
ಅರುಣ್
ಚಿತ್ರ: ಇನ್‌ಸ್ಟಾಗ್ರಾಂ
ಈ ಸಾಮಾಜಿಕ ಜಾಲತಾಣ ಅನ್ನೋದೇ ಹಾಗೇ. ಯಾರು, ಯಾವಾಗ, ಹೇಗೆ ಸುದ್ದಿಯಾಗುತ್ತಾರೆಂದು ಹೇಳೋದಕ್ಕೆ ಕಷ್ಟ. ಆಕಸ್ಮಿಕವಾಗಿ ಸಾಮಾಜಿಕ ಮಧ್ಯಮ ಬಳಕೆದಾರರಿಗೆ ಇಷ್ಟ ಆಯ್ತು ಅಂದರೆ ಎಲ್ಲಿ ನೋಡಿದರೂ ಅದರದ್ದೇ ಹಾವಳಿ ಇರುತ್ತದೆ. ಅದರಲ್ಲೂ ರೀಲ್ಸ್, ಕಂಟೆಂಟ್ ಕ್ರಿಯೇಟರ್‌ಗಳಿಗೆ ಹಬ್ಬ ರೀತಿಯಾಗಿರುತ್ತದೆ. ಈಗ ನಾವೆಲ್ಲಾ ಯಾವುದೇ ರೀಲ್ಸ್ ನೋಡಿದರೂ ನಮಗೆ ಕಾಣಸಿಗುವುದೇ ಈ ಹುಡುಗ. ಕೈಯಲ್ಲಿ ಟೀ ಕಪ್ ಹಿಡಿದು, ನಿಸ್ವಾರ್ಥ ನಗುವನ್ನು ಬೀರಿದಾತನ ಸ್ಫೂರ್ತಿದಾಯಕ ಕಥೆ ಇದು.
ಅರುಣ್
ಕೆಲವು ತಿಂಗಳುಗಳಿಂದ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಹಲವಾರು ಟ್ರೋಲ್ ಪೇಜ್‌ಗಳಲ್ಲಿ ಈ ಹುಡುಗನ ಮೀಮ್ ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿರುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ನಗುವುದು ಚೆನ್ನಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಹುಡುಗನ ನಗು ಅದೆಷ್ಟೊ ಕೋಟ್ಯಾಂತರ ಜನರ ಗಮನ ಸೆಳೆದಿದೆ. ಈಗ ಅದೇ ನಗುವಿನಿಂದ ಹುಡುಗ ತನ್ನ ಜೀವನವನ್ನು ಕಟ್ಟಿಕೊಂಡಿದ್ದಾನೆ ಎಂದರೆ ನಂಬಲು ಸಾಧ್ಯವೇ?
ಇತ್ತೀಚೆಗೆ ಈ ಹುಡುಗ ಸಂದರ್ಶನವೊಂದರಲ್ಲಿ ತನ್ನ ಜೀವನದ ಬಗ್ಗೆ ಹೇಳಿಕೊಂಡಿದ್ದ. ತನ್ನ ನಗುವಿನಿಂದಲೇ ಖ್ಯಾತಿ ಪಡೆದುಕೊಂಡ ಹುಡುಗನ ಹೆಸರು ಅರುಣ್. ಈತ ತೆಲಂಗಾಣದ ಮಾಳಪಲ್ಲಿ ಗ್ರಾಮದವನಾಗಿದ್ದಾನೆ. ಕಡು ಬಡತನದಲ್ಲಿ ಜನಿಸಿದ ಈತ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ. ಅತಿಯಾದ ಬಡತನದಿಂದ 4ನೇ ತರಗತಿಯ ಬಳಿಕ ಶಾಲೆಗೆ ಹೋಗುವುದನ್ನು ಬಿಟ್ಟು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ. ಕಷ್ಟ ಎನ್ನುವುದು ಚಿಕ್ಕ ವಯಸ್ಸಿನಲ್ಲಿನಿಂದಲೇ ಅವನ ಬೆನ್ನೇರಿತ್ತು. ಆದರೂ ಆತ ಛಲದಿಂದ ಕೆಲಸ ಮಾಡುತ್ತಿದ್ದ. ಒಂದು ದಿನ ಅವನ ಚಾಲಕ ನಗೆಚಟಾಕಿ ಹಾರಿಸಿದ. ಆಗ ಕೈಯಲ್ಲಿ ಚಹಾ ಹಿಡಿದುಕೊಂಡಿದ್ದ ಅರುಣ್ ಚಾಲಕನ ನಗೆಚಟಾಕಿಗೆ ಜೋರಾಗಿ ನಕ್ಕಿದ್ದಾನೆ. ಆಗ ಚಾಲಕ ಅದನ್ನು ಸೆರೆಹಿರಿದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದನು. ಈಗ ಆ ಒಂದೇ ಒಂದು ನಗು ಅವನನ್ನು ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ.
ನಂತರ ಅರುಣ್, ನೆಹರು ಸೇರಿದಂತೆ ಅನೇಕರ ಬೆಂಬಲದೊಂದಿಗೆ ಶಿಕ್ಷಣವನ್ನು ಮುಂದುವರೆಸಿ 10ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಒಂದೇ ಒಂದು ನಗು, ಒಂದು ವಿಡಿಯೊ ಆತನ ಇಡೀ ಜೀವನವನ್ನೇ ಬದಲಿಸಿತು. ಹೀಗೆ ಜೀವನದಲ್ಲಿ ಬಂದ ಎರಡನೇ ಅವಕಾಶಗಳನ್ನು ಎಂದಿಗೂ ಕೈ ಚೆಲ್ಲಬೇಡಿ ಎಂದು ಸಾರಿ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.