ADVERTISEMENT

ವಾಚಕರ ವಾಣಿ: ಕಾರಂತರ ‘ಸ್ಮೃತಿಚಿತ್ರ’ಕ್ಕೆ ಬೇಕು ಆರೈಕೆಯ ಚೌಕಟ್ಟು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:30 IST
Last Updated 29 ನವೆಂಬರ್ 2021, 19:30 IST

ಕಾರಂತರ ಹುಟ್ಟೂರಾದ ಕೋಟಾದಲ್ಲಿರುವ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದೆ. ಕಾರಂತರ ನೆನಪನ್ನು ಚಿರಸ್ಥಾಯಿಯಾಗಿಸಲು ಇಂತಹ ಥೀಮ್ ಪಾರ್ಕ್ ಅನ್ನು ನಿರ್ಮಿಸಿದವರು ಅಭಿನಂದ ನಾರ್ಹರು. ಆದರೆ ಇಲ್ಲಿನ ನಿರ್ವಹಣೆಯನ್ನು ಸ್ಥಳೀಯ ಕೊಟತಟ್ಟು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಅದು ತನ್ನ ಸೀಮಿತ ಸಂಪನ್ಮೂಲದಲ್ಲಿ ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ನಿರ್ವಹಿಸುವುದು ಕಷ್ಟಸಾಧ್ಯ. ಆದ್ದರಿಂದ ರಾಜ್ಯ ಸರ್ಕಾರವೇ ಇದರ ಹೊಣೆಗಾರಿಕೆ ವಹಿಸಿಕೊಂಡು, ಮತ್ತಷ್ಟು ಅರ್ಥಪೂರ್ಣವಾಗಿ ನಿರ್ವಹಿಸುವುದು ಸೂಕ್ತ.

ಸಮೀಪದ ಸಾಲಿಗ್ರಾಮದಲ್ಲಿ ಕಾರಂತರು ತಮ್ಮ ಜೀವನದ ಸಂಧ್ಯಾಕಾಲವನ್ನು ಕಳೆದರು. ಅವರು ತಮ್ಮ ಕೊನೆಯ ವರ್ಷಗಳಲ್ಲಿ ವಾಸಿಸಿ, ಇಹಲೋಕ ತ್ಯಜಿಸಿದ ಮನೆಯನ್ನು ಇದೀಗ ಡಾ. ಶಿವರಾಮ ಕಾರಂತ ಸ್ಮೃತಿಚಿತ್ರ ಶಾಲೆಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ಕಾರಂತರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ರದರ್ಶನ ಮಾಡಲಾಗಿದೆ. ಮೂರು ಅಂತಸ್ತಿನ ಬೃಹತ್ ಕಟ್ಟಡದ ಈ ಸಂಸ್ಥೆಯನ್ನು ಹಿಂದೆ ಕಾರಂತರ ಸಹಾಯಕಿಯಾಗಿ ಕೆಲಸ ಮಾಡಿದ್ದ ಮಾಲಿನಿ ಮಲ್ಯ ಅವರು ಅಪರಿಮಿತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಸಂಸ್ಥೆಯನ್ನು ಏಕಾಂಗಿ ಯಾಗಿ ನಿಭಾಯಿಸುತ್ತಿರುವ ಮಾಲಿನಿ ಅವರಿಗೆ ಇದೀಗ 71 ವರ್ಷ ವಯಸ್ಸು ಹಾಗೂ ಅನಾರೋಗ್ಯ. ಈ ಕಾರಣದಿಂದ ಸಂಸ್ಥೆಯ ನಿರ್ವಹಣೆ ಸಹಜವಾಗಿ ಅವರಿಗೆ ಕಷ್ಟವಾದ ಹಿನ್ನೆಲೆಯಲ್ಲಿ, ಇದನ್ನು ಯಾವುದಾದರೂ ಸಂಘ–ಸಂಸ್ಥೆಗೆ ವಹಿಸಿಕೊಡಲು ಮಾತುಕತೆ ನಡೆಸಿರುವುದಾಗಿ ತಿಳಿಸಿದರು. ಕಲಾವಿದರು, ಸಾಹಿತಿಗಳು ನೈಸರ್ಗಿಕ ಸಂಪತ್ತಿನಂತೆ ನಾಡಿನ ಆಸ್ತಿ. ಅವರ ನೆನಪನ್ನು ಕಾಪಾಡುವುದು ಸಮಾಜದ, ಸರ್ಕಾರದ ಕರ್ತವ್ಯ. ಪ್ರಸ್ತುತ ಸಂದರ್ಭದಲ್ಲಿ ಮಾಲಿನಿ ಅವರೊಂದಿಗೆ ಚರ್ಚಿಸಿ, ರಾಜ್ಯ ಸರ್ಕಾರವೇ ಇದರ ನಿರ್ವಹಣೆಯನ್ನು ವಹಿಸಿಕೊಂಡಲ್ಲಿ ಕಡಲ ತೀರದ ಭಾರ್ಗವ ಕಾರಂತರಿಗೆ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ.

-ಡಾ. ಟಿ.ಜಯರಾಂ, ಕೋಲಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.