ADVERTISEMENT

Asia Cup 2022: ವಿರಾಟ್ ಕೊಹ್ಲಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ಪಿಟಿಐ
Published 27 ಆಗಸ್ಟ್ 2022, 7:23 IST
Last Updated 27 ಆಗಸ್ಟ್ 2022, 7:23 IST
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ   

ಕೋಲ್ಕತ್ತ: ವಿರಾಟ್ ಕೊಹ್ಲಿ ಮಹಾನ್ ಆಟಗಾರನಾಗಿದ್ದು, ದೀರ್ಘ ಸಮಯದಿಂದ ಆಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಕಳಪೆ ಲಯವು ಎಲ್ಲ ಆಟಗಾರರನ್ನು ಕಾಡುತ್ತದೆ. ಇದನ್ನು ಮೀರಿ ಕೊಹ್ಲಿ ರನ್ ಗಳಿಸಲಿದ್ದಾರೆ. ಅವರು ಶ್ರೇಷ್ಠ ಆಟಗಾರ ಆಗಿಲ್ಲದಿದ್ದರೆ ಇಷ್ಟು ದೀರ್ಘ ಸಮಯದಿಂದ ಹೆಚ್ಚು ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಅಲ್ಲದೆ ವಿರಾಟ್ ಕೊಹ್ಲಿ, ತಂಡಕ್ಕಾಗಿ ಅಷ್ಟೇ ಅಲ್ಲದೆ ತಮ್ಮ ಪರವಾಗಿಯೂ ರನ್ ಗಳಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

2019ರಿಂದ ಶತಕದ ಬರ ಎದುರಿಸುತ್ತಿರುವ ವಿರಾಟ್, ಅತೀವ ಒತ್ತಡದಲ್ಲಿದ್ದಾರೆ. ಈ ನಡುವೆ ಮಾಜಿ ನಾಯಕನಿಗೆ ದಾದಾ ಖ್ಯಾತಿಯ ಸೌರವ್ ಗಂಗೂಲಿ ಬೆಂಬಲ ಸೂಚಿಸಿದ್ದಾರೆ.

2019ರಲ್ಲಿ ಕೊಹ್ಲಿ ಕೊನೆಯದಾಗಿ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಶತಕ ಗಳಿಸಿದ್ದರು.

ಭಾರತಕ್ಕಾಗಿ ಮಾತ್ರವಲ್ಲದೆ ತಮಗಾಗಿಯೂ ಕೊಹ್ಲಿ ರನ್ ಗಳಿಸಬೇಕಿದೆ. ಏಷ್ಯಾ ಕಪ್‌ನಲ್ಲಿ ಉತ್ತಮವಾಗಿ ಆಡುತ್ತಾರೆ ಎಂದು ಭಾವಿಸುತ್ತೇನೆ. ಕೊಹ್ಲಿ ಮರಳಿ ಲಯ ಕಂಡುಕೊಳ್ಳುವ ವಿಶ್ವಾಸ ನಮೆಗೆಲ್ಲರಿಗೂ ಇದೆ ಎಂದು ಗಂಗೂಲಿ ಹೇಳಿದ್ದಾರೆ.

ನಾವೆಲ್ಲರೂ ಕೊಹ್ಲಿ ಶತಕಕ್ಕಾಗಿ ಕಾಯುತ್ತಿದ್ದೇವೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸುವ ಅವಕಾಶ ಕಡಿಮೆಯಾಗಿದೆ. ಹಾಗಿದ್ದರೂ ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು.

33 ವರ್ಷದ ಕೊಹ್ಲಿ, ಜೂನ್-ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದರು. ಬಳಿಕ ವೆಸ್ಟ್‌ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸ ಕೈಗೊಂಡಿರಲಿಲ್ಲ. ಈಗ ಏಷ್ಯಾ ಕಪ್‌ನಲ್ಲಿ ತಂಡದ ಅಂಗವಾಗಿದ್ದಾರೆ.

ಏಷ್ಯಾ ಕಪ್‌ನಲ್ಲಿ ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ.

ಕಳೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲು ಅನುಭವಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಗಂಗೂಲಿ, 1992ರಿಂದ ಭಾರತ-ಪಾಕ್ ಪಂದ್ಯಗಳನ್ನು ನಿಕಟವಾಗಿ ಗಮನಿಸುತ್ತಿದ್ದೇನೆ. ಈ 30 ವರ್ಷಗಳಲ್ಲಿ ನಾವು ಒಂದು ಬಾರಿ ಮಾತ್ರ ಸೋತಿದ್ದೇವೆ. ಪ್ರತಿ ಸಲವೂ ನಾವೇ ಗೆಲ್ಲಲು ಅದೇನು ಮ್ಯಾಜಿಕ್ ಅಲ್ಲ. ಒಂದೆರಡು ಸಲ ಸೋಲು ಎದುರಾಗಬಹುದು. ಇದು ದೊಡ್ಡ ವಿಷಯವಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.