ADVERTISEMENT

ಭಾರತ–ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯ ಇಂದು: ಒತ್ತಡದಲ್ಲಿ ಶಿಖರ್ ಬಳಗ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 18:52 IST
Last Updated 26 ನವೆಂಬರ್ 2022, 18:52 IST
ಶಿಖರ್ ಧವನ್
ಶಿಖರ್ ಧವನ್   

ಹ್ಯಾಮಿಲ್ಟನ್ (ಪಿಟಿಐ): ಕಿವೀಸ್ ನೆಲದಲ್ಲಿ ಏಕದಿನ ಸರಣಿ ಜಯದ ಕನಸು ಜೀವಂತವಾಗಿ ಉಳಿಯಬೇಕಾದರೆ ಭಾರತ ತಂಡವು ಭಾನುವಾರ ನಡೆಯುವ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ.

ಶುಕ್ರವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಟಾಮ್ ಲಥಾಮ್ ಮತ್ತು ಕೇನ್ ವಿಲಿಯಮ್ಸನ್ ಅವರ ದ್ವಿಶತಕದ ಜೊತೆಯಾಟದಿಂದಾಗಿ ಆತಿಥೇಯ ನ್ಯೂಜಿಲೆಂಡ್ ಜಯಭೇರಿ ಬಾರಿಸಿತ್ತು. ಶಿಖರ್ ಧವನ್ ನಾಯಕತ್ವದ ಭಾರತ ತಂಡವು ಕೊಟ್ಟಿದ್ದ ದೊಡ್ಡ ಮೊತ್ತದ ಗುರಿಯನ್ನು ಸುಲಭವಾಗಿ ತಲುಪಿತ್ತು. ಅದರಿಂದಾಗಿ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತ್ತು.

ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆಯಿಂದಾಗಿ ದೊಡ್ಡ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಉಮ್ರಾನ್ ಮಲಿಕ್ ಮತ್ತು ಆರ್ಷದೀಪ್ ಸಿಂಗ್ ಅವರಿನ್ನೂ ಪಳಗಬೇಕು. ಉಮ್ರಾನ್ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಆರ್ಷದೀಪ್ ದುಬಾರಿಯಾಗಿದ್ದರು. ಶಾರ್ದೂಲ್ ಠಾಕೂರ್, ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಯಜುವೇಂದ್ರ ಚಾಹಲ್ ಟಿ20 ಮಾದರಿಯ ಲಯದಿಂದ ಹೊರಬಂದು ಏಕದಿನ ಮಾದರಿಗೆ ತಕ್ಕ ಬೌಲಿಂಗ್ ಮಾಡಿದರೆ ಗೆಲುವು ಒಲಿಯಬಹುದು.

ADVERTISEMENT

ಆದರೆ ಎರಡನೇ ಪಂದ್ಯವನ್ನೂ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಛಲದಲ್ಲಿ ಕೇನ್ ವಿಲಿಯಮ್ಸನ್ ಬಳಗ ಇದೆ. ಟಿ20 ಸರಣಿಯಲ್ಲಿ ಸೋತಿರುವ ಮುಯ್ಯಿ ತೀರಿಸಿಕೊಳ್ಳುವ ಅವಕಾಶವೂ ತಂಡಕ್ಕೆ ಇದೆ. ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರೂ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟಗಾರರು ಇರುವುದರಿಂದ ಬ್ಯಾಟಿಂಗ್ ಬಲಿಷ್ಠವಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ಟಿಮ್ ಸೌಥಿ ಹಾಗೂ ಲಾಕಿ ಫರ್ಗ್ಯುಸನ್ ಅವರು ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 7

ನೇರಪ್ರಸಾರ: ಅಮೆಜಾನ್ ಪ್ರೈಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.