ADVERTISEMENT

ಪ್ರಜಾವಾಣಿ@75: ಕಾವೇರಿ ಗಲಾಟೆಯಲ್ಲಿ ಕಾಪಾಡಿದ ಪತ್ರಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 10:19 IST
Last Updated 19 ನವೆಂಬರ್ 2022, 10:19 IST
   

ಮೂವತ್ತೈದು ವರ್ಷಗಳಿಂದ ದಿನವೂ ‘ಪ್ರಜಾವಾಣಿ’ ಕೊಂಡು ಓದುತ್ತಿರುವೆ. ಕನ್ನಡ ಬರೆಯಲು, ಮಾತನಾಡಲು ಇದು ಬಹಳ ಸಹಕಾರಿ. 1991ರ ಜುಲೈನಲ್ಲಿ ಕಾವೇರಿ ಗಲಭೆ ನಡೆದ ಸಂದರ್ಭದಲ್ಲಿ ಕೆಲ ದುರುಳರು ನಮ್ಮ ಮೇಲೆ ಹಲ್ಲೆ ಮಾಡಲು ಮನೆಗೆ ಬಂದರು. ಆಗ ನಮ್ಮ ತಾಯಿ, ‘ನಾವು ಕನ್ನಡಿಗರು. ದಿನವೂ ಪತ್ರಿಕೆಯನ್ನು ಕೊಂಡು ಓದುತ್ತೇವೆ’ ಎಂದು ಹೇಳಿ‘ಪ್ರಜಾವಾಣಿ’ ತೋರಿಸಿದರು. ಆಗ ಗಲಭೆ ಮಾಡಲು ಬಂದವರು ವಾಪಸ್ ಹೋದರು.

ನನ್ನ ನೆಚ್ಚಿನ ಈ ಪತ್ರಿಕೆಯಲ್ಲಿ ಸಂಪಾದಕೀಯ ಬಹಳ ಚೆನ್ನಾಗಿ ಬರುತ್ತಿದೆ.

–ಆರ್. ಶಂಕರ್ ಮಣಿ, ಬೆಂಗಳೂರು

ADVERTISEMENT

*
ಸಾಮಾಜಿಕ ಕಳಕಳಿ...
ನನ್ನಂಥ ಓದುಗರಿಗೆ ತಿಂಡಿಯ ಮೇಲೆ ಆಸಕ್ತಿ ಇದೆಯೋ ಗೊತ್ತಿಲ್ಲ. ಆದರೆ ಬೆಳ್ಳಂಬೆಳಗ್ಗೆ ಬಿಸಿ ಚಹದ ಜೊತೆ ಬಿಸಿ, ಅರ್ಥಪೂರ್ಣ ಸುದ್ದಿಗಳನ್ನು ಬಿತ್ತರಿಸುವ ಪ್ರಜಾವಾಣಿ ಬೇಕೇಬೇಕು. ಬೌದ್ಧಿಕತೆಯನ್ನು ಉಣಬಡಿಸುವ ಪತ್ರಿಕೆ ಇದು.

ವಿಶ್ವಾಸಾರ್ಹ ಹಾಗೂ ವಸ್ತುನಿಷ್ಠ ಸುದ್ದಿಯನ್ನು ನೀಡುವ ಜೊತಗೆ ಸಾಮಾಜಿಕ ಕಳಕಳಿ ಇರುವ ಪತ್ರಿಕೆ ಪ್ರಜಾವಾಣಿ ಎಂದರೆ ಅತಿಶಯೋಕ್ತಿ ಆಗಲಾರದು. ಮುಂದೆಯೂ ಹೀಗೆ ಉತ್ತಮ ಸುದ್ದಿ ಹಾಗೂ ಲೇಖನಗಳು ಪ್ರಕಟವಾಗಲಿ ಎಂದು ಆಶಿಸುತ್ತೇನೆ.

