ADVERTISEMENT

ಸಂತ ವ್ಯಾಲೆಂಟೈನ್‌ ಯಾರು?: ಫೆ.14ರಂದೇ ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಯಾಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2026, 13:02 IST
Last Updated 12 ಫೆಬ್ರುವರಿ 2026, 13:02 IST
   
ಫೆಬ್ರುವರಿ 14ರಂದು ಪ್ರೇಮಿಗಳ ದಿನವನ್ನಾಗಿ (Valentine's Day) ಆಚರಿಸಲಾಗುತ್ತದೆ. ಅಷ್ಟಕ್ಕೂ ಯಾರು ಈ ವ್ಯಾಲೆಂಟೈನ್‌. ಇಲ್ಲಿದೆ ಮಾಹಿತಿ.

ಸಂತ ವ್ಯಾಲೆಂಟೈನ್ ರೋಮನ್ ಪಾದ್ರಿ. ಫೆ.14ರಂದು ರಂದು ಇವರನ್ನು ಗಲ್ಲಿಗೇರಿಸಲಾಗಿತ್ತು. ಪ್ರೀತಿ ಮತ್ತು ವಿವಾಹದ ಸಂಕೇತವಾಗಿ ಅವರು ಮರಣಹೊಂದಿದ ದಿನವನ್ನು (ಫೆ.14ರಂದು) ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ ವ್ಯಾಲೆಂಟೈನ್‌

3ನೇ ಶತಮಾನದಲ್ಲಿ ರೋಮನ್ ಚಕ್ರವರ್ತಿ 2ನೇ ಕ್ಲಾಡಿಯಸ್ ಸೈನಿಕರು ಮದುವೆಯಾಗುವುದನ್ನು ನಿಷೇಧಿಸಿದ್ದ. ಮದುವೆ ಸೈನಿಕರನ್ನು ದುರ್ಬಲಗೊಳಿಸುತ್ತದೆ ಎಂದು ಆತ ನಂಬಿದ್ದ. ವಿವಾಹವಾಗದೇ ಒಂಟಿಯಾಗಿದ್ದಷ್ಟೂ ಸೈನಿಕರು ಯುದ್ಧದಲ್ಲಿ ವೀರಾವೇಶದಿಂದ ಹೋರಾಡುತ್ತಾರೆ ಎಂಬ ಭಾವನೆ ಅವರದ್ದಾಗಿತ್ತು.

ಆದರೆ ಕ್ಲಾಡಿಯಸ್‌ ಅವರ ಈ ನಿರ್ಧಾರದ ಬಗ್ಗೆ ಸಂತ ವ್ಯಾಲೆಂಟೈನ್ ಅಸಮಾಧಾನ ಹೊಂದಿದ್ದರು. ಮದುವೆಯಾಗಲು ಇಚ್ಛಿಸುವ ಅನೇಕ ಸೈನಿಕರಿಗೆ ಅವರು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದರು. ಈ ಕೃತ್ಯಕ್ಕಾಗಿ ಬಂಧಿಸಲ್ಪಟ್ಟ ವ್ಯಾಲೆಂಟೈನ್ ಅವರಿಗೆ ಕ್ರಿ.ಶ. 270ರ ಫೆ.14ರಂದು ಮರಣದಂಡನೆ ವಿಧಿಸಲಾಯಿತು.

ADVERTISEMENT
ವ್ಯಾಲೆಂಟೈನ್ಸ್ ಡೇ ಅಂಗವಾಗಿ ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಾರ್ಥ್ ಕ್ಯಾಂಪಸ್‌ ಸಹಯೋಗದೊಂದಿಗೆ ವಿಶೇಷ ರೀಲ್ಸ್‌ ಸ್ಪರ್ಧೆಯನ್ನು ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದೆ. ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧಗಳ ಮೌಲ್ಯ ಹಾಗೂ ಜೀವನದ ಸೌಂದರ್ಯವನ್ನು ಪ್ರತಿಬಿಂಬಿಸುವ ಸೃಜನಾತ್ಮಕ ರೀಲ್ಸ್‌ಗಳನ್ನು ಆಹ್ವಾನಿಸಲಾಗುತ್ತಿದೆ.

ಈ ಮಧ್ಯೆ ಸೆರೆಮನೆಯಲ್ಲಿದ್ದ ವ್ಯಾಲೆಂಟೈನ್‌ಗೆ ಜೈಲರ್ ಮಗಳೊಂದಿಗೆ ಪ್ರೀತಿಯಾಗಿತ್ತು ಎಂದು ಹೇಳಲಾಗುತ್ತದೆ. ತನ್ನ ಸಾವಿಗೆ ಮುನ್ನ ಅವಳಿಗಾಗಿ ‘ಇಂತಿ ನಿಮ್ಮ ವ್ಯಾಲೆಂಟೈನ್‌‘ (From your Valentine) ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಅವರು ಬರೆದಿದ್ದರು ಎನ್ನಲಾಗಿದೆ. ಈ ದಿನವನ್ನು (ಫೆ.14) ಪ್ರೀತಿಯ ಸಂಕೇತವೆಂದು ಪರಿಗಣಿಸಿ, 'ವ್ಯಾಲೆಂಟೈನ್ಸ್ ಡೇ'ಯಾಗಿ ಆಚರಿಸಲಾಗುತ್ತದೆ.

ವ್ಯಾಲೆಂಟೈನ್ ಕಾರ್ಡ್:

ಸಂತ ವ್ಯಾಲೆಂಟೈನ್ ಜೈಲರ್ ಮಗಳಾದ ಜೂಲಿಯಾಗೆ ಪತ್ರ ಬರೆದು, ಅದರ ಕೊನೆಯಲ್ಲಿ 'ನಿಮ್ಮ ವ್ಯಾಲೆಂಟೈನ್‌' ಎಂದು ಸಹಿ ಹಾಕಿದ್ದರು. ಇದು ವ್ಯಾಲೆಂಟೈನ್ ಕಾರ್ಡ್ ಸಂಪ್ರದಾಯಕ್ಕೆ ನಾಂದಿಯಾಯಿತು ಎನ್ನಲಾಗಿದೆ.

ಪ್ರಸ್ತುತ ಪ್ರೀತಿ, ವಾತ್ಸಲ್ಯ ಮತ್ತು ಪ್ರೇಮನಿವೇದನೆಯ ಸಂಕೇತವಾಗಿ ಫೆ.14ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸ್ಮರಣೀಯವಾಗಿಸಲು, ಪ್ರೇಮಿಗಳು ಪರಸ್ಪರ ಸಂತೋಷಪಡಿಸಲು ಉಡುಗೊರೆ, ಕೈ ಬರಹದ ಪತ್ರಗಳನ್ನು ಬರೆದು ಶುಭಾಶಯ ಕೋರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.