ವಾಚಕರ ವಾಣಿ
ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ
ಯುಜಿಸಿ ನಿಯಮದಂತೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪ್ರವೇಶಕ್ಕೆ ಸಂದರ್ಶನ ನಡೆಸುವ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ನಿವೃತ್ತಿಗೆ ಮೂರು ವರ್ಷ ಇರುವ ಪ್ರಾಧ್ಯಾಪಕರಿಗೆ ಮಾರ್ಗದರ್ಶಕರಾಗಲು ಅವಕಾಶ ಕೊಡದಿರುವ ತೀರ್ಮಾನವೂ ಸರಿಯಾಗಿದೆ. ಆದರೆ, ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರಿಂದಾಗಿ ಕೆಲವು ವಿದ್ಯಾರ್ಥಿಗಳಿಗೆ ಸಂಶೋಧನೆಯನ್ನು ಪೂರ್ಣಗೊಳಿಸಲಾಗಿಲ್ಲ. ಅಂತಹವರ ಪ್ರವೇಶವನ್ನೂ ರದ್ದುಗೊಳಿಸಲಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಅಂತಹವರಿಗೆ ವಿಶ್ವವಿದ್ಯಾಲಯವು ಮತ್ತೊಂದು ಅವಕಾಶ ನೀಡಬೇಕಿದೆ.
-ಪ್ರಭು ಸಿ., ಬೆಂಗಳೂರು
**
ಚಾಮುಂಡಿಬೆಟ್ಟ ಯಾರ ಸ್ವತ್ತೂ ಅಲ್ಲ
ದಸರಾ ಉದ್ಘಾಟನಾ ವಿಚಾರವು ವಿವಾದದ ಹುತ್ತವಾಗಿ ಬೆಳೆಯುತ್ತಿರುವುದು ಪ್ರಜ್ಞಾವಂತರಿಗೆ ದಿಗಿಲು ಹುಟ್ಟಿಸಿದೆ. ನಿಜ ಅರ್ಥದಲ್ಲಿ ದಸರಾ ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸುವ ನಾಡಹಬ್ಬ. ಇದರ ಉದ್ಘಾಟನೆಯನ್ನು ಯಾರೇ ಮಾಡಿದರೂ ಫಲಿತಾಂಶ ಒಂದೇ ಆಗಿರುತ್ತದೆ. ಇಂತಹ ಜಾತಿ ಅಥವಾ ಕೋಮಿನವರೇ ಉದ್ಘಾಟಿಸಬೇಕೆಂಬ ನಿಯಮಗಳಿಲ್ಲ. ಈ ಹಿಂದೆ ಹಿಂದೂಗಳಲ್ಲದ ಹಾಗೂ ನಿರೀಶ್ವರವಾದಿಗಳಾದ ಸಾಹಿತಿಗಳು ದಸರಾ ಉದ್ಘಾಟಿಸಿದ ಉದಾಹರಣೆಗಳಿವೆ.
ಸಾಹಿತಿ ಬಾನು ಮುಷ್ತಾಕ್ ಅವರನ್ನು ಮೈಸೂರಿನ ಚಾಮುಂಡಿಬೆಟ್ಟ ಹತ್ತಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿರುವುದು ಅವರ ಪಾಳೇಗಾರಿಕೆ ಮನಃಸ್ಥಿತಿಯ ಪ್ರತೀಕವಾಗಿದೆ. ದಸರಾ ಮತ್ತು ಚಾಮುಂಡಿಬೆಟ್ಟ ಯಾವುದೇ ಧರ್ಮ ಮತ್ತು ಜಾತಿಯವರ ಸ್ವತ್ತಲ್ಲ.
-ಮೋದೂರು ಮಹೇಶಾರಾಧ್ಯ, ಹುಣಸೂರು
**
ತೆರಿಗೆ ನಷ್ಟಕ್ಕೆ ಹೊಣೆ ಯಾರು?
