ಅಂಚೆ ಇಲಾಖೆ
ನವದೆಹಲಿ: ಅಂಚೆ ಸೇವೆಯಲ್ಲಿದ್ದ ರಿಜಿಸ್ಟರ್ಡ್ ಪೋಸ್ಟ್ ರದ್ದುಗೊಳಿಸಿ, ಸ್ಪೀಡ್ ಪೋಸ್ಟ್‌ಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಅ. 1 ರಿಂದ ಒಟಿಪಿ ಆಧಾರಿತ ಸುರಕ್ಷಿತ ವಿತರಣೆಯನ್ನು ಜಾರಿಗೆ ತರುತ್ತಿದೆ. ಆನ್‌ಲೈನ್ ಬುಕಿಂಗ್ ಮತ್ತು ಪಾರ್ಸೆಲ್‌ಗಳಿಗೆ ಆನ್‌ಲೈನ್ ಪಾವತಿ ಆಯ್ಕೆಗಳು ಸೇರಿದಂತೆ ಪ್ರಮುಖ ಡಿಜಿಟಲ್ ರೂಪಾಂತರಗಳು ಇದರಲ್ಲಿ ಇರಲಿವೆ.
ಜನರ ಆದ್ಯತೆಗೆ ಅನುಗುಣವಾಗಿ ವಿತರಣಾ ಸೇವೆಯಲ್ಲಿ ಭಾರತೀಯ ಅಂಚೆ ತನ್ನ ಸ್ಥಾನವನ್ನು ಬಲಪಡಿಸಲು ಕೆಲವು ನವೀಕರಣಗಳನ್ನು ಮಾಡಿಕೊಂಡಿದೆ. ಅದರಲ್ಲಿ ಪ್ರಮುಖವಾಗಿ ಪಾರ್ಸೆಲ್ ವಿತರಣೆಯ ಸಂದರ್ಭದಲ್ಲಿ ನೀಡುವ SMS ಎಚ್ಚರಿಕೆಗಳು ಮತ್ತು ನಿಖರ ಸಮಯದಲ್ಲಿ ಪಾರ್ಸೆಲ್‌ಗಳನ್ನು ಟ್ರ್ಯಾಕ್ ಮಾಡುವ ಆಯ್ಕೆ ನೀಡುವುದನ್ನು ಒಳಗೊಂಡಿದೆ. ಮಾತ್ರವಲ್ಲ, ವಿವಿಧ ಬಗೆಯ ಪಾರ್ಸೆಲ್‌ಗಳಿ ವಿವಿಧ ರೂಪದ ದರಗಳನ್ನು ನಿಗದಿಪಡಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಭಾರತೀಯ ಅಂಚೆ, ‘ಅ 1 ರಿಂದ ಸ್ಪೀಡ್ ಪೋಸ್ಟ್ ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸಲು ಪ್ರಮುಖ ನವೀಕರಣಗಳನ್ನು ತರುತ್ತಿದೆ. ಅದು ಹಿಂದೆಂದಿಗಿಂತಲೂ ಸ್ಮಾರ್ಟ್, ಸುರಕ್ಷಿತ ಮತ್ತು ಹೆಚ್ಚು ಜನ ಸ್ನೇಹಿಯಾಗಿರಲಿದೆ’ ಎಂದು ತಿಳಿಸಿದೆ.
‘ಅ. 1ರಿಂದ ಯಾವುದೇ ದಾಖಲೆ ಅಥವಾ ಪಾರ್ಸೆಲ್‌ನ ವೇಗವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ನೀವು ವಿಳಾಸ ಆಧಾರಿತ ನಿರ್ದಿಷ್ಟ, ಸುರಕ್ಷಿತ ವಿತರಣೆಯ ಸೇವೆಯನ್ನು ಪಡೆಯಬಹುದು. ವಿಶ್ವಾಸದ ಜೊತೆಗೆ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ’ ಎಂದು ಭಾರತೀಯ ಅಂಚೆ ತಿಳಿಸಿದೆ.
