ADVERTISEMENT

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2025, 6:02 IST
Last Updated 24 ಸೆಪ್ಟೆಂಬರ್ 2025, 6:02 IST
   

ಬೆಂಗಳೂರು: ಭಾರತದ ಕೃಷಿಯನ್ನು ಮಾನ್ಸೂನ್‌ ಮಾರುತಗಳೊಂದಿಗೆ ಆಡುವ ಜುಜಾಟ ಎಂದು ಕರೆಯಲಾಗುತ್ತದೆ. ವ್ಯತಿರಿಕ್ತ ಹವಾಮಾನದಿಂದಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸುತ್ತದೆ. ಇದರಿಂದಾಗಿ ಪ್ರತಿ ವರ್ಷ ಹೆಚ್ಚಿನ ಪ್ರಮಾಣದ ಬೆಳೆಗಳು ನಾಶವಾಗುತ್ತವೆ. ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮೆ) ಯೋಜನೆಯ ಮೂಲಕ ನಾಶವಾದ ಬೆಳೆಗಳಿಗೆ ವಿಮೆಯನ್ನು ಒದಗಿಸಲಾಗುತ್ತದೆ. 

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕೃಷಿಕರಿಗಾಗಿ ಜಾರಿಗೆ ತರಲಾಗಿದೆ. 2016ರಲ್ಲಿ ಈ ಯೋಜನೆಯು ಆರಂಭವಾಯಿತು. ಪ್ರಕೃತಿ ವಿಕೋಪಗಳಾದ ಬರಗಾಲ, ಅಧಿಕ ಮಳೆ, ಕೀಟ ಹಾಗೂ ರೋಗಗಳ ಭಾದೆ ಹೀಗೆ ಆಕಸ್ಮಿಕವಾಗಿ ಸಂಭವಿಸುವ ಬೆಳೆಹಾನಿಗೆ ವಿಮೆ ನೀಡಿ ರೈತರಿಗಾಗುವ ಆರ್ಥಿಕ ನಷ್ಟವನ್ನು ತಪ್ಪಿಸುತ್ತದೆ. ಇದೊಂದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕರ್ನಾಟಕದಲ್ಲಿ ಈ ಯೋಜನೆಯನ್ನು ಕರ್ನಾಟಕ ಕೃಷಿ ಇಲಾಖೆಯಿಂದ ಜಾರಿ ಮಾಡಲಾಗುತ್ತದೆ.

ಈ ಯೋಜನೆಯು ಕರ್ನಾಟಕದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಾಗಿ ಜಾರಿಗೊಳಿಸಲಾಗುತ್ತದೆ. ಈ ಯೋಜನೆಯಿಂದ ರೈತರಿಗೆ ಇರುವ ಪ್ರಯೋಜನಗಳೇನು? ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು? ಎಂಬ ಮಾಹಿತಿ ಇ‌ಲ್ಲಿದೆ..

ADVERTISEMENT

ಯೋಜನೆಯ ಉದ್ದೇಶಗಳೇನು ?

  • ಪ್ರಕೃತಿ ವಿಕೋಪಗಳು ಹಾಗೂ ರೋಗಗಳಿಂದ ಬೆಳೆಗಳಿಗೆ ಹಾನಿಯಾದಾಗ ಬೆಳೆ ಹಾನಿಗೆ ಪರಿಹಾರವಾಗಿ ನೆರವನ್ನು ನೀಡುವುದು. 

  • ರೈತರ ಆದಾಯವನ್ನು ಸ್ಥಿರಗೊಳಿಸಲು ಮತ್ತು ಕೃಷಿಯಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು.

  • ರೈತರು ಆಧುನಿಕ ಮತ್ತು ನವೀನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.

ಯೋಜನೆಯ ಜಾರಿಮಾಡುವುದು ಹೇಗೆ? 

ಬೆಳೆಗಳು ಹಾಗೂ ಅವು ಫಸಲು ನೀಡುವ ಋತುವಿನ ಆಧಾರದ ಮೇಲೆ ಬೆಳೆಗಳಿ‌ಗೆ ವಿಮೆ ನೀಡಲಾಗುತ್ತದೆ. ಗ್ರಾಮ ಪಂಚಾಯಿಗಳು ಈ ಯೋಜನೆಯ  ಘಟಕಗಳಾಗಿ ಕೆಲಸ ಮಾಡುತ್ತವೆ. ಪಂಚಾಯಿತಿಯ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿನ ನಷ್ಟವನ್ನು ನಿಖರವಾಗಿ ಮೌಲ್ಯಮಾಪನ ಮಾಡುತ್ತಾರೆ.  ಉಪಗ್ರಹ ಚಿತ್ರಣ, ಡ್ರೋನ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಬೆಳೆ ನಷ್ಟವನ್ನು ಮೌಲ್ಯಮಾಪನ ಮಾಡುತ್ತದೆ. ಈ ಮೂಲಕ ರೈತರಿಗೆ ತ್ವರಿತವಾಗಿ ಪರಿಹಾರ ದೊರೆಯುತ್ತದೆ. 

