ADVERTISEMENT

ಪಿವಿ ವೈಬ್ಸ್: ಆಗಿದ್ದು ಆಗಿಹೋಯಿತು; ಬಿಟ್ಹಾಕ್ರಿ, ಮಾಡಕ್ಕೇ ಬೇಕಷ್ಟಿದೆ!

ಸಹನೆ
Published 21 ಫೆಬ್ರುವರಿ 2026, 0:30 IST
Last Updated 21 ಫೆಬ್ರುವರಿ 2026, 0:30 IST
   

ಎಲ್ಲರ ಜೀವನದಲ್ಲೂ ಇಂಥವು ನಡೆದೇ ಇರುತ್ತದೆ. ಅದ್ಯಾಕೆ ಹಾಗೆ ಮಾಡುತ್ತೇವೆ ಎಂಬುದಕ್ಕೆ ಉತ್ತರ ಸಿಗುವುದೇ ಇಲ್ಲ. ಎಲ್ಲವೂ ಗೊತ್ತಿದ್ದೂ ನಾವು ಹಾಗೆ ವರ್ತಿಸಿರುತ್ತೇವೆ, ಅದು ತಪ್ಪು ಎಂಬುದು ಗೊತ್ತಿದ್ದೂ ಮಾಡಿರುತ್ತೇವೆ. ಸುಳ್ಳು ಹೇಳಬಾರದು ಎಂದುಕೊಂಡೇ ಏನಾಗಲ್ಲ, ಬಿಡು ಇದೊಂದು ಸಾರಿ ಮ್ಯಾನೇಜ್‌ ಮಾಡಿಬಿಡೋಣ ಎಂಬ ಕಾರಣಕ್ಕೆ ಸುಳ್ಳು ಹೇಳಿಬಿಟ್ಟಿರುತ್ತೇವೆ. ಯಾರಿಗೂ ಗೊತ್ತಾಗುವುದಿಲ್ಲ ಎಂಬ ಭಂಡ ಧೈರ್ಯದಲ್ಲಿ ಮಾಡಬಾರದ್ದನ್ನು ಮಾಡಿ ಬಿಟ್ಟಿರುತ್ತೇವೆ. ಜಯಿಸಿಕೊಳ್ಳುತ್ತೇನೆ ಎಂಬ ಅಹಮಿಕೆಯಲ್ಲಿ ಆಡಬಾರದ್ದು ಆಡಿಬಿಟ್ಟಿರುತ್ತೇವೆ. ವೃಥಾ ಬೇರೆಯವರನ್ನು ಟೀಕಿಸಿರುತ್ತೇವೆ. ಸಣ್ಣವರಾಗುತ್ತೇವೆ ಎಂಬ ಅರಿವಿದ್ದೂ ಅವರ ಬಗ್ಗೆ ಇವರ ಬಳಿ, ಇವರ ಬಗ್ಗೆ ಅವರ ಬಗ್ಗೆ ಸಲ್ಲದ್ದನ್ನು ಮಾತಾಡಿ. ಶಿಸ್ತು ಮರೆಯುತ್ತವೆ. ಅಸಡ್ಡೆ ಮಾಡುತ್ತೇವೆ, ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತೇವೆ. ಒರಟಾಗಿ ವರ್ತಿಸುತ್ತೇವೆ... ಹಿರಿ-ಕಿರಿಯರೆನ್ನದೇ ಸ್ಥಾನಗೌರವ ಮೀರಿ ಮಾರುತ್ತರ ಕೊಟ್ಟುಬಿಡುತ್ತೇವೆ.. ಬದುಕಿನ ಮಾರ್ಗದ ಆಯ್ಕೆ, ನೌಕರಿ, ವಿವಾಹ, ವ್ಯವಹಾರದಂಥ ಇತ್ಯಾದಿ ಮಹತ್ವದ ಸಂಗತಿಗಳಿಗೂ ಇದು ಅನ್ವಯ.

