ADVERTISEMENT

ಹುಲ್ಲುಹುಲ್ಲಿಗೂ ಚೆಲ್ಲಂಬ್ರಿಗೊ..

ಎಸ್.ರಶ್ಮಿ
Published 29 ಡಿಸೆಂಬರ್ 2024, 0:10 IST
Last Updated 29 ಡಿಸೆಂಬರ್ 2024, 0:10 IST
<div class="paragraphs"><p>ಎಳ್ಳಮವಾಸ್ಯೆ ಅಂಗವಾಗಿ ಕಲಬುರಗಿಯ ಪಬ್ಲಿಕ್ ಗಾರ್ಡನ್‌ನಲ್ಲಿ ಸಹಭೋಜನದಲ್ಲಿ ತೊಡಗಿರುವುದು &nbsp;</p></div>

ಎಳ್ಳಮವಾಸ್ಯೆ ಅಂಗವಾಗಿ ಕಲಬುರಗಿಯ ಪಬ್ಲಿಕ್ ಗಾರ್ಡನ್‌ನಲ್ಲಿ ಸಹಭೋಜನದಲ್ಲಿ ತೊಡಗಿರುವುದು  

   

ಚಿತ್ರ: ಪ್ರಶಾಂತ್‌ ಎಚ್‌.ಜಿ

ಎಳ್ಳಮವಾಸೆಯ ಸಂಭ್ರಮವೇ ಬಜ್ಜಿ ತಯಾರಿ, ಸಹಭೋಜನ, ವನ ಭೋಜನಗಳಲ್ಲಿ. ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲಿ ಬಜ್ಜಿ ತಯಾರಿ ಬಲು ಜೋರು. ಯಾವುದೇ ಚರ್ಚೆಗಳಿಲ್ಲದೇ ಎಲ್ಲ ಮನೆಗಳಲ್ಲಿಯೂ ಒಗ್ಗಟ್ಟಿನಿಂದ ಕೆಲಸ ಮಾಡುವುದು ಬಜ್ಜಿ ತಯಾರಿ ಮಾತ್ರ. ಎಳೆಕಾಳುಗಳು, ಸೊಪ್ಪು, ಹೋಳುಕಾಯಿಗಳು, ಹೊಸ ಹುಣಸೇಕಾಯಿಯೊಂದಿಗೆ ತಯಾರಿಸುವ ಸ್ವಾದಿಷ್ಟ ಖಾದ್ಯ ಬಜ್ಜಿ.

ADVERTISEMENT

ಅವರೆಕಾಳು, ತೊಗರಿಕಾಳು, ಬಟಾಣಿಕಾಳು, ಅಲಸಂದೆ ಕಾಳು, ಹೆಸರು, ಮಡಕೆ, ಹುರುಳಿ ಎಲ್ಲ ಹಸಿಕಾಳುಗಳನ್ನೂ ಸುಲಿಯಬೇಕು. ಇದು ಮಕ್ಕಳ ಪಾಲಿನ ಕೆಲಸ. ಹೆಸರುಹೆಸರಕಾಯಿ, ಮನೀಗೆ ಬಂದೋರು ಅವರಿಕಾಯಿ, ಕುಳ್ಯಾಗ ಕುಂತೋರು ಮಡಕಿಕಾಯಿ, ಉರಳಿಬಿದ್ದೋರಿಗೆ ಹುರಳಿಕಾಯಿ, ಒಡದು ತಿಂದೋರಿಗೆ ಸೇಂಗಾದ ಕಾಯಿ, ಕಾಯಿ–ಕಾಯಿ ಆಡೂ ಕಾಯಿ, ಸುಲಿಯೂ ಕಾಯಿ, ಕಾಳುಬೇಕಾದ್ರ ರಾತ್ರಿತನಾ ಕಾಯಿ ಅಂತ ಹಾಡು ಹೇಳುತ್ತ, ಪರಸ್ಪರ ಒಗಟುಗಳನ್ನು ಹೇಳುತ್ತ, ಕಾಳು ಸುಲಿಯಲು ಕೂರುತ್ತಾರೆ.

