ADVERTISEMENT

Ashes Test | 2 ದಿನ, 36 ವಿಕೆಟ್: ಆಸೀಸ್ ವಿರುದ್ಧ ಕೊನೆಗೂ ಗೆದ್ದ ಆಂಗ್ಲರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2025, 7:12 IST
Last Updated 27 ಡಿಸೆಂಬರ್ 2025, 7:12 IST
<div class="paragraphs"><p>ವಿಕೆಟ್ ತೆಗೆದ ಸಂಭ್ರಮದಲ್ಲಿ ಆಂಗ್ಲರು</p></div>

ವಿಕೆಟ್ ತೆಗೆದ ಸಂಭ್ರಮದಲ್ಲಿ ಆಂಗ್ಲರು

   

ಚಿತ್ರ ಕೃಪೆ: @devveshpandey

ಮೆಲ್ಬರ್ನ್: ಇಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಐದು ಪಂದ್ಯದಗಳ ಆ್ಯಷಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ (ಬಾಕ್ಸಿಂಗ್ ಡೇ ಪಂದ್ಯ) ಇಂಗ್ಲೆಂಡ್ ತಂಡ ಗೆಲ್ಲುವ ಮೂಲಕ ಸರಣಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಈಗಾಗಲೆ ಆಸ್ಟ್ರೇಲಿಯಾ ತಂಡ 3 ಪಂದ್ಯಗಳನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

ADVERTISEMENT

ಟಾಸ್ ಸೋತು ಮೊದಲ ಇನಿಂಗ್ಸ್ ಆರಂಭಿಸಿದ ಕಾಂಗರೂಗಳು ಮೊದಲ ದಿನ ಆಂಗ್ಲರ ಬೌಲಿಂಗ್ ದಾಳಿಗೆ ನಲುಗಿದರು. 45.2 ಓವರ್‌ಗಳಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆದರು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಕೂಡ 29.5 ಓವರ್‌ಗಳಲ್ಲಿ 110 ರನ್‌ಗಳಿ ಆಲೌಟ್ ಆಗುವ ಮೂಲಕ 42 ರನ್‌ಗಳ ಹಿನ್ನಡೆ ಅನುಭವಿಸಿತು.

42 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯನ್ನರು ಮತ್ತೆ 34.3 ಓವರ್‌ಗಳಲ್ಲಿ 132 ರನ್ ಗಳಿಸಿ ಆಲೌಟ್ ಆದರು. ಆ ಮೂಲಕ ಇಂಗ್ಲೆಂಡ್ ತಂಡಕ್ಕೆ ಮೊದಲ ಇನಿಂಗ್ಸ್‌ನ 42 ರನ್‌ಗಳ ಮುನ್ನಡೆ ಸೇರಿ 175 ರನ್‌ಗಳ ಸುಲಭ ಗುರಿ ನೀಡಿದರು.

ಆಸ್ಟ್ರೇಲಿಯಾ ಪರ ಎರಡನೇ ಇನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ (46 ರನ್), ಸ್ಟೀವನ್ ಸ್ಮಿತ್ ಅಜೇಯ 24 ರನ್ ಗಳಿಸಿದ್ದು ಅತ್ಯಧಿಕ ಮೊತ್ತವಾಯಿತು. ಇಂಗ್ಲೆಂಡ್ ಪರ ಎರಡನೇ ಇನಿಂಗ್ಸ್‌ನಲ್ಲಿ ಬ್ರೈಡನ್ ಕಾರ್ಸೆ (4 ವಿಕೆಟ್), ಬೆನ್ ಸ್ಟೋಕ್ಸ್ (3 ವಿಕೆಟ್), ಜೋಶ್ ಟಂಗ್ (2 ವಿಕೆಟ್) ಹಾಗೂ ಗಸ್ ಅಟ್ಕಿನ್‌ಸನ್ (1 ವಿಕೆಟ್) ವಿಕೆಟ್ ಪಡೆದು ಮಿಂಚಿದರು.

175 ರನ್‌ಗಳ ಗುರಿ ಬೆನ್ನಟ್ಟಿದ ಆಂಗ್ಲರು ಎರಡನೇ ದಿನದಾಟದಲ್ಲಿ 32.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿದರು. ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಜಾಕ್ ಕ್ರಾಲಿ (37 ರನ್), ಜಾಕೊಬ್ ಬೆಥೆಲ್ (40 ರನ್) ಹಾಗೂ ಬೆನ್ ಡಕೆಟ್ (34 ರನ್) ಕಲೆಹಾಕುವ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣವಾದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್‌ಸನ್ ಹಾಗೂ ಸ್ಕಾಟ್ ಬೋಲಾಂಡ್ ತಲಾ 2 ವಿಕೆಟ್ ಪಡೆದುಕೊಂಡರು.

ಒಟ್ಟಾರೆಯಾಗಿ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಆ್ಯಷಸ್ ಟೆಸ್ಟ್ ಪಂದ್ಯ ಕೇವಲ ಎರಡು ದಿನಗಳಲ್ಲಿ ಮಕ್ತಾಯವಾಗಿದ್ದು, ಬರೋಬ್ಬರಿ 36 ವಿಕೆಟ್‌ಗಳು ಉರುಳಿವೆ. ಇನ್ನೂ ವಿಶೇಷವೆಂದರೆ, ಪಂದ್ಯದಲ್ಲಿ ಒಂದೇ ಒಂದು ಅರ್ಧಶತಕ ಕೂಡ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.