
ಅಭಿಷೇಕ್ ಶರ್ಮಾ
ಗುವಾಹಟಿ: ನ್ಯೂಜಿಲೆಂಡ್ ವಿರುದ್ಧ ಇಲ್ಲಿ ಮುಕ್ತಾಯಗೊಂಡ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸುಲಭವಾಗಿ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳು ಬಾಕಿ ಇರುವಂತೆ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಸಿಡಿಸಿದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದರು.
ಅಭಿಷೇಕ್ ಶರ್ಮಾ ಅವರು 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುತ್ತಿದ್ದಂತೆ ಭಾರತದ ಪರ ಎರಡನೇ ಅತೀ ವೇಗದ ಅರ್ಧಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಅಗ್ರಸ್ಥಾನದಲ್ಲಿ ಮಾಜಿ ಆಟಗಾರ ಯುವರಾಜ್ ಸಿಂಗ್ ಇದ್ದಾರೆ.
2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದ ಯುವರಾಜ್ ಸಿಂಗ್ ಅವರು, ಅದೇ ಪಂದ್ಯದಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಅದು, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂಡಿಬಂದ ಅತೀ ವೇಗದ ಅರ್ಧಶತಕವಾಗಿದೆ.
ವೇಗದ ಅರ್ಧಶತಕ ಸಿಡಿಸಿದ ಅಗ್ರ 4 ಬ್ಯಾಟರ್‌ಗಳು
ಯುವರಾಜ್ ಸಿಂಗ್– 12ಎಸೆತ (ಭಾರತ) ಇಂಗ್ಲೆಂಡ್ ವಿರುದ್ಧ
ಜಾನ್ ಫ್ರೈಲಿಂಕ್– 13 ಎಸೆತ (ನಮೀಬಿಯಾ) ಜಿಂಬಾಂಬ್ವೆ ವಿರುದ್ಧ
ಅಭಿಷೇಕ್ ಶರ್ಮಾ –14 ಎಸೆತ (ಭಾರತ) ನ್ಯೂಜಿಲೆಂಡ್ ವಿರುದ್ಧ
ಕಾಲಿನ್ ಮನ್ರೋ – 14 ಎಸೆತ (ದಕ್ಷಿಣ ಆಫ್ರಿಕಾ) ಶ್ರೀಲಂಕಾ ವಿರುದ್ಧ
ಒಟ್ಟಾರೆಯಾಗಿ ಅಭಿಷೇಕ್ ಶರ್ಮಾ ಅವರು 20 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 20 ಎಸೆತಗಳಲ್ಲಿ 68 ರನ್ ಸಿಡಿಸಿ ಅಜೇಯರಾಗಿ ಉಳಿದರು. ಭಾರತ ಇನ್ನೂ 60 ಎಸೆತಗಳು ಬಾಕಿ ಇರುವಂತೆ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.
ಅಭಿಷೇಕ್ ಬ್ಯಾಟಿಗ್‌ಗೆ ಯುವರಾಜ್ ಹೇಳಿದ್ದು
ಅಭಿಷೇಕ್ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುತ್ತಿದ್ದಂತೆ, ಎಕ್ಸ್ ಮೂಲಕ ಪೋಸ್ಟ್ ಹಂಚಿಕೊಂಡಿರುವ ಯುವರಾಜ್ ಸಿಂಗ್ ಅವರು. ‘ನಿಮ್ಮಿಂದ 12 ಎಸೆತಗಲ್ಲಿ 50 ರನ್ ಸಿಡಿಸಲು ಇನ್ನೂ ಸಾಧ್ಯವಾಗಿಲ್ಲವೇ? ಉತ್ತಮವಾಗಿ ಆಡಿದಿರಿ, ಹೀಗೆ ಮುಂದುವರೆಯಿರಿ’ ಎಂದು ಅಭಿಷೇಕ್ ಶರ್ಮಾ ಅವರನ್ನು ಟ್ಯಾಗ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.