ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
   

ಟಿಳಕವಾಡಿ ಗಣೇಶೋತ್ಸವದ ಮಾದರಿ

ಬೆಳಗಾವಿ ನಗರದ ಟಿಳಕವಾಡಿ ಆರ್.ಪಿ.ಡಿ ಕ್ರಾಸ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಕಳೆದ 13 ವರ್ಷಗಳಿಂದ ಫೈಬರ್‌ನಿಂದ ತಯಾರಿಸಿದ 13 ಅಡಿ ಎತ್ತರದ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, 11 ದಿನ ಪೂಜಿಸುತ್ತಾರೆ. ಕೊನೆಯ ದಿನ ಮೂರ್ತಿಯನ್ನು ವಿಸರ್ಜಿಸುವುದಿಲ್ಲ. ಬೃಹತ್ ಮೆರವಣಿಗೆ ಮಾಡುವುದಿಲ್ಲ. ಪಟಾಕಿ–ಸಿಡಿಮದ್ದು ಸಿಡಿಸುವುದಿಲ್ಲ. ಅಬ್ಬರದ ಡಿಜೆ ಬಳಸುವುದಿಲ್ಲ. ಪರಿಸರಸ್ನೇಹಿಯಾಗಿ ಹಬ್ಬ ಆಚರಿಸುತ್ತಾರೆ. ಫೈಬರ್ ಗಣೇಶನ ಮುಂದೆ ಪೂಜೆಗೆಂದು ಮಣ್ಣಿನಲ್ಲಿ ಮಾಡಿದ ಚಿಕ್ಕದಾದ ಮೂರ್ತಿ ಇಡುತ್ತಾರೆ. ಅದನ್ನಷ್ಟೇ ಸಮೀಪದ ಬಾವಿಯಲ್ಲಿ ವಿಸರ್ಜಿಸುತ್ತಾರೆ. ಮಂಡಳಿಯ ಈ ಸರಳ ಆಚರಣೆ ಎಲ್ಲರಿಗೂ ಮಾದರಿಯಾಗಲಿ. 

-ನೇರಲಗುಡ್ಡ ಶಿವಕುಮಾರ್, ಶಿರಾ 

ADVERTISEMENT

**

ಬದಲಾಗಬೇಕಿದೆ ಸಮಾಜದ ದೃಷ್ಟಿಕೋನ

‘ಹೆಣ್ಣಿಗೆ ಜೀವವಿದೆ; ಹೃದಯವೂ ಇದೆ’ ಲೇಖನವು (ಲೇ: ಸದಾಶಿವ ಸೊರಟೂರು ಪ್ರ.ವಾ., ಸೆಪ್ಟೆಂಬರ್‌ 2) ಹೆಣ್ಣಿನ ವಾಸ್ತವ ಪರಿಸ್ಥಿತಿ ಕುರಿತು ಬೆಳಕು ಚೆಲ್ಲಿದೆ. ದಿನಬೆಳಗಾದರೆ ಅಲ್ಲೊಂದು ಕೊಲೆ, ಇಲ್ಲೊಂದು ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಬಾಲ್ಯವಿವಾಹ, ಹೀಗೆ ಹೆಣ್ಣನ್ನು ಸಮಾಜ ನಡೆಸಿಕೊಳ್ಳುತ್ತಿರುವ ರೀತಿ ನೋಡಿದಾಗ ಇಲ್ಲಿ ತಪ್ಪು ಯಾರದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮೊಳಗೆ ಹೆಣ್ಣನ್ನು ನೋಡುವ ಮನಃಸ್ಥಿತಿ ಬದಲಾಗಬೇಕಿದೆ. ಹೆಣ್ಣನ್ನು ಕೇವಲ ಕಾಮದ ದೃಷ್ಟಿಯಿಂದ ನೋಡುವ ಸಮಾಜದ ದೃಷ್ಟಿ ಬದಲಾಗಬೇಕಿದೆ. ಅವಳು ಕೂಡ ಸ್ವತಂತ್ರಳು ಎಂಬ ಭಾವನೆ ಮೂಡಬೇಕಿದೆ.

