
ಹಾಗೆಂದು ಒಂದೇ ಬಾರಿಗೆ ನಿರ್ಧರಿಸಿಬಿಡಲಿಕ್ಕಾಗುವುದಿಲ್ಲ. ಅದು ಯಾವುದೇ ಘಟನೆಯಿರಬಹುದು, ಯಾವುದೇ ವ್ಯಕ್ತಿಯೂ ಇರಬಹುದು. ಸನ್ನಿವೇಶಕ್ಕೆ ತಕ್ಕಂತೆ ಅವರು ಒಮ್ಮೊಮ್ಮೆ ಹಾಗೆ ವರ್ತಿಸಿರಲೂಬಹುದು. ಕೆಲವೊಂದು ಅನಿವಾರ್ಯದಲ್ಲಿ ಅಂಥ ಘಟನೆಗಳು ನಡೆದಿರಲೂಬಹುದು. ಅಂದ ಮಾತ್ರಕ್ಕೆ ಅದನ್ನು ಏಕಾ ಏಕಿ ತಪ್ಪೆಂದು ತೀರ್ಮಾನಿಸುವುದು ಆತುರವೆನಿಸುತ್ತದೆ.
ಯಾವುದೇ ಘಟನೆಯಿಂದ ಹಿಂದೆ ಹತ್ತು ಹಲವು ಕಾರಣಗಳಿರುತ್ತವೆ. ಕೆಲವೊಮ್ಮೆ ವಿವೇಚನೆಯಿಲ್ಲದೇ ಪ್ರಮಾದಗಳಾಗಿಬಿಟ್ಟಿರುತ್ತವೆ. ಗಮನಕ್ಕೆ ಬಾರದೇ ಕೆಲ ತಪ್ಪುಗಳು ಆಗಿ ಹೋಗಿರಬಹುದು. ಯಾವುದೇ ವ್ಯಕ್ತಿ ಬೇಕೆಂದೇ ತಪ್ಪು ಮಾಡುವುದು ತೀರಾ ವಿರಳ. ಅಥವಾ ತಪ್ಪೆಂದು ಗೊತ್ತಿದ್ದೂ ಅದನ್ನೆಸುಗುವವರೂ ವಿರಳ. ಹಾಗೆಂದು ಎಲ್ಲ ತಪ್ಪುಗಳಿಗೂ ಇದೇ ಸಮರ್ಥನೆ ಎಂದಾಗುವುದಿಲ್ಲ. ಆದರೆ ಬಹುತೇಕ ಸಂದರ್ಭದಲ್ಲಿ ತಪ್ಪುಗಳಿಂದಾಗುವ ಪರಿಣಾಮದ ಬಗೆಗೂ ಸ್ಪಷ್ಟ ಪರಿಕಲ್ಪನೆಗಳಿರುತ್ತವೆ. ಅದು ಯಾವತ್ತೂ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತವೆಂಬ ಬಗ್ಗೆಯೂ ಅರಿವಿರುತ್ತದೆ. ಹೀಗಾಗಿ ಉದ್ದೇಶ ಪೂರ್ವಕ ಯಾರೂ ತಪ್ಪನ್ನು ಮೈಮೇಲೆಳೆದುಕೊಳ್ಳುವುದಿಲ್ಲ. ಹಾಗೂ ತಪ್ಪೆಸಗಿದ್ದಾರೆಂದರೆ ಅದರ ಹಿಂದೆ ಅಂದೋ ಅನಿವಾರ್ಯ, ಇಲ್ಲವೇ ಬಲವಾದ ಕಾರಣವಿದ್ದಿರಲೇಬೇಕು.
