ಸಾಂದರ್ಭಿಕ ಚಿತ್ರ
ಅದ್ಯಾಕೋ ಅದೊಂಥರಾ ಭಾವೋತ್ಕಟತೆ ಅಥವಾ ಭಾವ ತೀವ್ರತೆ ಒಮ್ಮೊಮ್ಮೆ ಹುಟ್ಟಿಬಿಡುತ್ತದೆ. ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅದು ಯಾವುದೇ ವಿಚಾರಕ್ಕೆ ಸಂಬಂಧಿಸಿರಬಹುದು. ಪ್ರೀತಿಯೇ ಇರಬಹುದು, ದ್ವೇಷವೇ ಆಗಬಹುದು. ಯಾವುದೇ ಭಾವವಾದರೂ ಒಂದು ಮಿತಿಗಿಂತ ತೀವ್ರವಾಗಿದ್ದರೆ ಒಳ್ಳೆಯದೇನೂ ಅಲ್ಲ ಎನ್ನುವುದು ಸುಲಭ. ಆದರೆ, ಅವುಗಳನ್ನು ನಿಯಂತ್ರಿಸಿಕೊಳ್ಳುವುದು ಕಷ್ಟ. ಹಾಗಂತ ಅದರ ಹಿಂದೆಯೇ ಹೊರಟುಹೋಗುವುದು ಬುದ್ಧಿವಂತರ ಲಕ್ಷಣವೂ ಅಲ್ಲ.
ಬಹಳಷ್ಟು ಬಾರಿ ಹೇಳುವುದನ್ನು ಕೇಳಿದ್ದೇವೆ– ‘ಇವನು ಸಿಕ್ಕಾಪಟ್ಟೆ ಭಾವನಾತ್ಮಕ ಮನುಷ್ಯ’ ಎಂದು. ಹಾಗೆಲ್ಲ ಹೇಳಿಸಿಕೊಳ್ಳಲೇನೋ ಚೆಂದವೇ. ಆದರೆ, ಅಂಥವರು ಜೀವನದಲ್ಲಿ ಸಾಕಷ್ಟು ನೋವುಣ್ಣಬೇಕಾಗುತ್ತದೆ ಎಂಬುದು ಸತ್ಯ. ಹೀಗಾಗಿ ಕೆಲವು ಭಾವ ಅಥವಾ ಭಾವನೆಗಳು ತೀವ್ರವಾದಾಗ ಅವುಗಳಿಗೆ ಮನಸ್ಸನ್ನು ಒಪ್ಪಿಸುವುದರ ಬದಲು ಸ್ವಲ್ಪ ನಿಲ್ಲಿ. ತಾಳ್ಮೆಯಿಂದ ಅವುಗಳನ್ನು ವೀಕ್ಷಿಸಿ. ಅದ್ಯಾವ ವೇಗದಲ್ಲಿ ನಮ್ಮ ವಿವೇಕಕ್ಕೆ ಕೈ ಹಾಕುತ್ತಿದೆ, ಎಷ್ಟರ ಮಟ್ಟಿಗೆ ದಿನದ ಸಮಯವನ್ನು ಆಪೋಶನ ತೆಗೆದುಕೊಳ್ಳುತ್ತಿದೆ ಎಂಬುದನ್ನು ಸುಮ್ಮನೆ ಒಂದೆರಡು ದಿನಗಳ ಕಾಲ ಪರಿಶೀಲಿಸಿಕೊಳ್ಳಿ. ಈ ಸಮಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಹೋಗಬೇಡಿ. ಅದು ಮತ್ತೆ ಭಾವನೆಗಳ ಕೈಗೆ ಬುದ್ಧಿಯನ್ನು ಒಪ್ಪಿಸಿದಂತೆಯೇ ಆಗುತ್ತದೆ.