ಈ ಯೋಜನೆಯಿಂದಾಗುವ ಪ್ರಯೋಜನಗಳೇನು?  

ಕೈಗೆಟುಕುವ ಪ್ರೀಮಿಯಂಗಳು: ಖಾರಿಫ್ ಆಹಾರ ಮತ್ತು ಎಣ್ಣೆಬೀಜ ಬೆಳೆಗಳಿಗೆ ರೈತರು ಪಾವತಿಸಬೇಕಾದ ಗರಿಷ್ಠ ಪ್ರೀಮಿಯಂ ಶೇ 2ರಷ್ಟು ಆಗಿರುತ್ತದೆ. ರಬಿ ಆಹಾರ ಮತ್ತು ಎಣ್ಣೆಬೀಜ ಬೆಳೆಗಳಿಗೆ ಇದು ಶೇ 1.5ರಷ್ಟು. ವಾಣಿಜ್ಯ ಅಥವಾ ತೋಟಗಾರಿಕಾ ಬೆಳೆಗಳಿಗೆ ಇದು ಶೇ 5ರಷ್ಟು ಆಗಿರುತ್ತದೆ. ಉಳಿದ ಪ್ರೀಮಿಯಂ ಅನ್ನು ಸರ್ಕಾರವು ಅನುದಾನ ನೀಡುತ್ತದೆ. 
ಈಶಾನ್ಯ ರಾಜ್ಯಗಳು, ಜಮ್ಮು, ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ರೈತರಿಗೆ, ಸರ್ಕಾರವು ಸಂಪೂರ್ಣ ಪ್ರೀಮಿಯಂ ಅನ್ನು ಪಾವತಿಸುತ್ತದೆ.

ಸಮಗ್ರ ವ್ಯಾಪ್ತಿ: ಈ ಯೋಜನೆಯು ನೈಸರ್ಗಿಕ ವಿಕೋಪಗಳು (ಬರ, ಪ್ರವಾಹ), ಕೀಟಗಳು ಮತ್ತು ರೋಗಗಳನ್ನು ಒಳಗೊಳ್ಳುತ್ತದೆ. ಆಲಿಕಲ್ಲು ಮಳೆ ಮತ್ತು ಭೂಕುಸಿತದಂತಹ ಸ್ಥಳೀಯ ಅಪಾಯಗಳಿಂದ ಕೊಯ್ಲಿನ ನಂತರದ ನಷ್ಟಗಳನ್ನು ಒಳಗೊಂಡಿದೆ.

ಸಕಾಲಿಕ ಪರಿಹಾರ: ರೈತರು ಸಾಲದ ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯಲು ಬೆಳೆ ಕಟಾವು ಮಾಡಿದ ಎರಡು ತಿಂಗಳೊಳಗೆ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವ ಗುರಿಯನ್ನು ಹೊಂದಿದೆ.

ತಂತ್ರಜ್ಞಾನ ಆಧಾರಿತ ಅನುಷ್ಠಾನ: ಬೆಳೆ ನಷ್ಟದ ನಿಖರವಾಗಿ ಅಂದಾಜು ಮಾಡಲು ಉಪಗ್ರಹ ಚಿತ್ರಣ, ಡ್ರೋನ್‌ಗಳನ್ನು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುತ್ತದೆ, ಇದರಿಂದ ನಿಖರವಾದ ಪರಿಹಾರ ಪಡೆಯಲು ಸಹಕಾರಿಯಾದೆ. 

ಯಾವಾಗ ಈ ಯೋಜನೆ ಅನ್ವಯವಾಗುತ್ತದೆ? 

ಇಳುವರಿ ನಷ್ಟಗಳು: ನೈಸರ್ಗಿಕವಾಗಿ ಕಾಳ್ಗಿಚ್ಚು, ಬಿರುಗಾಳಿ, ಆಲಿಕಲ್ಲು ಮಳೆ, ಸುಂಟರಗಾಳಿ , ಪ್ರವಾಹ, ಭೂಕುಸಿತ, ಕೀಟಗಳು ಹಾಗೂ ರೋಗಗಳ ಭಾದೆ ಅಪಾಯಗಳ ಅಡಿಯಲ್ಲಿ ಬರುವ ಇಳುವರಿ ನಷ್ಟಗಳಿಗೆ ಸರ್ಕಾರ ಈ ವಿಮೆ ರಕ್ಷಣೆಯನ್ನು ಒದಗಿಸುತ್ತದೆ.

