ADVERTISEMENT

ಚೆಂಡು ಪುಟಿದೇಳದ ಪಿಚ್‌ನಲ್ಲಿ ಅಭ್ಯಾಸ ನಡೆಸಿ ಖುಷಿ ಕಂಡ ಎಬಿ ಡಿವಿಲಿಯರ್ಸ್

ಪಿಟಿಐ
Published 31 ಆಗಸ್ಟ್ 2020, 12:04 IST
Last Updated 31 ಆಗಸ್ಟ್ 2020, 12:04 IST
ಎಬಿ ಡಿವಿಲಿಯರ್ಸ್ –ಪಿಟಿಐ ಚಿತ್ರ
ಎಬಿ ಡಿವಿಲಿಯರ್ಸ್ –ಪಿಟಿಐ ಚಿತ್ರ   

ದುಬೈ/ಅಬುಧಾಬಿ: ಚೆಂಡು ಪುಟಿದೇಳದ ಪಿಚ್‌ನಲ್ಲಿ ಅಭ್ಯಾಸ ಮಾಡುವ ಮುನ್ನ ಆತಂಕ ಕಾಡಿತ್ತು. ಆದರೆ ಅಭ್ಯಾಸ ಮುಗಿದ ನಂತರ ಖುಷಿಯಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ 13ನೇ ಆವೃತ್ತಿಗಾಗಿ ಮೊದಲ ಬಾರಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ನಂತರ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಅವರು ಈ ವಿಷಯ ಹೇಳಿದ್ದಾರೆ.

ಕೊರೊನಾ ಹಾವಳಿಯಿಂದಾಗಿ ಐದು ತಿಂಗಳು ಕಣಕ್ಕೆ ಇಳಿಯದೇ ಇರುವ 36 ವರ್ಷದ ಡಿವಿಲಿಯರ್ಸ್ ‘ಇಲ್ಲಿ ಅಭ್ಯಾಸ ಮಾಡುವುದು ಸವಾಲಾಗಿತ್ತು. ಬ್ಯಾಟಿಂಗ್‌ನ ಸಾಮಾನ್ಯ ನಿಯಮಗಳನ್ನು ಪಾಲಿಸಿದೆ. ಚೆಂಡನ್ನು ಸೂಕ್ಷ್ಮವಾಗಿ ಗಮನಿಸಿ ಎದುರಿಸಿದೆ. ಕೊನೆಯಲ್ಲಿ ಖುಷಿ ನೀಡುವ ಕೆಲವು ಶಾಟ್‌ಗಳನ್ನು ಆಡಲು ಸಾಧ್ಯವಾಯಿತು ಎಂದು ವಿಕೆಟ್ ಕೀಪಿಂಗ್ ಕೂಡ ಮಾಡಿದ ಅವರು ಹೇಳಿದರು.

ಯುಎಇಗೆ ತಲುಪಿದ ನಂತರ ಆರು ದಿನ ಕ್ವಾರಂಟೈನ್‌ನಲ್ಲಿದ್ದ ಡಿವಿಲಿಯರ್ಸ್ ಮೂರು ಕೋವಿಡ್ ಪರೀಕ್ಷೆಗೆ ಒಳಗಾದ ನಂತರ ನೆಟ್ಸ್‌ಗೆ ಇಳಿದಿದ್ದರು. ವೇಗದ ಬೌಲರ್ ಉಮೇಶ್ ಯಾದವ್, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಮತ್ತು ಬ್ಯಾಟ್ಸ್‌ಮನ್ ಗುರುಕೀರತ್ ಸಿಂಗ್ ಕೂಡ ಅಭ್ಯಾಸ ಮಾಡಿದರು. ಕ್ವಾರಂಟೈನ್ ಅವಧಿ ಮುಗಿದ ನಂತರ ತಂಡವು ಶನಿವಾರ ಪೂರ್ಣಪ್ರಮಾಣದಲ್ಲಿ ಅಭ್ಯಾಸ ಮಾಡಿತ್ತು.

ADVERTISEMENT

'ದೀರ್ಘಕಾಲದ ನಂತರ ಆಡಲು ಸಿದ್ಧವಾಗಿರುವ ಆಟಗಾರರನ್ನು ಪ್ರತಿಯೊಂದು ಹಂತದಲ್ಲೂ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಹಂತಗಳಲ್ಲೂ ಜಾಗರೂಕರಾಗಿದ್ದೇವೆ ಎಂದು ತಂಡದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಶಂಕರ್ ಬಸು ಹೇಳಿದರು. ನಾಯಕ ವಿರಾಟ್ ಕೊಹ್ಲಿ, ವೇಗಿ ಡೇಲ್ ಸ್ಟೇಯ್ನ, ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ನದೀಮ್ ಕೂಡ ಮೊದಲ ಅವಧಿಯಲ್ಲಿ ಅಭ್ಯಾಸ ಮಾಡಿದರು.

‘ಮೈಕ್ ಹಾರ್ನ್ ಮಾತು ಕೇಳಿ ಭರವಸೆ ಮೂಡಿದೆ’

ಮೈಕ್ ಹಾರ್ನ್ ಅವರ ಉತ್ತೇಜನದ ಮಾತುಗಳನ್ನು ಕೇಳಿದ ನಂತರ ಆತಂಕ ದೂರವಾಗಿ ಭರವಸೆ ಮೂಡಿದೆ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಹೇಳಿದ್ದಾರೆ. 2011ರಲ್ಲಿ ವಿಶ್ವಕಪ್ ಕ್ರಿಕೆಟ್‌ನ ಪ್ರಶಸ್ತಿ ಗೆದ್ದ ಭಾರತ ತಂಡ ಮತ್ತು 2014ರಲ್ಲಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದ ಜರ್ಮನಿ ತಂಡದೊಂದಿಗೆ ಮೈಕ್ ಇದ್ದರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ಕೋಲ್ಕತ್ತ ನೈಟ್ ರೈಡರ್ಸ ತಂಡದೊಂದಿಗೆ ಇದ್ದಾರೆ.

‘ಕೆಕೆಆರ್ ತಂಡವನ್ನು ಸೇರುವ ಮೊದಲೇ ಇನ್‌ಸ್ಟಾಗ್ರಾಮ್‌ನಲ್ಲಿ ನಾನು ಮೈಕ್ ಹಾರ್ನ್ ಅವರನ್ನು ಹಿಂಬಾಲಿಸುತ್ತಿದ್ದೆ. ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಹಾರ್ನ್ ಅವರು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ನೋಡಿ ಅಚ್ಚರಿಯಾಗಿದೆ. ವೇಗದ ಬೌಲರ್‌ಗಳನ್ನು ಎದುರಿಸಲು ಸಣ್ಣ ವಯಸ್ಸಿನಲ್ಲೇ ಆತಂಕವಾಗುತ್ತಿತ್ತು. ಆದರೆ ಈಗ ಎಲ್ಲವೂ ಸರಿಹೋಗಿದೆ’ ಎಂದು ಅವರು ಹೇಳಿರುವುದಾಗಿ ಕೆಕೆಆರ್‌ಡಾಟ್ಇನ್‌ನಲ್ಲಿ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.