ADVERTISEMENT

ಟಿ20 ವಿಶ್ವಕಪ್: ಜಂಪಾ ಬೌಲಿಂಗ್‌ಗೆ ಕುಸಿದ ಒಮಾನ್, ಆಸ್ಟ್ರೇಲಿಯಾ ತಂಡಕ್ಕೆ ಜಯ

ಪಿಟಿಐ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
   

ಪಲೆಕೆಲೆ, ಶ್ರೀಲಂಕಾ: ಸ್ಪಿನ್ನರ್ ಆ್ಯಡಂ ಜಂಪಾ ಅವರ ಅಮೋಘ ಬೌಲಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದ ಕೊನೆ ಪಂದ್ಯದಲ್ಲಿ ಒಮಾನ್ ವಿರುದ್ಧ ಗೆದ್ದಿತು. 

ಆಸ್ಟ್ರೇಲಿಯಾ ತಂಡವು ಸೂಪರ್ 8ರ ಹಂತಕ್ಕೆ ಅರ್ಹತೆ ಗಳಿಸುವಲ್ಲಿ ವಿಫಲವಾಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 

ಜಂಪಾ (21ಕ್ಕೆ4) ಅವರ ಅಮೋಘ ಬೌಲಿಂಗ್ ಮುಂದೆ ಒಮಾನ್ ತಂಡವು 16.2 ಓವರ್‌ಗಳಲ್ಲಿ 104 ರನ್‌ಗಳ ಅಲ್ಪಮೊತ್ತ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಒಮಾನ್ ತಂಡದ ಆರಂಭಿಕ ಬ್ಯಾಟರ್  ಆಮೀರ್ ಕಲೀಂ  ಅವರು ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಔಟಾದರು. ವಿಕೆಟ್ ಗಳಿಸಿದ  ಝೇವಿಯರ್ ಬಾರ್ಟಲೇಟ್ ಸಂಭ್ರಮಿಸಿದರು. ನಾಯಕ ಜತೀಂದರ್ ಸಿಂಗ್ (17; 15ಎ) ಮತ್ತು ಕರಣ್ ಸೋನಾವಳೆ (16; 13ಎ, 4X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 24 ರನ್ ಗಳಿಸಿ ಸ್ವಲ್ಪ ಹೊತ್ತು ಹೋರಾಟ ಮಾಡಿದರು. 

ADVERTISEMENT

ಸಿಂಗ್  ಅವರಿಗೆ ಬಾರ್ಟಲೇಟ್ ಪೆವಿಲಿಯನ್ ಹಾದಿ ತೋರಿದರೆ, ಕರಣ್ ಅವರ ವಿಕೆಟ್‌ ನೇಥನ್ ಎಲ್ಲೀಸ್ ಪಾಲಾಯಿತು. ವಾಸೀಂ ಅಲಿ (32; 33ಎ) ಅವರು ಬೌಲರ್‌ಗಳನ್ನು ಧೈರ್ಯವಾಗಿ ಎದುರಿಸಿದರು. ಇದರಿಂದಾಗಿ ತಂಡವು ಮೂರಂಕಿ ಮೊತ್ತ ದಾಟಿತು. 

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 9.4 ಓವರ್‌ಗಳಲ್ಲಿ 1 ವಿಕೆಟ್‌ಗೆ 108 ರನ್ ಗಳಿಸಿ ಗೆದ್ದಿತು. ನಾಯಕ ಮಿಚೆಲ್ ಮಾರ್ಷ್ ಅಜೇಯ 64 ರನ್ ಗಳಿಸಿದರು. 33 ಎಸೆತಗಳನ್ನು ಆಡಿದರು. 7ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು. ಟ್ರಾವಿಸ್ ಹೆಡ್ (32; 19ಎ, 4X6) ಅವರು ಮಾರ್ಷ್ ಜೊತೆಗೆ ಮೊದಲ ವಿಕೆಟ್‌ಗೆ 93 ರನ್ ಸೇರಿಸಿದರು. 

ಸಂಕ್ಷಿಪ್ತ ಸ್ಕೋರು: ಒಮಾನ್: 16.2 ಓವರ್‌ಗಳಲ್ಲಿ 104 (ಹಮದ್ ಮಿರ್ಜಾ 16, ಜತೀಂದರ್ ಸಿಂಗ್ 17, ವಾಸೀಮ್ ಅಲಿ 32, ಝೇವಿಯರ್ ಬಾರ್ಟಲೇಟ್ 27ಕ್ಕೆ2, ಆ್ಯಡಂ ಜಂಪಾ 21ಕ್ಕೆ4, ಗ್ಲೆನ್ ಮ್ಯಾಕ್ಸ್‌ವೆಲ್ 13ಕ್ಕೆ2)  ಆಸ್ಟ್ರೇಲಿಯಾ: 9.4 ಓವರ್‌ಗಳಲ್ಲಿ 1 ವಿಕೆಟ್‌ಗೆ 108 (ಮಿಚೆಲ್ ಮಾರ್ಷ್ ಔಟಾಗದೇ 64, ಟ್ರಾವಿಸ್ ಹೆಡ್ 32, ಜೋಶ್ ಇಂಗ್ಲಿಸ್ ಔಟಾಗದೇ 12, ಶಕೀಲ್ ಅಹಮದ್ 29ಕ್ಕೆ1) ಫಲಿತಾಂಶ:ಆಸ್ಟ್ರೇಲಿಯಾಕ್ಕೆ 9 ವಿಕೆಟ್ ಜಯ. ಪಂದ್ಯ ಆಟಗಾರ: ಆ್ಯಡಂ ಜಂಪಾ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.