ADVERTISEMENT

ಇಂದು ವಿಶ್ವ ಆರೋಗ್ಯ ದಿನ: ಪರಿಸರ ಮತ್ತು ಆರೋಗ್ಯದ ನಂಟು

ಪರಿಸರದ ಬಿಕ್ಕಟ್ಟು ಆರೋಗ್ಯದ ಬಿಕ್ಕಟ್ಟೂ ಹೌದು!

ಡಾ.ಕೆ.ಎಸ್.ಪವಿತ್ರ
Published 7 ಏಪ್ರಿಲ್ 2022, 5:26 IST
Last Updated 7 ಏಪ್ರಿಲ್ 2022, 5:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈ ಬಾರಿಯ ವಿಶ್ವ ಆರೋಗ್ಯ ದಿನದ (ಏ. 7) ಧ್ಯೇಯ ಬಹುಜನರ ಹುಬ್ಬು ಏರಿಸಿದೆ. ‘Our planet, our health’- ‘ನಮ್ಮ ಗ್ರಹ, ನಮ್ಮ ಆರೋಗ್ಯ’ ಎಂಬ ಧ್ಯೇಯವು ಪರಿಸರ ದಿನಾಚರಣೆಯದ್ದೋ ಆರೋಗ್ಯ ದಿನದ್ದೋ ಎಂಬ ಗೊಂದಲ ಮೂಡಿಸಿದಂತಿದೆ! ಆದರೆ ಕೋವಿಡ್ ಸಾಂಕ್ರಾಮಿಕದ ಕರಾಳ ದಿನಗಳು ತೆರೆದಿಟ್ಟ ಆರೋಗ್ಯ, ಸಮಾಜ- ಪರಿಸರ ಇವೆಲ್ಲದರ ನಡುವಣ ನಂಟಿನ ಹಲವು ಆಯಾಮಗಳನ್ನು ನೋಡಿದರೆ, ಈ ಬಾರಿಯ ಧ್ಯೇಯವು ತುಂಬ ಅರ್ಥಪೂರ್ಣ ಎಂದೆನಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ತನ್ನ ಧ್ಯೇಯ ಘೋಷಣೆಯಲ್ಲಿ ಹೇಳಿರುವ ‘ಇದರ ಹಿಂದಿರುವ ಆಶಯ ಸ್ವಚ್ಛ ಗಾಳಿ, ಸುರಕ್ಷಿತ ನೀರು, ಸ್ವಚ್ಛತೆ, ಆರೋಗ್ಯಕರ ಆಹಾರ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು, ವಾಸಿಸುವ ಪರಿಸರವುಳ್ಳ ಪಟ್ಟಣಗಳು, ವಾತಾವರಣದ ವೈಪರೀತ್ಯಗಳನ್ನು ತಡೆಯಬಲ್ಲಂತಹ ಆರ್ಥಿಕತೆಯನ್ನು ಕಟ್ಟಲು ಪ್ರೇರಣೆ ನೀಡುವುದು. ಎಲ್ಲರಿಗೂ ಸಂತೋಷವಾದ ದೀರ್ಘಾಯುಷ್ಯವುಳ್ಳ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ದೊರೆಯುವುದು’ ಎಂಬ ಮಾತುಗಳು ಮೇಲ್ನೋಟಕ್ಕೆ ‘ಸಾದಾ’ ಎಂಬಂತೆ ಕಂಡರೂ ‘ಅಸಾಧ್ಯ’ ಎನಿಸಬಹುದು. ಆದರೆ ಅವುಗಳ ಹಿಂದೆ ಜಗತ್ತು ಕೊರೊನಾದಂತಹ ಸಾಂಕ್ರಾಮಿಕ
ಗಳಿಂದ ಕಲಿತ ಪಾಠಗಳೂ ಅಡಗಿವೆ.

ಆಧುನಿಕ ವೈದ್ಯಕೀಯ ಪಿತಾಮಹ ಎಂದು ಹೆಸರಾದ ಹಿಪ್ಪೋಕ್ರಾಟಿಸ್ ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಹೇಳಿರುವ ಮಾತನ್ನು ನಾವಿಲ್ಲಿ ನೆನಪಿಸಿ ಕೊಳ್ಳಬೇಕು. ವೈದ್ಯರ ಜವಾಬ್ದಾರಿಗಳ ಬಗ್ಗೆ ತನ್ನ ಪುಸ್ತಕ ‘ದಿ ಎಪಿಡೆಮಿಕ್ಸ್’ನಲ್ಲಿ ಆತ ಹೀಗೆ ಬರೆಯುತ್ತಾನೆ: ‘ವೈದ್ಯನಾದವನು ರೋಗವೊಂದರ ಕಾರಣಗಳನ್ನು ಹೇಳಲು ಸಮರ್ಥನಿರಬೇಕು. ಇದನ್ನು ಅರಿತು, ಭವಿಷ್ಯವನ್ನು ಹೇಳಲು ಆತನಿಗೆ ಸಾಮರ್ಥ್ಯವಿರಬೇಕು.
ಇವೆಲ್ಲವನ್ನೂ ಒಟ್ಟಾಗಿಸಿ ಕಾಯಿಲೆಯ ಬಗ್ಗೆ ಎರಡು ಸಂಗತಿಗಳಿಗಾಗಿ ಆತ ಆಗ್ರಹಿಸಬೇಕು. ಅವೆಂದರೆ ‘To do good or to do no harm’- ಒಳ್ಳೆಯದನ್ನು ಮಾಡುವುದು ಅಥವಾ ಕೆಟ್ಟದ್ದನ್ನು ಮಾಡದಿರುವುದು’.

