
ಮಕ್ಕಳಿಲ್ಲದ ದಂಪತಿ ಏನು ಮಾಡಬಹುದು? ಹೀಗೊಂದು ಪ್ರಶ್ನೆಗೆ ತಕ್ಷಣವೇ ಹೊಳೆಯಬಹುದಾದ ಉತ್ತರಗಳು ಎರಡು. ಹಿಂದಿನ ಕಾಲದಲ್ಲಿ ತಮ್ಮ ಬಂಧು–ಬಳಗದಲ್ಲೇ ಒಬ್ಬರ ಮಗುವನ್ನು ದತ್ತು ಪಡೆದು ಸಾಕಿ ಮಕ್ಕಳಿಲ್ಲದ ಕೊರತೆ ನೀಗಿಸಿಕೊಳ್ಳುತ್ತಿದ್ದರು. ಆಧುನಿಕ ಕಾಲಘಟ್ಟದಲ್ಲಾದರೆ ಕೃತಕ ಗರ್ಭಧಾರಣೆ (ಐವಿಎಫ್) ಮೂಲಕ ಮಗು ಪಡೆಯುತ್ತಾರೆ.
ಆದರೆ, ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಹುಲಿಕಲ್ ಗ್ರಾಮದ ಬಿಕ್ಕಲು ಚಿಕ್ಕಯ್ಯ ಮತ್ತು ತಿಮ್ಮಕ್ಕ ದಂಪತಿ ಆರಿಸಿಕೊಂಡ ಮಾರ್ಗ ಭಿನ್ನವಾದುದು. ‘ಮಕ್ಕಳ ಯೋಗ ಇಲ್ಲದವರು’ ಎಂಬ ಕುಹುಕದ ಮಾತುಗಳಿಗೆ ಕಿವಿಗೊಡದ ದಂಪತಿ, ನಿತ್ಯ ಸಾವಿರಾರು ಜನ ಓಡಾಡುವ ತಮ್ಮೂರಿನ ರಸ್ತೆಯ ಎರಡೂ ಬದಿಯಲ್ಲಿ ಗಿಡಗಳನ್ನು ನೆಟ್ಟರು. ಅವುಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿದರು.
ಮಕ್ಕಳಂತೆ ಆ ಗಿಡಗಳನ್ನು ಆರೈಕೆ ಮಾಡಿದರು. ಕಿಲೋಮೀಟರ್ ದೂರವಿದ್ದರೂ ಲೆಕ್ಕಿಸದೆ ಬಿಂದಿಗೆಯಲ್ಲಿ ನೀರು ತಂದು ಪೋಷಿಸಿದರು. ದನಕರುಗಳಿಗೆ ಆಹಾರವಾಗದಂತೆ ಸುತ್ತಲೂ ಬೇಲಿ ಹಾಕಿ ಜೋಪಾನ ಮಾಡಿದರು. ಆರಂಭದಲ್ಲಿ ಕೆಲವೇ ಗಿಡಗಳನ್ನು ಬೆಳೆಸುವುದರಿಂದ ಶುರುವಾದ ದಂಪತಿಯ ಈ ಕಾಯಕ, ಮುಂದೆ 400 ಗಿಡಗಳನ್ನು ಬೆಳೆಸುವವವರೆಗೆ ಸಾಗಿತು.
ಪತಿ ಸಾವಿನ ಬಳಿಕ ಗಿಡಗಳನ್ನು ಜೋಪಾನ ಮಾಡಿಕೊಂಡು ಬಂದ ತಿಮ್ಮಕ್ಕ, ಮುಂದೆ ‘ಸಾಲುಮರದ ತಿಮ್ಮಕ್ಕ’ ಎಂದೇ ಹೆಸರಾದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹುಲಿಕಲ್‌ನಿಂದ ಕುದೂರುವರೆಗೆ ದಂಪತಿ ನೆಟ್ಟಿದ್ದ ಗಿಡಗಳೀಗ ಹೆಮ್ಮರಗಳಾಗಿವೆ. ನಿತ್ಯ ಓಡಾಡುವವರಿಗೆ ನೆರಳಿನ ಆಸರೆಯಾಗಿವೆ. ಬಾನೆತ್ತರ ಬೆಳೆದಿರುವ ಮರಗಳಂತೆ ತಿಮ್ಮಕ್ಕ ಅವರ ಹೆಸರೂ ವಿಶ್ವಮಟ್ಟಕ್ಕೆ ಪಸರಿಸಿದೆ.
