ವಾಚಕರ ವಾಣಿ
ಋತುಚಕ್ರ ರಜೆ ನೀಡಿಕೆಯಲ್ಲಿ ತಾರತಮ್ಯ
ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸಲು 18ರಿಂದ 52 ವರ್ಷದವರೆಗಿನ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಕಾಯಂ, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ವೇತನಸಹಿತ ರಜೆಯ ಸೌಲಭ್ಯ ನೀಡುವಂತೆ ಸೂಚಿಸಿದೆ. ಆದರೆ, ಕೆಲವು ಸರ್ಕಾರಿ ಕಚೇರಿಗಳಲ್ಲಿ ಋತುಚಕ್ರ ರಜೆ ಸೌಲಭ್ಯವನ್ನು ಕಾಯಂ ಸಿಬ್ಬಂದಿಗಷ್ಟೇ ಸೀಮಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಅವರು ಪರಿಶೀಲನೆ ನಡೆಸಬೇಕಿದೆ. ಸರ್ಕಾರದ ಸೂಚನೆಯನ್ನು ತಿರುಚಿ ಆದೇಶ ಹೊರಡಿಸಿರುವವರ ಮೇಲೆ ಕ್ರಮಕೈಗೊಳ್ಳಬೇಕು. ಎಲ್ಲಾ ಮಹಿಳೆಯರಿಗೆ ರಜೆ ಸೌಲಭ್ಯ ಲಭಿಸಿದರಷ್ಟೇ ಸರ್ಕಾರದ ಆಶಯ ಸಾಫಲ್ಯ ಕಾಣಲು ಸಾಧ್ಯ.
–ಪ್ರಭು ವಂದಾಲಿ, ರಾಯಚೂರು
**
ವದಂತಿ ಸಾಕು, ಸತ್ಯಶೋಧನೆ ಬೇಕು
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಆಕ್ಷೇಪಾರ್ಹ ವಿಡಿಯೊ ವೈರಲ್ ಆಗಿರುವುದು ಮತ್ತು ಅದರ ಬೆನ್ನಲ್ಲೇ ಸರ್ಕಾರ ಅವರನ್ನು ಅಮಾನತುಗೊಳಿಸಿ ರುವುದು ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ಘಟನೆಯು ಬರೀ ಒಬ್ಬ ವ್ಯಕ್ತಿಯ ನಡವಳಿಕೆಯ ಪ್ರಶ್ನೆಯಲ್ಲ; ಬದಲಿಗೆ ವ್ಯವಸ್ಥೆಯ ಘನತೆ ಮತ್ತು ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ಯಾವುದೇ ಪೂರ್ವಗ್ರಹಪೀಡಿತ ನಿರ್ಧಾರಕ್ಕೆ ಬರುವ ಮೊದಲು ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ, ಅಧಿಕಾರಿ ನಿರಪರಾಧಿಯಾಗಿದ್ದರೆ ಅವರ ಗೌರವ ಮರುಸ್ಥಾಪನೆ ಆಗುವುದೂ ಅಷ್ಟೇ ಮುಖ್ಯ. ಈ ಪ್ರಕರಣವು ಸಾರ್ವಜನಿಕ ಸೇವೆಯಲ್ಲಿ ಇರುವವರಿಗೆ ‘ನೈತಿಕತೆ’ ಎಷ್ಟು ಮುಖ್ಯ ಎಂಬುದಕ್ಕೆ ದೊಡ್ಡ ಎಚ್ಚರಿಕೆಯಾಗಿದೆ. ತಂತ್ರಜ್ಞಾನ ಮತ್ತು ಅಧಿಕಾರ ಎರಡೂ ಕತ್ತಿಯ ಮೇಲಿನ ನಡಿಗೆಯಂತಾಗಿರುವ ಈ ಕಾಲದಲ್ಲಿ, ಸತ್ಯದ ಶೋಧನೆಯೇ ಈ ವಿವಾದಕ್ಕೆ ಇರುವ ಏಕೈಕ ಪರಿಹಾರ.
–ಭೂಮಿಕಾ ವಿ., ಕೋಲಾರ
**
ಹಂಪಿ ಪಾರಂಪರಿಕ ಸೊಬಗಿಗೆ ಮಸುಕು
ಇತ್ತೀಚೆಗೆ ಹಂಪಿಗೆ ಭೇಟಿ ನೀಡಿದ್ದೆ. ಆದರೆ, 15 ವರ್ಷಗಳ (ಯುನೆಸ್ಕೊಗೆ ಸೇರ್ಪಡೆ
ಆಗುವ ಮೊದಲು) ಹಿಂದೆ ಇದ್ದಂತಹ ಹಂಪಿ ನನಗೆ ಕಾಣಿಸಲಿಲ್ಲ. ಅದು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಂಡಿದ್ದು ನಾಡಿನ ಹೆಮ್ಮೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಲ್ಲಿನ ಸೌಂದರ್ಯ ಮತ್ತು ಸುತ್ತಮುತ್ತಲಿನ ಪರಿಸರ ತೀವ್ರವಾಗಿ ಹದಗೆಡುತ್ತಿದೆ. ಕೆಲವು ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಎಲ್ಲೆ ಮೀರಿವೆ. ಹಂಪಿ ಉತ್ಸವಕ್ಕೆ ಕೆಲವೇ ದಿನಗಳಿವೆ. ಅಧಿಕಾರಿಗಳು ಎಚ್ಚತ್ತುಕೊಂಡು ಅಲ್ಲಿನ ಪರಿಸರ ಮತ್ತು ಸ್ಮಾರಕಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಉತ್ಸವಕ್ಕೆ ಬರುವ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಅಕ್ರಮ ಚಟುವಟಿಕೆಗಳಿಗೆ ಲಗಾಮು ಹಾಕಬೇಕು.
