ವಾಚಕರ ವಾಣಿ
ಕ್ಯಾಥೊಲಿಕ್ ಕ್ರೈಸ್ತರ ಈಡೇರದ ಬೇಡಿಕೆ
ರಾಜ್ಯದ ಚರ್ಚ್‌ಗಳಲ್ಲಿ ಪ್ರಾರ್ಥನಾ ವಿಧಿಗಳು ಕನ್ನಡದಲ್ಲೇ ಜರುಗಬೇಕು ಎಂಬುದು
ಕನ್ನಡ ಕ್ಯಾಥೊಲಿಕ್ ಕ್ರೈಸ್ತರ ಬೇಡಿಕೆ. ಇದಕ್ಕೆ ಕಿವಿಗೊಡುವವರೇ ಇಲ್ಲ. ನೆರೆಯ ರಾಜ್ಯಗಳ ಚರ್ಚ್‌ಗಳಲ್ಲಿ ಎಲ್ಲಾ ಪೂಜಾ ಪ್ರಾರ್ಥನೆಗಳು ಅಲ್ಲಿನ ಸ್ಥಳೀಯ ಭಾಷೆಯಲ್ಲೇ ಜರುಗುತ್ತವೆ. ಆದರೆ, ಇಲ್ಲಿನ ಚರ್ಚ್ ವರಿಷ್ಠರು ಕನ್ನಡ ಭಾಷೆಗೆ ಆದ್ಯತೆ ನೀಡುತ್ತಿಲ್ಲ. 1983ರಲ್ಲಿ ವ್ಯಾಟಿಕನ್ ಪೀಠವು ಹೊರಡಿಸಿದ ಸುತ್ತೋಲೆಯಲ್ಲಿ ಸ್ಥಳೀಯ ಭಾಷೆಯಲ್ಲಿ ಪೂಜಾ ಪ್ರಾರ್ಥನೆಗಳು ಜರುಗಬೇಕೆಂದು ಹೇಳಿದ್ದರೂ ಅದು ಪಾಲನೆಯಾಗುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಅಖಿಲ ಭಾರತ ಬಿಷಪ್‌ಗಳ ಸಮ್ಮೇಳನ ನಡೆಯಿತು. ಅಲ್ಲಿ ಕನ್ನಡ ಕ್ರೈಸ್ತರ ಕುಂದುಕೊರತೆ ಬಗ್ಗೆ ಪ್ರಸ್ತಾಪ ಮಾಡುವವರೇ ಇರಲಿಲ್ಲ. ಅವರ ಪರವಾಗಿ ಮಾತನಾಡುವವರೇ ಇಲ್ಲವೆಂದ ಮೇಲೆ ಬೇಡಿಕೆಗಳು ಈಡೇರಲು ಸಾಧ್ಯವೆ?
-ಎಲ್. ಚಿನ್ನಪ್ಪ, ಬೆಂಗಳೂರು
ನಕಲಿ ವಿಜ್ಞಾನದ ಉಪಟಳ: ಎಚ್ಚರ ಅಗತ್ಯ
‘ವಿಜ್ಞಾನ: ನಕಲಿಗೇನು ಮದ್ದು?’ ಲೇಖನವು (ಲೇ: ಗುರುರಾಜ್ ದಾವಣಗೆರೆ,
ಪ್ರ.ವಾ., ಫೆ. 17) ಮಾಹಿತಿಪೂರ್ಣವಾಗಿದೆ. ಯಾವುದೇ ಸಂಗತಿಯನ್ನು ಪ್ರಶ್ನಿಸದೆ, ಪ್ರಯೋಗ ಮಾಡಿ ನೋಡದೆ ಒಪ್ಪಿಕೊಳ್ಳುವಂತಹುದಲ್ಲ ವಿಜ್ಞಾನ. ಹೀಗಿರುವಾಗ ಪ್ರತಿದಿನ ನಕಲಿ ವಿಜ್ಞಾನ ಸಂಗತಿಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ವೈದ್ಯರಲ್ಲದ ಹಲವು ಲೇಖಕರು ಯಾವುದೋ ಸೊಪ್ಪು, ಗಿಡ
ಮೂಲಿಕೆಗಳ ಬಗ್ಗೆ ಮಾಹಿತಿ ತಿಳಿಸುತ್ತಾರೆ; ಅದನ್ನು ಬಳಸಿದರೆ ಎಷ್ಟೆಲ್ಲಾ ರೋಗ
ಗಳು ಗುಣಮುಖವಾಗುತ್ತವೆಂದು ಬರೆಯುತ್ತಾರೆ. ಇಂತಹ ಬರಹ ಓದಿದ ಮುಗ್ಧ ಓದುಗರು ಆ ಮದ್ದು ಪ್ರಯೋಗಿಸಿ ಅಡ್ಡಪರಿಣಾಮಕ್ಕೆ ತುತ್ತಾದ ನಿದರ್ಶನಗಳಿವೆ. ಈ ಕುರಿತು ಸಾರ್ವಜನಿಕರು ಎಚ್ಚರವಹಿಸಬೇಕಿದೆ.