ಉದಾಹರಣೆಗೆ ಯಾವುದೋ ಹುಡುಗ/ಹುಡುಗಿಯ ಬಗ್ಗೆ ಇನ್ನಿಲ್ಲದ ಆಕರ್ಷಣೆ ಆರಂಭವಾಗಿಬಿಡುತ್ತದೆ. ಅಥವಾ ಯಾರದೋ ಬಗ್ಗೆ ಇದ್ದಕ್ಕಿದ್ದಂತೆ ದ್ವೇಷ– ಅಸಹನೆಗಳು ಆರಂಭವಾಗಿಬಿಡುತ್ತದೆ. ಇನ್ನು ಕೆಲವರ ಬಗ್ಗೆ ಇವರು ನನ್ನ ತೀರಾ ಆತ್ಮೀಯರು, ಯಾವುದೋ ಜನ್ಮದ ಬಾಂಧವ್ಯವೇನೋ ಎಂಬಂಥ ಸ್ನೇಹವೂ ಮೊಳೆಯಬಹುದು. ಇವನಿಂದ ನನಗೆ ಯಾಕೋ ಅಪಾಯ ಕಾಣುತ್ತಿದೆ. ನನಗೆ ಈತ ಏನಾದರೂ ಕೆಡುಕನ್ನು ಮಾಡಿಬಿಡುತ್ತಾನೇನೋ ಎಂಬಂಥ ಭಯ–ಆತಂಕಗಳೂ ಕೆಲವು ಬಾರಿ ಕಾಡಬಹುದು... ಹೀಗೆ, ಏನೇನೋ ಭಾವನೆಗಳು ಮನದಲ್ಲಿ ಮೊಳೆಯುತ್ತವೆ.
ಅಂತಹ ಭಾವನೆಗಳನ್ನು, ವಿಚಾರಗಳನ್ನು ದೂರವಿಡಬೇಕು ಅಂತಲ್ಲ, ಹಾಗೆ ದೂರವಿಡಬೇಕು ಎಂದು ಯತ್ನಿಸಿದರೆ ಅದು ಮತ್ತಷ್ಟು ಬಂದು ಅಂಟಿಕೊಳ್ಳುತ್ತದೆ. ಹೀಗಾಗಿ ಅವುಗಳಿಂದ ದೂರ ಓಡುವ ವಿಚಾರವೂ ಬೇಡ. ಹತ್ತಿಕ್ಕುವ ಹುನ್ನಾರವೂ ಬೇಡ. ನಿಯಂತ್ರಿಸುವ ಯತ್ನವೂ ಬೇಡ. ಬರೀ ವೀಕ್ಷಣೆ ಮಾಡಿ. ಇದಕ್ಕಾಗಿಯೇ ಒಂದೆರಡು ದಿನಗಳು ವ್ಯಯವಾದರೂ ಸರಿ, ಆದರೆ, ಅವುಗಳನ್ನು ಸಮಗ್ರವಾಗಿ ಅರಿಯುವ ಯತ್ನ ನಮ್ಮಿಂದಾಗಬೇಕು. ಆಗ ಆ ವಿಚಾರದ ಅಥವಾ ಭಾವನೆಯ ಮೌಲ್ಯ ನಮಗೆ ಗೊತ್ತಾಗುತ್ತದೆ. ಇದು ಬರೀ ಕಾಡಿಸಲು ಇರುವಂಥದ್ದು ಎಂದು ತಿಳಿದುಬಂದರೆ, ನಿರ್ಲಕ್ಷಿಸುವ ಮನೋಸ್ಥೈರ್ಯ ಮೂಡಬೇಕು. ಮನಕ್ಕೆ ಮುದ ನೀಡುವಂಥದ್ದು ಅಥವಾ ನಿಜಕ್ಕೂ ಮೌಲ್ಯಯುತವಾಗಿದ್ದಾದರೆ ಇನ್ನಷ್ಟು ಆಪ್ತಗೊಳಿಸಿಕೊಳ್ಳುವ ವೈಶಾಲ್ಯವನ್ನೂ ತೋರಬೇಕು.
ಒಟ್ಟಾರೆ ಹೇಳೋದಿಷ್ಟೇ, ನಿಮ್ಮ ಮನವೇರಿ ಬರುವ ಭಾವನೆಗಳನ್ನು ತಬ್ಬಿಕೊಳ್ಳುವ, ಅದಕ್ಕೆ ಪ್ರತಿಕ್ರಿಯಿಸುವ ಮುನ್ನ ಅಂಥ ಭಾವನೆಗಳ ಮೇಲೊಂದು ಕಣ್ಣಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.