ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಬಂಗಾಳ ಕೈ ಹಿಡಿದ 'ಅನುಸ್ತುಪ್'

ಮೂರಂಕಿ ಮೊತ್ತ ದಾಟಿದ ಗುಜರಾತ್‌ ನಾಯಕ ಪಾರ್ಥಿವ್ ಪಟೇಲ್

ಪಿಟಿಐ
Published 20 ಫೆಬ್ರುವರಿ 2020, 19:45 IST
Last Updated 20 ಫೆಬ್ರುವರಿ 2020, 19:45 IST
ಅನುಸ್ತುಪ್ ಮಜುಂದಾರ್ –ಪಿಟಿಐ ಚಿತ್ರ
ಅನುಸ್ತುಪ್ ಮಜುಂದಾರ್ –ಪಿಟಿಐ ಚಿತ್ರ   
""

ತಾಂಗಿ, ಒಡಿಶಾ: ಕೇವಲ 46 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಪರದಾಡಿದ ಬಂಗಾಳ ತಂಡವನ್ನು ಅನುಸ್ತುಪ್ ಮಜುಂದಾರ್ (ಬ್ಯಾಟಿಂಗ್ 136; 194 ಎಸೆತ, 20 ಬೌಂಡರಿ) ಕಾಪಾಡಿದರು. ಅವರ ಅಮೋಘ ಶತಕದ ಬಲದಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನ ಬಂಗಾಳ ಅಪಾಯದಿಂದ ಪಾರಾಯಿತು. ಒಡಿಶಾ ಎದುರಿನ ಪಂದ್ಯದಲ್ಲಿ ದಿನದಾಟದ ಮುಕ್ತಾಯಕ್ಕೆ ತಂಡ 86 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 308 ರನ್ ಗಳಿಸಿದೆ.

ಇಲ್ಲಿನ ಡ್ರೀಮ್ಸ್ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಂಗಾಳಕ್ಕೆ ಬಸಂತ್ ಮೊಹಂತಿ, ಸೂರ್ಯಕಾಂತ್ ಪ್ರಧಾನ್ ಮತ್ತು ಪ್ರೀತ್‌ ಸಿಂಗ್ ಚೌಹಾಣ್ ಭಾರಿ ಪೆಟ್ಟು ನೀಡಿದರು. ತಂಡದ ಮೊತ್ತ 17 ಆಗಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ ವಾಪಸಾದರು. ಅಭಿಮನ್ಯು ಈಶ್ವರನ್ ಏಳು ರನ್‌ ಗಳಿಸಿ ಸೂರ್ಯಕಾಂತ್‌ಗೆ ವಿಕೆಟ್ ಒಪ್ಪಿಸಿದರೆ ಕೌಶಿಕ್ ಘೋಷ್ ಒಂಬತ್ತು ರನ್ ಗಳಿಸಿ ಮೊಹಂತಿ ಬೌಲಿಂಗ್‌ನಲ್ಲಿ ಔಟಾದರು.

ಅಭಿಷೇಕ್ ರಮಣ್, ಅರ್ಣಬ್ ನಂದಿ ಮತ್ತು ಮನೋಜ್ ತಿವಾರಿ ಕೂಡ ಬೇಗನೇ ಪೆವಿಲಿಯನ್‌ಗೆ ಮರಳಿದರು. ಈ ಸಂದರ್ಭದಲ್ಲಿ ಜೊತೆಗೂಡಿದಅನುಸ್ತುಪ್ ಮತ್ತು ಶ್ರೀವತ್ಸ ಗೋಸ್ವಾಮಿ 95 ರನ್‌ಗಳ ಜೊತೆಯಾಟ ಆಡಿ ಒಡಿಶಾ ಪಾಳಯದ ಉತ್ಸಾಹಕ್ಕೆ ತಣ್ಣೀರು ಸುರಿದರು. ಈ ಋತುವಿನಲ್ಲಿ ಆರನೇ ಪಂದ್ಯ ಆಡುತ್ತಿರುವ ಅನುಸ್ತುಪ್ ಮೋಹಕ ಹೊಡೆತಗಳ ಮೂಲಕ ರಂಜಿಸಿದರು.

ADVERTISEMENT

ಗೋಸ್ವಾಮಿ ಔಟಾದ ನಂತರ ಶಹಬಾಜ್ ಅಹಮ್ಮದ್ (ಬ್ಯಾಟಿಂಗ್ 82; 154 ಎ, 13 ಬೌಂ) ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡಲು ಸಜ್ಜಾಗಿರುವ ಅವರು ಅನುಸ್ತುಪ್ ಜೊತೆ ಮುರಿಯದ ಏಳನೇ ವಿಕೆಟ್‌ಗೆ 167 ರನ್ ಸೇರಿಸಿದರು. ಚಹಾ ವಿರಾಮದ ನಂತರ ಈ ಜೋಡಿ ಹೆಚ್ಚು ಆಕ್ರಮಣಕಾರಿಯಾಗಿ ಆಡಿ 3.41ರ ಸರಾಸರಿಯಲ್ಲಿ 99 ರನ್ ಸೇರಿಸಿತು.

ಎರಡು ವರ್ಷಗಳ ನಂತರ ಶತಕ: ಅನುಸ್ತುಪ್ ಕೊನೆಯ ಶತಕ ಗಳಿಸಿದ್ದು ಎರಡು ವರ್ಷಗಳ ಹಿಂದೆ. ಗುಜರಾತ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಅವರು ಮೂರಂಕಿ ಮೊತ್ತ ದಾಟಿದ್ದರು. ಈ ವರ್ಷ ದೆಹಲಿ ವಿರುದ್ಧದ ಪಂದ್ಯದಲ್ಲಿ ಒಂದು ರನ್‌ನಿಂದ ಶತಕ ತಪ್ಪಿತ್ತು.

