ಆರ್. ಅಶ್ವಿನ್ ಹಾಗೂ ಜಸ್‌ಪ್ರೀತ್ ಬೂಮ್ರಾ
ರಾಯಿಟರ್ಸ್, ಪಿಟಿಐ ಚಿತ್ರ
ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ, ವೇಗಿ ಜಸ್‌ಪ್ರೀತ್ ಬೂಮ್ರಾ ಹಾಗೂ ಸ್ಪಿನ್ನರ್ ಆರ್. ಅಶ್ವಿನ್ 2024ರಲ್ಲಿ ವಿಶೇಷ ದಾಖಲೆ ಬರೆಯುವತ್ತ ಹೆಜ್ಜೆ ಹಾಕಿದ್ದಾರೆ. ಈ ವರ್ಷ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳೆನಿಸಿರುವ ಈ ಇಬ್ಬರು, 50 ವಿಕೆಟ್‌ಗಳ ಸನಿಹದಲ್ಲಿದ್ದಾರೆ.
ಈ ವರ್ಷ ತಲಾ 10 ಪಂದ್ಯಗಳ 20 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಬೂಮ್ರಾ, ಅಶ್ವಿನ್ ಕ್ರಮವಾಗಿ 49 ಮತ್ತು 46 ವಿಕೆಟ್ ಕಬಳಿಸಿದ್ದಾರೆ.
ಬೂಮ್ರಾ 15.24ರ ಸರಾಸರಿಯಲ್ಲಿ ವಿಕೆಟ್ ದೋಚಿದ್ದರೆ, ಅಶ್ವಿನ್ 26.69ರ ಸರಾಸರಿಯಲ್ಲಿ ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ. ಇಬ್ಬರೂ ತಲಾ ಮೂರು ಸಲ 5 ವಿಕೆಟ್ ಗೊಂಚಲು ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್‌ನ ಶೋಯಬ್ ಬಷೀರ್ (13 ಪಂದ್ಯ, 45 ವಿಕೆಟ್), ಟೀಂ ಇಂಡಿಯಾದ ರವೀಂದ್ರ ಜಡೇಜ (10 ಪಂದ್ಯ, 44 ವಿಕೆಟ್), ಇಂಗ್ಲೆಂಡ್‌ನ ಗಸ್ ಅಕಿನ್‌ಸನ್ (9 ಪಂದ್ಯ, 43 ವಿಕೆಟ್) ನಂತರದ ಸ್ಥಾನಗಳಲ್ಲಿ ಇದ್ದಾರೆ.
ಈ ವರ್ಷ ಐವತ್ತರ ಗಡಿ ದಾಟಲು ಮೇಲಿನ ಐವರಿಗೂ ಅವಕಾಶವಿದೆ. ಬೂಮ್ರಾ, ಅಶ್ವಿನ್ ಮತ್ತು ಜಡೇಜ ಇನ್ನೂ ಮೂರು ಪಂದ್ಯಗಳನ್ನು ಆಡಲಿದ್ದಾರೆ. ಬಷೀರ್ ಹಾಗೂ ಅಕಿನ್‌ಸನ್ ಅವರೂ ಎರಡು ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಸಾಲಿನಲ್ಲಿ ಆಸ್ಟ್ರೇಲಿಯಾದ ಶೇನ್ ವಾರ್ನ್ ಮತ್ತು ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ ಅವರು ಅಗ್ರ ಸ್ಥಾನಗಳಲ್ಲಿ ಇದ್ದಾರೆ. ವಾರ್ನ್, 2005ರಲ್ಲಿ ಕೇವಲ 15 ಪಂದ್ಯಗಳ 30 ಇನಿಂಗ್ಸ್‌ಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದರು. ಮುತ್ತಯ್ಯ 2006ರಲ್ಲಿ 11 ಪಂದ್ಯಗಳ 21 ಇನಿಂಗ್ಸ್‌ಗಳಲ್ಲಿ 90 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.