-ಅಂಬಿಕಾ ಬಿ.ಟಿ., ಹಾಸನ 

**

ಸರ್ವಾಧಿಕಾರದ ಗುಪ್ತ ಪಾತಳಿ

ಒಕ್ಕೂಟ ರಚನೆಯಲ್ಲಿ ಛಿದ್ರತೆ ಕಾಣುವ, ಏಕಾತ್ಮಕ ಸರ್ಕಾರವನ್ನು ಪ್ರತಿಪಾದಿಸುವ, ಸಂವಿಧಾನವನ್ನು ಪುನಃ ಬರೆಯೋಣ ಎಂಬ ಗುರೂಜಿ ಗೋಲ್ವಾಲ್ಕರ್ ಅವರ ಮಾತುಗಳು ಎಷ್ಟು ಅಪ್ರಜಾಸತ್ತಾತ್ಮಕ, ವಿಕೇಂದ್ರೀಕರಣ ಹಾಗೂ ಬಹುಸಂಸ್ಕೃತಿ ವಿರೋಧಿ, ಸರ್ವಾಧಿಕಾರಕ್ಕೆ ಮಣೆ ಹಾಕುವಂಥವು ಎಂಬ ಒಳಮರ್ಮವನ್ನು ಜನಸಾಮಾನ್ಯರು ಅರಿಯಬೇಕಿದೆ. ‘ರಾಜ್ಯಗಳ ಕಾಲಿಗೆ ತೆರಿಗೆಯ ಗುಂಡು’ ಲೇಖನದಲ್ಲಿ (ಪ್ರ.ವಾ., ಸೆಪ್ಟೆಂಬರ್‌ 1) ದೇವನೂರ ಮಹಾದೇವ ಅವರು, ಈ ಬಗ್ಗೆ ಸೂಕ್ಷ್ಮವಾಗಿ ವಿಶದಪಡಿಸಿದ್ದಾರೆ. ‘ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲ ಮಾತುಗಳನ್ನು ಆಳವಾಗಿ ಹೂತು ಹಾಕಬೇಕಿದೆ’, ‘ರಾಜ್ಯಗಳ ಅಸ್ತಿತ್ವವನ್ನೇ ಅಳಿಸಿ ಹಾಕಬೇಕು’ ಎಂಬ ಗುರೂಜಿಯವರ ಮಾತುಗಳ ಆಳದಲ್ಲಿ ಸರ್ವಾಧಿಕಾರದ ಗುಪ್ತ ಪಾತಳಿ ಕಾಣಿಸುತ್ತದೆ.

-ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

**

ವಿಶಾಲ ಮನೋಭಾವ ಪ್ರದರ್ಶಿಸಲಿ

‘ಎಜುಕೇಟ್‌ ಗರ್ಲ್ಸ್‌’ ಮುಕುಟಕ್ಕೆ ಮ್ಯಾಗ್ಸೆಸೆ ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ. ಸಂಸ್ಥೆಯ ಸಂಸ್ಥಾಪಕಿ ಸಫೀನಾ ಹುಸೇನ್ ಅವರು, ಶಿಕ್ಷಣದ ಮೂಲಕ ಒಂದು ಕೋಟಿ ಬಾಲಕಿಯರ ಸಬಲೀಕರಣದ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಈ ಬಾರಿಯ ದಸರಾ ಉದ್ಘಾಟನೆ ಮಾಡಲಿರುವ ಸಾಹಿತಿ ಬಾನು ಮುಷ್ತಾಕ್ ಕುರಿತಂತೆ ಅನಗತ್ಯವಾಗಿ ಧಾರ್ಮಿಕ ವಿವಾದ ಸೃಷ್ಟಿಸಲಾಗಿದೆ. ವಿವಾದಕ್ಕೆ ಕಾರಣರಾದವರು ಸಫೀನಾ ಅವರ ಸಾಧನೆಯನ್ನು ನೋಡಿಯಾದ‌ರೂ ವಿಶಾಲ ಮನೋಭಾವ ಬೆಳೆಸಿಕೊಳ್ಳಲಿ.