ಸೊಪ್ಪು ಸೋಸುವ ಸಂಯಮದ ಕೆಲಸ ಸದಾ ಮನೆಯ ಹಿರಿಯರ ಪಾಲಿನದ್ದು. ಅಂಗಳದಲ್ಲಿ, ಪಡಸಾಲೆಗಳಲ್ಲಿ ಕುಳಿತು, ಪಾಲಕ್‌, ಮೆಂತ್ಯ, ಹುಂಚಿಕ್ಕಿ, ಪುಂಡಿಪಲ್ಯ, ಕಿರಕಸಾಲಿ, ರಾಜಗಿರಾ ಹತ್ತು ಹಲವು ಸೊಪ್ಪುಗಳನ್ನೆಲ್ಲ ಸೋಸಿ, ತೊಳೆದು ಬಿಳೆ ಪಂಚೆಯ ಮೇಲೆ ಆರಿ ಹಾಕುವರು.

ಇವನ್ನೆಲ್ಲ ಒಗ್ಗರಣೆಗೆ ಹಾಕಿ, ಕಡಲೆ ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ ಸುರಿಯುತ್ತಾರೆ. ಹಿಟ್ಟಿನ ಹಸಿವಾಸನೆ ಹೋಗುವವರೆಗೂ ಕೈ ಕದಡುತ್ತಲೇ ಇರಬೇಕು. ಹುಣಸೇಕಾಯಿಯನ್ನು, ಹಸಿಶುಂಠಿ, ಬೆಳ್ಳುಳ್ಳಿಯೊಡನೆ ಅರೆದು, ಈ ಮಿಶ್ರಣಕ್ಕೆ ಬರೆಸುತ್ತಾರೆ. ಒಂದು ಹದಕ್ಕೆ ಬಂದ ನಂತರ ಎಲ್ಲ ಸೊಪ್ಪುಗಳನ್ನೂ ಒಂದೊಂದಾಗಿ ಬೆರೆಸುತ್ತಾರೆ. ಈ ಖಾದ್ಯವನ್ನೇ ಬಜ್ಜಿ ಎಂದು ಕರೆಯುವುದು.

ಎಳ್ಳಮವಾಸೆಗೆ ಎಳ್ಳಷ್ಟೇ ಬಿಸಿಲು ಎಂಬ ಆಡು ಮಾತನ್ನು ಆಡುತ್ತಲೇ ಚಳಿಗಾಳದ ಎಳೆ ಬಿಸಿಲಿನಲ್ಲಿ ಎಲ್ಲ ಎಣ್ಣೇಕಾಳುಗಳ ಆಹಾರ ಖಾದ್ಯಗಳನ್ನು, ಸಿರಿಧಾನ್ಯಗಳ ಖಾದ್ಯದೊಂದಿಗೆ ಊಟ ಸವಿಯುತ್ತಾರೆ.

ನಿಮ್ಮ ಊಟದ ತಟ್ಟೆಯೊಳಗೆ ಹದಿನಾರು ಬಗೆಯ ಖಾದ್ಯಗಳು ಇದ್ದೇ ಇರುತ್ತವೆ. ಬಜ್ಜಿ ಜೊತೆಗೆ ಕಾದೆಣ್ಣೆ (ಗಾಣದೆಣ್ಣೆಯನ್ನು ಹದವಾಗಿ ಕಾಯಿಸಿ, ಸಾಸಿವೆ, ಜೀರಿಗೆ ಮತ್ತು ಬೆಳ್ಳುಳ್ಳೀಯನ್ನು ಕೊಚ್ಚಿ ಹಾಕಿ, ಕರಿಬೇವನ್ನೂ ಸಿಡಿಸಿ ಇಟ್ಟಿರುತ್ತಾರೆ.) ಬಡಿಸಿ, ಸಪ್ಪನ ಬ್ಯಾಳಿ (ಬೇಯಿಸಿದ ತೊಗರಿಬೇಳೆಗೆ ಸಾಸಿವೆ, ಜೀರಿಗೆ ಒಗ್ಗರಣೆ ಮಾತ್ರ ಇರುತ್ತದೆ), ಎಣ್ಣೆಗಾಯಿ (ಬದನೆಕಾಯಿ ತಿನ್ನದವರಿಗಾಗಿ ಹೀರೆಕಾಯಿ, ಡೊಣ್ಣಮೆಣಸಿನಕಾಯಿಯ ಎಣ್ಣೆಗಾಯಿಯನ್ನೂ ಮಾಡಲಾಗುತ್ತದೆ.) ಮೂಲಂಗಿ ಪಚಡಿ (ಮೂಲಂಗಿ, ಮೂಲಂಗಿ ಸೊಪ್ಪನ್ನು ಸಣ್ಣದಾಗಿ ಕೊಚ್ಚಿ, ಹುರಿದ ಕಡಲೆಬೀಜ ಇದಕ್ಕೆ ಸೇರಿಸಿ, ಅಗಸೆ ಹಿಂಡಿ ಅಥವಾ ಗುರೆಳ್ಳುಹಿಂಡಿಯನ್ನು ಕಲಿಸಲಾಗಿರುತ್ತದೆ), ಇನ್ನು ಬಗೆಬಗೆಯ ಕೋಸಂಬರಿಗಳು, ಕೆಂಪು ಮೆಣಸಿನ ಚಟ್ನಿ ರಂಜಕ, ಕಲ್ಯಾಣಿ ಚಟ್ನಿ, ಕರಿಚಟ್ನಿ, ಟೊಮೆಟೊ ಕಾಯಿ ಚಟ್ನಿ. ಎರಡನೆಯ ಸಾಲಿಗೆ ಬಂದು ಕೂರುತ್ತವೆ. ಮೂರನೆಯ ಸಾಲಿನಲ್ಲಿ ಸೇಂಗಾ ಪುಡಿ, ಅಗಸಿ ಪುಡಿ, ಗುರೆಳ್ಳುಪುಡಿ, ಗಟ್ಟಿ ಮೊಸರು.

