ಮಹಿಳಾ ಮಸೂದೆ ಮಂಡನೆ ಮತ್ತೆ ಅನಿರ್ದಿಷ್ಟ ಮುಂದಕ್ಕೆ
ನವದೆಹಲಿ, ಜುಲೈ 14– ಮಹಿಳಾ ಮೀಸಲಾತಿ ಮಸೂದೆಯ ಬಗೆಗೆ ಲೋಕಸಭೆಯಲ್ಲಿ ಇಂದು ಸಹ ವ್ಯಕ್ತವಾದ ಪರ ಮತ್ತು ತೀವ್ರ ವಿರೋಧದಿಂದಾಗಿ ಮಸೂದೆಯ ಪುನರ್
ವಿಮರ್ಶೆಯನ್ನು ಮತ್ತೆ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಯಿತು.
ಈ ಮಸೂದೆಯ ಬಗೆಗೆ ಎಲ್ಲ ಪಕ್ಷಗಳ ನಾಯಕರು ಮತ್ತೆ ಚರ್ಚಿಸಿ ಒಮ್ಮತಕ್ಕೆ ಬರಬೇಕೆಂದು ಮನವಿ ಮಾಡಿದ ಸಭಾಧ್ಯಕ್ಷ ಜಿ.ಎಂ.ಸಿ. ಬಾಲಯೋಗಿ ಪುನರ್ ವಿಮರ್ಶಿತ ಮಸೂದೆಯನ್ನು ಆದಷ್ಟು ಕೂಡಲೇ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿದರು.
ಈ ಮಸೂದೆಯ ಮಂಡನೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದ್ದನ್ನು ಪ್ರತಿಭಟಿಸಿ ಆಳುವ ಪಕ್ಷಗಳ ಸಾಲಿನ ಮಹಿಳೆಯರು ನಿರಂತರವಾಗಿ ನಡೆಸಿದ ತೀವ್ರ ಪ್ರತಿಭಟನೆಯಿಂದ ಲೋಕಸಭೆಯ ಕಲಾಪವನ್ನು ಮೂರು ಬಾರಿ ಮುಂದೂಡಿದ ಪ್ರಕರಣ ನಡೆಯಿತು.
ಮಣಿಪುರ: ಉಗ್ರರ ದಾಳಿ–8 ಸಿಆರ್‌ಪಿಎಫ್ ಯೋಧರ ಬಲಿ
ಇಂಫಾಲ್, ಜುಲೈ 14 (ಪಿಟಿಐ)– ಎರಡು ತಿಂಗಳಲ್ಲಿ ಎರಡನೇ ಸಲ ಉಗ್ರಗಾಮಿಗಳು ಅರಣ್ಯದ ಒಳಗಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ ಮೇಲೆ ಹಾರಿಸಿದ ಗುಂಡಿನ ದಾಳಿಗೆ ಎಂಟು ಮಂದಿ ಯೋಧರು ಬಲಿಯಾಗಿ, ಐವರು ಗಾಯಗೊಂಡಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ ಬೆಳಿಗ್ಗೆ 8.10ರಲ್ಲಿ ಇಂಫಾಲ್– ಸಿಲ್ಚಾರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ದಟ್ಟ ಅರಣ್ಯದ ಬಳಿ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರದಿಂದ ದಾಳಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.