ಮಾತ್ರವಲ್ಲ, ‘ಇನ್ನು ಮುಂದೆ ಒಟಿಪಿ ಆಧಾರಿತ ವಿತರಣೆ ಇರಲಿದೆ. ನಮ್ಮ ಸಿಬ್ಬಂದಿ ಬಂದಾಗ OTP ಹಂಚಿಕೊಂಡಾಗ ಮಾತ್ರ ನಿಮ್ಮ ಸ್ಪೀಡ್ ಪೋಸ್ಟ್‌ನಲ್ಲಿರುವ ವಸ್ತುವನ್ನು ನಿಮಗೆ ತಲುಪಿಸುತ್ತಾರೆ. ಇದು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಜಾರಿಗೆ ತರಲಾಗಿದೆ’ ಎಂದು ತಿಳಿಸಿದೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಕೂಡ ಮಾಹಿತಿ ಹಂಚಿಕೊಂಡಿದ್ದು, ‘ಭಾರತೀಯ ಅಂಚೆ ಇಲಾಖೆ ಅತ್ಯಂತ ವೇಗವಾಗಿಯೂ, ಸುರಕ್ಷಿತ ಹಾಗೂ ಚುರುಕಾಗಿ ನವೀಕರಣಗೊಳ್ಳುತ್ತಿದೆ. ಅಕ್ಟೋಬರ್ 1 ರಿಂದ ಸ್ಪೀಡ್ ಪೋಸ್ಟ್ ಸೇವೆ ಜಿಎಸ್‌ಟಿ ಪ್ರತ್ಯೇಕತೆಯೊಂದಿಗೆ ಒಟಿಪಿ ಆಧಾರಿತ ವಿತರಣೆಗಳು, ನೋಂದಣಿ ಆಯ್ಕೆಗಳು ಮತ್ತು ಪಾರದರ್ಶಕ ದರಗಳನ್ನು ತರುತ್ತಿದೆ’.
‘ಪ್ರತಿ ಮನೆ ಬಾಗಿಲಿಗೆ ವೇಗವಾಗಿಯೂ ಮತ್ತು ಸುರಕ್ಷಿತವಾಗಿಯೂ ತಲುಪಿಸುವ ಮೂಲಕ ಇಂಡಿಯಾ ಪೋಸ್ಟ್‌ನ 167 ವರ್ಷಗಳ ತನ್ನ ಪರಂಪರೆಯನ್ನು ಹಿಂದೆಂದಿಗಿಂತಲೂ ಉತ್ತಮವಾಗಿಸಲಿದೆ. ಈ ಪ್ರಗತಿಯನ್ನು ಮುನ್ನಡೆಸಲು ಹೆಮ್ಮೆಪಡುತ್ತೇವೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ರಿಯಲ್ ಟೈಮ್ ಟ್ರ್ಯಾಕಿಂಗ್: ಸ್ಪೀಡ್ ಪೋಸ್ಟ್ ಮೂಲಕ ಕಳಿಸಲಾಗಿರುವ ವಸ್ತು ಎಲ್ಲಿದೆ ಎಂಬುದನ್ನು ರಿಯಲ್ ಟೈಮ್ ಮಾಹಿತಿಯನ್ನು ಪಡೆಯುವ ಅವಕಾಶವನ್ನು ಕೂಡ ಗ್ರಾಹಕರಿಗೆ ನೀಡಲಾಗಿದೆ.
ಸ್ಪೀಡ್ ಪೋಸ್ಟ್ ನೂತನ ದರ
ಸ್ಥಳೀಯವಾಗಿ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲು ಬಯಸುವವರು 50 ಗ್ರಾಂ ವರೆಗಿನ ಪಾರ್ಸೆಲ್‌ಗೆ ₹19 ವೆಚ್ಚ ಭರಿಸಬೇಕು. ಆದರೆ ದೂರದ ಸ್ಥಳಗಳಿಗೆ (2,000 ಕಿ.ಮೀ ಗಿಂತ ಅಧಿಕ) ₹ 47 ಪಾವತಿಸಬೇಕಾಗುತ್ತದೆ.
51 ಗ್ರಾಂ ನಿಂದ 250 ಗ್ರಾಂ ವರೆಗಿನ ಪಾರ್ಸೆಲ್‌ಗೆ ₹ 77 (2,000 ಕಿ.ಮೀ ಗಿಂತ ಹೆಚ್ಚು ದೂರಕ್ಕೆ) ಮತ್ತು ಸ್ಥಳೀಯವಾಗಿ ಇದಕ್ಕೆ ₹ 24 ದರ ನಿಗದಿಪಡಿಸಲಾಗಿದೆ.
251 ಗ್ರಾಂ ನಿಂದ 500 ಗ್ರಾಂ ವರೆಗಿನ ಪಾರ್ಸೆಲ್‌ಗೆ ದೂರವನ್ನು ಅವಲಂಬಿಸಿ ₹ 28 ರಿಂದ ₹ 93 ರವರೆಗೆ ದರ ವಿಧಿಸಲಾಗುತ್ತದೆ ಎಂದು ಭಾರತೀಯ ಅಂಚೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.