ಏಕರೂಪದ ಶುಲ್ಕ ವ್ಯವಸ್ಥೆ ರೂಪಿಸಿ
ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ವಿಟಿಯು ನಿಗದಿಪಡಿಸಿದ ಶುಲ್ಕಕ್ಕಿಂತಲೂ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವುದು ಅನ್ಯಾಯ. ಇದರಿಂದ ವೃತ್ತಿಪರ ಶಿಕ್ಷಣದ ಆಶಯಕ್ಕೆ ಪೆಟ್ಟು ಬೀಳಲಿದೆ. ಸಿಇಟಿ ಮೂಲಕ ಸೀಟು ಹಂಚಿಕೆ ಉದ್ದೇಶವೇ ಮೂಲೆಗೆ ಸರಿಯಲಿದೆ. ಆದರೆ, ದುಬಾರಿ ಶುಲ್ಕ ವಸೂಲಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗದಿರುವುದು ದುರದೃಷ್ಟಕರ. ರಾಜ್ಯದಲ್ಲಿ ನಾಯಿ ಕೊಡೆಯಂತೆ ತಲೆ ಎತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು ಶಿಕ್ಷಣದ ಮೂಲ ಉದ್ದೇಶವನ್ನೇ ಮರೆತು, ಹಣಗಳಿಸುವ ಏಕಮಾತ್ರ ಗುರಿ ಹೊಂದಿರುವುದು ಸಮಾಜಕ್ಕೆ ಮಾರಕ. ವಿದ್ಯಾರ್ಥಿಗಳ ನೋವು ಆಲಿಸಲು ಸರ್ಕಾರ ಮುಂದಾಗಬೇಕು. ಜೊತೆಗೆ, ಏಕರೂಪದ ಶುಲ್ಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
-ವಿಜಯಕುಮಾರ್ ಎಚ್.ಕೆ., ರಾಯಚೂರು
**
ಮಾನವೀಯತೆಯೇ ನಿಜ ಧರ್ಮ
‘ಮಾನವೀಯತೆಯೇ ಮೊದಲಾಗಲಿ’ ಎಂದು ಇತ್ತೀಚೆಗೆ ರಾಜಕೀಯ ಧುರೀಣರು, ಮಠಾಧೀಶರು ಸಾರ್ವಜನಿಕ ವೇದಿಕೆಗಳಲ್ಲಿ ಹೇಳುವುದು ಸರ್ವೇಸಾಮಾನ್ಯ. ಈ ಹಿತವಚನವು ಅವರ ಧರ್ಮ, ಜಾತಿಗಷ್ಟೆ ಸೀಮಿತಗೊಳ್ಳುತ್ತಿದೆ. ಇತರೆ ಧರ್ಮ ಮತ್ತು ಜಾತಿಯವರಿಗೆ ಇದು ಅನ್ವಯಿಸುವುದಿಲ್ಲವೇ? ಮನುಷ್ಯ ತನ್ನ ಧರ್ಮ, ಜಾತಿಯನ್ನಷ್ಟೆ ಮೇಲೆತ್ತುವುದಾದರೆ ‘ಮಾನವೀಯತೆ’ ಏಕೆ ಬೇಕು?
-ಪುಟ್ಟಮಾದಯ್ಯ ಎಚ್.ಎಂ., ಮೈಸೂರು
**
ಗೌರವ ಕೇಳಿ ಪಡೆಯುವ ಅಗತ್ಯವಿದೆಯೇ?