ಪಾರ್ಥಿವ್ ಪಟೇಲ್ ಶತಕ: ಗೋವಾ ಎದುರು ವಲ್ಸದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್‌ ತಂಡದ ನಾಯಕ ಪಾರ್ಥಿವ್ ಪಟೇಲ್ (ಬ್ಯಾಟಿಂಗ್ 118; 156 ಎ, 15 ಬೌಂ) ಶತಕದ ಬಲದಿಂದ ಗುಜರಾತ್ ದಿನದಾಟದ ಮುಕ್ತಾಯಕ್ಕೆ 4ಕ್ಕೆ 330 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್: ಕಟಕ್‌ನ ತಾಂಗಿಯಲ್ಲಿ: ಬಂಗಾಳ, ಮೊದಲ ಇನಿಂಗ್ಸ್‌: 86 ಓವರ್‌ಗಳಲ್ಲಿ 6ಕ್ಕೆ 308 (ಅನುಸ್ತುಪ್ ಮಜುಂದಾರ್ ಬ್ಯಾಟಿಂಗ್ 136, ಶ್ರೀವತ್ಸ ಗೋಸ್ವಾಮಿ 34, ಶಹಬಾಸ್ ಅಹಮ್ಮದ್ ಬ್ಯಾಟಿಂಗ್ 82; ಬಸಂತ್ ಮೊಹಂತಿ 48ಕ್ಕೆ1, ಸೂರ್ಯಕಾಂತ್ ಪ್ರಧಾನ್ 96ಕ್ಕೆ2, ಪ್ರೀತ್‌ ಸಿಂಗ್ 52ಕ್ಕೆ2, ದೇವವ್ರತ ಪ್ರಧಾನ್ 54ಕ್ಕೆ1). ಒಡಿಶಾ ಎದುರಿನ ಪಂದ್ಯ.

ವಲ್ಸದ್‌ನಲ್ಲಿ: ಗುಜರಾತ್‌, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 4ಕ್ಕೆ 330 (ಸಮಿತ್ ಗೋಯೆಲ್ 52, ಪ್ರಿಯಾಂಕ್ ಪಾಂಚಾಲ್ 28, ಭಾರ್ಗವ್ ಮೆರಾಯ್ 84, ಪಾರ್ಥಿವ್ ಪಟೇಲ್ ಬ್ಯಾಟಿಂಗ್ 118, ಚಿರಾಗ್ ಗಾಂಧಿ ಬ್ಯಾಟಿಂಗ್ 40; ವಿಜೇಶ್ ಪ್ರಭುದೇಸಾಯಿ 60ಕ್ಕೆ1, ದರ್ಶನ್ ಮಿಸಾಳ್ 74ಕ್ಕೆ1, ಅಮಿತ್ ವರ್ಮಾ 73ಕ್ಕೆ2). ಗೋವಾ ಎದುರಿನ ಪಂದ್ಯ.

ಓಂಗೋಲ್‌ನಲ್ಲಿ: ಸೌರಾಷ್ಟ್ರ, ಮೊದಲ ಇನಿಂಗ್ಸ್‌: 79 ಓವರ್‌ಗಳಲ್ಲಿ 6ಕ್ಕೆ 226 (ಕಿಶನ್ ಪರ್ಮಾರ್ 35, ವಿಶ್ವರಾಜ್ ಜಡೇಜ 73, ಶೆಲ್ಡನ್ ಜಾಕ್ಸನ್ 50, ಚಿರಾಗ್ ಜಾನಿ ಬ್ಯಾಟಿಂಗ್ 53; ಚೀಪುರಪಳ್ಳಿ ಸ್ಟೀಫನ್ 44ಕ್ಕೆ1, ಕೆ.ವಿ.ಶಶಿಕಾಂತ್ 82ಕ್ಕೆ2, ಪೃಥ್ವಿರಾಜ್ 51ಕ್ಕೆ3). ಆಂಧ್ರ ಎದುರಿನ ಪಂದ್ಯ.

ಕರ್ನಾಟಕಕ್ಕೆ ಆರಂಭಿಕ ಆಘಾತ
ಜಮ್ಮು:
ಬೆಳಕಿನ ಅಭಾವ ಕಾಡಿದ ಪಂದ್ಯದಲ್ಲಿ ಕರ್ನಾಟಕ ರನ್ ಗಳಿಸಲು ಪರದಾಡಿತು. ಗುರುವಾರ ಆರಂಭಗೊಂಡ ಜಮ್ಮು ಮತ್ತು ಕಾಶ್ಮೀರ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ಬಳಗಕ್ಕೆ ಆರು ಓವರ್ ಮಾತ್ರ ಬ್ಯಾಟಿಂಗ್ ಮಾಡಲು ಲಭಿಸಿತ್ತು. ಅಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು 14 ರನ್ ಗಳಿಸಿದೆ.

ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟ ಆರಂಭಗೊಂಡದ್ದೇ ಚಹಾ ವಿರಾಮದ ನಂತರ. ಆಕಿಬ್ ನಬಿ ಮತ್ತು ಮುಜ್ತಾಬ ಯೂಸುಫ್ ದಾಳಿಗೆ ನಲುಗಿದ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಬೇಗನೇ ವಾಪಸಾದರು.

ನಾಯಕ ಕರುಣ್ ನಾಯರ್ ಮತ್ತು ಕೆ.ವಿ.ಸಿದ್ಧಾರ್ಥ್ ಶುಕ್ರವಾರ ಆಟ ಮುಂದುವರಿಸಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.