15 ತಿಂಗಳಿನಿಂದ ಸಂಬಳ ಇಲ್ಲ
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 22 ಅಧ್ಯಾಪಕರು ಮತ್ತು 32 ಬೋಧಕೇತರ ಸಿಬ್ಬಂದಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ವಿಶ್ವವಿದ್ಯಾಲಯ ಕೊಡುವ ಸಂಬಳವೇ ನಮಗೆ ಜೀವನಾಧಾರ. ಇಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿದ್ದು, ಬೇರೆ ಆದಾಯದ ಮೂಲಗಳಿಲ್ಲ. ನಮಗೆ ಕಳೆದ 15 ತಿಂಗಳಿನಿಂದಲೂ ಸಂಬಳ ನೀಡಿಲ್ಲ. ಈ ಬಗ್ಗೆ ಕುಲಪತಿ ಅವರನ್ನು ಕೇಳಿದರೆ, ‘ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಅನುದಾನ ಲಭಿಸಿದರೆ ವೇತನ ಪಾವತಿಸುತ್ತೇವೆ’ ಎನ್ನುತ್ತಾರೆ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು, ವಿ.ವಿ.ಗೆ ಹೆಚ್ಚಿನ ಅನುದಾನ ಒದಗಿಸಲು ಕ್ರಮವಹಿಸಬೇಕಿದೆ.
-ಯಲ್ಲಪ್ಪ ಟಿ. ಗಲಗ್ಕರ್, ಹಂಪಿ
**
ಶುದ್ಧಿಗೆ ಮುಂದಾಗದಿರುವುದೇ ಸೋಜಿಗ
ಗದಗ ಜಿಲ್ಲೆ ರೋಣ ತಾಲ್ಲೂಕಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯವೂ ಮುಸ್ಲಿಂ ಯುವಕರೇ ಪೂಜೆ ಸಲ್ಲಿಸುತ್ತಿರುವ ಸುದ್ದಿ ಓದಿ ಸಂತಸವಾಯಿತು (ಪ್ರ.ವಾ., ಸೆಪ್ಟೆಂಬರ್ 1). ಆದರೆ, ಇದರ ಬಗ್ಗೆ ತಕರಾರು ತೆಗೆದು ಗಣೇಶನ ಶುದ್ಧೀಕರಣ ಮಾಡಬೇಕು ಎಂದು ಸಂಘ–ಸಂಸ್ಥೆಗಳು, ರಾಜಕೀಯ ನಾಯಕರು ಏಕಿನ್ನೂ ಹೇಳಿಕೆ ನೀಡಿಲ್ಲ ಎಂಬುದೇ ಅಚ್ಚರಿ.
-ಚಂದ್ರಶೇಖರ ಎಚ್.ಎಸ್., ಬೆಂಗಳೂರು
**
ಉಚಿತ ಮನಃಸ್ಥಿತಿಯಿಂದ ಹೊರಬನ್ನಿ
ಕೃಷಿ ವಿ.ವಿ.ಯು ಸಲಹೆಗೆ ಶುಲ್ಕ ವಿಧಿಸುತ್ತಿರುವುದಕ್ಕೆ ಕೆಲವರ ಆಕ್ಷೇಪವಿದೆ. ಆದರೆ, ಇದೊಂದು ವಿಶೇಷ ಸಲಹಾ ಸೇವೆ. ಅದನ್ನು ಪಡೆಯುವವರು ಆರ್ಥಿಕವಾಗಿ ದುರ್ಬಲರೇನೂ ಅಲ್ಲ. ಉದಾಹರಣೆಗೆ, ಐ.ಟಿ. ಉದ್ಯೋಗಿಗಳು ಸಾಕಷ್ಟು ಆದಾಯ ಹೊಂದಿರುತ್ತಾರೆ. ಅವರಿಗೆ ಶುಲ್ಕ ಅನ್ವಯಿಸಲಿದೆ. ಈಗಾಗಲೇ, ಬೇಸಾಯ ಮಾಡುತ್ತಿರುವ ರೈತರಿಗೆ ಉಚಿತ ಸಲಹೆ ಮುಂದುವರಿಯುತ್ತದೆ. ಹೊಸದಾಗಿ ಕೃಷಿ ಕ್ಷೇತ್ರಕ್ಕೆ ಬರುವ ಆಸಕ್ತರಿಗೆ, ಬಂಡವಾಳ ಹೂಡುವವರಿಗೆ ಸೇವೆ ಒದಗಿಸಲು ಶುಲ್ಕ ವಿಧಿಸಲಾಗುವುದು ಎಂದು ವಿಶ್ವವಿದ್ಯಾಲಯವೂ ಸ್ಪಷ್ಟಪಡಿಸಿದೆ. ‘ಉಚಿತ’ ಎಂಬ ಮನಃಸ್ಥಿತಿಯಿಂದ ಇತರರು ಹೊರಬರಬೇಕಿದೆ.
-ಎಚ್.ಎಸ್. ಮಂಜುನಾಥ, ಬೆಂಗಳೂರು
**
ಸಿದ್ದರಾಮಯ್ಯಗೆ ಸ್ಪಷ್ಟತೆ ಇಲ್ಲವೆ?
ಪತ್ರಕರ್ತರ ಮುಂದೆ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಚಾಮುಂಡಿಬೆಟ್ಟ ಹಿಂದೂಗಳದ್ದೇ ಇರಬಹುದು’ ಎಂದಿದ್ದಾರೆ. ಅಂದರೆ ಅವರಿಗೆ ಚಾಮುಂಡಿಬೆಟ್ಟ ಯಾರದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದರ್ಥವೇ?
-ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ
**
ನೇಮಕಾತಿಗೆ ವಿಳಂಬ ಬೇಡ
ರಾಜ್ಯ ಸರ್ಕಾರವು ನುಡಿದಂತೆ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಬಗ್ಗೆ ಸದನದಲ್ಲಿ ಘೋಷಿಸಿ, ಆದೇಶ ಹೊರಡಿಸಿದೆ. ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದ ಸಮುದಾಯಗಳು ನಿರಾಳವಾಗಿವೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವ ಹೊಣೆಯನ್ನು ಸರ್ಕಾರ ಹೊರಬೇಕಿದೆ. ಶೀಘ್ರವೇ ನೇಮಕಾತಿ ಆರಂಭಿಸಿ ವಯೋಮಿತಿ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಅವರು ಸದನದಲ್ಲಿ ಹೇಳಿರುವುದು ಲಕ್ಷಾಂತರ ನಿರುದ್ಯೋಗಿಗಳಲ್ಲಿ ಬೆಳ್ಳಿಕಿರಣ ಮೂಡಿಸಿದೆ. ಇದುವರೆವಿಗೂ ನೇಮಕಾತಿ ನಡೆಯದೆ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನೂ ಆದ್ಯತೆ ಮೇಲೆ ಭರ್ತಿ ಮಾಡಬೇಕಿದೆ.
-ಶಿವರಾಜ್ ಬ್ಯಾಡರಹಳ್ಳಿ, ಬೆಂಗಳೂರು
**
ಬೆಂಗಳೂರು ಕೊನೆಯ ನಿಲ್ದಾಣವೇ?
‘ರಾಜ್ಯಗಳ ಕಾಲಿಗೆ ತೆರಿಗೆಯ ಗುಂಡು’ ಲೇಖನದಲ್ಲಿ (ಪ್ರ.ವಾ., ಸೆಪ್ಟೆಂಬರ್ 1) ದೇವನೂರ ಮಹಾದೇವ ಅವರು, ಕೇಂದ್ರ–ರಾಜ್ಯಗಳ ನಡುವಿನ ಒಕ್ಕೂಟ ವ್ಯವಸ್ಥೆಯ ವೈರುಧ್ಯ ಕುರಿತು ಗಮನಸೆಳೆದಿದ್ದಾರೆ. ಆರ್‌ಎಸ್‌ಎಸ್‌ನ ‘ಚಿಂತನಗಂಗಾ’ ಕೃತಿಯಲ್ಲಿನ ಆಯ್ದ ವಾಕ್ಯಗಳನ್ನು ಉಲ್ಲೇಖಿಸಿದ್ದಾರೆ. ಆ ಪುಸ್ತಕದ ವಿಚಾರಗಳು 1950–60ರ ದಶಕದ್ದು. ಆಗ ಭಾಷಾವಾರು ಪ್ರಾಂತ್ಯಗಳ ರಚನೆ, ಸಂವಿಧಾನದ 370ನೇ ವಿಧಿ ಅಡಿ ಜಮ್ಮು–ಕಾಶ್ಮೀರ ರಾಜ್ಯಕ್ಕೆ ಕೊಟ್ಟ ವಿಶೇಷ ಸ್ಥಾನಮಾನದ ಹಿನ್ನೆಲೆ ಇತ್ತು.
ದೇವನೂರ ಅವರು ಬಿಜೆಪಿ, ಸಂಘ ಪರಿವಾರದ ಬಗ್ಗೆ ಹರಿಹಾಯುತ್ತಾರೆ. ಆದರೆ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ಅನ್ಯಾಯಗಳ ಬಗ್ಗೆ ಅವರ ಧ್ವನಿ ಕ್ಷೀಣಿಸಿರುವುದು ಗುಟ್ಟೇನಲ್ಲ. ಅನುದಾನದ ಹಂಚಿಕೆ, ಒಕ್ಕೂಟ ವ್ಯವಸ್ಥೆಯ ವಿಷಯದಲ್ಲಿ ಬೆಂಗಳೂರೇ ಕೊನೆ ನಿಲ್ದಾಣವಲ್ಲ. ಸರ್ಕಾರವು ಸತತ ಮೂರು ವರ್ಷ
ಗಳಿಂದ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದೆ. ಈ ಬಗ್ಗೆಯೂ ಮಾತನಾಡಬೇಕು.
-ಪಟಾಪಟ್ ಶ್ರೀನಿವಾಸ್, ಬೆಂಗಳೂರು
ಬಾನು ಭಾರತದ ಪ್ರಜೆಯಲ್ಲವೆ?
ಮೈಸೂರು ದಸರಾ ಉತ್ಸವವು ಯಾವುದೇ ಪಕ್ಷದ ಅಥವಾ ಸಂಘಟನೆಯ ಕಾರ್ಯಕ್ರಮವಲ್ಲ. ಇದು ನಾಡಹಬ್ಬ. ರಾಜ್ಯದ ಎಲ್ಲಾ ಜಾತಿ, ಧರ್ಮದವರು ಭಾಗವಹಿಸುತ್ತಾರೆ. ಆದರೆ, ಸಾಹಿತಿ ಬಾನು ಮುಷ್ತಾಕ್ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರತಿಯೊಬ್ಬ ಪ್ರಜೆಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಕ್ಕಿದೆ. ಬಾನು ಅವರೂ ಈ ದೇಶದ ಪ್ರಜೆ. ಹಿಂದೂ ರಾಜಕಾರಣಿಗಳಿಗೆ ಮುಸ್ಲಿಮರ ಮತಗಳು ಬೇಕು. ಆದರೆ, ಅವರು ನಾಡಹಬ್ಬಕ್ಕೆ ಉದ್ಘಾಟಕರಾಗಿ ಬರಬಾರದೆಂದು ಹೇಳುವುದು ಯಾವ ನ್ಯಾಯ?
-ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.