ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು 22 ಜನವರಿ 2026

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಜೇಬು ತುಂಬಬೇಡಿ, ಜೋಳಿಗೆ ಹಿಡಿಯಿರಿ

​ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಹೇಳಿರುವ ‘ಜೇಬು ತುಂಬಿಸಿಕೊಳ್ಳುವ ಬದಲು ಜೋಳಿಗೆ ತುಂಬಿಸಿಕೊಳ್ಳಿ’ ಎನ್ನುವ ಮಾತು ರಾಜ್ಯದ ಹಲವು ಮಠಾಧೀಶರಿಗೆ ಆತ್ಮಾವಲೋಕನದ ಕಿವಿಮಾತಿನಂತಿದೆ. ಅಂದು ಶ್ರೀಗಳು ತಮ್ಮ ಜೋಳಿಗೆ ಹಿಡಿದು ಲಕ್ಷಾಂತರ ಬಡಮಕ್ಕಳ ಹೊಟ್ಟೆಯ ಹಸಿವು ಹಾಗೂ ಜ್ಞಾನದ ಹಸಿವು ನೀಗಿಸಿದರು. ಪ್ರಸ್ತುತ ಕೆಲವು ಮಠಾಧೀಶರು ‘ಜೇಬು’ ಮತ್ತು ‘ಖಜಾನೆ’ ತುಂಬಿಸಿಕೊಳ್ಳಲು ರಾಜಕೀಯ ಅಧಿಕಾರ ಹಾಗೂ ಆಸ್ತಿ ಮಾಡುವ ಹಪಹಪಿಗೆ ಬಿದ್ದಿದ್ದಾರೆ. ​ಮಠಗಳು ಅಧ್ಯಾತ್ಮದ ಕೇಂದ್ರಗಳಾಗುವ ಬದಲು ರಾಜಕೀಯ ಪಕ್ಷಗಳ ಅಖಾಡಗಳಾಗುತ್ತಿವೆ. ಭಕ್ತರು ನೀಡುವ ಹಣ ಸ್ವಾಮೀಜಿಗಳ ವೈಭವೋಪೇತ ಜೀವನಕ್ಕೆ ಬಳಕೆಯಾಗುತ್ತಿರುವ ಅನುಮಾನವಿದೆ. ​ಸಮಾಜಕ್ಕೆ ಮಾದರಿಯಾಗಬೇಕಾದವರು ಮೌಲ್ಯಗಳ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಿದೆ. ಆಗಷ್ಟೆ ಧರ್ಮ, ಮಠಗಳ ಮೇಲಿನ ಗೌರವ ಉಳಿಯಲಿದೆ. 

ADVERTISEMENT

–ಸುಜಾತ ನಾಯಕ, ಶಕ್ತಿನಗರ

**

ಕ್ಯಾಮೆರಾ ಇರಲಿ, ‘ದೀಪ’ಸಂಸ್ಕೃತಿ ಬೇಡ

ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ, ಅಲ್ಲಿನ ಅಧಿಕಾರಿಗಳ ಕೊಠಡಿಯನ್ನೂ ಒಳಗೊಂಡಂತೆ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೂ ಒಳಗೊಂಡು ಐಪಿಎಸ್ ಅಧಿಕಾರಿಗಳ ಕೊಠಡಿ ಗಳಿಗೆ ಕ್ಯಾಮೆರಾ ಅಳವಡಿಸಿಲ್ಲ. ಇದು ಅನುಮಾನಗಳಿಗೆ ಎಡೆಮಾಡಿ ಕೊಡುತ್ತಿದೆ. ಐಪಿಎಸ್ ಅಧಿಕಾರಿಗಳ ಕೊಠಡಿಗೆ ಕೆಂಪು ಮತ್ತು ಹಸಿರುದೀಪ ಅಳವಡಿಸಲಾಗಿದೆ. ಒಳಗೆ ಮುಖ್ಯಸಭೆ ನಡೆಯುತ್ತಿದ್ದರೆ ಕೆಂಪುದೀಪ ಉರಿಯುತ್ತಿರುತ್ತದೆ. ಬಾಗಿಲ ಬಳಿ ಪೊಲೀಸ್‌ ಕಾವಲಿದ್ದರೂ, ಈ ದೀಪ ಹೊತ್ತಿಸಿ ನಡೆಸುವ ಗೋಪ್ಯ ಸಭೆಯಾದರೂ ಏನು? ಐಪಿಎಸ್ ಅಧಿಕಾರಿಗಳ ಕೊಠಡಿಗೂ ಕ್ಯಾಮೆರಾ ಅಳವಡಿಸುವ ಬಗ್ಗೆ ಹಾಗೂ ‘ದೀಪ ಸಂಸ್ಕೃತಿ’ ಕೊನೆಗೊಳಿಸಲು ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮವಹಿಸಬೇಕು. ಆಗಷ್ಟೇ ಮುಜುಗರದ ಪ್ರಕರಣಗಳಿಂದ ಸರ್ಕಾರ ಪಾರಾಗಬಹುದು.

