ವಿಕೆಟ್ ಪಡೆದ ಸಂಭ್ರಮದಲ್ಲಿ ಬಾಂಗ್ಲಾದೇಶ ಆಟಗಾರರು
ಚಿತ್ರಕೃಪೆ: X / @BCBtigers
ದುಬೈ: ಏಷ್ಯಾಕಪ್ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 59 ರನ್ ಗಳಿಂದ ಮಣಿಸಿದ ಬಾಂಗ್ಲಾದೇಶ ತಂಡ, ಸತತ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ, 49.1 ಓವರ್‌ಗಳಲ್ಲಿ 198 ರನ್ ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಭಾರತ, 35.2 ಓವರ್‌ಗಳಲ್ಲಿ 139 ರನ್ ಗಳಿಸಿ ಸರ್ವಪತನ ಕಂಡಿತು.
ಭಾರತದ ಬ್ಯಾಟರ್‌ಗಳು ದಿಟ್ಟ ಆಟವಾಡುವಲ್ಲಿ ವಿಫಲರಾದರು. ಆರಂಭಿಕ ಆಟಗಾರರಾದ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ, ತಂಡದ ಮೊತ್ತ 24 ರನ್ ಆಗುವಷ್ಟರಲ್ಲೇ ಪೆವಿಲಿಯನ್‌ಗೆ ವಾಪಸ್ ಆದರು.
ಕಳೆದರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ 13 ವರ್ಷದ ಬ್ಯಾಟರ್ ವೈಭವ್, 9 ರನ್ ಗಳಿಸಿದರೆ, ಆಯುಷ್ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಇವರಿಬ್ಬರು ಬೇಗನೆ ವಿಕೆಟ್ ಒಪ್ಪಿಸಿದ್ದು, ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿತು.
ನಂತರ ಕ್ರೀಸ್‌ಗೆ ಬಂದ ಆಂದ್ರೆ ಸಿದ್ಧಾರ್ಥ್ (20 ರನ್), ಕೆ.ಪಿ. ಕಾರ್ತಿಕೇಯ (21 ರನ್) ಮತ್ತು ನಾಯಕ ಮೊಹಮ್ಮದ್ ಅಮಾನ್ (26 ರನ್) ಎರಡಂಕಿಯ ರನ್ ಗಳಿಸಿದರು. ಆದರೆ, ದೊಡ್ಡ ಇನಿಂಗ್ಸ್ ಕಟ್ಟಲು ಯಾರಿಂದಲೂ ಸಾಧ್ಯವಾಗಲಿಲ್ಲ.
ಕೊನೆಯಲ್ಲಿ ಹಾರ್ದಿಕ್ ರಾಜ್ (24 ರನ್) ಹೋರಾಟ ನಡೆಸಿದರೂ, ಪಂದ್ಯ ಗೆಲ್ಲಲು ಸಾಕಾಗಲಿಲ್ಲ. ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟ ಆಡಲಿಲ್ಲ. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು, ಭಾರತಕ್ಕೆ ಮುಳುವಾಯಿತು.
ಬಾಂಗ್ಲಾ ಪರ ಉತ್ತಮ ಬೌಲಿಂಗ್ ಮಾಡಿದ ಇಕ್ಬಾಲ್ ಹೊಸೈನ್ ಎಮಾಮ್ ಹಾಗೂ ನಾಯಕ ಮೊಹಮ್ಮದ್ ಅಜಿಜುಲ್ ಹಕಿಮ್ ತಮಿಮ್ ತಲಾ ಮೂರು ವಿಕೆಟ್ ಪಡೆದರೆ, ಅಲ್ ಫಹಾದ್ 2 ವಿಕೆಟ್ ಕಿತ್ತರು. ಮೊಹಮ್ಮದ್ ರಿಜಾನ್ ಹೊಸನ್ ಮತ್ತು ಮರೂಫ್ ಮ್ರಿಧಾ ಒಂದೊಂದು ವಿಕೆಟ್ ಹಂಚಿಕೊಂಡರು.
ಬಾಂಗ್ಲಾ ಇನಿಂಗ್ಸ್‌ಗೆ ಜೇಮ್ಸ್, ಹೊಸನ್ ಬಲ
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಪಡೆಗೂ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ ಆರಂಭಿಸಿದ ಜಾವದ್ ಅಬ್ರಾರ್ 16 ರನ್ ಗಳಿಸಿದರೆ, ಕಲಾಂ ಸಿದ್ಧಿಕಿ ಅಲೀನ್ 1 ರನ್‌ಗೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ಮಹಮ್ಮದ್ ಅಜಿಜಿಲ್ ಹಕೀಂ ತಮೀಮ್ ಆಟ 16 ರನ್ ಗಳಿಗೆ ಅಂತ್ಯವಾಯಿತು.
ಈ ಹಂತದಲ್ಲಿ ಜೊತೆಯಾದ ಮೊಹಮ್ಮದ್ ಶಿಹಾಬ್ ಜೇಮ್ಸ್ (40 ರನ್) ಮತ್ತು ಮೊಹಮ್ಮದ್ ರಿಜಾನ್ ಹೊಸಾನ್ (47 ರನ್) 4ನೇ ವಿಕೆಟ್ ಪಾಲುದಾರಿಕೆಯಲ್ಲಿ ಅರ್ಧಶತಕವಾಡಿದರು. ವಿಕೆಟ್ ಕೀಪರ್ ಮಹಮ್ಮದ್ ಪರಿದ್ ಹಸನ್ ಪಯ್ಸಾಲ್ ಸಹ (39 ರನ್) ಉಪಯುಕ್ತ ಆಟವಾಡಿದರು. ಹೀಗಾಗಿ ತಂಡದ ಮೊತ್ತ ಇನ್ನೂರರ ಸನಿಹಕ್ಕೆ ತಲುಪಲು ಸಾಧ್ಯವಾಯಿತು.
ಭಾರತ ಪರ ಯುಧಜಿತ್ ಗುಹಾ, ಹಾರ್ದಿಕ್ ರಾಜ್ ಮತ್ತು ಚೇತನ್ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ಕಿರಣ್ ಚೋರ್ಮಲೆ, ಕೆ.ಪಿ. ಕಾರ್ತಿಕೇಯ ಹಾಗೂ ಆಯುಷ್ ಮ್ಹಾತ್ರೆ ಒಂದೊಂದು ವಿಕೆಟ್ ಹಂಚಿಕೊಂಡರು.
ಏಷ್ಯಾಕಪ್ 19 ವರ್ಷದೊಳಗಿನವರ ಟೂರ್ನಿಗಳಲ್ಲಿ ಭಾರತ ಏಳು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಬಾಂಗ್ಲಾ ಪಡೆ ಎರಡು ಸಲ ಮತ್ತು ಅಫ್ಗಾನಿಸ್ತಾನ ಒಮ್ಮೆ ಚಾಂಪಿಯನ್ ಎನಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.