ಇದಾದ ಮೇಲೆ, ಎಲೆಗೆಲ್ಲ ತಾನೇ ಸುಂದರಿ ಎಂಬಂತೆ ಠೀವಿಯಿಂದ ಝುಣಕಾ ಗಿರಾರೆ ಅಂತ ಹಾಡಿಸಿಕೊಂಡೇ ತಟ್ಟೆಗೆ ಬರುವ ಝಣಕದ ಒಡಿ. ನಿಮ್ಮ ನಿಮ್ಮ ತಟ್ಟೆಯ ಪಕ್ಕ, ಈರುಳ್ಳಿ ಕಂದು, ಎಳೆಮೆಂತ್ಯ ಸೊಪ್ಪು, ಹಕ್ಕರಿಕೆ ಸೊಪ್ಪು, ನಿಂಬೆ ಹಣ್ಣಿನ ಹೋಳು, ಗಜ್ಜರಿ, ಸೌತೆಕಾಯಿಗಳ ಉದ್ದುದ್ದನೆಯ ಹೋಳುಗಳು ಬಂದು ಕೂರುತ್ತವೆ.

ಇವುಗಳ ನಂತರ ಆಹಹಾ... ರಾಜ ಠೀವಿಯಲ್ಲಿ ಬರುವ ಬಿಳಿ ಜೋಳದ ಖಟಿ ರೊಟ್ಟಿ, ನಾನೇ ಈ ಹಬ್ಬದ ವಿಶೇಷ ಆಹ್ವಾನಿತ ಎಂಬಂತೆ ಬರುವ ಕರಿ ಎಳ್ಳು ಸವರಿದ ಸಜ್ಜೆ ರೊಟ್ಟಿಗಳು. ಖಳ...ಖಳಕ್‌ ಖಟ್‌... ಖಟಕ್‌ ಅಂತ ಮುರಿಯುವ ಸದ್ದಿನೊಂದಿಗೆ ಬರುತ್ತವೆ. ಕೆಲವರಂತೂ ರೊಟ್ಟಿಯನ್ನೇ ತಟ್ಟೆಯಾಗಿಸಿ, ಅದರೊಳಗೇ ಬಜ್ಜಿ ಪಲ್ಯ ಹಾಕಿಸಿಕೊಂಡು ದಂಡೆಯಿಂತ ತಿನ್ನುತ್ತ ಬರುತ್ತಾರೆ.

ಮಕ್ಕಳಿಗಾಗಿ ಪದರು ಚಪಾತಿ, ರೊಟ್ಟಿಯುಂಡವರೂ ಚಪಾತಿಗೇನೂ ಮೋಸ ಮಾಡುವುದಿಲ್ಲ. ಪಾಪ.. ಅದನ್ಯಾಕೆ ಬಿಡಬೇಕು, ಬೇಸರ ಮಾಡಿಸಬೇಕು ಅಂತ.. ಅನ್ಕೊಂಡು ಅದಕ್ಕೂ ನ್ಯಾಯ ಸಲ್ಲಿಸುತ್ತಾರೆ.

