ADVERTISEMENT

25 ವರ್ಷಗಳ ಹಿಂದೆ: ಬುಧವಾರ 5–3–1997

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 21:45 IST
Last Updated 4 ಮಾರ್ಚ್ 2022, 21:45 IST
   

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಸಾಫ್ಟ್‌ವೇರ್‌ ದೊರೆ ಬಿಲ್‌ಗೇಟ್ಸ್‌ ಕರೆ

ನವದೆಹಲಿ, ಮಾ. 4– ವಿಶೇಷವಾಗಿ ಟೆಲಿಸಂಪರ್ಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ಭಾರತದ ಜೀವನಮಟ್ಟ ಸುಧಾರಿಸುವ ಅವಕಾಶಗಳ ಕುರಿತಾಗಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಅಮೆರಿಕಾದ 8.7 ಶತಕೋಟಿ ಡಾಲರ್‌ಗಳ ಮೈಕ್ರೊಸಾಫ್ಟ್‌ ಸಂಸ್ಥೆ ಅಧ್ಯಕ್ಷ ಬಿಲ್‌ಗೇಟ್ಸ್‌ ಇಂದು ತಿಳಿಸಿದರು.

ಪ್ರಧಾನಿಯವರೊಂದಿಗೆ ಉಪಾಹಾರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವದ ದಂತಕಥೆಯಾಗಿರುವ ಈ ಶತಕೋಟ್ಯಧಿಪತಿ, ಭಾರತದಲ್ಲಿನ ವಿಶ್ವವಿದ್ಯಾಲಯಗಳಿಗಾಗಿ ವಿವಿಧ ಯೋಜನೆಗಳನ್ನು ಕುರಿತಂತೆ ತಮ್ಮ ಕಂಪನಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ADVERTISEMENT

ಭ್ರಷ್ಟಾಚಾರ ಆರೋಪ: ಅವಿಶ್ವಾಸ ನಿರ್ಣಯ ತರಲು ಪ್ರಧಾನಿ ಸವಾಲು

ನವದೆಹಲಿ, ಮಾ. 4– ತಮ್ಮದು ಹಗರಣ ಮುಕ್ತ ಸರ್ಕಾರ ಎಂದು ಘೋಷಿಸಿದ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ವಿರುದ್ಧವಾಗಲೀ ಅಥವಾ ಸಂಪುಟದ ಇತರ ಸದಸ್ಯರ ವಿರುದ್ಧವಾಗಲೀ ಯಾವುದೇ ಭ್ರಷ್ಟಾಚಾರ ಪ್ರಕರಣದ ಆರೋಪ ಇದ್ದರೆ ಅವಿಶ್ವಾಸ ನಿರ್ಣಯ ತರುವಂತೆ ಪ್ರತಿಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಇಂದು ಸವಾಲು ಹಾಕಿದರು.

’ಭ್ರಷ್ಟಾಚಾರ ಆರೋಪ ಸಾಬೀತಾದರೆ ಸದನದಲ್ಲಿಯೇ ರಾಜೀನಾಮೆ ನೀಡುವೆ. ಇಲ್ಲವೇ ಸಚಿವರುಗಳ ಮೇಲಿನ ಆಪಾದನೆ ರುಜುವಾತಾದರೆ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡುವೆ‘ ಎಂದು ಅವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.