1983ರ ವಿಶ್ವಕಪ್ ಟ್ರೋಫಿ ಪಡೆಯುತ್ತಿರುವ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ (ಸಂಗ್ರಹ ಚಿತ್ರ). ಒಳಚಿತ್ರದಲ್ಲಿ ಸಚಿನ್ ತೆಂಡೂಲ್ಕರ್ (ಪಿಟಿಐ ಚಿತ್ರ)
ಜೂನ್ 25 – ಭಾರತೀಯ ಕ್ರಿಕೆಟ್‌ಗೆ ತಿರುವು ನೀಡಿದ ದಿನವಿದು.
ಟೀಂ ಇಂಡಿಯಾ ಬರೋಬ್ಬರಿ 42 ವರ್ಷಗಳ ಹಿಂದೆ ಇದೇ ದಿನ (1983ರ ಜೂನ್ 25) ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.
ಏಕದಿನ ವಿಶ್ವಕಪ್‌ನ ಮೊದಲ ಎರಡು (1975, 1979ರ) ಆವೃತ್ತಿಗಳನ್ನು ಗೆದ್ದು, ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದ ವೆಸ್ಟ್ ಇಂಡೀಸ್ ತಂಡದ ಕನಸನ್ನು ಕಪಿಲ್ ದೇವ್ ನಾಯಕತ್ವದ ಭಾರತ ನುಚ್ಚುನೂರು ಮಾಡಿತ್ತು.
ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 43 ರನ್‌ಗಳ ಜಯ ಸಾಧಿಸಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತ್ತು.
ಫೈನಲ್‌ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಭಾರತ, 54.4 ಓವರ್‌ಗಳಲ್ಲಿ ಕೇವಲ 183 ರನ್ ಗಳಿಸಿ ಆಲೌಟಾಗಿತ್ತು. ಎಸ್. ಶ್ರೀಕಾಂತ್ 38, ಮೋಹಿಂದರ್ ಅಮರನಾಥ್ 26, ಸಂದೀಪ್ ಪಾಟಿಲ್ 27 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದರು. ಸುನೀಲ್ ಗಾವಸ್ಕರ್ (2) ಹಾಗೂ ನಾಯಕ ಕಪಿಲ್ (15) ವೈಫಲ್ಯ ಅನುಭವಿಸಿದ್ದರು.
ಸಾಧಾರಣ ಗುರಿಯನ್ನು ಸುಲಭವಾಗಿ ತಲುಪುವ ಲೆಕ್ಕಾಚಾರದಲ್ಲಿದ್ದ ವಿಂಡೀಸ್ ಪಡೆ, ಭಾರತದ ಸಂಘಟಿತ ದಾಳಿ ಎದುರು ಕಂಗೆಟ್ಟಿತ್ತು. ದಿಗ್ಗಜ ಕ್ಲೈವ್ ಲಾಯ್ಡ್ ಬಳಗ 52 ಓವರ್ ಆಡಿದರೂ 140 ರನ್ ಮಾತ್ರ ಗಳಿಸಿ ಸರ್ವಪತನ ಕಂಡಿತ್ತು.
ಮದನ್ ಲಾಲ್ 31 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರೆ, ಅಮರನಾಥ್ ಕೇವಲ 12ರನ್‌ಗೆ 3 ವಿಕೆಟ್ ಪಡೆದಿದ್ದರು. ಉಳಿದಂತೆ ಬಲ್ವಿಂದರ್ ಸಂದು ಎರಡು ಹಾಗೂ ಕಪಿಲ್ ದೇವ್, ರೋಜರ್ ಬಿನ್ನಿ ಒಂದೊಂದು ವಿಕೆಟ್ ಹಂಚಿಕೊಂಡಿದ್ದರು.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿದ್ದ ಅಮರನಾಥ್ ಪಂದ್ಯಶ್ರೇಷ್ಠ ಎನಿಸಿದ್ದರು.
ಈ ಗೆಲುವು ವಿಶ್ವ ಕ್ರಿಕೆಟ್ ಅನ್ನೇ ಅಚ್ಚರಿಗೊಳಿಸಿತ್ತು. ಅಷ್ಟೇ ಅಲ್ಲ, ಭಾರತದಲ್ಲಿ ಕ್ರಿಕೆಟ್ ಜನಪ್ರಿಯಗೊಳ್ಳಲು ಕಾರಣವಾಯಿತು.
'ನನಗಾಗ 10 ವರ್ಷ'
ಈ ಐತಿಹಾಸಿಕ ವಿಜಯಕ್ಕೆ 42 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್, '1983ರ ಈ ದಿನ ಭಾರತ ವಿಶ್ವಕಪ್ ಗೆದ್ದಾಗ ನನಗೆ ಕೇವಲ 10 ವರ್ಷವಾಗಿತ್ತು. ಆ ಕ್ಷಣ, ಕನಸಿನ ಕಿಡಿ ಹೊತ್ತಿಸಿತ್ತು ಮತ್ತು ಆ ಕನಸೇ ನನ್ನ ಪಯಣವಾಯಿತು' ಎಂದು ಬರೆದುಕೊಂಡಿದ್ದಾರೆ.
ಆ ತಂಡದಲ್ಲಿದ್ದ ಆಟಗಾರರ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.