ನಂತರದ ಪಾಳಿ, ಸೇಂಗಾ ಹೋಳಿಗೆ, ಎಳ್ಳುಹೋಳಿಗೆ ಮೇಲೆ ಒಂದಷ್ಟು ಹರಳುಗಟ್ಟಿದ ತುಪ್ಪ ಸುರಿದರೆ ಕಂದು ಬಣ್ಣದ ತಟ್ಟೆಯೊಳಗೆ ಚಂದ್ರನಂಥ ತುಪ್ಪದ ಕುಪ್ಪೆ. ಅದನ್ನು ಸವರಿ ಸವಿಯುವಾಗ, ಬದುಕೂ ಇಷ್ಟೇ ಸವಿಸವಿಯಾಗಿ ಸವೆದು ಹೋಗಲಿ ಎಂಬಂತನಿಸುತ್ತದೆ...

ಬಿಸಿಯನ್ನ, ತುಪ್ಪ, ಬಜ್ಜಿ, ಎಣ್ಣೆಗಾಯಿ ಎಸರು ಉಣ್ಣುವವರಿಗಾಗಿಯೇ ತುಸು ಬಿಸಿಯನ್ನ ಇದ್ದರೆ, ಉಳಿದಂತೆ ಶಾಸ್ತ್ರಕ್ಕೆ ಮಾತ್ರ ಅನ್ನದ ಪಾತ್ರೆ. ಚಿತ್ರಾನ್ನ. ನಂತರ ಬಿಳಿಜೋಳದ ಬಾನ. ಜೋಳ ನೆನೆಯಿಟ್ಟು, ಕುಟ್ಟಿ ಹೊಟ್ಟು ತೂರಿ ಉಳಿದ ತಿರುಳನ್ನು ಹದವಾದ ಮಜ್ಜಿಗೆಯಲ್ಲಿ ಬೇಯಿಸಿ, ಬಿಳಿಬೋನ ಮಾಡಲಾಗುತ್ತದೆ. ಬಾನದ ಪಾಳಿ ಬರುವುದರೊಳಗೆ ಬಾನನ್ನು ದಿಟ್ಟಿಸುತ್ತ ಊಟ ಮುಗಿಸುವ ಕೊನೆಯ ಹಂತಕ್ಕೆ ಬಂದಿರುತ್ತಾರೆ.

ಹೊಲಕ್ಕೆ ಬಂದೊಡನೆ ತಾಮ್ರದ ಬಿಂದಿಗೆಯಲ್ಲಿ ತಂದ ನೀರಿನಿಂದ ಗಂಗೆ ಪೂಜೆ ಮಾಡಿ, ಹೊಲದ ಸಿರಿಗೆ ಗೌರಿಯ ಪೂಜೆ ಮಾಡಿ, ನೈವೇದ್ಯಕ್ಕೆ ಇವೆಲ್ಲವನ್ನೂ ಮೊದಲು ಒಂದು ಮಡಕೆಯೊಳಗೆ ಹಾಕಿ, ಗಿರ್ಮಿಟ್ಟಿನಂತೆ ಎಲ್ಲವನ್ನೂ ತಿರುವಿ, ಮನೆಯ ಹಿರಿಯನಿಗೆ ಆ ಮಡಕೆ ನೀಡಲಾಗುತ್ತದೆ. ಜಮೀನಿನ ಉದ್ದಗಲಕ್ಕೂ ಹಿರಿಯ ಓಡಾಡುತ್ತ ಹುಲ್ಲುಲ್ಲಿಗೂ... ಅಂತ ಕೂಗುತ್ತ ಒಂದೊಂದೇ ತುತ್ತು ಚೆಲ್ಲಾಡುತ್ತ ಹೊರಡುತ್ತಾನೆ. ಹಿಂದೆ ಹಿರಿಯನ ಬಾಲಂಗೋಸಿಯಂತೆ ಮನೆಯ ಸದಸ್ಯರೆಲ್ಲ ಚಲ್ಲಂಬ್ರಿಯೋ ಅನ್ನುತ್ತ ಓಡಾಡುತ್ತಾರೆ. ಇದು ಹುಲ್ಲುಹುಲ್ಲಿಗೆ.. ಚೆಲ್ಲುವೆವು ಅಮೃತ ಎಂಬ ಮಾತಿನ ಅಪಭ್ರಂಶವಾಗಿದೆ. ಇದನ್ನೇ ಚರಗ ಚೆಲ್ಲುವುದು ಎಂದು ಕರೆಯಲಾಗುತ್ತದೆ.