–ಡಾ.ಎನ್. ಸತೀಶ್ ಗೌಡ, ಸಹ-ಪ್ರಾಧ್ಯಾಪಕ, ವಿ.ವಿ. ಕಾನೂನು ಕಾಲೇಜು

*
ಅವಿನಾಭಾವ ಸಂಬಂಧ
ಪ್ರಜಾವಾಣಿ ಪತ್ರಿಕೆ ಕೈಗೆ ಬರುವವರೆಗೆ ಕಾತರ. ಬಂದ ನಂತರ ಓದುವ ಆತುರ. ತಂದೆಯವರಿದ್ದಾಗ ಅವರು ಇಂಚಿಂಚು ಬಿಡದೆ ಓದಿ ಪತ್ರಿಕೆ ನಮ್ಮ ಕೈಗೆ ಬರುವವರೆಗೂ ಚಡಪಡಿಕೆ..‌.ಅಪ್ಪಿತಪ್ಪಿ ತಾಯಿಯವರ ಕೈ ಸೇರಿದರೆ ಅವರು ಕಣ್ಣಿಗೆ ಚಶ್ಮವನ್ನೇರಿಸಿ ಓದಿ ಮುಗಿಸಿದ ನಂತರವೇ ನಮ್ಮ ಸರದಿ...ಇಷ್ಟು ಹೇಳಲು ಕಾರಣ, ನನಗೆ ಬುದ್ಧಿ ಬಂದಾಗಿಂದಲೂ ಈ ಪತ್ರಿಕೆ ಕುಟುಂಬದ ಜೊತೆ ಅವಿನಾಭಾವ ಸಂಬಂಧ ಹೊಂದಿದೆ.

ಬಳಸುವ ಭಾಷಾಶೈಲಿ, ವೈವಿಧ್ಯಮಯ ಪುರವಣಿಗಳು, ಭಾನುವಾರದ ವಿಶೇಷಗಳು ಇದರ ವೈಶಿಷ್ಟ್ಯ. ಪ್ರಜಾವಾಣಿ ಅಂದಿಗೂ ಇಂದಿಗೂ ನಮ್ಮೆಲ್ಲರ ಅಚ್ಚುಮೆಚ್ಚಿನ ಪತ್ರಿಕೆ.

–ಸುಲೋಚನ ಜೆ ರಾವ್, ಶಿಕ್ಷಕಿ, ಮಲ್ಲೇಶ್ವರಂ, ಬೆಂಗಳೂರು

*
‘ಓದುವ ಹವ್ಯಾಸ ಬೆಳೆಸಿದ್ದೇ ಪ್ರಜಾವಾಣಿ’

ನನಗೂ ಪ್ರಜಾವಾಣಿಗೂ ಸುಮಾರು 58 ವರ್ಷಗಳ ನಂಟು. 5ನೇ ತರಗತಿಯಿಂದ ಪ್ರಜಾವಾಣಿ ಓದುತ್ತಿದ್ದೇನೆ. ಓದುವ ಹವ್ಯಾಸ ಬೆಳೆಸಿದ್ದು ಪ್ರಜಾವಾಣಿ. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕಾಮಿಕ್ಸ್‌, ಫ್ಯಾಂಟಮ್‌, ಮೊದ್ದುಮಣಿ, ಕಥೆಗಳು ಮುಂತಾದ ವಿಷಯಗಳನ್ನು ಹಲವಾರು ವರ್ಷಗಳಿಂದ ನಿರಂತರವಾಗಿ ಸಂಗ್ರಹಿಸಿಟ್ಟುಕೊಂಡಿದ್ದೆ. ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಸಮಗ್ರವಾಗಿ ಎಲ್ಲ ಕ್ಷೇತ್ರದ ವಿಷಯಗಳನ್ನು ಪ್ರಜಾವಾಣಿ ಒಳಗೊಂಡಿರುವುದರಿಂದ ಜ್ಞಾನ ವೃದ್ಧಿಸುವ ಪತ್ರಿಕೆ ಇದಾಗಿದೆ. ವಾಚಕರವಾಣಿ, ಕುಂದುಕೊರತೆಗೂ ನಾನು ಬರೆಯುತ್ತಿದ್ದೆ. 1982ರಲ್ಲಿ ದೀಪಾವಳಿ ಸಂಚಿಕೆಯಲ್ಲಿ ನನ್ನ ಹಾಸ್ಯ ಲೇಖನ ಪ್ರಕಟವಾಗಿತ್ತು. ಪ್ರಜಾವಾಣಿ ನೀಡಿದ ಚೆಕ್‌ನಿಂದ ನಾನು ಬ್ಯಾಂಕ್‌ ಖಾತೆ ತೆರೆಯುವಂತಾಯಿತು. ಅಲ್ಲಿಯವರೆಗೂ ನನ್ನ ಖಾತೆಯೇ ಇರಲಿಲ್ಲ.