-ಎಲ್.ಪಿ. ಕುಲಕರ್ಣಿ, ಹಿರೇಮಗಳೂರು
ಸಾರ್ಥಕ ಸಂಪ್ರದಾಯ ಪ್ರಗತಿಯ ಸಂಕೇತ
ಭಾರತದ ಮಹತ್ವವು ಅದರ ಭೌತಿಕ ಪ್ರಗತಿಯಲ್ಲಿ ಮಾತ್ರವಲ್ಲ, ನೈತಿಕ ಮೌಲ್ಯಗಳು
ಮತ್ತು ಮಾನವೀಯತೆಯಲ್ಲಿ ಅಡಗಿದೆ. ಆದರೆ, ಇಂದಿನ ವೇಗದ ಜೀವನಶೈಲಿ
ಯಲ್ಲಿ ಯುವಜನರು ಮೌಲ್ಯಗಳಿಂದ ನಿಧಾನವಾಗಿ ದೂರವಾಗುತ್ತಿದ್ದಾರೆ. ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಹೆಚ್ಚುತ್ತಿದೆ. ಉಡುಪು, ಮಾತಿನ ಶೈಲಿ, ವರ್ತನೆ ಇವೆಲ್ಲದಲ್ಲೂ ಸರಳತೆ, ಸಂಯಮ ಕಡಿಮೆಯಾಗುತ್ತಿದೆ. ಹಿರಿಯರಿಗೆ ಗೌರವ, ಸಂಪ್ರದಾಯಗಳಿಗೆ ಮಾನ್ಯತೆ, ಮಾತಿನಲ್ಲಿ ವಿನಯ – ಇವು ನಮ್ಮ ಸಂಸ್ಕೃತಿಯ ಬೆನ್ನೆಲುಬಾಗಿದ್ದವು. ಇವೆಲ್ಲ ಪ್ರಸ್ತುತ ಮರೆ
ಯಾಗುತ್ತಿರುವುದು ನೋವಿನ ಸಂಗತಿ. ಆರೋಗ್ಯಕರ ಸಂಪ್ರದಾಯ ಅನುಸರಿಸು
ವುದು ಹಳೆಯತನವಲ್ಲ; ಅದು ನಮ್ಮ ಹೆಗ್ಗುರುತು. ಭಾರತದ ವೈಭವವು ನಮ್ಮ
ಸಂಪ್ರದಾಯದಲ್ಲಿದೆ. ಆ ವೈಭವ ಉಳಿಸುವ ಜವಾಬ್ದಾರಿ ನಮ್ಮೆಲ್ಲರದು. ಆಧುನಿಕತೆ
ಯೊಂದಿಗೆ ಸಂಪ್ರದಾಯವನ್ನು ಸಮತೋಲನದಿಂದ ಸಾಗಿಸುವುದೇ ನೈಜ ಪ್ರಗತಿ.
-ಗೋಪಿ ವೀರಭದ್ರ, ರಾಯಚೂರು
ಹುಸಿ ಬಾಂಬ್: ಕಿಡಿಗೇಡಿಗಳಿಗೆ ಶಿಕ್ಷೆ ವಿಧಿಸಿ
ರಾಜ್ಯದ ಕೆಲವು ನ್ಯಾಯಾಲಯಗಳಿಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಭದ್ರತಾ ಪಡೆಗಳು ಪರಿಶೀಲಿಸಿದ ಬಳಿಕ ಅದು ಹುಸಿ ಎಂಬುದು ಗೊತ್ತಾಗಿದೆ. ಈ ಮೊದಲು ಶಾಲೆ, ವಿಮಾನ ನಿಲ್ದಾಣಗಳಿಗೆ ಬೆದರಿಕೆ ಕರೆ ಬರುತ್ತಿದ್ದವು. ಇದರಿಂದ ಅನಗತ್ಯ ಭೀತಿ, ಆರ್ಥಿಕ ನಷ್ಟ, ಪೊಲೀಸರ ಸಮಯ ಮತ್ತು ಸಂಪನ್ಮೂಲ ವ್ಯರ್ಥವಾಗುತ್ತದೆ. ಬೆದರಿಕೆ ಕರೆ ಅಥವಾ ಸಂದೇಶ ನಿಭಾಯಿ
ಸುವುದು ತಮಾಷೆಯಲ್ಲ. ಸೈಬರ್ ಅಪರಾಧ ತಡೆ ವಿಭಾಗದವರು ಇಂತಹ
ಇ–ಮೇಲ್‌ಗಳ ಮೂಲವನ್ನು ತ್ವರಿತವಾಗಿ ಪತ್ತೆಹಚ್ಚಬೇಕಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಮತ್ತು ಭಾರೀ ದಂಡ ವಿಧಿಸಬೇಕಿದೆ.