‘ಗುರುವಿಗೆ ಗೌರವ ಕ್ಷೀಣಿಸುತ್ತಿದೆಯೆ?’ ಲೇಖನದಲ್ಲಿ (ಲೇ: ಅರವಿಂದ ಚೊಕ್ಕಾಡಿ, ಪ್ರ.ವಾ., ಸೆಪ್ಟೆಂಬರ್ 4) ಶಿಕ್ಷಕರಿಗೆ ಕಡಿಮೆಯಾಗುತ್ತಿರುವ ಗೌರವದ ಬಗ್ಗೆ ವಿಶ್ಲೇಷಿಸಲಾಗಿದೆ. ನಾನು ಮೂರೂವರೆ ದಶಕ ಕಾಲ ಶಿಕ್ಷಕನಾಗಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೆ. ಸಮಾಜದ ಉನ್ನತ ದರ್ಜೆಯ ವ್ಯಕ್ತಿಗಳ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು. ಈ ಮಾತನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಶಿಕ್ಷಕರ ಪ್ರಭಾವದಿಂದ ನಿರ್ಮಿತವಾದ ಸುಶಿಕ್ಷಿತ ಸಮಾಜವು ಅವರಿಗೆ ಸೂಕ್ತ ಗೌರವವನ್ನು ಸ್ವಯಂಪ್ರೇರಣೆಯಿಂದ ನೀಡಬೇಕೇ ಹೊರತು ಶಿಕ್ಷಕನಾದವನು ಕೇಳಿ ಪಡೆಯುವಂತಾಗಬಾರದು. ಹಾಗೆ ಆದಲ್ಲಿ ಶಿಕ್ಷಣದ ನೈಜ ಅರ್ಥಕ್ಕೆ ಬೆಲೆ ಇರಲಾರದು.
-ಅನಿಲಕುಮಾರ ಮುಗಳಿ, ಧಾರವಾಡ
**
ತತ್ವರಹಿತ ರಾಜಕಾರಣಕ್ಕೆ ನಿದರ್ಶನ
ಹರಿಹರ ಶಾಸಕ ಬಿ.ಪಿ. ಹರೀಶ್ ಅವರು, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮತ್ತೊಂದೆಡೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು, ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರ ಚರ್ಚೆಗೆ ಗ್ರಾಸವಾಗಿದೆ (ಪ್ರ.ವಾ., ಸೆಪ್ಟೆಂಬರ್ 4). ಈ ಬೆಳವಣಿಗೆಯನ್ನು ನೋಡಿದರೆ ರಾಜ್ಯದಲ್ಲಿ ಸಜ್ಜನಿಕೆಯ ರಾಜಕಾರಣಿಗಳು ಕಾಣೆಯಾಗಿದ್ದಾರೆಯೇ ಎಂಬ ಆತಂಕ ಜನಸಾಮಾನ್ಯರಿಗೆ ಕಾಡುತ್ತದೆ.
ಸರ್ಕಾರಿ ನೌಕರರು, ಪತ್ರಕರ್ತರು ಮತ್ತು ಸಮಾಜ ಸೇವಕರು ಯಾರೊಬ್ಬರ ಗುಲಾಮರಲ್ಲ ಎಂಬ ಸತ್ಯ ರಾಜಕಾರಣಿಗಳಿಗೆ ಅರಿವಾಗಬೇಕಿದೆ. ಮೌಲ್ಯಗಳ ಬಗ್ಗೆ ಮಕ್ಕಳಿಗಿಂತ ಮೊದಲು ರಾಜಕಾರಣಿಗಳಿಗೆ ಕಲಿಸಬೇಕಾದ ತುರ್ತಿದೆ. ಜನಪ್ರತಿನಿಧಿಗಳು ಸೌಜನ್ಯವಾಗಿ ವರ್ತಿಸಬೇಕೆ ಹೊರತು ದೌರ್ಜನ್ಯದ ಮಾತುಗಳನ್ನು ಆಡುವುದು ಶೋಭೆ ತರುವುದಿಲ್ಲ.
-ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ
**
ರೋಸ್ಟರ್ ಬಿಂದು ರಚನೆಯಲ್ಲಿ ಅನ್ಯಾಯ
ಹಿಂದಿನ ಸರ್ಕಾರವು 2022ರ ಡಿಸೆಂಬರ್ 28ರಂದು ರೋಸ್ಟರ್ ಬಿಂದುಗಳನ್ನು 100 ಬಿಂದುಗಳಿಗೆ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ರೋಸ್ಟರ್ ಬಿಂದು 1, 7, 14, 21, 25, 27, 34, 40, 47, 54, 60, 67, 73, 76, 80, 87 ಮತ್ತು 93ನೇ ಬಿಂದುಗಳನ್ನು ಪರಿಶಿಷ್ಟ ಜಾತಿಗೆ ನಿಗದಿಪಡಿಸಿತ್ತು. ಒಳ ಮೀಸಲಾತಿ ಘೋಷಣೆಯ ಬಳಿಕ ಸರ್ಕಾರವು ರೋಸ್ಟರ್ ಬಿಂದುಗಳನ್ನು ಮರು ನಿಗದಿಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಹಳ ಅನ್ಯಾಯವಾಗುವ ರೀತಿಯಲ್ಲಿ ರೋಸ್ಟರ್ ಬಿಂದು ರಚಿಸಲಾಗಿದೆ. ಪ್ರಸ್ತುತ 1, 9, 15, 23, 27, 33, 41, 46, 49, 53, 59, 67, 75, 81, 89, 93 ಮತ್ತು 96ನೇ ಬಿಂದುಗಳನ್ನು ನಿಗದಿಪಡಿಸಲಾಗಿದೆ. ಇದರ ಹಿಂದೆ ಈ ಸಮುದಾಯಗಳಿಗೆ ಉದ್ಯೋಗ ಮತ್ತು ಬಡ್ತಿ ಮೀಸಲಾತಿ ದೊರೆಯದಂತೆ ಮಾಡುವ ಹಾಗೂ ಮುಖ್ಯವಾಹಿನಿಗೆ ಬರುವುದನ್ನು ತಡೆಗಟ್ಟುವ ಷಡ್ಯಂತ್ರ ಅಡಗಿರುವುದು ಸ್ಪಷ್ಟ. ಮುಖ್ಯಮಂತ್ರಿ ಅವರು, ಇದನ್ನು ಸರಿಪಡಿಸಲು ಕ್ರಮವಹಿಸಬೇಕಿದೆ.
-ಶ್ರೀನಿವಾಸ ಡಿ. ಮಣಗಳ್ಳಿ, ಕಲಬುರಗಿ
**
ಆಹಾ... ಎಂತಹ ಘೋಷಣೆ!
ಜನಸಂಖ್ಯೆಗೆ ಅನುಗುಣವಾಗಿ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದಾಗಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಘೋಷಿಸಿದ್ದಾರೆ. ಆಹಾ... ಎಂತಹ ಘೋಷಣೆ ಇದು. ಮದ್ಯದಂಗಡಿಗಳು ಇರಬೇಕಾದದ್ದು ಜನಸಂಖ್ಯೆಗೆ ಅನುಗುಣವಾಗಿ ಅಲ್ಲ, ಕುಡುಕರ ಸಂಖ್ಯೆಗೆ ಅನುಗುಣವಾಗಿ! ಜನಸಂಖ್ಯೆಗೆ ಅನುಗುಣವಾಗಿ ಶಾಲಾ– ಕಾಲೇಜು, ಆಸ್ಪತ್ರೆ, ಆಂಬುಲೆನ್ಸ್, ಸರ್ಕಾರಿ ಬಸ್, ಉದ್ಯಾನ, ವಾಚನಾಲಯ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿ, ಇಂದಿರಾ ಕ್ಯಾಂಟೀನ್, ಜನೌಷಧ ಕೇಂದ್ರಗಳು ಇರಬೇಕೇ ಹೊರತು ಮದ್ಯದಂಗಡಿಗಳಲ್ಲ.
-ಪಿ.ಜೆ. ರಾಘವೇಂದ್ರ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.