ದೇಶದಲ್ಲಿ ಜಿಎಸ್‌ಟಿ ಜಾರಿ ಬಳಿಕ ಹಲವು ರಾಜ್ಯಗಳ ರಾಜಸ್ವ ಸಂಗ್ರಹದಲ್ಲಿ ಹಿನ್ನಡೆ
ಯಾಗಿರುವುದು ನಿಜ. ಈ ನಡುವೆಯೇ ಕೇಂದ್ರ ಸರ್ಕಾರವು ಜಿಎಸ್‌ಟಿ ಸುಧಾರಣೆಗೆ ಮುಂದಡಿ ಇಟ್ಟಿದೆ. ಇದರಿಂದ ಕರ್ನಾಟಕಕ್ಕೆ ವರಮಾನ ನಷ್ಟವಾಗಲಿದೆ. ಇಡೀ ದೇಶದಲ್ಲಿಯೇ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅದಕ್ಕೆ ತಕ್ಕಂತೆ ತೆರಿಗೆ ಪಾಲು ಸಿಗುತ್ತಿಲ್ಲ. ರಾಜ್ಯದ ಸಂಸದರು ಸಂಸತ್ತಿನಲ್ಲಿ ಹಕ್ಕೊತ್ತಾಯ ಮಂಡಿಸದೆ ಮೌನವಾಗಿರುವುದು ಶೋಚನೀಯ.
-ಬೀರಪ್ಪ ಡಿ. ಡಂಬಳಿ, ಅಥಣಿ
**
ಜೀವಪೋಷಕ ಉದ್ಯೋಗ ಸೃಷ್ಟಿಸಿ
ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಹುಚ್ಚಾಟಕ್ಕೆ ಸಿಲುಕಿ ಲಕ್ಷಾಂತರ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇ–ಆಟಗಳು ಜನರ ಜೀವ, ಹಣ ಹಾನಿಯ ಜೊತೆಗೆ ಕೌಟುಂಬಿಕ ಕಲಹಕ್ಕೂ ಕಾರಣವಾಗಿವೆ. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು ಕಾನೂನಿನ ಮೂಗುದಾರ ಹಾಕುತ್ತಿರುವುದು ಸರಿಯಾಗಿದೆ.
ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ನಿಷೇಧದಿಂದ 2 ಲಕ್ಷ ಉದ್ಯೋಗಗಳು ಮತ್ತು ವರಮಾನ ನಷ್ಟವಾಗಲಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಕೂಗಿಗೆ ಮನ್ನಣೆ ಕೊಡಬೇಕಿಲ್ಲ. ಜೂಜು ಉದ್ಯೋಗವೇ ಅಲ್ಲ. ‘ಜೀವಪೋಷಕ ಉದ್ಯೋಗಗಳನ್ನು ನಾವು ಮಾಡಬೇಕು, ಜೀವಕ್ಕೆ ಹಾನಿ ಮಾಡುವಂತಹ ಕೆಲಸ ಮಾಡಬಾರದು’ ಎಂದು ಗೌತಮ ಬುದ್ಧ ಹೇಳಿದ್ದಾನೆ. ಸಮಾಜವನ್ನು ಪೋಷಿಸುವ ಉದ್ಯೋಗಗಳ ಸೃಷ್ಟಿಗೆ ಸರ್ಕಾರದ ಚಿತ್ತ ಹರಿಯಬೇಕಿದೆ.
-ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ
**
ಮಧ್ಯಮ ವರ್ಗಕ್ಕೆ ದರ ಏರಿಕೆಯ ಬರೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದಾದ ಮೇಲೆ ಒಂದರಂತೆ ದರ ಏರಿಕೆ ಮಾಡುತ್ತಿದೆ. ಇದರ ಪರಿಣಾಮ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ. ವಿದ್ಯುತ್, ನೀರು, ಬಸ್, ಹಾಲು, ಪ್ರಯಾಣ ದರ ಏರಿಸಿದ್ದ ಸರ್ಕಾರ, ಈಗ ದಸ್ತಾವೇಜುಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಿಸಿದೆ. ಇನ್ನು ಮುಂದೆ ಗ್ರಾಮೀಣ ಪ್ರದೇಶದ ಅವಿಭಕ್ತ ಕುಟುಂಬದ ಸದಸ್ಯರು ಆಸ್ತಿ ಭಾಗ ಪತ್ರ ಮಾಡಿಕೊಳ್ಳಲು ಮುದ್ರಾಂಕ ಇಲಾಖೆಗೆ ದುಪ್ಪಟ್ಟು ದರ ತೆರಬೇಕಾಗಿದೆ.
-ಶ್ರೀನಿವಾಸ ರಾಂಪುರ, ಚನ್ನಪಟ್ಟಣ
**
ಸಲಹೆಗೆ ಶುಲ್ಕ: ಕೃಷಿ ವಿವಿ ನಡೆ ಸರಿಯಲ್ಲ
‘ಕೃಷಿ ವಿ.ವಿ.ಯಿಂದ ಸಲಹೆಗೆ ಶುಲ್ಕ’ ಸುದ್ದಿ ಓದಿ ಅಚ್ಚರಿಯಾಯಿತು (ಪ್ರ.ವಾ., ಆಗಸ್ಟ್ 31). ರೈತರಿಗೆ ವ್ಯವಸಾಯ ಪದ್ಧತಿಯ ಉನ್ನತೀಕರಣಕ್ಕೆ ಅಗತ್ಯವಿರುವ ಸಲಹೆ, ಸಹಕಾರ, ತರಬೇತಿ ನೀಡುವುದು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಜವಾಬ್ದಾರಿ. ಕೃಷಿ ವಿಶ್ವವಿದ್ಯಾಲಯದ ಮೂಲ ಉದ್ದೇಶವೇ ಬೋಧನೆ, ಸಂಶೋಧನೆ ಮತ್ತು ಪ್ರಸಾರ. ದೇಶವು ಆಹಾರದ ಸಮಸ್ಯೆ ಎದುರಿಸುತ್ತಿದ್ದಾಗ ‘ಹಸಿರು ಕ್ರಾಂತಿ’ ಉದ್ದೇಶದಿಂದ ಪ್ರಾರಂಭವಾದ ಕೃಷಿ ವಿಶ್ವವಿದ್ಯಾಲಯಗಳು, ಈಗ ತಮ್ಮ ಮೂಲ ಉದ್ದೇಶವನ್ನೇ ಮರೆಯುತ್ತಿರುವುದು ವಿಪರ್ಯಾಸ.
ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಕೃಷಿ ಕ್ಷೇತ್ರವು ಉದ್ಯೋಗಾವಕಾಶ ಒದಗಿಸಿದೆ. ಸರ್ಕಾರದ ಧನಸಹಾಯದಿಂದ ನಡೆಯುತ್ತಿರುವ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಮತ್ತು ರೈತರಾಗುವ ಬಯಕೆ ಇದ್ದವರಿಗೆ ಇನ್ನಷ್ಟು ಉತ್ತೇಜನ ನೀಡಬೇಕು. ವಾಣಿಜ್ಯೋದ್ಯಮದ ಹಾದಿ ಹಿಡಿಯುವುದು ಸರಿಯಲ್ಲ.
-ಅತ್ತಿಹಳ್ಳಿ ದೇವರಾಜ್, ಬೆಂಗಳೂರು
**
ಬುರುಡೆ
ಅಂತೂ ಮತ್ತೆ ಸಾಬೀತಾಯ್ತು
ಬಿಟ್ಟರೆ ಸದಾ ಬುರುಡೆ
ಬರುವ ಫಲಿತಾಂಶ
ಸದಾ ಬರಡೇ!
-ಆರ್. ಸುನೀಲ್, ತರೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.