ಮೊಹಮ್ಮದ್ ನಬಿ
(ಚಿತ್ರ ಕೃಪೆ: X/@ACCMedia1)
ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್-4 ಹಂತಕ್ಕೆ ವೇದಿಕೆ ಸಿದ್ಧಗೊಂಡಿದೆ. 'ಬಿ' ಗುಂಪಿನಿಂದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಮತ್ತು 'ಎ' ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ತೇರ್ಗಡೆ ಹೊಂದಿವೆ.
'ಬಿ' ಗುಂಪಿನ ಎಲ್ಲ ಪಂದ್ಯಗಳು ಕೊನೆಗೊಂಡಿವೆ. ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲನುಭವಿಸಿರುವ ಅಫ್ಗಾನಿಸ್ತಾನ ಕೂಟದಿಂದಲೇ ನಿರ್ಗಮಿಸಿದೆ.
ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಶ್ರೀಲಂಕಾ, ಒಟ್ಟು ಆರು ಅಂಕ ಗಳಿಸಿ 'ಬಿ' ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ ಫೋರ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಬಾಂಗ್ಲಾದೇಶ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನಿಯಾಗಿ ಮುನ್ನಡೆದಿದೆ.
ಈ ಗುಂಪಿನಲ್ಲಿ ಅಫ್ಗಾನಿಸ್ತಾನದೊಂದಿಗೆ ಎಲ್ಲ ಮೂರು ಪಂದ್ಯಗಳಲ್ಲಿ ಮುಗ್ಗರಿಸಿರುವ ಹಾಂಕ್‌ಕಾಂಗ್ ಸಹ ಹೊರಬಿದ್ದಿದೆ.
ಮತ್ತೊಂದೆಡೆ 'ಎ' ಗುಂಪಿನ ಕೊನೆಯ ಪಂದ್ಯ ಇಂದು ನಡೆಯಲಿದ್ದು, ಒಮಾನ್ ಸವಾಲನ್ನು ಭಾರತ ಎದುರಿಸಲಿದೆ. ಈ ಪಂದ್ಯವನ್ನು ಗೆದ್ದು ಗುಂಪಿನ ಅಗ್ರಸ್ಥಾನಿಯಾಗಿ ಭಾರತ ಸೂಪರ್ ಫೋರ್‌ಗೆ ಲಗ್ಗೆ ಇಡುವುದು ಬಹುತೇಕ ಖಚಿತವೆನಿಸಿದೆ.
ಅತ್ತ ಹಸ್ತಲಾಘವ ವಿವಾದದ ನಡುವೆಯೂ ಕೊನೆಯ ಕ್ಷಣದಲ್ಲಿ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದಿದ್ದ ಪಾಕಿಸ್ತಾನ, ತನ್ನ ಕೊನೆಯ ಪಂದ್ಯದಲ್ಲಿ ಯುಎಇ ವಿರುದ್ಧ ಗೆದ್ದು ಸೂಪರ್ ಫೋರ್ ಹಂತಕ್ಕೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಈ ಪಂದ್ಯವು ಭಾನುವಾರ (ಸೆ.21) ನಡೆಯಲಿದೆ.
'ಎ' ಗುಂಪಿನಿಂದ ಯುಎಇ ಹಾಗೂ ಒಮಾನ್ ತಂಡಗಳು ನಿರ್ಗಮಿಸಿವೆ.
ಸೂಪರ್ ಫೋರ್ ಹಂತಕ್ಕೆ ಪ್ರವೇಶಿಸಿದ ತಂಡಗಳು:
'ಎ' ಗುಂಪು: ಭಾರತ, ಪಾಕಿಸ್ತಾನ
'ಬಿ' ಗುಂಪು: ಶ್ರೀಲಂಕಾ, ಬಾಂಗ್ಲಾದೇಶ
ಟೂರ್ನಿಯಿಂದ ಹೊರಬಿದ್ದ ತಂಡಗಳು: ಅಫ್ಗಾನಿಸ್ತಾನ, ಹಾಂಗ್‌ಕಾಂಗ್, ಯುಎಇ, ಒಮಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.