ADVERTISEMENT

ಬೆಸ್ಟೊದಿಂದ ಸ್ಯಾಂಡ್ ಪೇಪರ್‌ವರೆಗೆ; ಆಸ್ಟ್ರೇಲಿಯಾ-ಬ್ರಿಟನ್ ಪ್ರಧಾನಿಗಳ ಕ್ರಿಕೆಟ್ ಕದನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2023, 10:43 IST
Last Updated 12 ಜುಲೈ 2023, 10:43 IST
   

ಲಂಡನ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆ್ಯಷಸ್ ಟೆಸ್ಟ್ ಸರಣಿಯು ರೋಚಕ ಹಂತವನ್ನು ತಲುಪಿದೆ. ಅತ್ತ ಇದರ ಬಿಸಿಯು ಉಭಯ ದೇಶಗಳ ಪ್ರಧಾನಿಗಳಿಗೂ ತಟ್ಟಿದೆ.

ನ್ಯಾಟೊ ಶೃಂಗಸಭೆ ವೇಳೆಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಈ ಕುರಿತು ಚರ್ಚೆ ನಡೆಸಿದ್ದಾರೆ.

ಈ ವೇಳೆ ಆ್ಯಷಸ್ ಟೆಸ್ಟ್ ಸರಣಿಯ ಬಗ್ಗೆ ಉಭಯ ನಾಯಕರೂ ಪರಸ್ಪರ ಕಾಲೆಳೆದಿದ್ದಾರೆ.

ADVERTISEMENT

ಮೊದಲಿಗೆ ಆಸ್ಟ್ರೇಲಿಯಾದ ಪ್ರಧಾನಿ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ತಮ್ಮ ತಂಡವು 2-1ರ ಮುನ್ನಡೆ ಕಾಯ್ದುಕೊಂಡಿರುವ ಚಿತ್ರವನ್ನು ಹಂಚಿಕೊಂಡರು. ಈ ವೇಳೆ ಬ್ರಿಟನ್ ಪ್ರಧಾನಿ ಸುನಕ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಚಿತ್ರವನ್ನು ತೋರಿಸಿದರು.

ತಕ್ಷಣವೇ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೆಸ್ಟೊ ಅವರ ವಿವಾದಿತ ರನೌಟ್ ಚಿತ್ರವನ್ನು ಅಲ್ಬನೀಸ್ ಎತ್ತಿ ಹಿಡಿದರು. ಈ ವೇಳೆ ನಗುತ್ತಲೇ ಉತ್ತರ ನೀಡಿದ ಸುನಕ್, ದಯವಿಟ್ಟು ಕ್ಷಮಿಸಿ, ನಾನು ಸ್ಯಾಂಡ್ ಪೇಪರ್ ತಂದಿಲ್ಲ ಎಂದು ಆಸ್ಟ್ರೇಲಿಯಾದ ಆಟಗಾರರ ಚೆಂಡು ವಿರೂಪ ಪ್ರಕರಣವನ್ನು ನೆನಪಿಸಿದರು.

ಒಟ್ಟಿನಲ್ಲಿ ಆ್ಯಷಸ್ ಟೆಸ್ಟ್ ಸರಣಿ ಕುರಿತಾಗಿ ಉಭಯ ದೇಶಗಳ ನಾಯಕರ ನಗೆ ಚಟಾಕಿಯು ಕ್ರಿಕೆಟ್ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.