ಓಲೈಕೆಗಾಗಿ ಅಸಂಬದ್ಧ ಹೇಳಿಕೆ ಸಲ್ಲ
‘ಪ್ರಧಾನಿ ಮೋದಿ ಅಭಿನವ ಬಸವಣ್ಣ’ (ಪ್ರ.ವಾ., ಸೆಪ್ಟೆಂಬರ್ 13) ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಮಹಿಳಾ ಸಮಾನತೆಗಾಗಿ ಬಸವಣ್ಣ ಹೋರಾಡಿದ್ದರು. ಈಗ ಪ್ರಧಾನಿ ದಿಟ್ಟಹೆಜ್ಜೆ ಇರಿಸಿದ್ದಾರೆ ಎಂದೂ ಹೇಳಿದ್ದಾರೆ. ಬಸವಣ್ಣ ಹಾಗೂ ಮೋದಿಯವರ ವ್ಯಕ್ತಿತ್ವದಲ್ಲಿ ಅಜಗಜ ಅಂತರವಿದೆ. ಮೋದಿ ಅವರು ಆರ್‌ಎಸ್‌ಎಸ್ ಸಿದ್ಧಾಂತವನ್ನೇ ಹಾಸಿ ಹೊದ್ದು ಮಲಗುತ್ತಾರೆ. ಆ ಸಿದ್ಧಾಂತದಲ್ಲಿ ಮಹಿಳಾ ಅಸ್ತಿತ್ವ, ಸ್ವಾಭಿಮಾನಕ್ಕೆ ಎಳ್ಳಷ್ಟೂ ಸ್ಥಾನವಿಲ್ಲ. ತಮ್ಮ ನಾಯಕರ ಓಲೈಕೆಗಾಗಿ ಇಂತಹ ಕೀಳು ಅಭಿರುಚಿಯ ಹೇಳಿಕೆ ನೀಡುವುದು ಸರಿಯಲ್ಲ.
–ಪ್ರೊ. ಕಾಶೀನಾಥ ಅಂಬಲಗೆ, ಬೆಂಗಳೂರು
*******
ಶಿಕ್ಷಕರ ರಜೆಗೆ ಕುತ್ತು ತರುವುದು ಬೇಡ
ಶಿಕ್ಷಕರಿಗೆ ಕುಟುಂಬದ ಜೊತೆಗೆ ಮತ್ತು ಪ್ರವಾಸಕ್ಕೆ ಸಿಗುವ ಸಮಯವೇ ವಾರ್ಷಿಕ ಮತ್ತು ಅರ್ಧ ವಾರ್ಷಿಕ ರಜೆ. ಇತ್ತೀಚಿನ ವರ್ಷಗಳಲ್ಲಿ ಆ ರಜೆಯ ಸಮಯದಲ್ಲಿ ಬಹುತೇಕ ಶಿಕ್ಷಕರು ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುತ್ತಾರೆ. ಮುಂಬರುವ ಅರ್ಧ ವಾರ್ಷಿಕ ರಜೆಯಲ್ಲಿ 1.75 ಲಕ್ಷ ಶಿಕ್ಷಕರು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಬಗ್ಗೆ ವರದಿಯಾಗಿದೆ. ಸಮೀಕ್ಷೆಯು ವಸ್ತುನಿಷ್ಠ ಮತ್ತು ಪ್ರಾಮಾಣಿಕವಾಗಿ ನಡೆಯಬೇಕಾದರೆ ಶಿಕ್ಷಕರಿಂದ ಮಾತ್ರ ಸಾಧ್ಯ. ಹಾಗಾಗಿ, ಸರ್ಕಾರವು ಸಮೀಕ್ಷೆಗೆ ದುಡಿಯುವ ಶಿಕ್ಷಕರ ಬಗ್ಗೆ ಕಾಳಜಿ ತೋರಿ ಅವರಿಗೆ ಒಂದು ವಾರ ರಜೆ ನೀಡಬೇಕಿದೆ.
–ಆಮೀರ್ ಅಶ್ಅರೀ, ಬನ್ನೂರು
*******
ಏನಿದು ‘ಇತರ ಚೇತರಿಕೆಗಳು’
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯಿತಿ ಮೂಲಕ ನೀಡುವ ರಸೀದಿಯೊಂದು ಕಣ್ಣಿಗೆ ಬಿತ್ತು. ರಸೀದಿಯ ಬಲಬದಿಗೆ ಸೇವೆ ಹೆಸರಿನ ಕಾಲಂ ಕೆಳಗಡೆ ‘ಇತರ ಚೇತರಿಕೆಗಳು’ ಎಂದಿದೆ. ಕೆಳಭಾಗದ ‘ಸ್ವೀಕೃತಿ ವಿವರಗಳು’ ಕಾಲಂನಲ್ಲಿ ‘ಇತರ ಚೇತರಿಕೆಗಳು’ ಅಥವಾ ‘ಅದರ್ ರಿಕವರೀಸ್’ ಎಂದು ಇಂಗ್ಲಿಷಿನಲ್ಲಿ ನಮೂದಾಗಿದೆ. ಇಲಾಖೆಯು ಇಲ್ಲಿ ಶಬ್ದಗಳಿಗೆ ಅರ್ಥ ಹುಡುಕಲು ಗೂಗಲ್ ಮೊರೆಹೋಗಿರುವುದು ಸ್ಪಷ್ಟ. ಸಾಮಾನ್ಯ ಅರ್ಥದಲ್ಲಿ ‘ರಿಕವರಿ’ ಎಂದರೆ ‘ಅನಾರೋಗ್ಯದಿಂದ ಚೇತರಿಸಿಕೊಳ್ಳು’ ಎಂದಾಗುತ್ತದೆ. ಇಲಾಖೆಯು ಹಳೆಯ ಬಾಕಿ ಏನಾದರೂ ಇದೆಯೇ ಎಂಬರ್ಥಕ್ಕೆ ‘ವಸೂಲಾತಿ’ ಪದದ ಬದಲು ‘ಚೇತರಿಕೆಗಳು’ ಪದ ಬಳಸಿರುವುದು ಆಶ್ಚರ್ಯ ಮೂಡಿಸಿದೆ.