ಹಸಿರುಟ್ಟ ಭೂಮ್ತಾಯಿ, ಕಾಳುಬೆಳೆ ತುಂಬಿಕೊಂಡು ಬಸುರಿಯಾಗಿರುವುದರಿಂದ ಬಯಕೆಯ ಊಟ ಉಣ್ಣಿಸುವ ವಿಧಾನ ಇದು.

ಊಟಕ್ಕೆ ನೀಡುವಾಗ ಯಾರು ಏನೇನು ಸಹಾಯ ಮಾಡಿದರು, ಅದಕ್ಕೇ ಅಡುಗೆ ರುಚಿ ಆಯ್ತು ಎಂದೆಲ್ಲ ಹರಟುತ್ತಾರೆ. ನಾನು ಸುಲಗಾಯಿ ಸುಲಿದಿದ್ದಕ್ಕೇ, ನಾನು ಸೊಪ್ಪು ಸೋಸಿ ನೀಡಿದ್ದಕ್ಕೆ, ನಾನು ಅಡುಗೆ ಮಾಡುವಾಗ ಮಾತಾಡಿಸಿದ್ದಕ್ಕೇ. ಹೀಗೆ ಏನೆಲ್ಲ ಕಾರಣಗಳು ಸಿಗುತ್ತವೆಯೋ ಎಲ್ಲವನ್ನೂ ಹೇಳುತ್ತ, ಹಾಡಿ ಹೊಗಳುತ್ತ ಊಟ ಮಾಡುತ್ತಾರೆ.

ಮನೆಯಲ್ಲಿ ವರ್ಷಕ್ಕೆ ಒಮ್ಮೆಯಾದರೂ ಪರಸ್ಪರ ಹೊಗಳಿಕೊಳ್ಳುತ್ತ, ಮಾಡಿದ ಕೆಲಸಗಳನ್ನು ಮೆಚ್ಚುತ್ತ, ಬುತ್ತಿ ಸವಿಯುತ್ತಾರೆ.

ಬದುಕುವ ಭೂಮಿ ಒಂದೇ ಆಗಿರುವಾಗ, ಊಟವನ್ನೂ ಹಂಚಿ ಉಣ್ಣಬೇಕು ಎಂಬ ತತ್ವದಂತೆ ಯಾವ ಧರ್ಮಗಳ ಎಲ್ಲೆಗಳಿಲ್ಲದೆ ಎಳ್ಳಮವಾಸೆ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.

ಎಳ್ಳಮವಾಸೆ ಅಂಗವಾಗಿ ಹೊಲದಲ್ಲಿ ಚರಗಾ ಚೆಲ್ಲುತ್ತಿರುವ ರೈತರು  ಚಿತ್ರ: ತಾಜುದ್ದೀನ್ ಆಜಾದ್‌
ಕಲಬುರಗಿ ತಾಲ್ಲೂಕಿನ ಜಂಬಗಾ ಬಿ. ಗ್ರಾಮದಲ್ಲಿ ಗುರುವಾರ ಎಳ್ಳ ಅಮಾವಾಸ್ಯೆ ಅಂಗವಾಗಿ ಶಿವರಾಜ ಹತಗುಂದಿ ಅವರು ಹೊಲದಲ್ಲಿ ಕುಟುಂಬದ ಸದಸ್ಯರೊಂದಿಗೆ ಚರಗಾ ಚೆಲ್ಲುತ್ತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕೆಂಭಾವಿಯಲ್ಲಿ ಎಳ್ಳ ಅಮಾವಾಸ್ಯೆಯ ನಿಮಿತ್ತ ಸೋಮವಾರ ಹೊಲದಲ್ಲಿ ಭೋಜನ ಸವಿಯುತ್ತಿರುವ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.