ಯಾವುದೇ ವ್ಯಕ್ತಿ ತಪ್ಪೆಸಗಿದಾಗ ಅದರ ಹಿಂದಿನ ಕಾರಣವನ್ನು ಮೊದಲು ತಿಳಿಯಲು ಪ್ರಯತ್ನಿಸೋಣ. ಎಂಥ ಸನ್ನಿವೇಶದಲ್ಲಿ ಅದಾಯಿತು ಎಂಬುದರ ಬಗ್ಗೆ ಪರಾಮರ್ಶಿಸೋಣ. ಅದು ನಮ್ಮ ಹತ್ತಿರದವರೇ ಆಗಿರಬಹುದು. ಮಕ್ಕಳು, ಹೆಂಡತಿ, ಅಣ್ಣ ತಮ್ಮಂದಿರು, ಸಹೋದ್ಯೋಗಿಗಳು, ಮಿತ್ರರು… ಹೀಗೆ ಯಾರೇ ಆಗಿರಬಹುದು. ಒಂದೇ ಘಟನೆಯಿಂದ, ಒಂದು ಮಾತಿನಿಂದ, ಒಂದು ಸಲದ ವರ್ತನೆಯಿಂದ ಅವರ ಮೇಲಿನ ಅಭಿಪ್ರಾಯವನ್ನೇ ಬದಲಿಸಿಕೊಂಡುಬಿಡುವುದು ಸರಿಯಲ್ಲ. ಸಾಧ್ಯವಾದರೆ ಅದರ ಬಗ್ಗೆ ಅವರ ಬಳಿಯೇ ಚರ್ಚಿಸೋಣ. ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಅದು ಕ್ಷಮಿಸಿಬಿಡಬಹುದಾಗಿದ್ದರೆ ಮರೆತುಬಿಡೋಣ. ಒಂದೊಮ್ಮೆ ಗಂಭೀರ ಸ್ವರೂಪದ್ದಾದರೆ ಈ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡೋಣ. ಇನ್ನೊಮ್ಮೆ ಇಂತಹುದು ಮರುಕಳಿಸಿದಂತೆ ನೋಡಿಕೊಳ್ಳುವಂತೆ ಸಲಹೆ ಮಾಡೋಣ.
ಜೀವನದಲ್ಲಿ ಒಂದಲ್ಲ, ಹಲವು ಬಾರಿಯೂ ತಪ್ಪುಗಳಾಗಬಹುದು. ಅದನ್ನೇ ದೊಡ್ಡದಾಗಿ ಬಿಂಬಿಸಿ ವ್ಯಕ್ತಿತ್ವವನ್ನೇ ಹಂಗಿಸಿ, ನಾಶಮಾಡಿ ದ್ವೇಷ ಸಾಧಿಸುವುದರಿಂದಾಗಲೀ, ಅವರನ್ನು ದೂರಮಾಡುವುದರಿಂದಾಗಲೀ ಏನನ್ನೂ ಗಳಿಸಿದಂತಾಗುವುದಿಲ್ಲ. ಹಾಗೆ ಮಾಡುವುದರಿಂದ ಮುಂದೊಂದು ದಿನ ನಾವೇ ಪಶ್ಚಾತ್ತಾಪಪಡುವಂತಾಗುತ್ತದೆ. ಮಾತ್ರವಲ್ಲ ನಮ್ಮ ವ್ಯಕ್ತಿತ್ವಕ್ಕೆ ಸಣ್ಣತನದ ಕಳಂಕ ಅಂಟಿಕೊಳ್ಳುತ್ತದೆ. ಈಗ ನಿಜವಾಗಿ ನೀವು ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ನೆನಪಿಡಿ.
ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯನಲ್ಲದೇ ಮರಕ್ಕೆ ತಪ್ಪು ಮಾಡಲಾಗುತ್ತದೆಯೇ? ತಪ್ಪೆಸಗುವುದು ಮನುಷ್ಯನ ಹಕ್ಕು. ಜೀವನದ ಈ ಮೂಲ ಮಂತ್ರವನ್ನು ಅರಿಯದಿರುವುದೇ ನಿಜವಾದ ತಪ್ಪು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.