ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಭಾನುವಾರ, 24–9–1995

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 19:30 IST
Last Updated 23 ಸೆಪ್ಟೆಂಬರ್ 2020, 19:30 IST
   

ಸರ್ಕಾರಿ ಹುದ್ದೆ: ಮಹಿಳೆಯರಿಗೆ ಶೇಕಡ 25 ಮೀಸಲಾತಿ
ಬೆಂಗಳೂರು, ಸೆ. 23–
ಸರ್ಕಾರದ ಎಲ್ಲ ಹಂತದ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇಕಡ 25ರಷ್ಟು ಮೀಸಲಾತಿ, ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಮಹಿಳೆಯರಿಗೆ ಶೇಕಡ 30ರಷ್ಟು ಸೌಲಭ್ಯ, ಬಡವರಿಗೆ ಅಗ್ಗದ ದರದಲ್ಲಿ ಸೀರೆ–ಪಂಚೆ, ಅನುಪಯುಕ್ತ ಹುದ್ದೆಗಳ ರದ್ದು, ಇವು ರಾಜ್ಯ ಸರ್ಕಾರ ಇಂದು ತೆಗೆದುಕೊಂಡ ಪ್ರಮುಖ ನಿರ್ಧಾರಗಳು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಈ ತೀರ್ಮಾನಗಳನ್ನು ನಂತರ ಕಾನೂನು ಮತ್ತು ವಾರ್ತಾ ಸಚಿವ ಎಂ.ಸಿ. ನಾಣಯ್ಯ ಅವರು ಪತ್ರಕರ್ತರಿಗೆ ವಿವರಿಸಿದರು.

ಹುದ್ದೆಗಳನ್ನು ತುಂಬುವಾಗ ಅರ್ಹತೆ ಆಧಾರದ ಮೇಲೆಯೇ ಮಹಿಳೆಯರನ್ನು ನೇಮಿಸಿಕೊಳ್ಳಲಾಗುವುದು ಎಂದ ಅವರು, ಈಗಾಗಲೇ ಶಿಕ್ಷಕರ ಹುದ್ದೆಗಳಲ್ಲಿ ಶೇಕಡ 50ರಷ್ಟು ಮಹಿಳೆಯರಿಗೆ ಮೀಸಲು ನೀಡಿರುವುದನ್ನು ನೆನಪಿಸಿದರು.

ADVERTISEMENT

ರಾಜ್ಯಪಾಲರಿಗೆ ವಾಸುದೇವನ್‌ ಪ್ರಕರಣ ವರದಿ
ಬೆಂಗಳೂರು, ಸೆ. 23–
ನ್ಯಾಯಾಂಗ ನಿಂದನೆಗಾಗಿ ಜೈಲು ಶಿಕ್ಷೆಗೆ ಒಳಗಾಗಿರುವ ಐಎಎಸ್‌ ಅಧಿಕಾರಿ ಜೆ. ವಾಸುದೇವನ್‌ ಪ್ರಕರಣದ ಸಂಬಂಧದಲ್ಲಿ ರಾಜ್ಯಪಾಲ ಖುರ್ಷಿದ್‌ ಆಲಂ ಖಾನ್‌ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಕಾನೂನು ಸಚಿವ ಎಂ.ಸಿ. ನಾಣಯ್ಯ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಜೈಲು ಶಿಕ್ಷೆಗೆ ಒಳಗಾಗಿರುವುದರಿಂದ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗುವುದೇ ಎಂದಾಗ, ಇದು ಆಡಳಿತಾತ್ಮಕವಾದ ನ್ಯಾಯಾಂಗ ನಿಂದನೆ ಪ್ರಕರಣವಾಗಿರುವುದರಿಂದ ಅದರ ಅಗತ್ಯವಿಲ್ಲ ಎಂದು ಉತ್ತರಿಸಿದರು. ಕ್ರಿಮಿನಲ್‌ ಪ್ರಕರಣದ ಸಂಬಂಧದಲ್ಲಿ ಸರ್ಕಾರಿ ನೌಕರರು 48 ಗಂಟೆ ಜೈಲಿನಲ್ಲಿದ್ದರೆ ಅಂತಹವರನ್ನು ಸೇವೆಯಿಂದ ಅಮಾನತು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.