ಇಂಥ ಸಂದರ್ಭದಲ್ಲೆಲ್ಲ ನಮಗೆ ಖಂಡಿತಾ ಅನಿಸಿರುತ್ತದೆ. ಇದು ಸರಿಯಿಲ್ಲ, ನಾವು ಹೀಗೆ ಮಾಡಬಾರದು. ನಮ್ಮ ಮನೋಭಾವಕ್ಕೂ ಇದು ಹೊಂದುವುದಿಲ್ಲ ಎಂದು. ಆದರೂ ಭಾವನೆಗಳ ಮಹಾಪೂರದಲ್ಲಿ ಕೊಚ್ಚಿ ಹೋಗಿರುತ್ತೇವೆ. ಆ ಪ್ರವಾಹವನ್ನು ಹತ್ತಿಕ್ಕುವುದು ಸಾಧ್ಯವೇ ಆಗುವುದಿಲ್ಲ. ಆಗ ಬುದ್ಧಿಯ ಮಾತು ಎಲ್ಲೋ ಕಳೆದುಹೋಗಿರುತ್ತದೆ. ವಿವೇಕಕ್ಕೆ ಬೆಲೆಯಿರುವುದಿಲ್ಲ. ಆಗ ನಾವು ಕೈಗೊಳ್ಳುವ ನಿರ್ಧಾರದ ಮೇಲೆ ಇಡೀ ಬದುಕು ನಿಂತಿದೆ ಎಂಬ ವಾಸ್ತವದ ಅರಿವಿದ್ದರೂ ಅದನ್ನು ಮೆಟ್ಟಿನಿಲ್ಲುವುದು ಎಲ್ಲರಿಗೂ ಸುಲಭವಲ್ಲ. ಕೆಲ ಕಾಲದ ಬಳಿಕ ಆ ನಮ್ಮ ನಿಲುವಿನ ಬಗ್ಗೆ ಪಶ್ಚಾತ್ತಾಪ ಪಡಲು ಆರಂಭಿಸಿಬಿಡುತ್ತೇವೆ. ಆಗ ನಮಗೆ ಏನಾಗಿತ್ತು ಎಂದು ನಮ್ಮನ್ನೇ ಹಳಿದುಕೊಳ್ಳಲು ಶುರು ಮಾಡುತ್ತೇವೆ. ಆಗಲೇ ಬೇರೆಯವರ ಬದುಕಿನೊಂದಿಗೆ ನಮ್ಮದನ್ನು ಹೋಲಿಸಿಕೊಳ್ಳುವ ದುರ್ಬಲ ಮನಃಸ್ಥಿತಿ ನಮ್ಮದಾಗುತ್ತದೆ. ನಾವು ಆಯ್ಕೆ ಮಾಡಿಕೊಂಡ ಬದುಕಿನಿಂದ ಹೊರಬೀಳಲೂ ಸಾಧ್ಯವಾಗದೇ, ಇರಲೂ ಆಗದೇ ಒದ್ದಾಡುತ್ತೇವೆ.

ಆದರೆ, ಒಮ್ಮೆ ಚಿಂತಿಸಿ. ಈಗ ಆಗಿರುವಂಥದ್ದಾದರೂ ಏನು? ನಿಮ್ಮ ಆಯ್ಕೆ ಸರಿಯಾಗಿಲ್ಲವೆಂದು ಈಗೇನೋ ನಿಮಗೆ ಅನಿಸುತ್ತಿರಬಹುದು. ಆದರೆ, ಹಿಂದೊಮ್ಮೆ ಅದನ್ನೇ ಆಸೆಯಿಂದ ನೀವು ಆಯ್ದುಕೊಂಡಿಲ್ಲವೇ? ಹೀಗಾಗಿ ಅದರ ಬಗ್ಗೆ ಈಗ್ಯಾಕೆ ಪಶ್ಚಾತ್ತಾಪ? ಎಲ್ಲ ಅತೃಪ್ತಿಗಳೊಂದಿಗೇ ಬದುಕಲು ಸಾಧ್ಯವೇ ಇಲ್ಲವೇ? ಅಕಸ್ಮಾತ್ ನೀವು ಬೇರೊಂದು ಬದುಕನ್ನು ಆಯ್ದುಕೊಂಡಿದ್ದರೂ ಅದು ಇನ್ನಷ್ಟು ಅಪರಿಪೂರ್ಣವಾಗಿರುವುದಿಲ್ಲವೆಂಬ ಗ್ಯಾರಂಟಿ ಏನು? ಅಷ್ಟಕ್ಕೂ ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿಯೇ ಇರುತ್ತದೆ ಎಂದು ಅಂದುಕೊಳ್ಳುವುದು ತಪ್ಪಲ್ಲವೇ? ಅದರ ಬದಲು ಎಲ್ಲರ ಬದುಕೂ ಹೀಗೆಯೇ. ಒಂದೂ ಕೊರತೆ ಇಲ್ಲದ ಬದುಕೊಂದು ಇರಲು ಸಾಧ್ಯವೇ ಎಂಬುದನ್ನು ಅರ್ಥ ಮಾಡಿಕೊಂಡು ಚಿಂತಿಸಿ ಮನಸ್ಸನ್ನು ತಹಬಂದಿಗೆ ತಂದುಕೊಂಡರೆ, ಕನಿಷ್ಠ ಪಕ್ಷದ ನೆಮ್ಮದಿ ನಮ್ಮದಾಗುತ್ತದೆ.

ADVERTISEMENT

ಆಗದಿರುವುದನ್ನು ಚಿಂತಿಸುತ್ತಿದ್ದರೆ ನಮ್ಮಿಂದ ಸಾಧ್ಯವಿರುವಂತಹದ್ದೂ ಆಗುವುದಿಲ್ಲ ಎಂಬುದು ನೆನಪಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.