ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಮಾರ್ಚ್ 2, ಸೋಮವಾರ

ವಾಚಕರ ವಾಣಿ
Published 2 ಮಾರ್ಚ್ 2026, 0:17 IST
Last Updated 2 ಮಾರ್ಚ್ 2026, 0:17 IST
   

ಯೋಧನ ಸಾವಿನಲ್ಲೂ ಜಾತಿಯ ಕ್ರೌರ್ಯ

ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರಿನಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದಕ್ಕೆ ಸರ್ಕಾರದಿಂದಲೇ ಕ್ಷೌರದಂಗಡಿ ತೆರೆಯಲಾಗಿದೆ. ಮತ್ತೊಂದೆಡೆ ಬಾಗಲಕೋಟೆ ಜಿಲ್ಲೆ ಇಳಕಲ್ ಸಮೀಪದ ಚಿನ್ನಾಪುರ ಎಸ್.ಟಿ. ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಾಜಿ ಸೈನಿಕರೊಬ್ಬರು ನಿಧನರಾಗಿದ್ದಾರೆ.

ಯೋಧನ ಅಂತ್ಯಕ್ರಿಯೆಗೆ ಬರುವ ಬಂಧುಗಳು, ಹಿತೈಷಿಗಳು ಹೋಟೆಲ್‌, ಅಂಗಡಿಗೆ ಬಂದರೆ ಮೈಲಿಗೆಯಾಗುತ್ತದೆಂದು ಅವುಗಳನ್ನು ಬಂದ್‌ ಮಾಡಿ ಅಸ್ಪೃಶ್ಯತೆ ಆಚರಿಸಲಾಗಿದೆ. ಮತೀಯವಾದಿಗಳು ಮೃತ ಸೈನಿಕನನ್ನು ಅವಮಾನಿಸಿ ರುವುದು ದೇಶದ್ರೋಹವಲ್ಲವೆ? ಮುಂದುವರಿದ ರಾಷ್ಟ್ರಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯಶಸ್ಸು ಗಳಿಸಿ ಮಂಗಳ ಗ್ರಹದತ್ತ ದಾಪುಗಾಲು ಇಡುತ್ತಿವೆ. ನಾವು ಅಸ್ಪೃಶ್ಯತೆ ಆಚರಿಸುತ್ತ ಕೂಪಮಂಡೂಕಗಳಾಗಿದ್ದೇವೆ!

ADVERTISEMENT

ಸುರೇಶ ಅರಳಿಮರ, ಬಾದಾಮಿ

_________

ಹಾಲಿಗೆ ಪ್ರೋತ್ಸಾಹಧನ ಜಾರಿಯಾಗಲಿ

ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ ₹5ರಿಂದ ₹7ಕ್ಕೆ ಹೆಚ್ಚಿಸುವಂತೆ ಕೆಎಂಎಫ್, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಇದು ರೈತರ ಪಾಲಿಗೆ ಸಂತಸದ ಸಂಗತಿ. ಸರ್ಕಾರವು ಪ್ರಸ್ತಾವಕ್ಕೆ ಒಪ್ಪಿಗೆ ನೀಡಿ ಬಜೆಟ್‌ನಲ್ಲಿ ಘೋಷಿಸಬೇಕಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿವೆ. ಬೆಳಗಾವಿಯಲ್ಲಿ ಮೆಗಾ ಡೇರಿ ಸ್ಥಾಪಿಸಬೇಕೆಂಬುದು ಈ ಭಾಗದ ರೈತರ ಬಹು ದಿನಗಳ ಬೇಡಿಕೆ. ಬಜೆಟ್‌ನಲ್ಲಿ ಇದರ ಘೋಷಣೆಯಾಗಲಿ.