–ಅಶೋಕ ಚಿಕ್ಕಪರಪ್ಪಾ, ಬೆಳಗಾವಿ
*******
ಸಮರ್ಥನೀಯ ದಾಖಲೆ ಯಾವುದು?
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಘೋಷಿಸಿದೆ. ಈ ಮೀಸಲಾತಿ ಆಧಾರದಲ್ಲಿಯೇ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆಯೂ ಆದೇಶಿಸಿದೆ. ಆದರೆ, ಈಗಾಗಲೇ ಎಡಗೈ ಮತ್ತು ಬಲಗೈ ಎರಡೂ ಸಮುದಾಯದ ಬಹುತೇಕ ಜನರು ತಹಶೀಲ್ದಾರ್‌ರಿಂದ ಪಡೆದಿರುವ ಜಾತಿ ಪ್ರಮಾಣಪತ್ರಗಳಲ್ಲಿ ತಮ್ಮ ಜಾತಿ/ ಉಪ ಜಾತಿಗಳಲ್ಲಿ ಪರಿಶಿಷ್ಟ ಜಾತಿ, ಆದಿ ಕರ್ನಾಟಕ ಎಂದೇ ನಮೂದಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಣ, ಉದ್ಯೋಗ ಮತ್ತು ಸರ್ಕಾರದ ಸವಲತ್ತು ಪಡೆಯಲು ಅರ್ಹ ಫಲಾನುಭವಿಗಳು ‘ಪ್ರವರ್ಗ 1’ ಅಥವಾ ‘ಪ್ರವರ್ಗ 2’ಕ್ಕೆ ಸೇರಿದ್ದಾರೆ ಎಂದು ಸಮರ್ಥಿಸುವ ದಾಖಲೆ ಯಾವುದು ಅಥವಾ ಇದನ್ನು ನಿರ್ಧರಿಸುವ ಮಾನದಂಡ ಯಾವುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಇಲ್ಲವಾದರೆ ಒಳಮೀಸಲಾತಿಯ ಮೂಲ ಉದ್ದೇಶವೇ ಅರ್ಥಹೀನವಾಗುತ್ತದೆ.
–ಆರ್. ಕುಮಾರ್, ಬೆಂಗಳೂರು
*******
ಪಡಿತರ ಚೀಟಿ ಪರಿಷ್ಕರಣೆ ಅಗತ್ಯ
ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ವಿದೇಶಕ್ಕೆ ಸಾಗಣೆಯಾಗಿರುವುದು ಸಂಚಲನ ಮೂಡಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಜನರ ಹೊಟ್ಟೆಗೆ ಸೇರಬೇಕಿದ್ದ ಪಡಿತರವು ಪ್ರಭಾವಿ ವ್ಯಕ್ತಿಗಳ ಬೊಕ್ಕಸ ತುಂಬಿಸಿರುವುದು ದುರಂತವೇ ಸರಿ. ರಾಜ್ಯದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಣೆ, ದಾಸ್ತಾನು, ಮಾರಾಟ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಇದರ ತಡೆಗಟ್ಟುವಿಕೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ದಿನಸಿ ಅಂಗಡಿಗಳಿಗೆ ಪಡಿತರ ಅಕ್ಕಿಯನ್ನು ಮಾರಾಟ ಮಾಡುವವರ ಬಿಪಿಎಲ್ ಕಾರ್ಡ್ ರದ್ದುಪಡಿಸಬೇಕು. ನಕಲಿ ಕಾರ್ಡ್ ಪತ್ತೆಹಚ್ಚಲು ಪಡಿತರ ಚೀಟಿಗಳ ಪರಿಷ್ಕರಣೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕಿದೆ. ಇಂದಿಗೂ ಬಹಳಷ್ಟು ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಅವರಿಗೆ ಕಾರ್ಡ್ ವಿತರಿಸಲು ಕ್ರಮವಹಿಸಬೇಕು.
– ಪ್ರೇರಣಾ ಪೊಳಲಿ, ಮೂಡಬಿದಿರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.