ADVERTISEMENT

Australia vs India: ಭರ್ಜರಿ ಶತಕ, ಗೆಲುವಿನೊಡನೆ ಹೀಲಿ ವಿದಾಯ

ಮೂರನೇ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಮಹಿಳೆಯರಿಗೆ ಜಯ

ಪಿಟಿಐ
Published 1 ಮಾರ್ಚ್ 2026, 16:04 IST
Last Updated 1 ಮಾರ್ಚ್ 2026, 16:04 IST
ಶತಕ ಗಳಿಸಿದ ಸಂಭ್ರಮದಲ್ಲಿ ಅಲೀಸಾ ಹೀಲಿ
ಶತಕ ಗಳಿಸಿದ ಸಂಭ್ರಮದಲ್ಲಿ ಅಲೀಸಾ ಹೀಲಿ   

ಹೋಬಾರ್ಟ್‌: ನಾಯಕಿ ಅಲೀಸಾ ಹೀಲಿ ತಮ್ಮ ವೈಭವಯುತ ಕ್ರಿಕೆಟ್‌ ಬದುಕಿಗೆ ಅಮೋಘ ಸರಣಿ ಗೆಲುವಿನೊಡನೆ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರು. ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮಹಿಳಾ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡದ ಮೇಲೆ ಭಾನುವಾರ 185 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಸರಣಿಯನ್ನು ಆತಿಥೇಯರು 3–0 ಯಿಂದ ಗೆದ್ದುಕೊಂಡರು. ಭಾರತ ತಂಡ ಈ ಸರಣಿಯ ನಂತರ ಏಕೈಕ ಟೆಸ್ಟ್ ಪಂದ್ಯವನ್ನು ಮಾರ್ಚ್ 6 ರಿಂದ ಆಡಲಿದೆ. ಇದು ಪಿಂಕ್‌ಬಾಲ್‌ (ಅಹರ್ನಿಶಿ) ಪಂದ್ಯವಾಗಿದೆ.

ಆರಂಭ ಆಟಗಾರ್ತಿಯಾದ 35 ವರ್ಷ ವಯಸ್ಸಿನ ಅಲೀಸಾ 158 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಬೆತ್ ಮೂನಿ ಅಜೇಯ 106 ರನ್ ಗಳಿಸಿದರು. ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಆಸ್ಟ್ರೇಲಿಯಾ 7 ವಿಕೆಟ್‌ಗೆ 409 ರನ್‌ಗಳ ಭಾರಿ ಮೊತ್ತ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 45.1 ಓವರುಗಳಲ್ಲಿ 224 ರನ್‌ಗಳಿಗೆ ಆಲೌಟ್‌ ಆಯಿತು.

ADVERTISEMENT

ಏಕೈಕ ಟೆಸ್ಟ್‌ ಪಂದ್ಯವನ್ನು ಆಡಿದ ನಂತರ ಅಲೀಸಾ ವೃತ್ತಿ ಬದುಕಿಗೆ ನಿವೃತ್ತಿ ಹೇಳಲಿದ್ದಾರೆ. ಅವರು 126 ಏಕದಿನ ಪಂದ್ಯಗಳನ್ನು ಆಡಿದ್ದು, 3777 ರನ್ ಗಳಿಸಿದ್ದಾರೆ. ಇದರಲ್ಲಿ ಎಂಟು ಶತಕಗಳು, 19 ಅರ್ಧ ಶತಕಗಳು ಒಳಗೊಂಡಿವೆ.

ಹೀಲಿ ಎರಡನೇ ವಿಕೆಟ್‌ಗೆ ಜಾರ್ಜಿಯಾ ವೋಲ್ (62, 52 ಎಸೆತ, 4x7, 6x1) ಸಂಗಡ 134 ರನ್ ಸೇರಿಸಿದರು. ಹೀಲಿ ಮತ್ತು ಬೆತ್ ಮೂನಿ ನಡುವೆ ಮೂರನೇ ವಿಕೆಟ್‌ಗೆ 145 ರನ್ ಹರಿದುಬಂದಿದ್ದು ಆಸ್ಟ್ರೇಲಿಯಾ ದೊಡ್ಡ ಮೊತ್ತಕ್ಕೆ ದಾರಿಯಾಯಿತು. ಹೀಲಿ ಕೇವಲ 98 ಎಸೆತಗಳ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳ ಜೊತೆ 27 ಬೌಂಡರಿಗಳನ್ನು ಬಾರಿಸಿದರು.