–ಎಂ. ಜನಾರ್ದನ್, ಬಳ್ಳಾರಿ
**
ಹಳ್ಳಿಗರಿಗೆ ಉನ್ನತ ಶಿಕ್ಷಣದ ಅರಿವು ಬೇಕು
ಗ್ರಾಮೀಣರಲ್ಲಿ ಇಂದಿಗೂ ಉನ್ನತಶಿಕ್ಷಣದ ಬಗ್ಗೆ ಅರಿವಿಲ್ಲ. ಪದವಿಪೂರ್ವ ಶಿಕ್ಷಣ ಮುಗಿಸಿದ ತಕ್ಷಣವೇ ಆರ್ಥಿಕ ಕಾರಣಗಳಿಂದ ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದ ನೂರಾರು ಹಳ್ಳಿಗಳಲ್ಲಿ ಯುವಕ, ಯುವತಿಯರು ಪ್ರೌಢಶಿಕ್ಷಣ ಅಥವಾ ಪಿಯು ಶಿಕ್ಷಣ ಮುಗಿದ ನಂತರ ಹೊಲ–ಗದ್ದೆ ಹಾಗೂ ಗಾರೆ ಕೆಲಸದಂಥ ಸಣ್ಣಪುಟ್ಟ ದುಡಿಮೆಯನ್ನು ಬದುಕಿಗೆ ಆಶ್ರಯಿಸಿ ಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಕೊಡಮಾಡುವ ಉಚಿತ ಪ್ರವೇಶಾತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ವಿದ್ಯಾರ್ಥಿವೇತನದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಹಳ್ಳಿಗಳಲ್ಲಿ ಅರಿವು ಮೂಡಿಸಬೇಕಿದೆ. ಇದರಿಂದ ಉನ್ನತಶಿಕ್ಷಣ ಪಡೆಯುವವರಲ್ಲಿ ಗ್ರಾಮೀಣರ ಸರಾಸರಿ ಪ್ರಮಾಣ ಹೆಚ್ಚಾಗಲು ಸಹಕಾರಿಯಾಗಲಿದೆ.
–ಪ್ರಸನ್ನ ಶಿವಾಜಿ ನಾಯಕ, ಜಮಖಂಡಿ
**
ಮಾದರಿ ಹೋರಾಟ ಮರೆತಿರುವ ನೌಕರರು
ವಾರದಲ್ಲಿ ಐದು ದಿನ ಕೆಲಸ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಜ. 27ರಂದು ದೇಶದಾದ್ಯಂತ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ನ್ಯಾಯಯುತ ಬೇಡಿಕೆಗಾಗಿ ಅವರು ಕೈಗೊಂಡಿರುವ ನಿರ್ಧಾರ ಸರಿ. ಆದರೆ, ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರಿಗೆ ತೊಂದರೆಯಾಗಲಿದೆ. ಇದನ್ನು ತಪ್ಪಿಸಲು ಒಂದು ಭಾನುವಾರ ತೋಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡಬಹುದಿತ್ತು. ಇಂತಹ ಹೋರಾಟ ಇತರರಿಗೂ ಮಾದರಿಯಾಗುತ್ತಿತ್ತು.
–ಕೆ.ಎಸ್. ಸೋಮೇಶ್ವರ, ಬೆಂಗಳೂರು
**
ನಾಯಿ ಕಾಟ: ಸಹಾನುಭೂತಿ ಮದ್ದಲ್ಲ
‘ಅಲೋಕ ಮತ್ತು ಬೀದಿನಾಯಿಗಳು’ ಲೇಖನದಲ್ಲಿ (ಲೇ: ಜ್ಯೋತಿ, ಪ್ರ.ವಾ., ಜ. 19) ಬೀದಿನಾಯಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸ ಲಾಗಿದೆ. ಅವು ವಿನಾಕಾರಣ ಆಕ್ರಮಣ ಮಾಡುವುದಿಲ್ಲ ಎನ್ನುವ ಅಧ್ಯಯನ ವರದಿಯು ಒಪ್ಪುವಂತಹದ್ದೇ. ಆದರೆ, ವಠಾರಗಳಲ್ಲಿ, ಕಾಲೊನಿಗಳಲ್ಲಿ ವಾಸಿಸುವ ಜನರು ನಿತ್ಯ ಹೊಟ್ಟೆ ತುಂಬಾ ಊಟ ಹಾಕಿದ ಬೀದಿನಾಯಿಗಳಿಂದಲೂ ತೊಂದರೆಗೆ ಸಿಲುಕಿದ ನಿದರ್ಶನಗಳಿವೆ. ರಾತ್ರಿವೇಳೆ ಬೀದಿನಾಯಿಗಳ ಉಪಟಳದಿಂದ ದ್ವಿಚಕ್ರ ವಾಹನ ಸವಾರರು ಅನುಭವಿಸುವ ತೊಂದರೆಗೆ ಪರಿಹಾರ ಎಂಬುದಿಲ್ಲ. ನಿರ್ಭೀತಿಯಿಂದ ವಾಯುವಿಹಾರ ಮಾಡಲು ಹಿರಿಯ ನಾಗರಿಕರು ಭಯಪಡುವಂತಾಗಿದೆ. ಬೀದಿನಾಯಿಗಳ ಉಪಟಳದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪರಿಹಾರ ಹುಡುವುದು ಸರ್ಕಾರದ ಜವಾಬ್ದಾರಿ.
–ಶಿವರಾಮ ಮಿಡಿಗೇಶಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.