
ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಆಟಗಾರರು ಮೈದಾನದಲ್ಲಿ ಪರಸ್ಪರ ಕೈ ಕುಲುಕದಿರುವುದು, ಮಾತನಾಡದಿರುವುದು ನಿಜವಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟರ್ ಕುಕ್ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ಜಿದ್ದಾಜಿದ್ದಿ ಕುರಿತು ಮಾಜಿ ಕ್ರಿಕೆಟಿಗರಾದ ಮೈಕಲ್ ವಾನ್, ಡೇವಿಡ್ ಲಾಯ್ಡ್ ಮತ್ತು ಫಿಲ್ ಟಫ್ನೆಲ್ ಅವರೊಂದಿಗೆ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಕುಕ್ ಅವರು, ಈ ಹೇಳಿಕೆ ನಿಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತವು ಪಾಕಿಸ್ತಾನ ಎದುರು ಸಾಧಿಸುತ್ತಿರುವ ಪ್ರಾಬಲ್ಯವನ್ನು ಗಮನಿಸಿದರೆ, ಉಭಯ ದೇಶಗಳ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿರಲಿವೆ ಎಂಬುದು ಸರಿಹೋಗುವುದಿಲ್ಲ ಎನ್ನುವ ಮೂಲಕ ಟಫ್ನೆಲ್ ಅವರು ಚರ್ಚೆಗೆ ದಾರಿ ಮಾಡಿಕೊಟ್ಟರು.
'ನಾನು ಧೈರ್ಯವಾಗಿ ಹೇಳಬಲ್ಲೆ. ಭಾರತದ ಎದುರು ಪಾಕಿಸ್ತಾನವು ತಕ್ಕ ಎದುರಾಳಿಯಾಗದು' ಎಂದಿದ್ದಾರೆ.
ಇದಕ್ಕೆ ದ್ವನಿಗೂಡಿಸಿದ ವಾನ್, 'ನನಗೂ ಹಾಗೆ ಕಾಣುತ್ತದೆ. ಭಾರತ ತಂಡವು ಕ್ರಿಕೆಟ್ ಮೈದಾನದಲ್ಲಿ ಪ್ರತಿ ಬಾರಿಯೂ ಬೆದರಿಸಿರುವಂತೆ ಕಾಣುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ – ಪಾಕಿಸ್ತಾನದ ಸದ್ಯದ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, 'ಇಡೀ ಸನ್ನಿವೇಶ ಕೆಟ್ಟದಾಗಿದೆ ಅಲ್ಲವೇ? ಅದು ಎಷ್ಟು ಬೇಸರದ ಸಂಗತಿ ಗೊತ್ತಾ? ಕ್ರಿಕೆಟ್ ಮೈದಾನದಲ್ಲಿ ಹಸ್ತಲಾಘವವನ್ನೂ ಮಾಡುವುದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಕುಕ್, 'ಕೈ ಕುಲುಕುವುದಿಲ್ಲ' ಎಂಬ ನಿಯಮವು ತೋರಿಕೆಗಷ್ಟೇ. ಆಟಗಾರರು, ಕ್ಯಾಮೆರಾಗಳು ಹಾಗೂ ಸಾರ್ವಜನಿಕರ ಮುಂದಷ್ಟೇ ಆ ರೀತಿ ವರ್ತಿಸುತ್ತಾರೆ. ಆದರೆ, ಕೊಠಡಿಗಳಲ್ಲಿ ಎರಡೂ ರಾಷ್ಟ್ರಗಳ ಆಟಗಾರರು ಪರಸ್ಪರ ಮಾತನಾಡುತ್ತಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಮೂಲಕ ಎರಡೂ ತಂಡಗಳ ಆಟಗಾರರ ನಡುವಿನದ್ದು, 'ನಕಲಿ ವೈರತ್ವ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು, 'ಇದೆಲ್ಲವೂ ಕೇವಲ ತೋರಿಕೆಗಷ್ಟೇ ಅನಿಸುವುದಿಲ್ಲವೇ? ಮೈದಾನದಲ್ಲಿ ಹಸ್ತಲಾಘವ ಮಾಡುವುದಿಲ್ಲ. ಆದರೆ, ಕೊಠಡಿಗಳಲ್ಲಿ ಎಲ್ಲರೂ ಮಾತಾಡಿಕೊಂಡು, ಚೆನ್ನಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಹಸ್ತಲಾಘವ ಪ್ರಸಂಗ
ಕಳೆದ ವರ್ಷ ಸೆಪ್ಟೆಂರಬ್‌ನಲ್ಲಿ ನಡೆದ ಏಷ್ಯಾಕಪ್ ಟಿ20 ಕ್ರಿಕೆಟ್ ಸರಣಿಯ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು, ಪಾಕಿಸ್ತಾನ ನಾಯಕನ ಕೈಕುಲಕಲು ನಿರಾಕರಿಸುವುದರೊಂದಿಗೆ ಈ ಪ್ರಹಸನ ಶುರುವಾಯಿತು. ಟೂರ್ನಿಯ ಮೂರೂ ಪಂದ್ಯಗಳ ವೇಳೆ, ಎರಡೂ ತಂಡಗಳ ನಾಯಕರು ಇದನ್ನು ಮುಂದುವರಿಸಿದ್ದರು.
ಅದು, ಕಳೆದ ವರ್ಷವೇ ನಡೆದ ಮಹಿಳೆಯರ ಏಕದಿನ ವಿಶ್ವಕಪ್, ಎಮರ್ಜಿಂಗ್ ಏಷ್ಯಾಕಪ್, ಇದೇ ವರ್ಷ ನಡೆದ ಅಂಡರ್–19 ವಿಶ್ವಪ್ ವೇಳೆಯೂ ಮುಂದುವರಿಯಿತು.
ಈ ಬಾರಿಯ ಚುಟುಕು ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿಯೂ (ಫೆ.15ರಂದು) ಉಭಯ ನಾಯಕರು ಹಾಗೆಯೇ ನಡೆದುಕೊಂಡಿದ್ದಾರೆ. ಈ ಪಂದ್ಯವನ್ನು ಭಾರತ, 61 ರನ್ ಅಂತರದಿಂದ ಗೆದ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.