ಬಸವರಾಜ ನರಗಟ್ಟಿ, ಬೆಳಗಾವಿ

_________

ಸಹಕಾರ ಸಂಘ ಅಭ್ಯುದಯಕ್ಕೆ ಸಹಕಾರಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಗೃಹಲಕ್ಷ್ಮಿ’ ಯೋಜನೆ ಫಲಾನು ಭವಿಗಳ ಸಹಕಾರ ಸಂಘದ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ. ಹಿಂದೆ ಮನಮೋಹನ್ ಸಿಂಗ್ ಸರ್ಕಾರವು ಭಾರತೀಯ ಮಹಿಳಾ ಬ್ಯಾಂಕ್ ಸ್ಥಾಪಿಸಿತ್ತು. ಅದು ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯಲ್ಲಿ ಸ್ಥಾಪಿಸಿದ್ದ ಗ್ರಾಮೀಣ ಬ್ಯಾಂಕ್‌ಗಳಂತೆ ದೇಶದಲ್ಲಿ ಹೊಸ ಆರ್ಥಿಕ ಸಂಚಲನ ಸೃಷ್ಟಿಸುವ ಸಾಧ್ಯತೆಯಿತ್ತು. ಆದರೆ, ಆ ನಂತರ ಅಧಿಕಾರಕ್ಕೆ ಬಂದ ಸರ್ಕಾರವು ಅದನ್ನು ಎಸ್‌ಬಿಐನೊಂದಿಗೆ ವಿಲೀನಗೊಳಿಸಿತು. ಪ್ರಸ್ತಾವಿತ ಸಹಕಾರ ಸಂಘದಲ್ಲಿ ಶೇ 8ರ ಬಡ್ಡಿದರದಲ್ಲಿ ಹಿರಿಯ ನಾಗರಿಕರಿಂದ ಠೇವಣಿ ಸಂಗ್ರಹಿಸಬಹುದು. ಅವರು ಹೆಚ್ಚಿನ ಬಡ್ಡಿ ಆಸೆಯಿಂದ ಅಸುರಕ್ಷಿತ ವಲಯಗಳಲ್ಲಿ ಠೇವಣಿ ಮಾಡುವುದು ತಪ್ಪುತ್ತದೆ. 

ರವಿ ಯಲಿಗಾರ, ಮುನವಳ್ಳಿ

_________

ಅಡಕತ್ತರಿಯಲ್ಲಿ ಅಂಡಮಾನ್‌ ವನರಾಶಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಭಿವೃದ್ಧಿ ಹೆಸರಿನಡಿ ನಡೆಯುತ್ತಿರುವ ಅಪಸವ್ಯಗಳು ಒಂದೆರಡಲ್ಲ. ತಾಳೆಗಿಡಗಳನ್ನು ಬೆಳೆಸಲು ಅಲ್ಲಿನ ವೃಕ್ಷಗಳನ್ನು ಕಡಿಯುತ್ತಿರುವುದು ಅಕ್ಷಮ್ಯ. ಇನ್ನೊಂದು ಮಾತು; ಅಲ್ಲಿ ಕಡಿಯಲಾಗುತ್ತಿರುವ ಲಕ್ಷಾಂತರ ವೃಕ್ಷಗಳ ಬದಲಿಗೆ ಪರಿಹಾರಾತ್ಮಕವಾಗಿ ಹರಿಯಾಣ, ಗುಜರಾತಿನಲ್ಲಿ ಗಿಡ ನೆಡಲಾಗುವುದೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಕುರಿತಂತೆ ರಾಷ್ಟ್ರೀಯ ಹಸಿರು ಮಂಡಳಿ (ಎನ್‌ಜಿಟಿ) ಮೌನವು ಪ್ರಶ್ನಾರ್ಹ.

ಭೂಮಿತಾಯಿಗೆ ಎಲ್ಲೋ ಗಾಯ ಉಂಟು ಮಾಡಿ ಇನ್ನೆಲ್ಲೋ ಮುಲಾಮು ಹಚ್ಚುವುದು ಸರಿಯೇ? ಇದರಲ್ಲಿ ಏನಾದರೂ ನ್ಯಾಯವಿದೆಯೇ? ಇದು ಸರ್ಕಾರದ ಪಲಾಯನ ನೀತಿಯೇ ವಿನಾ ಕಾನೂನಾತ್ಮಕವಾಗಿ ಸರಿಯಾದ ಉಪಕ್ರಮವಲ್ಲ. ಎಲ್ಲಿ ಮರಗಳನ್ನು ಕಡಿಯಲಾಗುವುದೋ ಅದೇ ಪರಿಸರದಲ್ಲಿ ಗಿಡಗಳನ್ನು ನೆಡುವುದು, ಅರಣ್ಯ ಸೃಷ್ಟಿಸುವುದು ಸರಿಯಾದ ಕ್ರಮ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಖಂಡಿಸಬೇಕಿದೆ.