-ಆಶಾ ಅಪ್ರಮೇಯ, ದಾವಣಗೆರೆ

**

ಕನ್ನಡ ಬೋಧನೆಯ ಅವಧಿಗೂ ಕುತ್ತು

ಪದವಿ ಶಿಕ್ಷಣದಲ್ಲಿ ಎನ್‌ಇಪಿ ಕೈಬಿಟ್ಟಿರುವ ರಾಜ್ಯ ಸರ್ಕಾರ, ಎಸ್‌ಇಪಿ ಅಳವಡಿಸಿಕೊಂಡಿದೆ. ಅದರಂತೆ ಕನ್ನಡ ಭಾಷಾಪಠ್ಯಕ್ಕೆ ನಾಲ್ಕು ಗಂಟೆ, ಐಚ್ಛಿಕ ಕನ್ನಡ ವಿಷಯಕ್ಕೆ ಆರು ಗಂಟೆ ಬೋಧನಾ ಅವಧಿ ನಿಗದಿಪಡಿಸಲಾಗಿತ್ತು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ವೇದಿಕೆ ಹಾಗೂ ಬರಗೂರು ರಾಮಚಂದ್ರಪ್ಪನವರು, ಕನ್ನಡ ಬೋಧನಾ ಅವಧಿಗೆ ಸಂಬಂಧಿಸಿದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಕ್ರೆಡಿಟ್‌ಗೆ ಅನ್ವಯ ಮಾಡಿಕೊಂಡು ಅವಧಿಯನ್ನು ಕಡಿತಗೊಳಿಸದೆ ಈ ಹಿಂದಿನಂತೆಯೇ ಏಕರೂಪತೆ ಪಾಲಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರಿಂದ ಕನ್ನಡ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ಈಗ ಕಾಲೇಜು ಶಿಕ್ಷಣ ಇಲಾಖೆಯು, ಸರ್ಕಾರಿ ಪದವಿ ಕಾಲೇಜುಗಳಿಂದ ಪ್ರಸಕ್ತ ವರ್ಷದ ಕೆಲಸದ ಅವಧಿ ಕೇಳಿದೆ. ಕೆಲವು ಕಾಲೇಜುಗಳು ಇವೆರಡರಲ್ಲೂ ಒಂದೊಂದು ಗಂಟೆಯ ಬೋಧನಾ ಅವಧಿ ಕಡಿತಗೊಳಿಸಿ ಇಲಾಖೆಗೆ ವರದಿ ಸಲ್ಲಿಸಿವೆ. ಇದಕ್ಕೆ ಕೆಲವು ವಿಶ್ವವಿದ್ಯಾಲಯಗಳು ತಮ್ಮದೇ ನಿಯಮಾವಳಿಯಲ್ಲಿ ಕ್ರೆಡಿಟ್‌ ಅನ್ನು ವ್ಯತ್ಯಾಸ ಮಾಡಿಕೊಂಡಿರುವುದೇ ಈ ಗೊಂದಲಕ್ಕೆ ಕಾರಣ. ಹಿಂದಿನ ಆದೇಶವು ಉಲ್ಲಂಘನೆಯಾಗದಂತೆ ಕನ್ನಡ ಬೋಧನಾವಧಿಯನ್ನು ಸರಿಪಡಿಸಬೇಕಿದೆ.

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

**

ಮೂರು ಮಕ್ಕಳ ಶಿಕ್ಷಣ ವೆಚ್ಚ ಯಾರದು?

‘ಹಿಂದೂಗಳು ಮೂರು ಮಕ್ಕಳನ್ನು ಮಾಡಿಕೊಳ್ಳಬೇಕು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಹಿಂದೆ ನಮ್ಮ ತಂದೆ–ತಾಯಿಗೆ ನಾವೆಲ್ಲ ಏಳೆಂಟು ಮಕ್ಕಳಲ್ಲಿ ಒಬ್ಬರಾಗಿ ಹುಟ್ಟಿದ್ದೆವು. ಆಗೆಲ್ಲಾ ಮನೆಯಲ್ಲೇ ಹೆರಿಗೆಯಾಗುತ್ತಿತ್ತು. ಈಗ ಆ ಕಾಲವಿದೆಯೇ? ಈಗಿನ ವೈದ್ಯಕೀಯ ವೆಚ್ಚ ಗಗನಕ್ಕೇರಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಚಿಣ್ಣರ ಪೂರ್ವ ಪ್ರಾಥಮಿಕ ಶಿಕ್ಷಣದ ವಾರ್ಷಿಕ ವೆಚ್ಚ ಸುಮಾರು ₹2 ಲಕ್ಷವಿದೆ. ಮೂರು ಮಕ್ಕಳನ್ನು ಹೆತ್ತರೆ ಅವರ ಶಿಕ್ಷಣದ ವೆಚ್ಚ ಭರಿಸುವವರು ಯಾರು? 

-ತಾ.ಸಿ. ತಿಮ್ಮಯ್ಯ, ಬೆಂಗಳೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.