ತಿಮ್ಮಕ್ಕ ಅವರ ಊರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಕ್ಕೇನಹಳ್ಳಿ. 1911 ಜೂನ್ 30ರಂದು ಜನಿಸಿದ್ದ ಅವರನ್ನು ಹುಲಿಕಲ್‌ನ ಚಿಕ್ಕಯ್ಯ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಬದುಕಿಗಾಗಿ ಪತಿ ದನ ಕಾಯುತ್ತಿದ್ದರು. ತಿಮ್ಮಕ್ಕ ಕೂಲಿ ಮಾಡುತ್ತಿದ್ದರು. ಪತಿ ಚಿಕ್ಕಯ್ಯ 1991ರಲ್ಲಿ ನಿಧನರಾದರೂ ತಿಮ್ಮಕ್ಕ ಗಿಡಗಳನ್ನು ಕಾಪಾಡಿಕೊಂಡು ಬಂದಿದ್ದರು. ರೆಂಬೆ–ಕೊಂಬೆ ಕಡಿಯುವವರ ವಿರುದ್ಧ ಹೋರಾಡಿ ಉಳಿಸಿಕೊಂಡು ಬಂದಿದ್ದರು.
ಊರುಗೋಲಾಗಿದ್ದ ಉಮೇಶ್: ತಿಮ್ಮಕ್ಕ ಅವರ ಪರಿಸರ ಕಾಯಕದಿಂದ ಪ್ರೇರಿತರಾಗಿ ಅವರಂತೆಯೇ ಗಿಡ ನೆಟ್ಟು ಪೋಷಿಸುತ್ತಿದ್ದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳ್ಳೂರು ಉಮೇಶ್ ಅವರನ್ನು ತಿಮ್ಮಕ್ಕ ದತ್ತುಪುತ್ರನಾಗಿ ಸ್ವೀಕರಿಸಿದರು. ಅಜ್ಜಿಗೆ ಊರುಗೋಲಾಗಿದ್ದ ಉಮೇಶ್, ಅವರ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು. ಬಳ್ಳೂರು ಮತ್ತು ಬೆಂಗಳೂರಿನಲ್ಲೂ ವಾಸವಾಗಿದ್ದ ತಿಮ್ಮಕ್ಕ, ಮಹಾಲಯ ಅಮವಾಸ್ಯೆ ದಿನ ತಮ್ಮ ಪತಿ ಚಿಕ್ಕಯ್ಯ ಅವರ ಸಮಾಧಿಗೆ ಪೂಜೆ ಸಲ್ಲಿಸಲು ಹಾಗೂ ಹುಲಿಕಲ್ ಗ್ರಾಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ತಪ್ಪದೇ ಉಮೇಶ್ ಅವರೊಂದಿಗೆ ಬಂದು ಹೋಗುತ್ತಿದ್ದರು.
ತಿಮ್ಮಕ್ಕನ ಸಾಧನೆ ವಿಶ್ವದೆತ್ತರಕ್ಕೆ ಬೆಳೆದಿದ್ದರೂ, ಅವರ ಊರಾದ ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಅವರ ಬಹುದಿನಗಳ ಕನಸು ಮಾತ್ರ ಈಡೇರಲಿಲ್ಲ.
ಸಾಲು ಸಾಲು ಪ್ರಶಸ್ತಿಗಳು
ತಿಮ್ಮಕ್ಕ ಸಾಧನೆಗೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.
ಪದ್ಮಶ್ರೀ ಪುರಸ್ಕಾರ, ರಾಷ್ಟ್ರೀಯ ನಾಗರಿಕ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್ ಫ್ರೀ ಫಿಲಿಪ್ಸ್ ಧೈರ್ಯ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀತರೋಗಿನ್ ಪ್ರಶಸ್ತಿ, ಕರ್ನಾಟಕ ಕೇಂದ್ರೀಯ ವಿವಿಯ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿವಿಯ ನಾಡೋಜ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್‌ನ ವಿಶಾಲಾಕ್ಷಿ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ–ಪುರಸ್ಕಾರಗಳು ಅವರ ಮುಡಿಗೇರಿವೆ. 2016ರಲ್ಲಿ ಬಿಬಿಸಿ ಸುದ್ದಿವಾಹಿನಿ ನಡೆಸಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಸಮೀಕ್ಷೆಯಲ್ಲಿ ತಿಮ್ಮಕ್ಕ ಸ್ಥಾನ ಪಡೆದಿದ್ದರು.