-ಉದಯ ಮ. ಯಂಡಿಗೇರಿ, ಧಾರವಾಡ
ತೆರಿಗೆ ಪಾಲು: ‘ಸುಪ್ರೀಂ’ ಮೊರೆ ಹೋಗಲಿ
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅದರ ಹಕ್ಕಿನ ತೆರಿಗೆ ಪಾಲನ್ನು ಸಮರ್ಪಕವಾಗಿ ನೀಡದೆ ವಂಚಿಸುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಗಂಭೀರವಾದುದು. ಇಂತಹ ಹೇಳಿಕೆಗಳು ಸಾರ್ವಜನಿಕ ವೇದಿಕೆಗಳಲ್ಲಿ ವ್ಯಕ್ತವಾಗುವುದರಿಂದ ಸಮಸ್ಯೆಯು ಪರಿಹಾರ ಕಾಣದು. ಅತಿಹೆಚ್ಚು ತೆರಿಗೆ ಸಂಗ್ರಹವಾಗುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅದರ ಕೊಡುಗೆಗೆ ತಕ್ಕ ಪ್ರತಿಫಲ ಸಿಗುತ್ತಿ
ದೆಯೇ ಎಂಬ ಪ್ರಶ್ನೆ ಸಹಜ. ಈ ಹಿಂದೆ ರಾಜ್ಯವು ತನ್ನ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಿದೆ. ಅದೇ ದೃಢತೆಯನ್ನು ಈಗಲೂ ತೋರಿಸಬೇಕು. ಕೇವಲ ರಾಜಕೀಯ ಭಾಷಣಗಳು ಅಥವಾ ಭಾವನಾತ್ಮಕ ಘೋಷಣೆಗಳು ನಾಡಿನ ಅಭಿವೃದ್ಧಿಗೆ ಸಾಕಾಗುವುದಿಲ್ಲ. ರಾಜ್ಯದ ಹಿತಾಸಕ್ತಿ ಕಾಪಾಡಲು ಕಾನೂನು ಹೋರಾಟವೇ ಅನಿವಾರ್ಯ.
-ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು
ಕೃಷಿ ಭೂಮಿ: ಭೂಗಳ್ಳರ ಕಾಕದೃಷ್ಟಿ
ಲೋಕಾಯುಕ್ತದಿಂದ ಸರ್ಕಾರಿ ನೌಕರರ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಸಂಪತ್ತನ್ನು ಪತ್ತೆಹಚ್ಚಲಾಗುತ್ತದೆ. ನೌಕರರು ಹಲವು ನಿವೇಶನ, ಹತ್ತಾರು ಎಕರೆ ಕೃಷಿ ಭೂಮಿ ಹೊಂದಿರುತ್ತಾರೆ. ರಾಜ್ಯದಲ್ಲಿ ಕೃಷಿ ಭೂಮಿಯ ಮೇಲೆ ಭೂಗಳ್ಳರ ವಕ್ರದೃಷ್ಟಿ ಹೆಚ್ಚುತ್ತಿದೆ. ಮೊದಲೆಲ್ಲಾ ಕೃಷಿ ಜಮೀನನ್ನು ರೈತನೇ ಖರೀದಿಸುತ್ತಿದ್ದ. ಪ್ರಸ್ತುತ ಕೃಷಿ ಜಮೀನನ್ನು ಮತ್ತೊಬ್ಬ ರೈತ ಖರೀದಿಸುವ ಯೋಚನೆ ಮಾಡಲಾರದಂತಹ ವ್ಯವಸ್ಥೆಯನ್ನು ಭೂಗಳ್ಳರು ಸೃಷ್ಟಿಸಿದ್ದಾರೆ. ಇವರು ಕೃಷಿ ಚಟುವಟಿಕೆ ಮಾಡುವುದಿಲ್ಲ. ಭೂಮಿಯ ಬೆಲೆಯನ್ನು ದುಪ್ಪಟ್ಟುಗೊಳಿಸುತ್ತಾರೆ. ನಿಜವಾದ ರೈತರು ಭೂಮಿ ಖರೀದಿಸದಂತೆ ಮಾಡುತ್ತಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ.
–ತಿಮ್ಮೇಶ ಮುಸ್ಟೂರು, ಜಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.