ADVERTISEMENT

ಪರಿಸರದ ಬಿಕ್ಕಟ್ಟು ಆರೋಗ್ಯದ ಬಿಕ್ಕಟ್ಟೂ ಹೌದು! ವಿದ್ಯುತ್- ಉಷ್ಣತೆ- ಸಾರಿಗೆಗಾಗಿ ಇಂಧನ ಉರಿಸುವಿಕೆಯಿಂದ ಉಂಟಾಗುವುದು ವಾಯುಮಾಲಿನ್ಯ. ಜಗತ್ತಿನಾದ್ಯಂತ ಪ್ರತಿವರ್ಷ ವಾಯುಮಾಲಿನ್ಯದಿಂದ 70 ಲಕ್ಷ ಅಕಾಲಿಕ ಮರಣಗಳು ಉಂಟಾಗುತ್ತವೆ ಎಂದರೆ ನಂಬಲು ಸಾಧ್ಯವೇ?!

ಪರಿಸರ ಮಾಲಿನ್ಯ- ವಾತಾವರಣದ ವೈಪರೀತ್ಯಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಒಂದೆಡೆಯಾದರೆ, ಇನ್ನೊಂದೆಡೆ ಆರೋಗ್ಯ ವ್ಯವಸ್ಥೆಗೇ ಅದು ಮಾರಕವಾಗಬಹುದು. ಉದಾಹರಣೆಯೊಂದನ್ನು ಗಮನಿಸಬಹುದು. ಕೇರಳದಲ್ಲಿ 2018ರಲ್ಲಿ ಬಂದ ಪ್ರವಾಹದ ಕಾರಣ ಆಸ್ಪತ್ರೆಗಳಿಂದ ರೋಗಿಗಳನ್ನು ಖಾಲಿ ಮಾಡಿಸಬೇಕಾಯಿತು, ಶಸ್ತ್ರಚಿಕಿತ್ಸೆಗಳು ನಿಂತುಹೋದವು, ತುರ್ತು ಪರಿಸ್ಥಿತಿಯ ಆರೈಕೆ ಸಾಧ್ಯವಾಗದೇ ಹೋಯಿತು. ವಿದ್ಯುತ್‌ ಅಡಚಣೆಯಿಂದ ಮಾತ್ರೆ- ಲಸಿಕೆಗಳ ದಾಸ್ತಾನುಗಳು ಉಪಯೋಗಕ್ಕೆ ಬಾರದಂತಾದವು. ಈಗ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಿಂದಲೂ ಮಾನವ ನಿರ್ಮಿತ ಮಾಲಿನ್ಯವು ಪ್ರಕೃತಿಯ ವಿಕೋಪಗಳ ಜೊತೆ ಇವೆಲ್ಲವನ್ನೂ ಮಾಡುತ್ತಿದೆ.

