ADVERTISEMENT

ಕೋವಿಡ್ ವಿರುದ್ಧದ ಹೋರಾಟ ಎರಡನೇ ಇನಿಂಗ್ಸ್‌ ಸ್ಪರ್ಧೆಯಿದ್ದಂತೆ: ಕುಂಬ್ಳೆ

​ಪ್ರಜಾವಾಣಿ ವಾರ್ತೆ
Published 9 ಮೇ 2020, 14:44 IST
Last Updated 9 ಮೇ 2020, 14:44 IST
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ   

ಬೆಂಗಳೂರು: ‘ಜಂಬೋ’ ಎಂದೇ ಖ್ಯಾತರಾದ ಲೆಗ್‌ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಕೋವಿಡ್ –19 ವಿರುದ್ಧದ ಹೋರಾಟವನ್ನು ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಯಕ್ಕಾಗಿ ನಡೆಯುವ ತುರುಸಿನ ಹಣಾಹಣಿಗೆ ಹೋಲಿಸಿದ್ದಾರೆ.

‘ಕೊರೊನಾ ವೈರಸ್‌ ಮಹಾಮಾರಿಯನ್ನು ಹಿಮ್ಮೆಟ್ಟಿಸಬೇಕಾದರೆ ನಾವೆಲ್ಲರೂ ಒಂದಾಗಿ ಹೋರಾಡಬೇಕು. ಇದು ಒಂದು ರೀತಿಯಲ್ಲಿ ಟೆಸ್ಟ್‌ ಪಂದ್ಯವಿದ್ದ ಹಾಗೆ. ಅದು ದಿನಗಳ ಪಂದ್ಯದಲ್ಲಿ ಎರಡು ಇನಿಂಗ್ಸ್‌ಗಳಿರುತ್ತವೆ. ಆದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಹೆಚ್ಚು ಇನಿಂಗ್ಸ್‌ಗಳಿವೆ. ಮೊದಲ ಇನಿಂಗ್ಸ್‌ನಲ್ಲಿ ಪುಟ್ಟ ಮೊತ್ತದ ಮುನ್ನಡೆ ಗಳಿಸಿದ್ದೇವೆ. ಆದ್ದರಿಂದ ಎರಡನೇ ಇನಿಂಗ್ಸ್‌ನಲ್ಲಿ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಅದು ಕಠಿಣವಾಗಿದೆ’ ಎಂದು ಅನಿಲ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

‘ಈ ಹೋರಾಟದಲ್ಲಿ ನಾವು ಶತಾಯಗತಾಯ ಜಯಿಸಲೇಬೇಕು. ಮೊದಲ ಇನಿಂಗ್ಸ್‌ ಮುನ್ನಡೆಯಿಂದ ಮಾತ್ರ ಅದು ಸಾಧ್ಯವಿಲ್ಲ. ಎದುರಾಳಿಯನ್ನು ಸಂಪೂರ್ಣವಾಗಿ ಮಣಿಸಬೇಕು. ಸಾರಾಸಗಟಾಗಿ ಜಯಿಸಬೇಕು’ ಎಂದಿದ್ದಾರೆ.

ADVERTISEMENT

‘ನಮ್ಮಆರೋಗ್ಯದ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯರು, ನರ್ಸ್‌ಗಳು, ಸ್ವಚ್ಛತಾ ಕಾರ್ಮಿಕರು, ಸ್ವಯಂಸೇವಕರು, ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು, ಪೋಲಿಸ್ ಮತ್ತಿತರ ಇಲಾಖೆಗಳವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಅವರು ಅಮೋಘವಾದ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.