಚಿನಲ್ಲಿ ನಗುವನ್ನು ಅರಳಿಸಿದ ಯಾವುದೇ ಸಂಗತಿಯ ಕುರಿತು ಪಶ್ಚಾತ್ತಾಪ ಪಡಬಾರದಂತೆ. ಆದರೆ ಈ ಅಪರಾಧಿಗಳು ತಮ್ಮವರೊಂದಿಗೇ ತೋರುವ ಕ್ರೌರ್ಯ ಊಹೆಗೂ ಮೀರಿದ್ದು! ಇಂದು ಹಣದ ಹಿಂದೆ ಬಿದ್ದಿರುವ ಸಮಾಜ, ಮಾನವೀಯ ಮೌಲ್ಯಗಳನ್ನು ಮರೆತಿದೆ. ಹಿಂದೆ
ಶಾಲೆಗಳಲ್ಲಿದ್ದ ನೀತಿಪಾಠದ ತರಗತಿಗಳು ವ್ಯರ್ಥವೆಂದು ವಿಜ್ಞಾನವನ್ನು ಅವಧಿಗಿಂತ ಹೆಚ್ಚು ಬೋಧಿಸಲಾಗು
ತ್ತಿದೆ. ಬೆಳಗಿನಿಂದ ಸಂಜೆಯವರೆಗೆ ತರಗತಿಯಲ್ಲಿ ಕೂರುವ ಮಕ್ಕಳ ಮನಸ್ಸಿಗೆ ಮುದವನೀಯುವ ಆಟದ ಅವಧಿಗಳೂ ವ್ಯರ್ಥವೆಂದು ಮಕ್ಕಳ ಮುದುಡಿದ ಮುಖ ನೋಡಿಯೂ ನೋಡದಂತೆ ಅಲ್ಲೂ ಗಣಿತ ಪಾಠ ಮಾಡಲಾಗುತ್ತಿದೆ. ಇದೀಗ ಇಂತಹ ಕೃತ್ಯಗಳು ನಮ್ಮ ಲೆಕ್ಕಾಚಾರದಲ್ಲಿ ತಪ್ಪಿದೆಯೆಂಬ ಸ್ಪಷ್ಟ ಸಂದೇಶ ನೀಡುತ್ತಿವೆ. ಇದು, ಗಿಡದ ಹೂವು ಮುರುಟಿದರೆ ಹೂವಿಗೆ ಉಪಚಾರ ಮಾಡುವ ಸಮಸ್ಯೆಯಲ್ಲ, ಬೇರುಗಳಿಂದಲೇ ಔಷಧಿ ಕೊಡಬೇಕಾದ ಸಮಸ್ಯೆ. ನಮ್ಮಲ್ಲಿ ಅತ್ಯಂತ ಅವಗಣನೆಗೆ ಪಾತ್ರವಾಗಿರುವ ಮಾನಸಿಕ ಆರೋಗ್ಯದ ಕಡೆಗೂ ತುರ್ತು ಗಮನ ಅಗತ್ಯ. ಸರ್ಕಾರಗಳು, ಸಮಾಜ ಜತೆಜತೆಯಾಗಿ ಕಾರ್ಯಯೋಜನೆ ಹಾಕಿಕೊಂಡರೆ ಮಾತ್ರ ಪರಿಹಾರವಾಗಬಲ್ಲ ಸಮಸ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.