ಮೂನಿ ಅವರ ಅಜೇಯ ಶತಕದಲ್ಲಿ ಒಂದು ಸಿಕ್ಸರ್, 10 ಬೌಂಡರಿಗಳಿದ್ದವು.

ಈ ದೊಡ್ಡ ಮೊತ್ತಕ್ಕೆ ಉತ್ತರವಾಗಿ ಭಾರತ ಹೋರಾಟ ತೋರದೇ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಮಿಮಾ ರಾಡ್ರಿಗಸ್‌ (42, 29 ಎಸೆತ, 4x9) ಮತ್ತು ಸ್ನೇಹ ರಾಣಾ (44, 74 ಎಸೆತ, 4x6) ಮಾತ್ರ ಸ್ವಲ್ಪ ಹೋರಾಡಿದರು.

ಪಾಯಿಂಟ್‌ ಲೆಕ್ಕ: ಆದರೆ ಬಹುಮಾದರಿಯ ಈ ಸರಣಿಯನ್ನು ಪಾಯಿಂಟ್ಸ್ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇದಕ್ಕೆ ಮೊದಲು ನಡೆದ ಟಿ20 ಸರಣಿಯನ್ನು ಪ್ರವಾಸಿ ಭಾರತ 2–1 ರಿಂದ ಗೆದ್ದುಕೊಂಡಿತು. ಪ್ರತಿ ಪಂದ್ಯಗಳ ಗೆಲುವಿಗೆ ಎರಡು ಪಾಯಿಂಟ್ಸ್ ನೀಡಲಾಗುತ್ತದೆ. ಇದರ ನಂತರ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದ್ದು ಅಲ್ಲಿ ಗೆಲುವಿಗೆ ನಾಲ್ಕು ಪಾಯಿಂಟ್ಸ್ ನೀಡಲಾಗುವುದು. ಸದ್ಯ ಆಸ್ಟ್ರೇಲಿಯಾ 8–4 ಮುನ್ನಡೆ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 50 ಓವರುಗಳಲ್ಲಿ 9 ವಿಕೆಟ್‌ಗೆ 407 (ಅಲೀಸಾ ಹೀಲಿ 158, ಜಾರ್ಜಿಯಾ ವೋಲ್ 62, ಬೆತ್ ಮೂನಿ ಔಟಾಗದೇ 106; ಶ್ರೀಚರಣಿ 106ಕ್ಕೆ2, ಸ್ನೇಹ ರಾಣಾ 66ಕ್ಕೆ2); ಭಾರತ: 45.1 ಓವರುಗಳಲ್ಲಿ 224 (ಪ್ರತಿಕಾ ರಾವಲ್ 27, ಜೆಮಿಮಾ ರಾಡ್ರಿಗಸ್ 42, ಹರ್ಮನ್‌ಪ್ರೀತ್ ಕೌರ್ 25, ದೀಪ್ತಿ ಶರ್ಮಾ 29, ಸ್ನೇಹ ರಾಣಾ 44; ಅಲನಾ ಕಿಂಗ್‌ 33ಕ್ಕೆ4, ಜಾರ್ಜಿಯಾ ವೆರ್ಹ್ಯಾಮ್ 3ಕ್ಕೆ2).

ಪಂದ್ಯದ ಆಟಗಾರ್ತಿ: ಅಲೀಸಾ ಹೀಲಿ

ಶತಕ ಗಳಿಸಿದ ಸಂಭ್ರಮದಲ್ಲಿ ಬೆತ್ ಮೂನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.