ADVERTISEMENT

ಭಾರತದ ಮುಡಿಗೆ ಅಂಧರ ವಿಶ್ವಕಪ್: ಹ್ಯಾಟ್ರಿಕ್‌ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2022, 3:05 IST
Last Updated 18 ಡಿಸೆಂಬರ್ 2022, 3:05 IST
ಭಾರತ ಕ್ರಿಕೆಟ್‌ ತಂಡದ ಆಟಗಾರರ ಸಂಭ್ರಮ
ಭಾರತ ಕ್ರಿಕೆಟ್‌ ತಂಡದ ಆಟಗಾರರ ಸಂಭ್ರಮ    

ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ನಡೆಯುವ ಕ್ರಿಕೆಟ್ ಚಟುವಟಿಕೆಗಳಿಗೂ ಶನಿವಾರ ನಡೆದ ಪಂದ್ಯಕ್ಕೂ ಅಪಾರ ವ್ಯತ್ಯಾಸವಿತ್ತು. ಇಲ್ಲಿ ಸೋಲು–ಗೆಲುವುಗಳ ಲೆಕ್ಕಾಚಾರಕ್ಕಿಂತಲೂ ಕ್ರೀಡಾಂಗಣದಲ್ಲಿ ತಮ್ಮ ಸಾಮರ್ಥ್ಯ ಮೀರಿ ಆಡುತ್ತಿದ್ದವರ ಛಲ ಮತ್ತು ಆಸಕ್ತಿಗೆ ಎಲ್ಲರೂ ಮನಸೋತರು.

ಹೌದು; ಇಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ ಫೈನಲ್‌ ಪಂದ್ಯ ಇಂತಹದೊಂದು ವಿಶಿಷ್ಟ ಅನುಭವ ನೀಡಿತು. ಈ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾ ವಿರುದ್ಧ 120 ರನ್‌ಗಳಿಂದ ಜಯಿಸಿತು. ಸತತ ಮೂರನೇ ವಿಶ್ವಕಪ್ ವಿಜಯ ಸಾಧಿಸಿತು.

ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸುನೀಲ್ ರಮೇಶ್ (136; 63ಎಸೆತ, 4X23, 1X6) ಮತ್ತು ಅಜಯ್ ಕುಮಾರ್ ರೆಡ್ಡಿ (100; 50ಎ, 4X18) ಗಳಿಸಿದ ಶತಕಗಳ ಬಲದಿಂದ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 277 ರನ್ ಗಳಿಸಿತು. ಆದರೆ ಬಾಂಗ್ಲಾ ದೇಶ ತಂಡವು ಈ ಗುರಿ ಮುಟ್ಟುವಲ್ಲಿ ವಿಫಲವಾಯಿತು. ತಂಡದ ಆಲ್‌ರೌಂಡರ್ ಸಲ್ಮಾನ್ (77; 66ಎ, 4X5) ಅರ್ಧಶತಕ ಗಳಿಸಿದರು. ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 157 ರನ್‌ ಗಳಿಸಿ ಸೋಲನುಭವಿಸಿತು.

ADVERTISEMENT

ಕಿಣಿ..ಕಿಣಿ.. ಸದ್ದು ಮಾಡುತ್ತ ಬರುವ ಚೆಂಡನ್ನು ಶಬ್ದದ ಮೂಲಕ ಗುರುತಿಸಿ ಹೊಡೆಯುವ ಬ್ಯಾಟರ್‌ಗಳು, ಸದ್ದು ಮಾಡುತ್ತ ಸಾಗುವ ಚೆಂಡನ್ನು ಹಿಡಿದು ಥ್ರೋ ಮಾಡುವ ಫೀಲ್ಡರ್‌ಗಳ ಸಾಮರ್ಥ್ಯಕ್ಕೆ ನೋಡುಗರು ಬೆರಗಾದರು.ಅಂಧರ ಕ್ರಿಕೆಟ್ ನಿಯಮದಂತೆ (4–4–3) ಉಭಯ ತಂಡಗಳನ್ನು ಕಣಕ್ಕಿಳಿಸಲಾಗಿತ್ತು. ಪ್ರತಿ ತಂಡದ ಹನ್ನೊಂದು ಜನರಲ್ಲಿ 4 ಮಂದಿ ಪೂರ್ಣ ಅಂಧತ್ವ(ಬಿ1) , 4 ಜನ ಭಾಗಶಃ ಅಂಧತ್ವ ಅಥವಾ ಮೂರು ಮೀಟರ್‌ನಷ್ಟು ದೂರ ನೋಡುವ ಶಕ್ತಿ (ಬಿ2) ಹಾಗೂ ಭಾಗಶಃ ಅಂಧತ್ವ ಅಥವಾ 5 ಮೀಟರ್ ದೂರದವರೆಗೂ ನೋಡುವ ಶಕ್ತಿಯಿರುವವರು (ಬಿ3) ಇದ್ದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 277 (ಸುನೀಲ್ ರಮೇಶ್ 136, ಅಜಯಕುಮಾರ್ ರೆಡ್ಡಿ 100, ಸಲ್ಮಾನ್ 41ಕ್ಕೆ2) ಬಾಂಗ್ಲಾದೇಶ: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 157 (ಸಲ್ಮಾನ್ 77, ಅಜಯಕುಮಾರ್ ರೆಡ್ಡಿ 12ಕ್ಕೆ1, ಲಲಿತ್ ಮೀನಾ 49ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ120 ರನ್‌ಗಳ ಜಯ ಮತ್ತು ವಿಶ್ವಕಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.