ಈಗ ಪ್ರತಿ ಭಾನುವಾರ ಪ್ರಕಟವಾಗುವ ‘ಮಜಕೂರ’ ಅನ್ನು ಮೊಮ್ಮಕ್ಕಳಿಗೂ ಓದಿಸುತ್ತಿದ್ದೇನೆ. ಇದರಿಂದ, ಅವರು ಕನ್ನಡ ಕಲಿಯುವಂತಾಗಿದೆ. ‘ಮಜಕೂರ’ ಪ್ರಕಟಿಸಲು ಆರಂಭಿಸಿದ ದಿನದಿಂದಲೂ ಸಂಗ್ರಹಿಸುತ್ತಿದ್ದೇನೆ.

–ಬಿ. ನಾಗರತ್ನ, ನಿವೃತ್ತ ಶೀಘ್ರ ಲಿಪಿಗಾರರು, ಅಡ್ವೊಕೇಟ್‌ ಜನರಲ್‌ ಕಚೇರಿ, ಹೈಕೋರ್ಟ್‌

*

ನೆಚ್ಚಿನ ಪತ್ರಿಕೆ...
ಪ್ರಜಾವಾಣಿಯು 75ನೇ ವರ್ಷ ಆಚರಿಸುತ್ತಿರುವುದು ಸಂತಸದ ವಿಷಯ. ತಂತ್ರಜ್ಞಾನ ಎಷ್ಟೇ ಬೆಳೆದರೂ, ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿ

ಕೊಂಡರೂ, ಬೆಳಗ್ಗೆ ಎದ್ದು ದಿನಪತ್ರಿಕೆಯನ್ನು ಓದದಿದ್ದರೆ ಆ ದಿನವೇ ಅಧೂರ. ಎಲ್ಲರ ಅಭಿರುಚಿಯನ್ನು ಒಳಗೊಂಡಿರುವ, ಎಲ್ಲರನ್ನು ಆಕರ್ಷಿಸುವ ನನ್ನ ನೆಚ್ಚಿನ ವಾಣಿ - ಪ್ರಜಾವಾಣಿಗೆ ತುಂಬು ಹೃದಯದಿಂದ ಅಭಿನಂದನೆಗಳು.

–ಅರಕೆರೆ ಹುಚ್ಚಪ್ಪ, ಲಗ್ಗೆರೆ, ಬೆಂಗಳೂರು

*
‘ಕೆಲಸ ಸಿಗಲು ಪ್ರಜಾವಾಣಿ ಕಾರಣ’
ಕಳೆದ 60 ವರ್ಷಗಳಿಂದ ನಾನು ‘ಪ್ರಜಾವಾಣಿ’ಯ ಓದುಗ ಅಭಿಮಾನಿ. ಒಂದೇ ಒಂದು ದಿನ ಈ ಪತ್ರಿಕೆಯನ್ನು ಓದದಿದ್ದರೆ ಆ ದಿನ ಏನನ್ನೋ ಕಳೆದುಕೊಂಡಂತಹ ದುಗುಡ, ಸಂಕಟದ ಅನುಭವವಾಗುತ್ತದೆ.ನನಗೆ ಮೈಕೊ (ಇಂದಿನ ಬಾಷ್) ಕಂಪನಿಯಲ್ಲಿ ಕೆಲಸ ಸಿಗಲು ಒಂದು ರೀತಿಯಲ್ಲಿ ಪ್ರಜಾವಾಣಿಯೇ ಕಾರಣ.

ಉದ್ಯೋಗಾವಕಾಶದ ಬಗ್ಗೆ ಮೈಕೊ ಕಂಪನಿಯು 1969ರಲ್ಲಿ ಜಾಹೀರಾತು ಪ್ರಕಟಿಸಿತ್ತು. ಆ ಜಾಹೀರಾತು ಆಕಸ್ಮಿಕವಾಗಿ ನನ್ನ ಕಣ್ಣಿಗೆ ಬಿತ್ತು. ತಡಮಾಡದೆ ಕೆಲಸಕ್ಕೆ ಅರ್ಜಿ ಹಾಕಿದೆ. ಬೆಂಗಳೂರಿನ ಆಡುಗೋಡಿ ಬಳಿ ಇದ್ದ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಅದರಿಂದಾಗಿ ನಾನು ಉತ್ತಮ ಜೀವನ ಕಟ್ಟಿಕೊಳ್ಳಲು, ಮಗನಿಗೆ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಯಿತು. ಮಗ ಸಿ. ವೆಂಕಟೇಶ್ ಸದ್ಯ ದೆಹಲಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿಸುತ್ತಿದ್ದಾನೆ.

–ಎಂ. ಚನ್ನಪ್ಪ, ಸುಬ್ರಹ್ಮಣ್ಯನಗರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.