ಪರಿಸರ- ವಾತಾವರಣದ ಬಿಕ್ಕಟ್ಟುಗಳಿಗೆ ಶೀಘ್ರವಾಗಿ ಸ್ಪಂದಿಸಬೇಕಾದ ಹೊಣೆಯನ್ನು ಹೊರುವ ಆರೋಗ್ಯ ಕ್ಷೇತ್ರವೂ ಜಾಗತಿಕವಾಗಿ ಹಸಿರು ಮನೆಯ ಅನಿಲ ಪರಿಣಾಮಗಳಿಗೆ ತಾನೂ ಶೇಕಡ 5ರಷ್ಟು ಕಾರಣವಾಗುತ್ತದೆ. ಆದರೆ ವೈದ್ಯಕೀಯ ಕ್ಷೇತ್ರಕ್ಕೆ ಈ ಬಗೆಗೆ ಅರಿವಿದೆ! ಸಾಮಾನ್ಯ ಜನರಿಗೆ ಗೊತ್ತಿಲ್ಲದ, ಮಾಧ್ಯಮಗಳ ಗಮನ ಸೆಳೆಯುವ ಹಲವು ಕ್ರಾಂತಿಕಾರಕ ಪರಿಸರ ಸಂರಕ್ಷಣಾ ವಿಧಾನಗಳು ವೈದ್ಯಕೀಯ ಕ್ಷೇತ್ರದಲ್ಲಿ ಸದ್ದಿಲ್ಲದೆ ನಡೆಯುತ್ತಿವೆ. ಪರಿಸರ ಸಂರಕ್ಷಣೆ-ಆರೋಗ್ಯದ ನಡುವಿನ ಸಂಬಂಧವನ್ನು ಮನಗಂಡೇ ಚಳವಳಿಯೊಂದು ನಡೆಯುತ್ತಿದೆ. ಶೂನ್ಯ ಮಾಲಿನ್ಯ ಹೊರಸೂಸುವಿಕೆ, ವಾತಾವರಣದಿಂದ ವಿಚಲಿತವಾಗದ ಪರಿಸರ- ಆರೋಗ್ಯದ ಸ್ಥಿತಿ, ಆರೋಗ್ಯ ಸಮಾನತೆ ದಾರಿಯ ನಕ್ಷೆ. ಇವು ಈ ಚಳವಳಿಯ ಹಿಂದಿನ ಪ್ರಬಲ ಶಕ್ತಿಗಳು.

ಛತ್ತೀಸಗಡ ರಾಜ್ಯದಲ್ಲಿ 900ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳನ್ನು ಸೌರಶಕ್ತಿಯಿಂದ ಬಲಪಡಿಸಲಾಗಿದೆ. ಪ್ರಪಂಚದ 18 ದೇಶಗಳ 3,000 ಆಸ್ಪತ್ರೆಗಳು ತಮ್ಮ ಕಟ್ಟಡಗಳು, ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಎಲ್ಲದರಲ್ಲಿ ಇಂಗಾಲದ ಪ್ರಮಾಣವನ್ನು ಶೂನ್ಯವಾಗಿಸುವತ್ತ ಕಾರ್ಯತತ್ಪರವಾಗಿವೆ. ‘ಸ್ವಚ್ಛ ಗಾಳಿ ಮತ್ತು ವಾತಾವರಣದ ಕ್ರಿಯಾಶಕ್ತಿಗಾಗಿ ವೈದ್ಯರು’ ಎಂಬ ಚಳವಳಿಯು ಭಾರತದ ಎಲ್ಲೆಡೆ ವಾಯುಮಾಲಿನ್ಯ ತಡೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಪ್ರೇರಣೆ- ಶಿಫಾರಸು ನೀಡುತ್ತಿದೆ.

ರೋಗಪೀಡಿತವಾದ ಗ್ರಹದ ಮೇಲೆ ಆರೋಗ್ಯವಂತ ಜೀವಿಗಳಿರಲು ಸಾಧ್ಯವಿಲ್ಲ. ಪ್ರಸ್ತುತ ಸಾಮಾಜಿಕ-ಆರ್ಥಿಕ ಕ್ರಮಗಳು, ಮುಂದಿನ ಭವಿಷ್ಯವನ್ನು ಗಮನದಲ್ಲಿಡದೇ ರೂಪುಗೊಳ್ಳುತ್ತಿವೆ. ಹಾಗೆ ನೋಡಿದರೆ ಕೋವಿಡ್- 19, ಪ್ರಕೃತಿ ಮಾತೆಯೊಂದಿಗೆ ನಮ್ಮ ಶಿಥಿಲಗೊಂಡ ಸಂಬಂಧದ ಒಂದು ಜ್ವಲಂತ ಉದಾಹರಣೆ.

ಇಂದಿನ ತುರ್ತು, ಹಿಪ್ಪೋಕ್ರಾಟಿಸ್‍ನ ‘ಮೊದಲು, ತೊಂದರೆಯನ್ನು ಮಾಡಬೇಡ’ ಎಂಬ ಮಾತನ್ನು ಮತ್ತೆ ಮತ್ತೆ ನಾವೆಲ್ಲರೂ ನೆನಪಿಸಿಕೊಳ್ಳಬೇಕು. ಭೂಮಿತಾಯಿಯನ್ನು ವಿವಿಧ ರೀತಿಗಳಲ್ಲಿ ಕೊಳಕು ಮಾಡುವ, ಹಾಳುಗೆಡಹುವ ನಾವು ಹಾಗಾಗದಂತೆ ತಡೆಯಬೇಕಾದುದು ಆ ತಾಯಿಯನ್ನು ರಕ್ಷಿಸಲಷ್ಟೇ ಅಲ್ಲ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಎಂಬುದನ್ನು ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.