ADVERTISEMENT

ಚುನಾವಣಾ ಕಾರ್ಯ: ಕರ್ತವ್ಯಪಾಲನೆ ಆಗಲಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 19:30 IST
Last Updated 18 ಡಿಸೆಂಬರ್ 2020, 19:30 IST

ಚುನಾವಣೆ ಸಂದರ್ಭದಲ್ಲಿ ಸಿಬ್ಬಂದಿಗೆ ತರಬೇತಿ ನೀಡಲು ವಿದ್ಯಾಸಂಸ್ಥೆಗಳನ್ನು ಬಳಸಿಕೊಳ್ಳುವಾಗ ಅವುಗಳ ಪಾವಿತ್ರ್ಯ ಕಾಪಾಡಬೇಕು ಎಂಬ ಸಂಪತ್‌ ಬೆಟ್ಟಗೆರೆ ಅವರ ಕಳಕಳಿಯ ಮಾತಿನಲ್ಲಿ (ವಾ.ವಾ., ಡಿ. 18) ಅರ್ಥವಿದೆ. ತರಬೇತಿ ಮತ್ತು ಮತದಾನಕ್ಕಾಗಿ ಹೆಚ್ಚಾಗಿ ಶಾಲೆ-ಕಾಲೇಜುಗಳನ್ನೇ ಬಳಸಿಕೊಳ್ಳಲಾಗುತ್ತದೆ. ಇದು ಅನಿವಾರ್ಯ ಕೂಡ. ಚುನಾವಣೆ ಕರ್ತವ್ಯಕ್ಕಾಗಿ ಮತದಾನ ಕೇಂದ್ರಕ್ಕೆ ಹೋದವರು ಕೂಡಲೇ ಮಾಡಬೇಕಾದ ಕೆಲಸ, ಅಲ್ಲಿನ ಭಾವಚಿತ್ರಗಳನ್ನು ಹುಡುಕಿ ಅವುಗಳ ಮೇಲೆ ಪೇಪರ್ ಅಂಟಿಸುವುದು.

ಆ ಮತದಾನ ಕೇಂದ್ರದಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಯನ್ನು ಹೋಲುವ ಯಾವುದೇ ತರಹದ ಚಿತ್ರಗಳು ಇರಬಾರದೆಂಬ ನಿಯಮವಿದೆ. ಆದರೆ ಮಹಾತ್ಮ ಗಾಂಧಿ, ಅಂಬೇಡ್ಕರ್‌, ಸಂಗೊಳ್ಳಿ ರಾಯಣ್ಣ, ಸುಭಾಷ್‌ಚಂದ್ರ ಬೋಸ್, ಬಸವಣ್ಣ, ಕಿತ್ತೂರುರಾಣಿ ಚೆನ್ನಮ್ಮ ಮುಂತಾದವರ ಭಾವಚಿತ್ರಗಳ ಮೇಲೆ ಪೇಪರ್ ಅಂಟಿಸಲು ಮೇಲಧಿಕಾರಿಗಳು ಸೂಚಿಸುತ್ತಾರೆ. ಇದು ಎಷ್ಟು ಸರಿ? ಚಿಹ್ನೆ ಸೂಚಿಸುವ ಗುರುತು ಇರಬಾರದೆಂಬ ಕಾರಣಕ್ಕೆ ಒಮ್ಮೆ ಫ್ಯಾನನ್ನೇ ಬಿಚ್ಚಿಸಿ ಇಡಲಾಗಿತ್ತು!

ತಾವು ಭಾವಚಿತ್ರಗಳ ಮೇಲೆ ಅಂಟಿಸಿದ ಪೇಪರ್‌ಗಳನ್ನು ಚುನಾವಣೆ ಮುಗಿದ ನಂತರ ಸಿಬ್ಬಂದಿ ಕಿತ್ತು ಹಾಕುತ್ತಾರೆ. ಆದರೆ ಎಷ್ಟು ಕಿತ್ತಿರುತ್ತಾರೋ ಬಿಟ್ಟಿರುತ್ತಾರೋ ಚುನಾವಣೆ ನಂತರ ಕೊನೆಯಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಅದು ಅವಲಂಬಿಸಿರುತ್ತದೆ. ಹೀಗಾಗಬಾರದು, ಕೆಲಸ ಮುಗಿದ ಬಳಿಕ ಶಾಲೆಯನ್ನು ಯಥಾಸ್ಥಿತಿಗೆ ತರಬೇಕಾದುದು ಅವರ ಕರ್ತವ್ಯ.

ADVERTISEMENT

-ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.