–ಸುಜಿತ್, ಮಂಡ್ಯ

**

ಅಧಿಕಾರಿ ರಕ್ಷಣೆ: ಕಾನೂನು ಬಿಗಿಯಾಗಲಿ

ರಾಜಕಾರಣಿಗಳು ಸಾರ್ವಜನಿಕವಾಗಿ ಸರ್ಕಾರಿ ಅಧಿಕಾರಿಗಳನ್ನು ನಿಂದಿಸುವುದು ಮತ್ತು ದರ್ಪದ ವರ್ತನೆ ತೋರುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ದಕ್ಷತೆಯಿಂದ ಕೆಲಸ ಮಾಡುವ ಅಧಿಕಾರಿಗಳನ್ನು ಗುರಿಯಾಗಿಸಿ ಬೆದರಿಕೆ ಹಾಕುವುದು ಅಥವಾ ಏಕವಚನದಲ್ಲಿ ನಿಂದಿಸುವುದು ಆಡಳಿತ ವ್ಯವಸ್ಥೆಯ ನೈತಿಕತೆ ಯನ್ನು ಕುಗ್ಗಿಸುತ್ತದೆ. ಅಧಿಕಾರಿಗಳು ರಾಜಕೀಯ ಪಕ್ಷಗಳ ಆಜ್ಞಾಪಾಲಕರಲ್ಲ. ಸಂವಿಧಾನಬದ್ಧವಾಗಿ ಜನಸೇವೆ ಮಾಡಲು ನೇಮಕಗೊಂಡವರು. ಜನಪ್ರತಿನಿಧಿ ಗಳ ವರ್ತನೆಯು ಸಮಾಜಕ್ಕೆ ತಪ್ಪುಸಂದೇಶ ರವಾನಿಸುತ್ತದೆ. ಅಧಿಕಾರಿಗಳಿಗೆ ಭಯಮುಕ್ತವಾಗಿ ಕೆಲಸ ಮಾಡುವ ವಾತಾವರಣ ಕಲ್ಪಿಸುವುದು ಸರ್ಕಾರದ ಕರ್ತವ್ಯ. ದಕ್ಷ ಅಧಿಕಾರಿಗಳ ಬೆನ್ನಿಗೆ ಸರ್ಕಾರ ನಿಲ್ಲದಿದ್ದರೆ ಆಡಳಿತ ಯಂತ್ರ ಕುಸಿದು ಬೀಳುವುದರಲ್ಲಿ ಸಂಶಯವಿಲ್ಲ.

–ಲಾವಣ್ಯ ಬೀರೇಶ್,ಮುಗುಳಿ

**

ಮಾಂಜಾ: ಬದುಕಿನ ಸೂತ್ರ ಹರಿಯದಿರಲಿ

ಬೀದರ್‌ ಜಿಲ್ಲೆಯಲ್ಲಿ ಗಾಳಿಪಟದ ಮಾಂಜಾ (ದಾರ) ವ್ಯಕ್ತಿಯೊಬ್ಬರ ಕತ್ತು ಸೀಳಿ ಅವರ ಸಾವಿಗೆ ಕಾರಣವಾಗಿದೆ. ಉತ್ತರಪ್ರದೇಶ, ತೆಲಂಗಾಣದಲ್ಲಿಯೂ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಗಾಯಗೊಂಡಿರುವುದು ವರದಿಯಾಗಿದೆ. ಈ ಅವಘಡಗಳು ಗಾಳಿ‍ಪಟ ಹಾರಿಸು ವವರಿಗೆ ಎಚ್ಚರಿಕೆಯ ಗಂಟೆ. ಮಾಂಜಾ ಲೇಪಿತ ತುಂಡರಿಸಿದ ದಾರಗಳು ಮರದ ಕೊಂಬೆ, ಪೊದೆಗಳಲ್ಲಿ ಸಿಕ್ಕಿಕೊಂಡು ಪ್ರಾಣಿ, ಪಕ್ಷಿಗಳ ಜೀವಕ್ಕೂ ಸಂಚಕಾರ ತರುತ್ತಿವೆ. ಸರ್ಕಾರ ಮಾಂಜಾವನ್ನು ನಿಷೇಧಿಸಿದೆ. ಆದರೆ, ಕದ್ದುಮುಚ್ಚಿ ಇದರ ಉತ್ಪಾದನೆ, ಮಾರಾಟ ನಡೆಯುತ್ತಿದೆ. ಮಕ್ಕಳು, ಯುವಕರಿಗೆ ಈ ದಾರದ ಬಳಕೆಯಿಂದ ಆಗುವ ಸಾವು–ನೋವಿನ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ.  