ಕೊಯ್ಲಿನ ನಂತರದ ನಷ್ಪಗಳು: ಸರ್ಕಾರವು ವೈಯಕ್ತಿಕ ಕೃಷಿ ಆಧಾರದ ಮೇಲೆ ಕೊಯ್ಲಿನ ನಂತರದ ನಷ್ಟಗಳಿಗೆ ಪರಿಹಾರವನ್ನು ಒದಗಿಸುತ್ತದೆ. "ಕತ್ತರಿಸಿ ಹರಡುವ" ಸ್ಥಿತಿಯಲ್ಲಿ ಸಂಗ್ರಹಿಸಲಾದ ಬೆಳೆಗಳಿಗೆ ಕೊಯ್ಲು ಮಾಡಿದ ದಿನಾಂಕದಿಂದ 14 ದಿನಗಳವರೆಗೆ ಸರ್ಕಾರವು ವಿಮೆ ರಕ್ಷಣೆಯನ್ನು ನೀಡುತ್ತದೆ.

ಇರಬೇಕಾದ ಅರ್ಹತೆಗಳು ಯಾವುವು?

  • ರಾಜ್ಯದ ಎಲ್ಲಾ ರೈತರು ಅರ್ಹರಾಗಿರುತ್ತಾರೆ. 

  • ರೈತರು ಮಾನ್ಯವಾದ ಮತ್ತು ದೃಢೀಕೃತ ಭೂ ಮಾಲೀಕತ್ವ ಪ್ರಮಾಣಪತ್ರ ಹೊಂದಿರಬೇಕು.

  • ವಿಮೆ ಮಾಡಿಸಿದ ಭೂಮಿಯಲ್ಲಿ ರೈತನು ಸಾಗುವಳಿದಾರನಾಗಿರಬೇಕು.

  • ರೈತರು ನಿಗದಿತ ಸಮಯದೊಳಗೆ ವಿಮೆ ರಕ್ಷಣೆಗೆ ಅರ್ಜಿ ಸಲ್ಲಿಸಬೇಕು. (ಬಿತ್ತನೆ ಪ್ರಾರಂಭದ 2 ವಾರಗಳ ಮೊದಲು)

  • ರೈತರು ಅದೇ ಬೆಳೆ ನಷ್ಟಕ್ಕೆ ಬೇರೆ ಯಾವುದೇ ಮೂಲದಿಂದ ಪರಿಹಾರವನ್ನು ಪಡೆದಿರಬಾರದು.

ಯಾವಾಗ ಈ ಯೋಜನೆಯು ಅನ್ವಯವಾಗುವುದಿಲ್ಲ?

  • ಯೋಜನೆಗೆ ಒಳಪಟ್ಟಿರದ ಪ್ರದೇಶಗಳಲ್ಲಿನ ಬೆಳೆ ನಷ್ಟವನ್ನು ಸಾಮಾನ್ಯವಾಗಿ ಒಳಗೊಳ್ಳಲಾಗುವುದಿಲ್ಲ. ಯೋಜನೆಗೆ ಒಳಪಟ್ಟ ಪ್ರದೇಶಗಳ ರೈತರು ಮಾತ್ರ ಪರಿಹಾರವನ್ನು ಪಡೆಯಬುದಾಗಿದೆ. 

  • ಬೆಳೆ ಋತುವಿನಿಂದಾಚೆಗೆ ಸಂಭವಿಸುವ ಹಾನಿಗೆ ವಿಮೆ ಇರುವುದಿಲ್ಲ.

  • ಶಿಫಾರಸ್ಸು ಮಾಡಲಾದ ಕೃಷಿ ಪದ್ಧತಿಗಳನ್ನು ಪಾಲಿಸದಿರುವುದು ಅಥವಾ ಬೆಳೆಯನ್ನು ಸಮರ್ಪಕವಾಗಿ ರಕ್ಷಿಸುವ ವಿಫಲತೆಯಿಂದ ಉಂಟಾಗುವ ನಷ್ಟಗಳನ್ನು ನೀಡಲಾಗುವುದಿಲ್ಲ. 

  • ನಿಗದಿಪಡಿಸಿದಷ್ಟು ಪ್ರೀಮಿಯಂ ಮೊತ್ತವನ್ನು ಪಾವತಿಸದಿರುವ ರೈತರು ವಿಮೆ ಪಡೆಯಲು ಅರ್ಹರಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ? 

ಮೊದಲಿಗೆ ಇಲಾಖೆ ಅಧಿಕೃತ‌ ಅಂತರ್ಜಾಲ ತಾಣವಾದ https://www.samrakshane.karnataka.gov.in/ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಕೃಷಿ ಇಲಾಖೆಯಲ್ಲಿ ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.