ಅ.ನ. ಯಲ್ಲಪ್ಪ ರೆಡ್ಡಿ, ಬೆಂಗಳೂರು

_________

ಖಾದಿ ಮಂಡಳಿ: ವೇತನ ವ್ಯತ್ಯಾಸ ಬೇಡ

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯಮ ಮಂಡಳಿಯು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಇಲ್ಲಿ ಕಾರ್ಯ ನಿರ್ವಹಿಸುವವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು ಒಳಪಡುತ್ತವೆ. ಪ್ರಸ್ತುತ ಮಂಡಳಿಯ ನೌಕರರು ಮತ್ತು ನಿವೃತ್ತರಿಗೆ ಆರನೇ ವೇತನ ಆಯೋಗದ ಅನುಸಾರ ಸಂಬಳ, ತುಟ್ಟಿಭತ್ಯೆ, ಪಿಂಚಣಿ ಸೌಲಭ್ಯ ದೊರೆಯುತ್ತಿದೆ. ಆದರೆ, ಏಳನೇ ವೇತನ ಆಯೋಗದ ಸೌಲಭ್ಯ ನೀಡದೆ ಆರ್ಥಿಕ ಸಲಹೆಗಾರರು ಮತ್ತು ಮುಖ್ಯ ಲೆಕ್ಕಪತ್ರಾಧಿಕಾರಿಗಳು ತಡೆಹಿಡಿದಿದ್ದಾರೆ. ಅವರು ಮಾತ್ರ ಎಲ್ಲಾ ರೀತಿಯ ಸೌಲಭ್ಯ ಪಡೆದು ನೌಕರರಿಗೆ ಅಡ್ಡಗಾಲು ಹಾಕು ವುದು ಸರಿಯಲ್ಲ. ನಿವೃತ್ತ ನೌಕರರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ತ್ವರಿತವಾಗಿ ಬಾಕಿ ವೇತನ ಬಿಡುಗಡೆಗೆ ಕ್ರಮವಹಿಸಬೇಕಿದೆ.

– ನರಸಿಂಹಮೂರ್ತಿ, ಆನೇಕಲ್ 

_________

ಬಡ್ತಿ ಬೋಧಕರಿಗೆ ವೇತನ ತಾರತಮ್ಯ

ಪ್ರೌಢಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದವರು ಸ್ನಾತಕೋತ್ತರ ಪದವಿ ಪಡೆ ದಿದ್ದರೆ ಪಿಯು ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಒಂದು ವಿಶೇಷ ವೇತನ ಮುಂಬಡ್ತಿ ನೀಡಲಾಗುತ್ತದೆ. ಆದರೆ, ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಿಯು ಇಲಾಖೆಗೆ ಸೇರುವ ಕಾರಣಕ್ಕೆ ಹೈಸ್ಕೂಲ್‌ ಮಟ್ಟದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸುವುದಿಲ್ಲ.

ಅವರಿಗೆ ಮುಂಬಡ್ತಿಯು ತಾತ್ಕಾಲಿಕವಾಗಿ ಲಾಭದಾಯಕ ಎನಿಸಿದರೂ ಮುಂದೆ ಭಾರಿ ಆರ್ಥಿಕ ನಷ್ಟ ತರಲಿದೆ. ಆದರೆ, ಸರ್ಕಾರಕ್ಕೆ ಮಾತ್ರ ಲಾಭ. ಜೊತೆಗೆ, ಶಿಕ್ಷಕರಿಗೆ ಸಿಗಬೇಕಾದ 10, 15, 20, 25, 30 ವರ್ಷಗಳ ಹಲವಾರು ಸ್ವಯಂಚಾಲಿತ ಮುಂಬಡ್ತಿಗಳಿಗೆ ತಡೆ ಬೀಳಲಿದೆ. ಮುಖ್ಯ ಶಿಕ್ಷಕರಿಗೆ ಸಿಗಬಹುದಾದ ಗಳಿಕೆ ರಜೆ ಸೌಲಭ್ಯವೂ ಸಿಗುವುದಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ವೇತನ ತಾರತಮ್ಯವನ್ನು ಸರಿಪಡಿಸಬೇಕಿದೆ.

– ಶಿವಶರಣಗೌಡ ಬಿರಾದಾರ, ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.