–ಮಾಲಾ ಮ. ಅಕ್ಕಿಶೆಟ್ಟಿ, ಬೆಳಗಾವಿ 

**

ಎಳೆಯರ ಮನಗಳಿಗೆ ಪೂಚಂತೇ ಬೀಳಲಿ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಈ ಬಾರಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ‘ತೇಜಸ್ವಿ ವಿಸ್ಮಯ ಲೋಕ’ ಮೈದಾಳಿದೆ. ಮೊಬೈಲ್ ಲೋಕದಲ್ಲಿ ಕಳೆದುಹೋಗುತ್ತಿರುವ ಮಕ್ಕಳು ಮತ್ತು ರಿಯಾಲಿಟಿ ಶೋಗಳಲ್ಲಿ ಮೈಮರೆಯುತ್ತಿರುವ ಪೋಷಕರು ಕೊಂಚ ಬಿಡುವು ಮಾಡಿಕೊಂಡು ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ತೇಜಸ್ವಿ ಅವರು ಇಡೀ ಬದುಕನ್ನು ಪ್ರಕೃತಿಯ ಜೊತೆಗೆ ಕಳೆದರು. ಪ್ರಾಣಿ–ಪಕ್ಷಿಗಳು, ಹೊಲಗದ್ದೆಗಳಲ್ಲಿ ದಕ್ಕಿದ ಅನುಭವವನ್ನು ಸೃಜನಶೀಲ ಸಾಹಿತ್ಯ ರಚಿಸಲು ಹೇಗೆ ಬಳಸಿಕೊಂಡರು ಎನ್ನುವುದನ್ನು ಪ್ರದರ್ಶನ ಕಟ್ಟಿಕೊಟ್ಟಿದೆ. ಶಿಕ್ಷಕರು ವಿದ್ಯಾರ್ಥಿಗಳೊಟ್ಟಿಗೆ ಭೇಟಿ ನೀಡಿ ಆನಂದಿಸಬಹುದಾಗಿದೆ.

–ಚಿಕ್ಕವೀರಯ್ಯ ಟಿ.ಎನ್., ರಾಮನಗರ 

**

ಪೂರ್ವಸಿದ್ಧತಾ ಪರೀಕ್ಷೆಯ ಗೊಂದಲ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಡೆಸುತ್ತಿರುವ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯು ಗೊಂದಲದ ಗೂಡಾ ಗಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯನ್ನು ಬೆಳಿಗ್ಗೆ 11 ಗಂಟೆಯಿಂದ ಆರಂಭಿಸಲು ಸೂಚಿಸಿದೆ. ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯೊಳಗೆ ಶಾಲೆಗೆ ಬರಬೇಕು. ಅವರಿಗೆ 9 ಗಂಟೆಯಿಂದ 10.30 ಗಂಟೆವರೆಗೆ ತರಗತಿ ತೆಗೆದು ಕೊಳ್ಳಬೇಕು. ನಂತರ 11 ಗಂಟೆಯಿಂದ ಮಧ್ಯಾಹ್ನ 2.15 ಗಂಟೆವರೆಗೆ ಪರೀಕ್ಷೆ ನಡೆಸಲು ಆದೇಶಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ ಮಕ್ಕಳು ದೂರದ ಊರಿನಿಂದ ಬೆಳಗ್ಗೆ 7 ಅಥವಾ 8 ಗಂಟೆಗೆ ಶಾಲೆಗೆ ಬರುತ್ತಾರೆ. ಹೀಗೆ ಬರುವ ಮಕ್ಕಳಿಗೆ ಹಸಿವೆ ಆಗಬಹುದು. ಹಾಗಾಗಿ, ಮಧ್ಯಾಹ್ನ ಊಟದ ನಂತರ 2 ಗಂಟೆಯಿಂದ ಪರೀಕ್ಷೆ ಆರಂಭಿಸುವುದು ಸೂಕ್ತ. ಮಂಡಳಿಯು ವೇಳಾಪಟ್ಟಿಯನ್ನು ಪರಿಷ್ಕರಿಸಬೇಕಿದೆ.

 –ರಾಧ ಅಶೋಕ ಚನ್ನಳ್ಳಿ, ಹಿರೇಕೆರೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.