ADVERTISEMENT

Asia Cup Cricket | ಅಲ್ಪಮೊತ್ತಕ್ಕೆ ಕುಸಿದ ಲಂಕಾ; ಅಫ್ಗಾನ್‌ಗೆ 106 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2022, 15:59 IST
Last Updated 27 ಆಗಸ್ಟ್ 2022, 15:59 IST
ವಿಕೆಟ್‌ಗಾಗಿ ಮನವಿ ಮಾಡಿದ ಅಫ್ಗಾನಿಸ್ತಾನ ಆಟಗಾರರು (ಚಿತ್ರ ಕೃಪೆ: @ACBofficials)
ವಿಕೆಟ್‌ಗಾಗಿ ಮನವಿ ಮಾಡಿದ ಅಫ್ಗಾನಿಸ್ತಾನ ಆಟಗಾರರು (ಚಿತ್ರ ಕೃಪೆ: @ACBofficials)   

ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯು ಇಂದಿನಿಂದ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಗಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಗಾನಿಸ್ತಾನದ ನಾಯಕ ಮೊಹಮ್ಮದ್ ನಬಿ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರ ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಲಂಕಾ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಕಬಳಿಸಿದ ಫಜಲ್‌ಹಕ್‌ ಫಾರೂಕಿ ತಮ್ಮ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಹೀಗಾಗಿ ಲಂಕಾ ಪಡೆಕೇವಲ 5 ರನ್ ಗಳಿಸುವಷ್ಟರಲ್ಲೇ ಅಗ್ರ ಕ್ರಮಾಂಕದ ಮೂವರನ್ನು ಕಳೆದುಕೊಂಡಿತು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ದನುಷ್ಕ ಗುಣತಿಲಕ (17) ಹಾಗೂ ಭಾನುಕ ರಾಜಪಕ್ಸ (38) ಜೋಡಿ 44 ರನ್ ಕೂಡಿಸಿ ಅಲ್ಪ ಚೇತರಿಕೆ ನೀಡಿತು.

ADVERTISEMENT

ಈ ಹಂತದಲ್ಲಿ ದನುಷ್ಕ ವಿಕೆಟ್‌ ಪಡೆದ ಮುಜೀಬ್‌ ಉರ್‌ ರಹಮಾನ್‌ ಮತ್ತೆ ಪೆಟ್ಟು ಕೊಟ್ಟರು. ಬಳಿಕದಸುನ್ ಶನಾಕ ನೇತೃತ್ವದ ಪಡೆ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಕೊನೆಯಲ್ಲಿ ಹೋರಾಟ ನಡೆಸಿದ ಚಾಮಿಕ ಕರುಣಾರತ್ನೆ 31 ರನ್ ಗಳಿಸಿ, ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. ಅವರು ಕೊನೇ ವಿಕೆಟ್‌ ಜೊತೆಯಾಟದಲ್ಲಿ ದಿಲ್ಶಾನ್‌ ಮಧುಶಂಕಾ ಜೊತೆಗೂಡಿ 30 ರನ್ ಸೇರಿಸಿದರು.

ಅಂತಿಮವಾಗಿ ಈ ತಂಡ 105 ರನ್‌ ಗಳಿಸಿ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ ಸರ್ವಪತನ ಕಂಡಿತು.

ಅಫ್ಗಾನ್‌ ಪರಫಜಲ್‌ಹಕ್‌ ಫಾರೂಕಿಮೂರು ವಿಕೆಟ್‌ ಉರುಳಿಸಿದರೆ, ನಾಯಕ ಮೊಹಮ್ಮದ್‌ ನಬಿಹಾಗೂಮುಜೀಬ್‌ ಉರ್‌ ರಹಮಾನ್‌ ತಲಾ ಎರಡು ವಿಕೆಟ್‌ಪಡೆದರು. ನವೀನ್‌ ಉಲ್‌ ಹಕ್‌ ಒಂದು ವಿಕೆಟ್ ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.