ADVERTISEMENT

ರನ್‌ ಔಟ್ ನಿಯಮ; ಎಂಸಿಸಿ ನಿರ್ಧಾರ ಸ್ವಾಗತಿಸಿದ ಅಶ್ವಿನ್

ಪಿಟಿಐ
Published 17 ಮಾರ್ಚ್ 2022, 22:28 IST
Last Updated 17 ಮಾರ್ಚ್ 2022, 22:28 IST
ಆರ್. ಅಶ್ವಿನ್ 
ಆರ್. ಅಶ್ವಿನ್    

ಚೆನ್ನೈ: ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ ಈಚೆಗೆ ನಾನ್‌ಸ್ಟ್ರೈಕರ್ ತುದಿಯ ರನ್‌ಔಟ್ ನಿಯಮ ಪರಿಷ್ಕರಣೆ ಮಾಡಿರುವುದನ್ನು ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಸ್ವಾಗತಿಸಿದ್ದಾರೆ.

ಬೌಲರ್ ಎಸೆತವನ್ನು ರಿಲೀಸ್ ಮಾಡುವ ಮುನ್ನವೇ ನಾನ್‌ಸ್ಟ್ರೈಕರ್ ಬ್ಯಾಟರ್‌ ಕ್ರೀಸ್‌ ಬಿಟ್ಟು ಮುಂದೆ ಹೋದಾಗ ರನ್‌ಔಟ್ ಮಾಡುವುದನ್ನು ಈ ಹಿಂದೆ ಕ್ರೀಡಾಸ್ಪೂರ್ತಿಗೆ ವಿರುದ್ಧ ಎಂದು ಹೇಳಲಾಗಿತ್ತು. ಆದರೆ, ಈ ನಿಯಮಕ್ಕೆ ಇತ್ತೀಚೆಗೆ ಎಂಸಿಸಿಯು ತಿದ್ದುಪಡಿ ಮಾಡಿದ್ದು ಇದನ್ನು ರನ್‌ಔಟ್ ಎಂದು ಪರಿಗಣಿಸಲು ಅವಕಾಶ ನೀಡಿದೆ.

2019ರ ಐಪಿಎಲ್‌ ಪಂದ್ಯವೊಂದರಲ್ಲಿ ಅಶ್ವಿನ್ ಅವರು ಜೋಸ್ ಬಟ್ಲರ್ ಅವರನ್ನು ಇದೇ ರೀತಿ ರನ್‌ಔಟ್ ಮಾಡುವ ಪ್ರಯತ್ನ ಮಾಡಿದ್ದರು. ಆಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆ ನಡೆದಿತ್ತು. ಹಲವರು ಅಶ್ವಿನ್ ಅವರನ್ನು ಟೀಕಿಸಿದ್ದರು.

ADVERTISEMENT

ಇದೀಗ ನಿಯಮ ಬದಲಾವಣೆ ಕುರಿತು ಪ್ರತಿಕ್ರಿಯಿಸಿರುವ ಅಶ್ವಿನ್, ‘ನನ್ನ ಪ್ರಿಯ ಸಹ ಬೌಲರ್‌ಗಳೇ ಈಗಲಾದರೂ ಅರ್ಥ ಮಾಡಿಕೊಳ್ಳಿ. ನಾನ್‌ಸ್ಟೈಕರ್ ಒಂದು ಹೆಜ್ಜೆಯನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಿದ್ದರು. ಅದು ಬ್ಯಾಟಿಂಗ್ ಮಾಡುವವರಿಗೆ ಲಾಭ ದಾಯಕವಾಗಿತ್ತು. ಇದರಿಂದಾಗಿ ಬೌಲರ್‌ಗಳಿಗೆ ಹಿನ್ನಡೆಯಾಗುತ್ತಿತ್ತು. ನಿಯಮ ಬದಲಾವಣೆಯಿಂದ ಸಮಾನತೆ ಸಿಕ್ಕಿದಂತಾಗಿದೆ’ ಎಂದು ಯೂಟ್ಯೂಬ್‌ ವಿಡಿಯೊದಲ್ಲಿ ಅಶ್ವಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.